ಪಟಾಕಿ ಸಿಡಿಸಿ ಸಂಭ್ರಮಿಸಿದ ಚಿಣ್ಣರು

| Published : Nov 04 2024, 12:27 AM IST

ಸಾರಾಂಶ

ಪಟ್ಟಣ ಸೇರಿದಂತೆ ತಾಲೂಕಿನ ಅನೇಕ ಗ್ರಾಮಗಳಲ್ಲಿ ಅಂಗಡಿಕಾರರು, ಸಾರ್ವಜನಿಕರು ಹಾಗೂ ರೈತಾಪಿ ಜನರು ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಿದರು.

ಕನ್ನಡಪ್ರಭ ವಾರ್ತೆ ಕುಷ್ಟಗಿ

ಪಟ್ಟಣ ಸೇರಿದಂತೆ ತಾಲೂಕಿನ ಅನೇಕ ಗ್ರಾಮಗಳಲ್ಲಿ ಅಂಗಡಿಕಾರರು, ಸಾರ್ವಜನಿಕರು ಹಾಗೂ ರೈತಾಪಿ ಜನರು ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಿದರು.

ಅಮವಾಸ್ಯೆಯಂದು ಮನೆಯಲ್ಲಿ ಗೃಹಿಣಿಯರು ಮಹಾಲಕ್ಷ್ಮೀ ಮೂರ್ತಿ ಇರಿಸಿ ಪೂಜಿಸಿ ಮನೆಯ ಮುಂದೆ ದೀಪ ಹಚ್ಚುವ ಮೂಲಕ ಹಾಗೂ ಪಟಾಕಿಗಳನ್ನು ಸಿಡಿಸಿ ಸಡಗರದಿಂದ ಹಬ್ಬ ಆಚರಣೆ ಮಾಡಿದರು.

ಮರುದಿನ ಬಲಿಪಾಡ್ಯಮಿಯ ದಿನದಂದು ಅಂಗಡಿಕಾರರು ತೆಂಗಿನ ಗರಿ, ಬಾಳೆಕಂಬ, ಅಡಕೆ ಹೂವು, ಚೆಂಡು ಹೂವು ಸೇರಿದಂತೆ ವಿವಿಧ ತರಹ ಅಲಂಕಾರಿಕ ಸಾಮಗ್ರಿಯೊಂದಿಗೆ ಅಂಗಡಿ ಶೃಂಗರಿಸಿ ಮಹಾಲಕ್ಷ್ಮೀ ಪೂಜೆ ನೆರವೇರಿಸಿದರು. ಹಳೆ ಲೆಕ್ಕಗಳನ್ನು ಮುಗಿಸಿ ಹೊಸ ಲೆಕ್ಕಕ್ಕೆ ನಾಂದಿ ಹಾಡಲಾಯಿತು. ಹಳೇ ಪುಸ್ತಕ ತೆಗೆದು ಹೊಸ ಪುಸ್ತಕ ಇಡಲಾಯಿತು. ಸ್ಟುಡಿಯೋಗಳಲ್ಲಿ ಕ್ಯಾಮೆರಾಗಳಿಗೆ ಪುಸ್ತಕದ ಅಂಗಡಿಯಲ್ಲಿ ಪೆನ್ನು, ಪುಸ್ತಕಗಳನ್ನು ಹೀಗೆ ಆಯಾ ಅಂಗಡಿಗಳಿಗೆ ಸಂಬಂಧಿಸಿದ ವಸ್ತುಗಳನ್ನು ಇಟ್ಟುಕೊಂಡು ಪೂಜೆ ಸಲ್ಲಿಸುವ ಮೂಲಕ ದೀಪಾವಳಿಯ ಹಬ್ಬ ಆಚರಣೆ ಮಾಡಿದರು. ಪಟಾಕಿ ಸಿಡಿಸಿ ಚಿಣ್ಣರು ಸಂಭ್ರಮಿಸಿದರು.

ವಾಹನಗಳಿಗೆ ಪೂಜೆ:ರೈತಾಪಿ ಜನರು ತಮ್ಮ ವಾಹನಗಳಾದ ಎತ್ತು ಬಂಡಿ ಸೇರಿದಂತೆ ಅನೇಕ ದನಕರುಗಳನ್ನು ಪೂಜಿಸಿದರೆ ಕೆಲವರು ತಮ್ಮ ವಾಹನಗಳಾದ ಬೈಕು, ಕಾರು ಜೀಪು ಸೇರಿದಂತೆ ವಿವಿಧ ವಾಹನಗಳನ್ನು ಸಮೀಪದ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಮಾಡಿದರು.ಪಾಂಡವರ ಪೂಜೆ:

ಪಟ್ಟಣ ಸೇರಿದಂತೆ ತಾಲೂಕಿನ ಅನೇಕ ಗ್ರಾಮಗಳಲ್ಲಿ ದೀಪವಾಳಿ ಪಾಡ್ಯದ ದಿನದಂದು ಆಕಳು ಸಗಣಿಯ ಮೂಲಕ ಪಾಂಡವರನ್ನು ಮಾಡಿ ವಿಶೇಷವಾಗಿ ಭಕ್ತಿ ಭಾವದಿಂದ ಪೂಜೆ ಸಲ್ಲಿಸಿದರು. ಸಗಣಿಯಿಂದ ಪಾಂಡವರ ಮೂರ್ತಿಗಳನ್ನು ಮಾಡಿ ಅದಕ್ಕೆ ಉತ್ತರಾಣಿ ಕಡ್ಡಿ, ಹೊನ್ನಂಬರಗಿ ಹೂ, ಅಣ್ಣಿ ಹೂ ಸೇರಿದಂತೆ ವಿವಿಧ ರೀತಿಯ ಹೂಗಳಿಂದ ಅಲಂಕಾರ ಮಾಡಿ ಭಕ್ತಿಯಿಂದ ಪೂಜೆ ಸಲ್ಲಿಸಿದರು.