ಸಾರಾಂಶ
ಇಳಕಲ್ಲ ನಗರದ ಲಿಂ.ವಿಜಯಮಹಾಂತ ಶಿವಯೋಗಿಗಳ ಜಾತ್ರಾ ಮಹೋತ್ಸವ ನಿಮಿತ್ತ ಒಂದು ತಿಂಗಳ ಪರ್ಯಂತರ ನಡೆದ ಕಾರ್ಯಕ್ರಮಗಳ ಕೊನೆಯ ದಿನ ಸೋಮವಾರ ಸಂಜೆ ಕರ್ತೃ ಗದ್ದುಗೆಯಲ್ಲಿ ನಡೆದ ಮಹಾಂತ ಶಿವಯೋಗಿಗಳ ರಥೋತ್ಸವ ಲಕ್ಷಕ್ಕೂ ಅಧಿಕ ಜನರ ಸಮ್ಮುಖದಲ್ಲಿ ವೈಭವದಿಂದ ಜರುಗಿತು.
ಕನ್ನಡಪ್ರಭ ವಾರ್ತೆ ಇಳಕಲ್ಲ
ನಗರದ ಲಿಂ.ವಿಜಯಮಹಾಂತ ಶಿವಯೋಗಿಗಳ ಜಾತ್ರಾ ಮಹೋತ್ಸವ ನಿಮಿತ್ತ ಒಂದು ತಿಂಗಳ ಪರ್ಯಂತರ ನಡೆದ ಕಾರ್ಯಕ್ರಮಗಳ ಕೊನೆಯ ದಿನ ಸೋಮವಾರ ಸಂಜೆ ಕರ್ತೃ ಗದ್ದುಗೆಯಲ್ಲಿ ನಡೆದ ಮಹಾಂತ ಶಿವಯೋಗಿಗಳ ರಥೋತ್ಸವ ಲಕ್ಷಕ್ಕೂ ಅಧಿಕ ಜನರ ಸಮ್ಮುಖದಲ್ಲಿ ವೈಭವದಿಂದ ಜರುಗಿತು.ಅದಕ್ಕೂ ಮೊದಲು ಅಪ್ಪ ಬಸವಣ್ಣನವರ ಹಾಗೂ ವಿಜಯ ಮಹಾಂತ ಶಿವಯೋಗಿಗಳ ಭಾವಚಿತ್ರದ ಅಡ್ಡಪಲ್ಲಕ್ಕಿಯು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಭಕ್ತರಿಂದ ಪೂಜೆ ಸಲ್ಲಿಸಿ ವಿಜಯ ಮಹಾಂತ ಶ್ರೀಗಳ ಕರ್ತೃ ಗದ್ದುಗೆಗೆ ಆಗಮಿಸಿತು. ಕಿಲ್ಲಾ ಒಣಿಯ ಗವಿಸಿದ್ದನಗೌಡ ಪಾಟೀಲ ಅವರ ಮನೆಯಿಂದ ರಥದ ಹಗ್ಗವನ್ನು ಮೆರವಣಿಗೆಯಲ್ಲಿ ತರಲಾಯಿತು. ಸಹಸ್ರಾರ ಭಕ್ತರ ಹರ್ಷೋದ್ಘಾರಗಳ ಮಧ್ಯೆ ಮಹಾಂತ ಶಿವಯೋಗಿಗಳ ರಥ ಎಳೆದು ಸಂಭ್ರಮಿಸಿದರು. ನಂತರ ಅಪಾರ ಮದ್ದು ಬಿರಸು ಬಾಣಗಳ ವರ್ಣ ರಂಜಿತ ಹಾರಿಸುವುದರ ಮೂಲಕ ರಥೋತ್ಸವದ ಕಾರ್ಯಕ್ರಮಕ್ಕೆ ತೆರೆ ಎಳೆಯಲಾಯಿತು. ರಥೋತ್ಸೋವ ಕಾರ್ಯಕ್ರಮದಲ್ಲಿ ಗುರುಮಹಾಂತ ಶ್ರೀಗಳು, ಪಾಂಡವಮಟ್ಟಿ ಶ್ರೀಗಳು ಹಾಗೂ ನಾಡಿನ ಅನೇಕ ಪೂಜ್ಯರು ಆಗಮಿಸಿದ್ದರು. ಶಾಸಕ ವಿಜಯಾನಂದ ಕಾಶಪ್ಪನವರ, ಮಾಜಿ ಶಾಸಕ ದೊಡ್ಡನಗೌಡ ಪಾಟೀಲ, ನಗರದ ಅನೇಕ ಗಣ್ಯರು ಉಪಸ್ಥಿತರಿದ್ದರು.