ನವೆಂಬರ್‌ನಲ್ಲಿ ಕ್ರಾಂತಿ ಆಗುತ್ತೋ ಅಥವಾ ಜನವರಿಯಲ್ಲಿ ಸಂಕ್ರಾಂತಿ ಬರುತ್ತೋ ಗೊತ್ತಿಲ್ಲ, ಆದರೆ ಸಿಎಂ ಕುರ್ಚಿ ಖಾಲಿಯಾಗುವುದು ಗ್ಯಾರಂಟಿ. ಮುಖ್ಯಮಂತ್ರಿಗಳು ಯಾಕೆ ಗಾಬರಿಯಾಗಿದ್ದಾರೋ ಗೊತ್ತಿಲ್ಲ ಎಂದು ಮಾಜಿ ಸಚಿವ ಶ್ರೀರಾಮುಲು ವ್ಯಂಗ್ಯವಾಡಿದರು.

ಗದಗ: ರಾಜ್ಯ ರಾಜಕಾರಣದಲ್ಲಿ ನವೆಂಬರ್‌ ತಿಂಗಳಲ್ಲಿ ಕಾಂಗ್ರೆಸ್ ನಾಯಕರೇ ಹೇಳಿದಂತೆ ಕ್ರಾಂತಿ ನಡೆಯಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುರ್ಚಿ ಖಾಲಿಯಾಗುವುದು ಗ್ಯಾರಂಟಿ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ನಾಯಕ ಬಿ. ಶ್ರೀರಾಮುಲು ಭವಿಷ್ಯ ನುಡಿದರು.

ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನವೆಂಬರ್‌ನಲ್ಲಿ ಕ್ರಾಂತಿ ಆಗುತ್ತೋ ಅಥವಾ ಜನವರಿಯಲ್ಲಿ ಸಂಕ್ರಾಂತಿ ಬರುತ್ತೋ ಗೊತ್ತಿಲ್ಲ, ಆದರೆ ಸಿಎಂ ಕುರ್ಚಿ ಖಾಲಿಯಾಗುವುದು ಗ್ಯಾರಂಟಿ. ಮುಖ್ಯಮಂತ್ರಿಗಳು ಯಾಕೆ ಗಾಬರಿಯಾಗಿದ್ದಾರೋ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.

ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರಿಸಿದ ಅವರು, ಮುಖ್ಯಮಂತ್ರಿಗಳು ನಮಗೆ ಕವಡೆ ಕಾಸಿನ ಕಿಮ್ಮತ್ತು ಕೊಡಲ್ಲ ಅಂತಾ ಶಾಸಕರು ಹೇಳಿದ್ದಾರೆ. ಯಾವುದೇ ಶಾಸಕರಿಗೆ ಗೌರವ ಕೊಡುತ್ತಿಲ್ಲ. ಅನುದಾನವನ್ನೂ ಬಿಡುಗಡೆ ಮಾಡಿಲ್ಲ. ರಾಜಕಾರಣಿಗಳಿಗೆ ಗೌರವ ಬಹಳಷ್ಟು ಮುಖ್ಯವಾಗುತ್ತದೆ ಎಂದು ಆಡಳಿತ ಪಕ್ಷದ ಶಾಸಕರ ಅಸಮಾಧಾನವನ್ನು ಶ್ರೀರಾಮುಲು ಪ್ರಸ್ತಾಪಿಸಿದರು.

ಇತ್ತೀಚೆಗೆ ಮುಖ್ಯಮಂತ್ರಿಗಳು ಕರೆದಿರುವ ಶಾಸಕರ ಔತಣಕೂಟದ ಬಗ್ಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರಿಗೆ ಈಗ ಶಾಸಕರ ಮೇಲೆ ಪ್ರೀತಿ ಬಂದಿದೆ. ನವೆಂಬರ್‌ನಲ್ಲಿ ಕ್ರಾಂತಿ ಆಗುತ್ತೆ ಅಂತಾ ಪ್ರೀತಿ ಬಂದಿದೆಯೋ ಗೊತ್ತಿಲ್ಲ, ಒಟ್ಟು ಪ್ರೀತಿ ಬಂದಿದೆ. ದಿಢೀರ್ ಔತಣಕೂಟಕ್ಕೆ ಬರಬೇಕೆಂದು ಸಿಎಂ ಆದೇಶ ಮಾಡಿದ್ದಾರೆ. ನವೆಂಬರ್‌ನಲ್ಲಿ ಅಧಿಕಾರ ಹಸ್ತಾಂತರ ಆಗುತ್ತೆ ಅಂತಾ ಮಾಧ್ಯಮದಲ್ಲಿ ಚರ್ಚೆ ಆಗುತ್ತಿದ್ದು, ಸಿಎಂ ಔತಣಕೂಟದಲ್ಲಿ ಎಲ್ಲ ಚರ್ಚೆ ಆಗುತ್ತವೆ ಎಂದರು.

ಔತಣಕೂಟಕ್ಕೆ ಬರಲ್ಲ ಎಂದರೆ ಸಚಿವ ಸಂಪುಟದಿಂದ ತೆಗೆದು ಹಾಕುತ್ತೇನೆಂದು ಸಿಎಂ ಬ್ಲಾಕ್‌ಮೇಲ್ ಮಾಡಿದ್ದಾರಂತೆ. ಇದೆಂಥ ಬೆಳವಣಿಗೆ ಎಂದು ಆಶ್ಚರ್ಯ ವ್ಯಕ್ತಪಡಿಸಿದರು.ಸಿದ್ದರಾಮಯ್ಯ ಅವರು ನವೆಂಬರ್‌ನಲ್ಲಿ ಕುರ್ಚಿ ಖಾಲಿ ಮಾಡಬೇಕಾಗುತ್ತೆ. ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡಬೇಕೆಂಬ ಚರ್ಚೆ ನಡೆಯುತ್ತಿವೆ‌ ಎನ್ನುವ ಬಗ್ಗೆ ಕಾಂಗ್ರೆಸ್ ಪಕ್ಷದಿಂದಲೇ ಕೇಳಿ ಬರುತ್ತಿರುವ ಮಾತಾಗಿದೆ. ಹಾಗಾಗಿ ನೂರಕ್ಕೆ ನೂರಷ್ಟು ಕ್ರಾಂತಿ ಆಗೇ ಆಗುತ್ತೆ ಅನ್ನೋದು ಬಿಜೆಪಿ ವಾದ ಎಂದರು.