ಸಾರಾಂಶ
ಬೆಂಗಳೂರಿನ ಲಗೋರಿ ಬ್ಯಾಂಡ್ ತಂಡದವರು ಸೂಜುಗಾದ ಸೂಜು ಮಲ್ಲಿಗೆ ಮಾದೇವ ನಿಮ್ಮ ಮಂಡೆ ಮೇಲೆ ದುಂಡು ಮಲ್ಲಿಗೆ ಎಂದು ಮಹದೇಶ್ವರ ಜಪ ಮಾಡಿದರು. ಸಪ್ತ ಸಾಗರಾದಚೆ ಎಲ್ಲೋ, ಬೆಳಗೆದ್ದು ಯಾರ ಮುಖನಾ ನೋಡಲಿ, ಕುಲದಲ್ಲಿ ಕೀಳ್ಯಾವುದು...ಮೇಲ್ಯಾವುದೊ, ಶಂಕರ್ ನಾಗ್ ಅಭಿಯನದ ಸಂತೋಷಕ್ಕೆ ಹಾಡು ಸಂತೋಷಕ್ಕೆ, ಮಾರಿ ಕಣ್ಣು ಹೋರಿ ಮ್ಯಾಗೆ ಕಟುಕನ ಕಣ್ಣು ಕುರಿ ಮ್ಯಾಗೆ ಹಾಡುಗಳಿಗೆ ಯುವ ಸಮೂಹ ಕುಣಿದು ಕುಪ್ಪಳಿಸಿದರು.
ಕನ್ನಡಪ್ರಭ ವಾರ್ತೆ ಮೈಸೂರು
ವಿಶ್ವವಿಖ್ಯಾತ ದಸರಾ ಮಹೋತ್ಸವ ಪ್ರಯುಕ್ತ ಆಯೋಜಿಸಲಾಗಿರುವ ಯುವ ದಸರಾ ಕಾರ್ಯಕ್ರಮದಲ್ಲಿ ಖ್ಯಾತ ಸಂಗೀತ ನಿರ್ದೇಶಕ, ಗಾಯಕ ಅರ್ಜುನ್ ಜನ್ಯ ಅವರು ಸಂಗೀತ, ಗಾಯನ ಮೂಲಕ ನೆರೆದಿದ್ದ ಯುವ ಮನಸ್ಸುಗಳಿಗೆ ಮೋಡಿ ಮಾಡಿದರು.ನಗರದ ಹೊರ ವರ್ತುಲ ರಸ್ತೆಯ ಉತ್ತನಹಳ್ಳಿಯ ಶ್ರೀ ಜ್ವಾಲಾಮುಖಿ ತ್ರಿಪುರ ಸುಂದರಿ ದೇವಸ್ಥಾನ ಸಮೀಪದ ಮೈದಾನದಲ್ಲಿ ಮಂಗಳವಾರ ಯುವ ದಸರಾ ಉದ್ಘಾಟನೆ ಬಳಿಕ ಮ್ಯಾಜಿಕಲ್ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮತ್ತು ತಂಡವು ಮೈದಾನದಲ್ಲಿ ಸಂಗೀತ ಅಲೆ ಸೃಷ್ಟಿಸಿತು.
ಡ್ರಮ್ ಬ್ಯಾಂಡ್ ನೊಂದಿಗೆ ಸುದೀಪ್ ನಟನೆಯ ಪೈಲ್ವಾನ್ ಹಾಡಿನೊಂದಿಗೆ ಹಾಗೂ ತಂಡದ ಗಾಯಕರು ಒಂದೊಂದು ಹಾಡಿನ ಮೂಲಕ ವೇದಿಕೆಯ ಮೇಲೆ ಪರಿಚಯಿಸಿದರು.ನೆನ್ನೆ ಮೊನ್ನೆವರೆಗೂ ನಾ ಶೊನ್ನೆಯಾಗಿದ್ದೆನಾ ಹಾಡನ್ನು ಸರಿಗಮಪ ಖ್ಯಾತೀಯ ಸುನೀಲ್, ಜಸ್ ಕರಣ್ ಹಾಡಿ ಯುವಕರು ತಲೆದೂಗುವಂತೆ ಮಾಡಿದರೆ, ಗಾಯಕಿ ಇಂದು ನಾಗರಾಜ್ ಅರಳದ ಕಿರು ಮಲ್ಲಿಗೆ, ಆಯಿತೆ ಮಡಿ ಮೈಲಿಗೆ ಹಾಡಿ ರಂಜಿಸಿದರು.
ಐಶ್ವರ್ಯ ರಂಗರಾಜನ್ ಮತ್ತು ತಂಡ ನೃತ್ಯದ ಮೂಲಕ ನಟ ಚೇತನ್ ಅಭಿಯನದ ಆದಿನಗಳು ಚಿತ್ರದ ಇತ್ತೀಚಿಗೆ ಸಾಕಷ್ಟು ವೈರಲ್ ಆದ ಹೂವಿನ ಬಾಣದಂತೆ ಯಾರಿಗೂ ಕಾಣದಂತೆ ಹಾಡಿನ ಸಾಲಿನಲ್ಲಿ ಹಾಡು ಯುವ ಮನಸ್ಸುಗಳ ಮನ ಮುಟ್ಟುವಂತೆ ಮಾಡಿತು.ಸರಿಗಮಪ ಖ್ಯಾತಿಯ ಕಂಬದ ರಂಗಯ್ಯ ಮತ್ತು ಅವರ ತಂಡ ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು, ಬೊಂಬೆ ಹೇಳುತೈತೆ ಮತ್ತೆ ಹೇಳುತೈತೆ ನೀನೆ ರಾಜಕುಮಾರ ಹಾಡುಗಳನ್ನು ಹಾಡಿ ಯುವ ಜನತೆಯ ಮನ ಗೆದ್ದರು.
ಬೆಂಗಳೂರಿನ ಲಗೋರಿ ಬ್ಯಾಂಡ್ ತಂಡದವರು ಸೂಜುಗಾದ ಸೂಜು ಮಲ್ಲಿಗೆ ಮಾದೇವ ನಿಮ್ಮ ಮಂಡೆ ಮೇಲೆ ದುಂಡು ಮಲ್ಲಿಗೆ ಎಂದು ಮಹದೇಶ್ವರ ಜಪ ಮಾಡಿದರು. ಸಪ್ತ ಸಾಗರಾದಚೆ ಎಲ್ಲೋ, ಬೆಳಗೆದ್ದು ಯಾರ ಮುಖನಾ ನೋಡಲಿ, ಕುಲದಲ್ಲಿ ಕೀಳ್ಯಾವುದು...ಮೇಲ್ಯಾವುದೊ, ಶಂಕರ್ ನಾಗ್ ಅಭಿಯನದ ಸಂತೋಷಕ್ಕೆ ಹಾಡು ಸಂತೋಷಕ್ಕೆ, ಮಾರಿ ಕಣ್ಣು ಹೋರಿ ಮ್ಯಾಗೆ ಕಟುಕನ ಕಣ್ಣು ಕುರಿ ಮ್ಯಾಗೆ ಹಾಡುಗಳಿಗೆ ಯುವ ಸಮೂಹ ಕುಣಿದು ಕುಪ್ಪಳಿಸಿದರು.ಒಟ್ಟಿನಲ್ಲಿ ಮೊದಲ ದಿನದ ಯುವ ದಸರಾವು ಯುವಮನಸ್ಸುಗಳಿಗೆ ಉಲ್ಲಾಸಗೊಳಿಸಿದು ಮಾತ್ರ ಸುಳ್ಳಲ್ಲ.