ಸಾರಾಂಶ
ಕನ್ನಡಪ್ರಭ ವಾರ್ತೆ ಕೆರೂರ
ಸೌಹಾರ್ದತೆಗೆ ಹೆಸರಾದ ಉಗಲವಾಟ ಗ್ರಾಮದಲ್ಲಿ ಇಂಥ ದುರ್ಘಟನೆ ನಡೆದಿದ್ದು, ವಿಷಾದನೀಯ ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿದರು.ಉಗಲವಾಟ ಗ್ರಾಮದಲ್ಲಿ ನಡೆದ ದಲಿತ ಅರ್ಜುನ ಮಾದರನ ಮೇಲೆ ನಡೆದ ಹಲ್ಲೆ ಕುರಿತು ಭಾನುವಾರ ಜರುಗಿದ ನಾಗರಿಕರ ಸಭೆಯಲ್ಲಿ ಮಾತನಾಡಿದ ಅವರು, ಕೆಲವರು ಮಾಡಿದ ತಪ್ಪಿಗೆ ಊರಿಗೆ ಊರೇ ಶಿಕ್ಷೆ ಅನುಭವಿಸುವಂತಾಗಬಾರದು. ನಾನು ಅಧಿಕಾರಿಗಳಿಗೆ ಸೂಕ್ತಕ್ರಮ ಕೈಕೊಂಡು ಗ್ರಾಮದಲ್ಲಿ ಮತ್ತೆ ಶಾಂತಿ ನೆಲೆಸುವಂತೆ ನೋಡಿಕೊಳ್ಳಬೇಕೆಂದು ತಿಳಿಸಿದ್ದೇನೆ. ಗ್ರಾಮಸ್ಥರು ಸಹ ಅಧಿಕಾರಿಗಳಿಗೆ ಸಹಕರಿಸಿ ಮೊದಲಿನಂತೆ ಒಗ್ಗಟ್ಟಿನಿಂದ ಸಹಬಾಳ್ವೆಗೆ ಮುಂದಾಗಬೇಕು ಎಂದು ಮನವಿ ಮಾಡಿದರು.
ಡಿಸಿ ಕೆ.ಎಂ.ಜಾನಕಿ ಮಾತನಾಡಿ, ಕಾನೂನಿನ ದೃಷ್ಟಿಯಲ್ಲಿ ಯಾರೂ ಶ್ರೇಷ್ಠರಲ್ಲ ಯಾರೂ ಕನಿಷ್ಠರಲ್ಲ ಎಲ್ಲರೂ ಒಂದೇ ಎಂದು ಹೇಳುತ್ತ, ದಯವಿಟ್ಟು ಯಾರೂ ಕಾನೂನು ಕೈಗೆತ್ತಿಕೊಳ್ಳಬಾರದು. ಎಲ್ಲ ಸಮಾಜದವರು ಸಮಾನತೆಯಿಂದ ಬದುಕಿದರೇ ಸಮಾಜದಲ್ಲಿ ಶಾಂತಿ ನೆಲೆಸುತ್ತದೆ. ಗ್ರಾಮದ ಹಿರಿ ಕಿರಿಯರೆಲ್ಲರೂ ಒಂದಾಗಿ ಸೌಹಾರ್ದತೆಯಿಂದ ಬದುಕಬೇಕು. ತಪ್ಪಿತಸ್ತರನ್ನು ಕಾನೂನು ಶಿಕ್ಷಿಸುತ್ತದೆ, ಗಡಿಬಿಡಿ ಬೇಡ ಎಂದು ತಿಳಿಸಿದರು.ಎಸ್ಪಿ ಅಮರನಾಥ ರೆಡ್ಡಿ ಮಾತನಾಡಿ, ಗ್ರಾಮದಲ್ಲಿ ನಡೆದ ದುರ್ಘಟನೆಯನ್ನು ಉಸ್ತುವಾರಿ ಸಚಿವರು ಶಾಸಕರು ಜಿಲ್ಲಾಡಳಿತ ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು, ಈ ಘಟನೆಯಲ್ಲಿ 20 ಜನರ ಮೇಲೆ ಎಫ್‌ಐಆರ್ ಆಗಿದ್ದು, 6 ಜನರನ್ನು ಬಂಧಿಸಲಾಗಿದೆ. ದಲಿತ ಹಾಗೂ ಹಿಂದುಳಿದ ವರ್ಗದ ಜನರ ಮೇಲೆ ನಡೆಯುವ ದೌರ್ಜನ್ಯವನ್ನು ಸರ್ಕಾರ ಸಹಿಸುವುದಿಲ್ಲ. ಎಲ್ಲ ಸಮಾಜದವರು ಸಮಾನತೆಯಿಂದ ಬದುಕುವಂತಾಗಬೇಕೆಂಬುವುದು ಸರ್ಕಾರದ ಧ್ಯೇಯವಾಗಿದ್ದು, ಕಾನೂನು ಶಿಷ್ಠರನ್ನು ರಕ್ಷಿಸುತ್ತದೆ. ದುಷ್ಟರನ್ನು ಶಿಕ್ಷಿಸುತ್ತದೆ. ಈ ಘಟನೆ ಕುರಿತು ತನಿಖೆ ನಡೆಯುತ್ತಿದೆ. ಆತಂಕ ಪಡುವ ಕಾರಣವಿಲ್ಲ. ತಪ್ಪಿತಸ್ತರ ಮೇಲೆ ನಿರ್ಧಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಲ್ಲರೂ ಶಾಂತಿ ಸುವ್ಯವಸ್ಥೆ ಕಾಪಾಡಿಕೊಂಡು ಸೌಹಾರ್ದ ಬದುಕಿಗೆ ಮುಂದಾಗಬೇಕು ಎಂದು ಸೂಚಿಸಿದರು.ಸಭೆಯಲ್ಲಿ ಉಪವಿಭಾಗಾಧಿಕಾರಿ ಸಂತೋಷ ಜಗಲಾಸ್ಕರ, ತಹಸೀಲ್ದಾರ್ ಮಧುರಾಜ ಮೂಡಲಗಿ, ಸಿಪಿಐ ಕರಿಯಪ್ಪ ಬನ್ನೆ, ಕೆರೂರ ಪೊಲೀಸ್ ಸಿಬ್ಬಂದಿ ಹಾಗೂ ಪ್ರಮುಖರಾದ ಬಸವರಾಜ ಬ್ಯಾಹಟ್ಟಿ, ಪರಶುರಾಮ ನೀಲನಾಯಕ, ಪೀರಪ್ಪ ಮ್ಯಾಗೇರಿ, ವೆಂಕಣ್ಣ ಹೊಸಮನಿ ಸೇರಿದಂತೆ ಅನೇಕ ಇದ್ದರು.
ದಲಿತರಿಗೆ ಬಹಿಷ್ಕಾರ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಆರೋಪಿಗಳ ಬಂಧನ: ಸಚಿವ ತಿಮ್ಮಾಪೂರಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಉಗಲವಾಟ ಗ್ರಾಮದಲ್ಲಿ ದಲಿತರಿಗೆ ಬಹಿಷ್ಕಾರ ಹಾಕಿದ ವಿಷಯ ನನ್ನ ಗಮನಕ್ಕೂ ಬಂದಿದ್ದು, ಈ ವಿಚಾರವಾಗಿ ಪೊಲೀಸರಿಗೆ ಸೂಚನೆ ನೀಡಿದ್ದೇನೆ. ಪ್ರಕರಣಕ್ಕೆ ಸಂಬಂಧಿಸಿದಂತೆ 6 ಜನರನ್ನು ಬಂಧಿಸಲಾಗಿದೆ. ಘಟನೆ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಿದ್ದೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಹೇಳಿದರು.ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಜನರನ್ನು ಬಂಧಿಸಲಾಗಿದೆ. ಘಟನೆ ಹಿಂದಿನ ರಿಯಾಲಿಟಿ ಬಗ್ಗೆಯೂ ಚರ್ಚೆ ನಡೆದಿದೆ. ಘಟನೆಯ ಸತ್ಯಶೋಧನೆ ಆಗಬೇಕಿದೆ. ಪೊಲೀಸ್ ಇಲಾಖೆಯವ್ರು ತನಿಖೆ ಮಾಡುತ್ತಿದ್ದಾರೆ. ಇಂತಹ ಕೃತ್ಯ ನೋವು ತರುವಂತಹದ್ದು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕೆಲವು ಘಟನೆಗಳು ಆಗುತ್ತವೆ. ಬೇರೆ, ಬೇರೆ ಕಾರಣಗಳಿಗಾಗಿ ಇಂತವು ನಡೆಯುತ್ತಿರುತ್ತವೆ. ಸತ್ಯಾಸತ್ಯತೆ ತಿಳಿದುಕೊಳ್ಳಬೇಕಿದೆ. ನಿಜವಾಗಿಯು ಅನ್ಯಾಯ ಆಗಿದ್ದರೇ ಶಿಕ್ಷೆ ಕೊಡುವ ಕೆಲಸ ಆಗುತ್ತದೆ ಎಂದು ತಿಳಿಸಿದರು.