ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಮೈಸೂರಿನ ಮೂಡ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಗ್ಗೆ ರಾಜ್ಯಪಾಲರು ಇಂದು ಪ್ರಾಸಿಕ್ಯೂಷನ್ ಗೆ ಅನುಮತಿ ಕೊಟ್ಟಿದ್ದಾರೆ.ಇದನ್ನು ನಾನು ಸ್ವಾಗತಿಸುತ್ತೇನೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ಶಿವಮೊಗ್ಗದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯಕ್ಕೋಸ್ಕರ ಕಥೆ ಈ ರೀತಿ ಮಾಡಿದ್ದಾರೆಂದು ಕಾಂಗ್ರೆಸ್‌ನವರು ಆರೋಪ ಮಾಡುತ್ತಿದ್ದಾರೆ. ಖಂಡಿತವಾಗಿಯೂ ಆ ರೀತಿ ಇಲ್ಲ. ಸಿದ್ದರಾಮಯ್ಯ ಅವರನ್ನ ಆ ರೀತಿ ಸಮರ್ಥನೆ ಮಾಡಿಕೊಳ್ಳಲು ಬರುವುದಿಲ್ಲ. ಏಕೆಂದರೆ ದಾಖಲಾತಿ ಸಹಿತ ಅವರು ಸಿಕ್ಕಿಹಾಕಿಕೊಂಡಿದ್ದಾರೆ. ಎಲ್ಲದಕ್ಕೂ ಕೂಡ ದಾಖಲಾತಿಗಳು ಇವೆ ಎಂದರು,ಆ ಜಮೀನು ಯಾರ ವಶದಲ್ಲಿತ್ತು ಕೃಷಿಯಿಂದ ಸೈಟ್ ಆಗಿ ಪರಿವರ್ತನೆ ಹೇಗೆ ಆಯಿತು. ಮೂಡಾದವರು ಆನಂತರ ಅದನ್ನು ಸೈಟ್ ಆಗಿ ಹಂಚಿದ್ದರು. ಅಲ್ಲಿ ಕೃಷಿ ಜಮೀನಿತ್ತು ಎಂದು ಹೇಳಿ 14 ಸೈಟ್ ಗಳನ್ನು ಪಡೆದಿದ್ದಾರೆ. ಇವೆಲ್ಲವನ್ನೂ ಕೂಡ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿಕೊಂಡು ಈ ರೀತಿ ಮಾಡಿದ್ದಾರೆ. ಒಬ್ಬ ಮುಖ್ಯಮಂತ್ರಿ ಹಾಗೂ ಮುಖ್ಯಮಂತ್ರಿಯ ಪತ್ರ ಇದರಲ್ಲಿ ಭಾಗಿಯಾಗಿದ್ದಾರೆ. ಇದು ಒಂದು ಸಾಮಾನ್ಯ ಹಗರಣ ಅಲ್ಲ. ಒಬ್ಬ ಮುಖ್ಯಮಂತ್ರಿಯಾದವರು ಆಪಾದನೆ ಬಂದಾಗ ರಾಜೀನಾಮೆ ಕೊಟ್ಟು ಹೊರಗೆ ಬರಬೇಕಿತ್ತು ಎಂದು ಕುಟುಕಿದರು,
ಈ ಬಗ್ಗೆ ಬಿಜೆಪಿ ವಿಶೇಷವಾಗಿ ಪ್ರಸ್ತಾಪ ಮಾಡಿತ್ತು. ಈ ವಿಚಾರವನ್ನು ವಿಧಾನಸಭೆಯಲ್ಲೂ ಚರ್ಚೆ ಮಾಡುವುದಕ್ಕೆ ಬಿಟ್ಟಿರಲಿಲ್ಲ. ಸ್ಪೀಕರ್ ಅವರ ಮೇಲೆ ಪ್ರಭಾವ ಬೀರಿ ಬೆನ್ನು ತೋರಿಸಿ ಓಡಿ ಹೋಗಿದ್ದರು. ನಾವು ಹಾಗಾಗಿ ಸಭೆಯಲ್ಲಿ ಧರಣಿ ಮಾಡಿದ್ವಿ, ಆದರೂ ಕೂಡ ಚರ್ಚೆಗೆ ಅವರು ತಯಾರಿ ಇರಲಿಲ್ಲ. ತಮ್ಮ ಒಂದು ಕಡೆಯ ಹೇಳಿಕೆಯನ್ನು ಮಾಧ್ಯಮಗಳ ಮೂಲಕ ತಿಳಿಸಲು ಮುಂದಾಗಿದ್ದರು ಎಂದರು.ಈ ಪ್ರಕರಣ ಹೊರಗೆ ಬರಬೇಕು. ಮೂಡಾ ಹಗಣದಲ್ಲಿ ಬಿಜೆಪಿಯ ಒತ್ತಡಕ್ಕೆ ಈ ರೀತಿ ಮಾಡಿಲ್ಲ. ಬಿಜೆಪಿ ಮೂಡಾ ಹಗರಣಕ್ಕೆ ಸಂಬಂಧಿಸಿದಂತೆ ಕಂಪ್ಲೇಂಟನ್ನು ಕೊಟ್ಟಿಲ್ಲ. ಬೇರೆ ಖಾಸಗಿ ವ್ಯಕ್ತಿಗಳು ದೂರಿನ ಆಧಾರದ ಮೇಲೆ ರಾಜಪಾಲರ ಒಪ್ಪಿಗೆ ಪಡೆದಿದ್ದಾರೆ. ಈಗ ರಾಜ್ಯಪಾಲರು ಕೂಲಂಕಷವಾಗಿ ಯೋಚನೆ ಮಾಡಿ ಒಪ್ಪಿಗೆಯನ್ನು ಕೊಟ್ಟಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮೂರುಕಾಸಿನ ಜಮೀನಿಗೆ 62 ಕೋಟಿ ಕೊಡಲು ಹೇಗೆ ಸಾಧ್ಯ?ಮುಡಾ ಪ್ರಕರಣ ಬೆಳಕಿಗೆ ಬಂದ ತಕ್ಷಣ ನಗರಭಿವೃದ್ಧಿ ಸಚಿವರ ಕರೆಸಿ ಹೆಲಿಕಾಪ್ಟರ್‌ನಲ್ಲಿ ಮೂಡಾದಲ್ಲಿದ್ದಂತಹ ಕಳತಗಳನ್ನು ತುಂಬಿ ತೆಗೆದುಕೊಂಡು ಬಂದರು. ಅದನ್ನು ಏನು ಮಾಡಿದ್ದಾರೆ ಎಂಬುದನ್ನು ಮೊದಲು ಹೇಳಬೇಕು. ಈ ವಿಚಾರದಲ್ಲಿ ಗಡಿಬಿಡಿ ಯಾಕೆ. 62 ಕೋಟಿಯ ಪರಿಹಾರ ಕೊಟ್ಟರೆ ನಾನು ಜಾಗವನ್ನು ಬಿಟ್ಟು ಕೊಡೋದಕ್ಕೆ ತಯಾರಿದ್ದೇನೆ ಎಂದು ಸಿಎಂ ಹೇಳುತ್ತಿದ್ದಾರೆ. ಮೂರು ಕಾಸಿನ ಜಮೀನಿಗೆ ಹೇಗೆ 62 ಕೋಟಿ ಕೊಡಲು ಸಾಧ್ಯವಾಗುತ್ತದೆ ಎಂದು ಹರಿಹಾಯ್ದರು.
ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ಸಮ್ಮತಿ ಸ್ವಾಗತಾರ್ಹ: ಶಾಸಕ ಎಸ್.ಎನ್. ಚನ್ನಬಸಪ್ಪ
ಶಿವಮೊಗ್ಗ: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ರಾಜ್ಯಪಾಲರ ಅನುಮತಿ ನೀಡಿರುವುದು ಬಿಜೆಪಿಯ ಹೋರಾಟಕ್ಕೆ ಸಿಕ್ಕ ಯಶಸ್ಸು ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಹೇಳಿದರು.ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ವಿರುದ್ಧ ಕ್ರಮ ಕೈಗೊಳ್ಳು ವಂತೆ ಬಿಜೆಪಿ ಬೆಂಗಳೂರು- ಮೈಸೂರು ಪಾದಯಾತ್ರೆ ಮಾಡಿತ್ತು. ರಾಜ್ಯಪಾಲರು ಈಗ ಪ್ರಾಸಿಕ್ಯೂಷನ್‍ಗೆ ಅನುಮತಿ ಸ್ವಾಗತಾರ್ಹ. ಇದು ನಮ್ಮ ಹೋರಾಟಕ್ಕೆ ಸಿಕ್ಕಿರುವ ಜಯ. ಲಕ್ಷಾಂತರ ಜನ ಕಾರ್ಯಕರ್ತರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು ಎಂದರು.
ರಾಜಕಾರಣಕ್ಕೋಸ್ಕರ ಹೋರಾಟ ಮಾಡಿರಲಿಲ್ಲ. ಯಾವುದೇ ಚುನಾವಣೆ ಇಲ್ಲದ ಸಂದರ್ಭದಲ್ಲಿ ಹೋರಾಟ ಮಾಡಿದ್ದೆವು. ವಾಲ್ಮೀಕಿ ನಿಗಮದಲ್ಲಿ 187 ಕೋಟಿ ರು. ಹಗರಣ ನಡೆದಿದೆ. ಇದನ್ನು ಸ್ವತಃ ಮುಖ್ಯಮಂತ್ರಿ ಅವರೇ ಒಪ್ಪಿಕೊಂಡಿದ್ದಾರೆ. ಮುಡಾ ಹಗರಣದ ಬಗ್ಗೆ ಸದನದಲ್ಲಿ ಚರ್ಚೆ ಮಾಡಲಿಲ್ಲ ಎಂದರು.ಇಂದಿರಾಗಾಂಧಿ ವಿರುದ್ಧವಾಗಿ ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿತ್ತು. ಹೈಕೋರ್ಟ್ ತೀರ್ಪಿನ ವಿರುದ್ಧ ಅವರು ತುರ್ತು ಪರಿಸ್ಥಿತಿ ಹೇರಿದ್ದರು. ಕಾಂಗ್ರೆಸ್ ಸಹ ಪ್ರಾಸಿಕ್ಯೂಷನ್ ವಿರುದ್ಧ ಹೈಕೋರ್ಟ್ ಗೆ ಹೋಗಲು ಚಿಂತನೆ ನಡೆಸುತ್ತಿದೆ. ನ್ಯಾಯಾಲಯ ಈ ಬಗ್ಗೆ ತೀರ್ಮಾನ ಕೈಗೊಳ್ಳಲಿದೆ ಎಂದರು.ಸಿದ್ದರಾಮಯ್ಯ ಕಾನೂನುರೀತ್ಯಾ ಕ್ಲೀನ್ ಚಿಟ್ ಪಡೆಯಲಿ: ಈಶ್ವರಪ್ಪ
ಶಿವಮೊಗ್ಗ: ಪ್ರಜಾಪ್ರಭುತ್ವದಲ್ಲಿ ಕಾನೂನಿಗೆ ಗೌರವ ಕೊಡಬೇಕು ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ ನೀಡಿದ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನನ್ನ ಮೇಲೆ ಆಪಾದನೆ ಬಂದಾಗ ನಾನು ರಾಜೀನಾಮೆ ಕೊಟ್ಟು ತನಿಖೆಗೆ ಸಹಕಾರ ಕೊಟ್ಟಿದ್ದೆ. ಅವರು ಸಹ ರಾಜೀನಾಮೆ ಕೊಟ್ಟು ತನಿಖೆಗೆ ಸಹಕಾರ ಕೊಡ್ತಾರೆ ಎನ್ನುವ ವಿಶ್ವಾಸ ಇದೆ ಎಂದರು.
ಈ ಹಿಂದೆ ಸಿಎಂ ಸಿದ್ದರಾಮಯ್ಯ, ಇದೇ ಡಿಸಿಎಂ ಡಿ.ಕೆ.ಶಿವಕುಮಾರ್ ನನ್ನ ವಿರುದ್ಧ ಯಾಕೆ ದೊಡ್ಡ ಮೆರವಣಿಗೆ ಮಾಡಿದ್ದರು? ಬೇರೆಯವರ ಮೇಲೆ ಆಪಾದನೆ ಬಂದರೆ ಸರಿ, ತಮ್ಮ ವಿರುದ್ಧ ಬಂದರೆ ಸರಿಯಲ್ಲ ಎಂಬ ಧೋರಣೆ ಸರಿಯಲ್ಲ ಎಂದರು.ಆದರೆ, ನನಗೆ ಒಂದು ಅನುಮಾನ ಅಂದರೆ ಎಲ್ಲಿ ಅವರ ಶ್ರೀಮತಿ ಅವರನ್ನು ಎಲ್ಲಿ ಸೇರಿಸಿಬಿಡ್ತಾರೋ ಅಂತಾ ಅನುಮಾನ. ಪಾಪ ಅವರು ಗೌರಮ್ಮ ರೀತಿ ಇದ್ದವರು. ಅವರ ಮೇಲೆ ಅಂತಹ ಆಪಾದನೆ ಬರದೇ ಇರಲಿ ಅಂತಾ ಬೇಡಿಕೊಳ್ಳುತ್ತೇನೆ ಎಂದರು. ಸಿದ್ದರಾಮಯ್ಯ ಕಾನೂನುಬದ್ಧವಾಗಿ ಹೋರಾಟ ಮಾಡಿ ಕ್ಲೀನ್ ಚಿಟ್ ಸಿಕ್ಕಿ ಯಶಸ್ವಿಯಾಗಿ ಹೊರಗೆ ಬರಲಿ ಎಂದು ಆಶಿಸಿದರು.