ಸಾರಾಂಶ
ಕನ್ನಡಪ್ರಭ ವಾರ್ತೆ ರಾಮನಗರ
ತಾಲೂಕಿನ ರಾಮನಗರ- ಕನಕಪುರ ಮುಖ್ಯ ರಸ್ತೆಯ ಅಚ್ಚಲು ಗ್ರಾಮದ ಬಳಿ ಗುರುವಾರ ಬೆಳಗ್ಗೆ ಕೆಎಸ್ ಆರ್ ಟಿಸಿ ಬಸ್ ಮತ್ತು ಸ್ಕೂಟರ್ ನಡುವೆ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಮಕ್ಕಳು ಸೇರಿ ಮೂವರು ಸಾವನ್ನಪ್ಪಿ, ಓರ್ವ ಗಾಯಗೊಂಡಿರುವ ಘಟನೆ ನಡೆದಿದೆ.ತಮಿಳುನಾಡಿನ ಡೆಂಕಣಿಕೋಟೆಯ ಬೋಕಸಂದ್ರ ಗ್ರಾಮದ ಭೈರಪ್ಪ ಎಂಬುವವರ ಮಕ್ಕಳಾದ ಪ್ರದೀಪ್ (5) , ಭವ್ಯ (3) ಹಾಗೂ ಮಧು (24) ಮೃತರು. ರವಿ ತೀವ್ರವಾಗಿ ಗಾಯಗೊಂಡಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಲಕ್ಕಪ್ಪನಹಳ್ಳಿಯ ಕೋಳಿ ಫಾರಂನಲ್ಲಿ ಕೆಲಸ ಮಾಡುತ್ತಿದ್ದ ಭೈರಪ್ಪ ಅವರಿಗೆ ಫಾರಂನ ಮಾಲೀಕ ಅಲ್ಲಿಯೇ ಮನೆ ಕೊಟ್ಟಿದ್ದರು.ಮಧು ಗುರುವಾರ ಬೆಳಗ್ಗೆ ಎಂದಿನಂತೆ ತನ್ನ ಅಣ್ಣನ ಮಕ್ಕಳಾದ ಪ್ರದೀಪ್ ಮತ್ತು ಭವ್ಯಗೆ ತಿಂಡಿ ಕೊಡಿಸಲು ಟಿವಿಎಸ್ ಸ್ಕೂಟರ್ ನಲ್ಲಿ ಸ್ನೇಹಿತ ರವಿ ಜೊತೆಗೆ ಅಚ್ಚಲು ಗ್ರಾಮದ ಕಡೆಗೆ ಹೊರಟಿದ್ದಾನೆ.
ಈ ವೇಳೆ ರಾಮನಗರದಿಂದ ಕನಕಪುರದತ್ತ ಹೊರಟಿದ್ದ ಕೆಎಸ್ ಆರ್ ಟಿಸಿ ಬಸ್ ಸ್ಕೂಟರ್ ಗೆ ಡಿಕ್ಕಿ ಹೊಡೆದಿದೆ. ಪ್ರದೀಪ್ ಮತ್ತು ಭವ್ಯ ಸ್ಥಳದಲ್ಲಿಯೇ ಸಾವನ್ನಪ್ಪಿದರೆ, ಮಧು ಮತ್ತು ರವಿ ತೀವ್ರವಾಗಿ ಗಾಯಗೊಂಡಿದ್ದರು.ಜಿಲ್ಲಾಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನಂತರ ಮಧುರನ್ನು ಬೆಂಗಳೂರು ವಿಕ್ಟೋರಿಯಾ ಹಾಗೂ ರವಿ ಅವರನ್ನು ಮಂಡ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ಆಸ್ಪತ್ರೆಗೆ ಸಾಗಿಸಲಾಗಿತ್ತು. ಅಲ್ಲಿಯೂ ಚಿಕಿತ್ಸೆ ಫಲಕಾರಿಯಾಗದೆ ಮಧು ಕೊನೆಯುಸಿರೆಳೆದಿದ್ದಾರೆ.
ಒಂದು ತಾಸಿಗೂ ಹೆಚ್ಚು ಕಾಲ ಟ್ರಾಫಿಕ್ ಜಾಮ್ :ಅಪಘಾತದ ಹಿನ್ನೆಲೆಯಲ್ಲಿ ರಾಮನಗರ - ಕನಕಪುರ ರಸ್ತೆಯಲ್ಲಿ ಸುಮಾರು 1 ತಾಸಿಗೂ ಹೆಚ್ಚು ಕಾಲ ಟ್ರಾಫಿಕ್ ಜಾಮ್ ಆಗಿತ್ತು. ಇದರಿಂದಾಗಿ ಬೆಳಗ್ಗೆ ಉದ್ಯೋಗ ಮತ್ತು ಶಾಲಾ ಕಾಲೇಜುಗಳಿಗೆ ತೆರಳುವವರಿಗೆ ಸಾಕಷ್ಟು ತೊಂದರೆಯಾಯಿತು. ಪುಟ್ಟ ಕಂದಮ್ಮಗಳು ರಸ್ತೆ ಮಧ್ಯದಲ್ಲಿಯೇ ಶವವಾಗಿ ಬಿದ್ದಿದ್ದು ಮನ ಕಲಕುವಂತಿತ್ತು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಶವಗಳನ್ನು ತೆರವುಗೊಳಿಸಿ, ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿ ಸಂಚಾರ ಸುಗಮಗೊಳಿಸಿದರು.
ಮಕ್ಕಳ ಶವಗಳನ್ನು ಜಿಲ್ಲಾಸ್ಪತ್ರೆಗೆ ಸಾಗಿಸಿ, ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ.ಈ ಸಂಬಂಧ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.