ರಥೋತ್ಸವವನ್ನು ಅದ್ಧೂರಿಯಿಂದ ವ್ಯವಸ್ಥಿತವಾಗಿ ನಡೆಸಲಾಗುವುದು: ಆರ್.ಎನ್.ಶ್ರೀಧರ್

| Published : Dec 06 2024, 08:58 AM IST

ರಥೋತ್ಸವವನ್ನು ಅದ್ಧೂರಿಯಿಂದ ವ್ಯವಸ್ಥಿತವಾಗಿ ನಡೆಸಲಾಗುವುದು: ಆರ್.ಎನ್.ಶ್ರೀಧರ್
Share this Article
  • FB
  • TW
  • Linkdin
  • Email

ಸಾರಾಂಶ

ತರೀಕೆರೆ, ಪಟ್ಟಣದಲ್ಲಿ ಶ್ರೀ ಸುಬ್ರಹ್ಮಣ್ಯೇಶ್ವರಸ್ವಾಮಿ ರಥೋತ್ಸವವನ್ನು ಅತ್ಯಂತ ಅದ್ಧೂರಿ ಮತ್ತು ವ್ಯವಸ್ಥಿತವಾಗಿ ಆಚರಿಸಲು ಸೂಕ್ತ ತಯಾರಿ ನಡೆಯುತ್ತಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವರ ಕೃಪೆಗೆ ಪಾತ್ರರಾಗಬೇಕು ಎಂದು ಬ್ರಾಹ್ಮಣ ಸೇವಾ ಸಮಿತಿ ಅಧ್ಯಕ್ಷ ಆರ್.ಎನ್.ಶ್ರೀಧರ್ ಹೇಳಿದ್ದಾರೆ.

ಶ್ರೀ ಸುಬ್ರಹ್ಮಣ್ಯೇಶ್ವರಸ್ವಾಮಿ ರಥೋತ್ಸವದ ಆಹ್ವಾನಪತ್ರಿಕೆ, ನೂತನ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ತರೀಕೆರೆ

ಪಟ್ಟಣದಲ್ಲಿ ಶ್ರೀ ಸುಬ್ರಹ್ಮಣ್ಯೇಶ್ವರಸ್ವಾಮಿ ರಥೋತ್ಸವವನ್ನು ಅತ್ಯಂತ ಅದ್ಧೂರಿ ಮತ್ತು ವ್ಯವಸ್ಥಿತವಾಗಿ ಆಚರಿಸಲು ಸೂಕ್ತ ತಯಾರಿ ನಡೆಯುತ್ತಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವರ ಕೃಪೆಗೆ ಪಾತ್ರರಾಗಬೇಕು ಎಂದು ಬ್ರಾಹ್ಮಣ ಸೇವಾ ಸಮಿತಿ ಅಧ್ಯಕ್ಷ ಆರ್.ಎನ್.ಶ್ರೀಧರ್ ಹೇಳಿದ್ದಾರೆ.

ಬ್ರಾಹ್ಮಣ ಸೇವಾ ಸಮಿತಿಯಿಂದ ಪಟ್ಟಣದ ಶ್ರೀ ಸುಬ್ರಹ್ಮಣ್ಯೇಶ್ವರಸ್ವಾಮಿ ದೇವಸ್ಥಾನದಲ್ಲಿ ನಡೆದ ಶ್ರೀ ಸುಬ್ರಹ್ಮಣ್ಯೇಶ್ವರ ಸ್ವಾಮಿ ರಥೋತ್ಸವದ ಆಹ್ವಾನಪತ್ರಿಕೆ ಮತ್ತು ನೂತನ ಕ್ಯಾಲೆಂಡರ್ ಬಿಡುಗಡೆ ನೆರವೇರಿಸಿ ಮಾತನಾಡಿದರು.

ಪಟ್ಟಣದ ಸುಪ್ರಸಿದ್ಧ ಮಹಾಮಹಿಮ ಶ್ರೀ ಸುಬ್ರಹ್ಮಣ್ಯೇಶ್ವರಸ್ವಾಮಿ 132ನೇ ರಥೋತ್ಸವ 2025 ಜನವರಿ 5 ರಂದು ಭಾನುವಾರ ಜರುಗಲಿದ್ದು, ಈ ಸಂಬಂಧ ದಿನಾಂಕ 2025 ಜನವರಿ 3 ರಿಂದ 7ರ ವರೆಗೆ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಹೇಳಿದರು.

ಬ್ರಾಹ್ಮಣ ಸೇವಾ ಸಮಿತಿ ಕಾರ್ಯದರ್ಶಿ ಡಿ.ಸಿ.ಶ್ರೀನಿವಾಸಮೂರ್ತಿ ಮಾತನಾಡಿ ರಥೋತ್ಸವದ ಅಂಗವಾಗಿ ಕುಮಾರ ವ್ಯಾಸ ಪ್ರಶಸ್ತಿ ಪುರಸ್ಕೃತ ರಾಜಾರಾಮ್ ಹೊಸಹಳ್ಳಿ ಮತ್ತು ವಿಧುಷಿ ಜಲಜರಾಜು ಬೆಂಗಳೂರು ಅವರಿಂದ ಭಾರತ ವಾಚನ ಹಾಗೂ ಆರ್.ಕೆ.ಪದ್ಮನಾಭ ಮತ್ತು ತಂಡ ಮೈಸೂರು ಇವರಿಂದ ಸಂಗೀತ ಸಂಜೆ, ವೀಣಾವಾದನ ಏರ್ಪಡಿಸಲಾಗಿದೆ ಎಂದರು.

ಸಮಿತಿ ಉಪಾಧ್ಯಕ್ಷ ಸಿ.ಎಸ್.ಅನಂತಪದ್ಮನಾಭ ಮಾತನಾಡಿ ಈ ಬಾರಿ ನಡೆಯುವ ರಥೋತ್ಸವದಲ್ಲಿ ಜಿಲ್ಲೆಯ ಸಮಾಜದ ಎಲ್ಲಾ ಮುಖಂಡರನ್ನು ಒಂದೇ ವೇದಿಕೆಯಲ್ಲಿ ಕರೆತರುವ ಮೂಲಕ ಸಮಾಜದ ಒಗ್ಗಟ್ಟು ಮತ್ತು ಅಭಿವೃದ್ಧಿ ಬಗ್ಗೆ ಚಿಂತನೆ ನಡೆಸಲು ಪ್ರಯತ್ನ ನಡೆದಿದೆ ಎಂದು ಹೇಳಿದರು.

ಸಮಿತಿ ಖಚಾಂಚಿ ಬಿ.ಎನ್.ರಾಘವೇಂದ್ರ ಹೆಬ್ಬಾರ್ ಮಾತನಾಡಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಮಾಜದ ಸಾಧಕರನ್ನು ಗುರುತಿಸಿ ಗೌರವಿಸುವ ಜೊತೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಮತ್ತು ಗೌರವ ಸಲ್ಲಿಸುವ ಕಾರ್ಯಕ್ರಮದ ಮೂಲಕ ಸಾಧಕರನ್ನು ಮತ್ತು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲಾಗುತ್ತಿದೆ ಎಂದು ತಿಳಿಸಿದರು.

ಸಮಿತಿ ನಿರ್ದೇಶಕ ಡಾ.ಬಿ.ಎಚ್.ಕುಮಾರಸ್ವಾಮಿ ಮಾತನಾಡಿ ದತ್ತಿ ದಾನಿಗಳ ಆಶಯದಂತೆ ದತ್ತಿ ನಿಧಿಯನ್ನು ಅರ್ಹ ವಿದ್ಯಾರ್ಥಿಗಳಿಗೆ ನೀಡುವ ಮೂಲಕ ಶೈಕ್ಷಣಿಕ ಪ್ರಗತಿಗೆ ಅನುಕೂಲ ಮಾಡಿಕೊಡಲಾಗುತ್ತಿದೆ ಎಂದು ಹೇಳಿದರು.

ವಿದ್ವಾನ್ ಕೆ.ಎಸ್.ಭಾಸ್ಕರ ಭಟ್ಟರು ಮತ್ತು ವಿದ್ವಾನ್ ನಾರಾಯಣ ಶಾಸ್ತ್ರಿ ಜನ್ಮಶತಾಬ್ದಿ ಸ್ಮರಣಾರ್ಥ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.ನಿರ್ದೇಶಕ ಬಿ.ಎಲ್.ಅಚ್ಯುತಮೂರ್ತಿ ಮಾತನಾಡಿ ಹೊರಭಾಗದ ಭಕ್ತರಿಗೆ ರಥೋತ್ಸವದ ಆಹ್ವಾನ ಪತ್ರಿಕೆಯನ್ನು ಅಂಚೆ ಮೂಲಕ ರವಾನಿಸುವ ವ್ಯವಸ್ಥೆ ಮಾಡಲಾಗಿದೆ, ನೂತನ ಕ್ಯಾಲೆಂಡರ್ ದೇವಸ್ಥಾನದ ಕೌಂಟರ್ ನಲ್ಲಿ ಮಾರಾಟಕ್ಕೆ ಇಡಲಾಗಿದೆ. ವಿವಿಧ ಸೇವೆಗಳ ನೋಂದಣಿ ಪ್ರಾರಂಭಿಸಲಾಗಿದ್ದು, ದೇವಸ್ಥಾನದ ವ್ಯವಸ್ಥಾಪಕರನ್ನು ಸಂಪರ್ಕಿಸಿ ನೋಂದಾಯಿಸಿ ಕೊಳ್ಳಬಹುದು ಎಂದು ವಿವರಿಸಿದರು.

ಅರ್ಚಕ ಸತ್ಯನಾರಾಯಣ ಭಟ್ ಮಾತನಾಡಿ ರಥೋತ್ಸವದ ಪ್ರಯುಕ್ತ ನಡೆಯುವ ಎಲ್ಲಾ ವಿಧಿ-ವಿಧಾನ ಮತ್ತು ಧಾರ್ಮಿಕ ಆಚರಣೆಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ, ವರ್ಗಾಯಿಸುವ ಕಾರ್ಯ ನಡೆಯುತ್ತಿದೆ ಎಂದು ಹೇಳಿದರು.

ಸಮಿತಿ ನಿರ್ದೇಶಕ ಡಿ.ವಿ.ಕೃಷ್ಣಮೂರ್ತಿ ಇತರರು ಇದ್ದರು.5ಕೆಟಿಆರ್.ಕೆ.4ಃ

ತರೀಕೆರೆಯಲ್ಲಿ ಬ್ರಾಹ್ಮಣ ಸೇವಾ ಸಮಿತಿಯಿಂದ ಶ್ರೀ ಸುಬ್ರಹ್ಮಣ್ಯೇಶ್ವರಸ್ವಾಮಿ ದೇವಸ್ಥಾನದಲ್ಲಿ ನಡೆದ ಶ್ರೀ ಸುಬ್ರಹ್ಮಣ್ಯೇಶ್ವರ ಸ್ವಾಮಿ ರಥೋತ್ಸವದ ಆಹ್ವಾನಪತ್ರಿಕೆ, ನೂತನ ಕ್ಯಾಲೆಂಡರ್ ನ್ನು ಬ್ರಾಹ್ಮಣ ಸೇವಾ ಸಮಿತಿ ಅಧ್ಯಕ್ಷ ಆರ್.ಎನ್.ಶ್ರೀಧರ್ ಬಿಡುಗಡೆ ಮಾಡಿದರು. ಕಾರ್ಯದರ್ಶಿ ಡಿ.ಸಿ.ಶ್ರೀನಿವಾಸಮೂರ್ತಿ, ಸಮಿತಿ ಉಪಾಧ್ಯಕ್ಷ ಸಿ.ಎಸ್. ಅನಂತಪದ್ಮನಾಭ, ಸಮಿತಿ ಖಚಾಂಚಿ ಬಿ.ಎನ್. ರಾಘವೇಂದ್ರ ಹೆಬ್ಬಾರ್‌ ಮತ್ತಿತರರು ಇದ್ದರು.