ಪರಿಶೀಲನೆಗೆ ತೆರಳಿದ್ದ ಮುಖ್ಯಾಧಿಕಾರಿಗೆ ಮುತ್ತಿಗೆ

| Published : Jul 05 2024, 12:46 AM IST

ಪರಿಶೀಲನೆಗೆ ತೆರಳಿದ್ದ ಮುಖ್ಯಾಧಿಕಾರಿಗೆ ಮುತ್ತಿಗೆ
Share this Article
  • FB
  • TW
  • Linkdin
  • Email

ಸಾರಾಂಶ

ಪಟ್ಟಣದಲ್ಲಿ ಪ್ಲಾಸ್ಟಿಕ್ ಹಾಗೂ ತಂಬಾಕು ಉತ್ಪನ್ನಗಳ ಮಾರಾಟ ಮಾಡದೆ ವ್ಯಾಪಾರ ಮಾಡುವುದು ಕಷ್ಟ ಸಾಧ್ಯ

ಗಜೇಂದ್ರಗಡ: ಪಟ್ಟಣದಲ್ಲಿ ಪರವಾನಗಿ ಪಡೆಯದ,ನವೀಕರಣ ಮಾಡಿಸದ, ಟೆಸ್ಟಿಂಗ್ ಪೌಡರ್, ಪ್ಲಾಸ್ಟಿಕ್ ಮತ್ತು ತಂಬಾಕು ಉತ್ಪನಗಳ ಮಾರಾಟ ಮಳಿಗೆಗಳ ಪರಿಶೀಲನೆಗೆ ತೆರಳಿದ್ದ ಪುರಸಭೆ ಪ್ರಭಾರಿ ಮುಖ್ಯಾಧಿಕಾರಿ ಬಸವರಾಜ ಬಳಗಾನೂರ ಅವರಿಗೆ ಇಲ್ಲಿನ ವ್ಯಾಪಾರಸ್ಥರು ಮುತ್ತಿಗೆ ಹಾಕಿದ ಘಟನೆ ಗುರುವಾರ ನಡೆಯಿತು.

ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿನ ಅಂಗಡಿಗಳ ಪರವಾನಗಿ,ತಂಬಾಕು ಉತ್ಪನ್ನಗಳ ಮಾರಾಟ ಪರಿಶೀಲಿಸುತ್ತಿದ್ದ ಪುರಸಭೆ ಅಧಿಕಾರಿಗಳ ತಂಡ ನಿರಂಜನ ಕೂಲ್ ಡ್ರಿಂಕ್ಸ್ ಬಳಿ ನಿಂತಿದ್ದಾಗ ೩೦ಕ್ಕೂ ಅಧಿಕ ವ್ಯಾಪಾರಸ್ಥರು ಸಿನಿಮೀಯ ರೀತಿಯಲ್ಲಿ ಬೈಕ್‌ಗಳನ್ನು ರಸ್ತೆ ಮದ್ಯೆ ನಿಲ್ಲಿಸಿ ಪುರಸಭೆ ಪ್ರಭಾರಿ ಮುಖ್ಯಾಧಿಕಾರಿ ಸುತ್ತುವರೆದರು. ಬಳಿಕ ಪಟ್ಟಣದಲ್ಲಿ ಅಂಗಡಿಗಳ ಮೇಲೆ ರೇಡ್ ಮಾಡುವ ಉದ್ಧೇಶವೇನು ಎಂದು ಪ್ರಶ್ನಿಸಿದಾಗ ಪರವಾನಗಿ ಪಡಿಯದ, ನವೀಕರಣ ಮಾಡದ ಹಾಗೂ ಪ್ಲಾಸ್ಟಿಕ್ ಮತ್ತು ಗುಟ್ಕಾ ಉತ್ಪನಗಳ ಮಾರಾಟ ಪರಿಶೀಲಿಸಲಾಗುತ್ತಿದೆ ಎಂದು ಮರು ಉತ್ತರಿಸಿದರು.

ಇದಕ್ಕೆ ಕೆಲ ವ್ಯಾಪಾರಸ್ಥರು ಅಂಗಡಿಗಳ ಮೇಲೆ ದಾಳಿ ಮಾಡುತ್ತಿದ್ದೀರೋ ಅಥವಾ ಪರಿಶೀಲನೆ ಮಾಡುತ್ತಿದ್ದೀರೋ ಎನ್ನುವದನ್ನು ಮೊದಲು ಸ್ಪಷ್ಟ ಪಡಿಸಿ. ಅಲ್ಲದೆ ಮೊದಲು ಜಾಗೃತಿ ಅಥವಾ ಪ್ರಚಾರ ಮಾಡಬೇಕಿತ್ತು ಅಲ್ಲವೇ, ಹೀಗೆ ಏಕಾಏಕಿ ಬಂದು ತಂಬಾಕು ಒಯ್ದರೆ ಹೇಗೆ. ರಾಜ್ಯದಲ್ಲಿ ತಂಬಾಕು, ಗುಟ್ಕಾ ಬ್ಯಾನ್ ಆಗಿದೆಯಾ ಎಂದು ಪ್ರಶ್ನಿಸಲು ಆರಂಭಿಸಿದರು. ಆಗ ನಿನ್ನೆ ತಹಸೀಲ್ದಾರ್ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಟೆಸ್ಟಿಂಗ್ ಪೌಡರ್ ಹಾಗೂ ತಂಬಾಕು ಉತ್ಪನ್ನ ಮಾರಾಟ ಸ್ಥಳಗಳ ಮೇಲೆ ದಾಳಿ ನಡೆಸಿ ಎಚ್ಚರಿಕೆ ನೀಡಲಾಗಿದೆ. ಗುಟ್ಕಾ ಹಾಗೂ ತಂಬಾಕು ಉತ್ಪನಗಳ ಮಾರಾಟ ನಿಷೇಧವಿದೆ. ಹೀಗಾಗಿ ಇಂದು ಅಂಗಡಿಗಳ ಪರಿಶೀಲನೆ ಜತೆಗೆ ಪರವಾನಗಿ ನವೀಕರಣ ಮಾಡಿಕೊಳ್ಳಲು ಸೂಚಿಸಲಾಗುತ್ತಿದೆ ಎಂದರು.

ಪಟ್ಟಣದಲ್ಲಿ ಪ್ಲಾಸ್ಟಿಕ್ ಹಾಗೂ ತಂಬಾಕು ಉತ್ಪನ್ನಗಳ ಮಾರಾಟ ಮಾಡದೆ ವ್ಯಾಪಾರ ಮಾಡುವುದು ಕಷ್ಟ ಸಾಧ್ಯ. ಹೀಗಾಗಿ ಅವಕಾಶ ನೀಡಿ ಎಂದು ವ್ಯಾಪಾರಸ್ಥರು ಮನವಿ ಮಾಡಿದಾಗ ಪುರಸಭೆ ಅಧಿಕಾರಿಗಳು ಪರಿಸರ ಕಾಳಜಿಯಿಂದ ಪ್ಲಾಸ್ಟಿಕ್ ಮಾರಾಟಕ್ಕೆ ನಿಷೇಧವಿದೆ. ಅಲ್ಲದೆ ಕಾನೂನಿನಡಿಯಲ್ಲಿ ತಂಬಾಕು ಉತ್ಪನ್ನಗಳು ಹಾಗೂ ಟೆಸ್ಟಿಂಗ್ ಪೌಡರ್ ಮಾರಾಟಕ್ಕೆ ಅವಕಾಶವಿಲ್ಲ. ವ್ಯಾಪಾರಸ್ಥರು ಪುರಸಭೆಗೆ ಸಹಕಾರ ನೀಡುವುದರ ಜತೆಗೆ ಪರವಾನಗಿ ಪಡೆಯಬೇಕು ಎಂದಾಗ ಪರವಾನಗಿ ನವೀಕರಣಕ್ಕೆ ವ್ಯಾಪಾರಸ್ಥರು ಪುರಸಭೆಗೆ ಬಂದಾಗ ಸರ್ವರ್ ಇಲ್ಲ ಎಂದಿದ್ದಾರೆ. ಹೀಗಾಗಿ ವ್ಯಾಪಾರಸ್ಥರಿಗೆ ಕಾಲಾವಕಾಶ ನೀಡಿ, ನಿಮಗೆ ಸಾಥ್ ನೀಡುತ್ತೇವೆ ಎಂದರು.

ಪಟ್ಟಣದಲ್ಲಿ ಪ್ಲಾಸ್ಟಿಕ್ ಮಾರಾಟ ಮಾಡುವ ಅಂಗಡಿಕಾರರಿಗೆ ದಂಡ ಹಾಕುವ ಬದಲು ಸಾರ್ವಜನಿಕರಿಗೆ ದಂಡ ಹಾಕಬೇಕು ಎಂದು ಒರ್ವ ವ್ಯಾಪಾರಸ್ಥ ಸಲಹೆ ನೀಡಿದರೆ, ಇನ್ನೊರ್ವ ವ್ಯಾಪಾರಸ್ಥ ನಾವು ಗುಟ್ಕಾ ಯಾವಾಗಲೂ ಮಾರುತ್ತಿದ್ದೇವೆ, ಏಕಾಏಕಿ ರೇಡ್ ಮಾಡಿದರೆ ಹೇಗೆ ಎಂದು ಪ್ರಶ್ನಿಸಿದರೆ ಮತ್ತೊರ್ವ ವ್ಯಾಪಾರಸ್ಥರ ಭಯದಲ್ಲಿ ನಮ್ಮ ಅಂಗಡಿಗೆ ರೇಡ್ ಆಗುತ್ತೆ ಎಂದು ಅಂಗಡಿಗಳ ಬಾಗಿಲು ಹಾಕಿಕೊಂಡು ಮನೆಗೆ ಹೋಗಿದ್ದಾರೆ ಎಂದಾಗ ಆಕ್ರೋಶಗೊಂಡ ಪುರಸಭೆ ಅಧಿಕಾರಿಗಳು ನಿಮಗೆ ಭಯಪಡಿ ಎಂದವರು ಯಾರು, ಭಯ ಪಡುವ ಪ್ರಶ್ನೆ ಏನಿದೆ. ತಪ್ಪು ಮಾಡಿದ್ದರೆ ಭಯ ಪಡಬೇಕು. ಅಂಗಡಿಗಳನ್ನು ಬಂದ್ ಯಾಕೆ ಮಾಡಿದ್ದೀರಿ ಎಂದು ಮರು ಪ್ರಶ್ನಿಸಿದರು. ಮಧ್ಯ ಪ್ರವೇಶಿಸಿದ ಪೊಲೀಸ್ ಅಧಿಕಾರಿ ಘಟನೆಯ ತಪ್ಪು ಮಾಹಿತಿಯಿಂದ ಗೊಂದಲ ಸೃಷ್ಠಿಯಾಗಿದೆ. ಪುರಸಭೆಯವರು ಪರವಾನಗಿ ಮತ್ತು ಪರಿಶೀಲನೆಗೆ ಬಂದಿದ್ದಾರೆ.ಅವರಿಗೆ ಸಹಕಾರ ನೀಡಿ ಎಂದಾಗ ನಾವು ಅವರಿಗೆ ಸಹಕಾರ ನೀಡುತ್ತೇವೆ ಎಂದು ತಮ್ಮ ಅಂಗಡಿಗಳತ್ತ ಮುಖ ಮಾಡಿದರು.

ಪುರಸಭೆ ಪ್ರಸಕ್ತ ವರ್ಷ ಪಟ್ಟಣದಲ್ಲಿ ಅಂದಾಜು ₹20 ಲಕ್ಷ ಪರವಾನಗಿ ಫೀ ನಿರೀಕ್ಷಿಸಿದೆ. ಆದರೆ ಜೂ.1ರವರೆಗೆ 5 ಲಕ್ಷ ಸಂಗ್ರವಾಗಿತ್ತು. ಆದರೆ ತಹಸೀಲ್ದಾರ್ ಹಾಗೂ ಪುರಸಭೆ ಅಧಿಕಾರಿಗಳು ಬುಧವಾರ ನಡೆಸಿದ ದಾಳಿಯಿಂದ ಒಂದೇ ದಿನವೇ ಬರೋಬ್ಬರಿ ₹ 2 ಲಕ್ಷ 9 ಸಾವಿರಕ್ಕೂ ಅಧಿಕ ಪರವಾನಗಿ ಫೀ ಹಾಗೂ ಗುರವಾರ ಮಧ್ಯಾಹ್ನಕ್ಕೆ ₹60 ಸಾವಿರ ಸಂಗ್ರಹವಾಗಿದೆ. ನಿರೀಕ್ಷಿತ ಪ್ರಮಾಣದ ಗುರಿ ತಲುಪುವ ನಿರೀಕ್ಷೆ ಅಧಿಕಾರಿಗಳು ಹೊಂದಿದ್ದಾರೆ.

ಪುರಸಭೆಯ ಶಿವಕುಮಾರ ಇಲಾಳ, ಎನ್.ಎ.ಸಾಂಗ್ಲೀಕರ, ರಾಘವೇಂದ್ರ ಮಂತಾ ಹಾಗೂ ಪರಶುರಾಮ ಧಲಬಂಜನ, ಮಂಜುನಾಥ ದಾನಿ, ಶ್ರೀನಿವಾಸ ಅಂಬೋರೆ, ವೀರೇಶ ಯಂಡಿಗೇರಿ, ಅಲಿ ಸಾಗರ, ಮಹೇಶ, ಪ್ರಕಾಶ ರಂಗ್ರೇಜ, ಸಿದ್ದು ಬಳಿಗೇರ ಸೇರಿ ಇತರರು ಇದ್ದರು.