ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ‘ನಮ್ಮ ಊರಿನ ರಸಿಕರು’ ಸೇರಿದಂತೆ ಇತರ ಕೃತಿಗಳ ಆಧಾರಿತ ನಾಟಕ ‘ಗೊರೂರು’ ಅನ್ನು ನಿರಂತರ ರಂಗ ತಂಡ ಪ್ರದರ್ಶಿಸಿತು.
ಕನ್ನಡಪ್ರಭ ವಾರ್ತೆ ಮೈಸೂರುನಗರದ ಕಲಾಮಂದಿರದ ಕಿರುರಂಗಮಂದಿರದಲ್ಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ನಿರಂತರ ರಂಗ ಉತ್ಸವ ಯಶಸ್ವಿಯಾಗಿ ಸಾಗುತ್ತಿದೆ. ಉತ್ಸವದ ನಾಲ್ಕನೇ ದಿನವಾದ ಬುಧವಾರ ಸಂಜೆ, ದೇವಾನಂದ್ ವರಪ್ರಸಾದ್ ಹಾಗೂ ನಿರಂತರದ ಗೆಳೆಯರಿಂದ ಮಂಟೇಸ್ವಾಮಿ ಕಾವ್ಯ ಮತ್ತು ಇತರ ಜನಪದ ಗೀತೆಗಳ ಸಂಗೀತ ಕಾರ್ಯಕ್ರಮ ಪ್ರಸ್ತುತಗೊಂಡು ಪ್ರೇಕ್ಷಕರ ಗಮನ ಸೆಳೆಯಿತು.ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ‘ನಮ್ಮ ಊರಿನ ರಸಿಕರು’ ಸೇರಿದಂತೆ ಇತರ ಕೃತಿಗಳ ಆಧಾರಿತ ನಾಟಕ ‘ಗೊರೂರು’ ಅನ್ನು ನಿರಂತರ ರಂಗ ತಂಡ ಪ್ರದರ್ಶಿಸಿತು. ಮಂಜುನಾಥ್ ಬಡಿಗೇರ್ ಅವರ ನಿರ್ದೇಶನ ಹಾಗೂ ದಿಗ್ವಿಜಯ ಹೆಗ್ಗೋಡು ಅವರ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದ ಈ ನಾಟಕ ಸಾಹಿತ್ಯ ಮತ್ತು ರಂಗಭೂಮಿಯ ಒಗ್ಗೂಡಿಕೆಯನ್ನು ಪರಿಣಾಮಕಾರಿಯಾಗಿ ನಿರೂಪಿಸಿ, ತುಂಬಿದ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.ಕಾರ್ಯಕ್ರಮದಲ್ಲಿ ಮಾತನಾಡಿದ ನಗರದ ಮಹಾರಾಜ ಕಾಲೇಜಿನ ಕನ್ನಡ ಪ್ರಾಧ್ಯಾಪಕಿ ಪ್ರೊ. ವಿಜಯಲಕ್ಷ್ಮಿ, ರಂಗಭೂಮಿ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಮಾತ್ರವಲ್ಲದೆ ಸಾಮಾಜಿಕ ಜವಾಬ್ದಾರಿ ಮತ್ತು ಜಾಗೃತ ಪ್ರಜ್ಞೆ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ ಎಂದರು. ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ದಿಕ್ಕು ತಪ್ಪುತ್ತಿರುವ ಸಂದರ್ಭದಲ್ಲಿ, ರಂಗಭೂಮಿ ಶಿಕ್ಷಣದ ಕ್ರಮವನ್ನು ಬದಲಿಸುವ ಶಕ್ತಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಮಲ್ಲಿಕಾರ್ಜುನ ಸ್ವಾಮಿ ಮಾತನಾಡಿ, ಸಾಮಾಜಿಕ ಮಾಧ್ಯಮಗಳ ಅತಿಯಾದ ಬಳಕೆಯಿಂದ ಯುವಕರು ಸತ್ಯ–ಮಿತ್ಯದ ನಡುವಿನ ಗೊಂದಲದಲ್ಲಿ ಸಿಲುಕುತ್ತಿರುವ ಈ ಕಾಲಘಟ್ಟದಲ್ಲಿ, ಜನಪರ ಚಳುವಳಿಯ ಒಳಧಾರೆಯನ್ನು ಉಳಿಸಿಕೊಂಡು ಬಂದಿರುವ ನಿರಂತರ ರಂಗ ತಂಡದ ಕಾರ್ಯ ಶ್ಲಾಘನೀಯವಾಗಿದೆ ಎಂದರು. ಇಂತಹ ರಂಗೋತ್ಸವಗಳು ನಿರಂತರವಾಗಿ ನಡೆಯಬೇಕು ಎಂದು ಅವರು ಹಾರೈಸಿದರು.ದಾವಣಗೆರೆಯ ವೃತ್ತಿ ರಂಗಭೂಮಿಯ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ, ಬರಹಗಾರ ರಾಜಪ್ಪ ದಳವಾಯಿ, ಖ್ಯಾತ ಹಾಡುಗಾರ ನಟ ನವೀನ್ ಸಜ್ಜು, ಶ್ರೀನಿವಾಸ್ ಪಾಲಳ್ಳಿ, ಪ್ರಸಾದ್ ಕುಂದೂರು, ಲೋಕೇಶ್ ಮೊಸಳೆ, ದೇವಾನಂದ್ ವರಪ್ರಸಾದ್, ಎಂ.ಎಂ. ಸುಗುಣ ಮೊದಲಾದವರು ಇದ್ದರು.