ಸಾರಾಂಶ
ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ಇಲ್ಲಿನ ಪಟ್ಟಣ ಪಂಚಾಯಿತಿಯ ೬೦ ಮಳಿಗೆಗಳ ಹರಾಜಿನಿಂದ ಪಂಚಾಯಿತಿಗೆ ಲಕ್ಷಾಂತರ ರು. ಆದಾಯ ಲಭಿಸಿದ್ದು, ಮಳಿಗೆಗಳು ಪರಭಾರೆಯಾಗದಂತೆ ಪಂಚಾಯಿತಿ ಆಡಳಿತ ಮತ್ತು ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸೋಮವಾರಪೇಟೆ ಸಾರ್ವಜನಿಕ ಹೋರಾಟ ಸಮಿತಿ ಆಗ್ರಹಿಸಿದೆ.ಕಳೆದ ೨೪ ವರ್ಷಗಳಿಂದ ಪಾರದರ್ಶಕವಾಗಿ ಹರಾಜು ಪಕ್ರಿಯೆ ನಡೆದಿದ್ದರೆ ಪಂಚಾಯಿತಿಗೆ ಕೋಟಿಗಳ ಲೆಕ್ಕದಲ್ಲಿ ಆದಾಯ ಬರುತ್ತಿತ್ತು. ಆದರೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳಿಂದ ಪಂಚಾಯಿತಿಗೆ ನಷ್ಟವಾಗಿದೆ ಎಂದು ಸಮಿತಿ ಅಧ್ಯಕ್ಷ ಸಿ.ಬಿ.ಸುರೇಶ್‌ಶೆಟ್ಟಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ರು. ೩ ಸಾವಿರ ಬಾಡಿಗೆಯನ್ನು ಪಂಚಾಯಿತಿಗೆ ಕಟ್ಟಿ, ಮಳಿಗೆಗಳನ್ನು ಅಕ್ರಮವಾಗಿ ಪರಭಾರೆ ಮಾಡಿ, ಮಳಿಗೆಗಳಿಂದ ೨೦-೪೦ ಸಾವಿರ ರು. ಬಾಡಿಗೆ ಪಡೆದು ಬಾಡಿಗೆ ದಂಧೆಯಲ್ಲಿ ಲಕ್ಷಾಂತರ ಹಣವನ್ನು ಗಳಿಸಿದ್ದಾರೆ ಎಂದು ದೂರಿದರು.ಜಿಲ್ಲಾಡಳಿತ ೬೦ ಮಳಿಗೆಗಳ ಹರಾಜಿಗೆ ಅಧಿಸೂಚನೆ ಹೊರಡಿಸಿದ ನಂತರ, ಹರಾಜು ಪ್ರಕ್ರಿಯೆ ತಡೆಯಲು ಕೆಲವರು ಒಂದು ವರ್ಷದಿಂದ ಶ್ರಮಪಟ್ಟಿದ್ದಾರೆ. ನ್ಯಾಯಾಲಯದಿಂದಲೂ ತಡೆಯಾಜ್ಞೆ ತಂದಿದ್ದರು. ಮಳಿಗೆಗಳನ್ನು ನಿಯಾಮಾನುಸಾರ ಹರಾಜು ಮಾಡುವಂತೆ ಹೋರಾಟ ಸಮಿತಿ ಹೋರಾಟ ಮಾಡಿಕೊಂಡೆ ಬಂದಿದೆ. ಮುಂದಿನ ಒಂದು ವಾರದಲ್ಲಿ ಹರಾಜಿನಲ್ಲಿ ಮಳಿಗೆಗಳನ್ನು ಪಡೆದುಕೊಂಡವರ ಹೆಸರಿಗೆ ನೋಂದಣಿ ಪ್ರಕ್ರಿಯೆ ನಡೆಯಬೇಕು ಎಂದು ಆಗ್ರಹಿಸಿದರು.
ಸಮಿತಿ ಉಪಾಧ್ಯಕ್ಷ ಮತ್ತು ದಲಿತಪರ ಹೋರಾಟಗಾರ ಟಿ.ಈ.ಸುರೇಶ್ ಮಾತನಾಡಿ, ಪರಿಶಿಷ್ಟಜಾತಿ ೯, ಪಂಗಡಕ್ಕೆ ೨, ಅಂಗವಿಕಲರಿಗೆ ೧ ಮಳಿಗೆ ಮೀಸಲಿಡುವ ಮೂಲಕ ಜಿಲ್ಲಾಡಳಿತ ಉತ್ತಮ ಕೆಲಸ ಮಾಡಿದೆ. ಕಳೆದ ೪೦ ವರ್ಷಗಳಿಂದಲೂ ದೀನದಲಿತರು ಮಳಿಗೆಗಳನ್ನು ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಮೀಸಲಾಗಿರುವ ಮಳಿಗೆಗಳು ಪರಭಾರೆಯಾಗದಂತೆ ಎಚ್ಚರ ವಹಿಸಬೇಕು. ಹಣದ ಆಮಿಷ ತೋರಿಸಿ, ಪರಭಾರೆಯ ಮೂಲಕ ಬೇರೆಯವರು ಮಳಿಗೆಗಳನ್ನು ಕಿತ್ತುಕೊಂಡರೆ, ಪರಿಶಿಷ್ಟಜಾತಿ ದೌರ್ಜನ್ಯ ಕಾಯಿದೆಯಡಿ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು.ಮಳಿಗೆಗಳು ಪರಾಭಾರೆಯಾಗುವ ಸೂಚನೆಗಳು ಸಿಕ್ಕಿದ್ದು, ಪಂಚಾಯಿತಿ ಆಡಳಿತ ಸೂಕ್ತ ಕ್ರಮಕೈಗೊಳ್ಳದಿದ್ದರೆ, ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಸಮಿತಿಯ ಕಾರ್ಯದರ್ಶಿ ಪ್ರತಾಪ್, ಖಜಾಂಚಿ ರಂಗಸ್ವಾಮಿ, ಸಮಿತಿಯ ದಾಕ್ಷಾಯಣಿ ಇದ್ದರು.................ಸೋಮವಾರಪೇಟೆ ಪ.ಪಂ. ವಾಣಿಜ್ಯ ಮಳಿಗೆ ಹರಾಜು: ತಿಂಗಳಿಗೆ 3.98 ಲಕ್ಷ ರು. ಆದಾಯಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ಪಟ್ಟಣ ಪಂಚಾಯಿತಿ ವಾಣಿಜ್ಯ ಮಳಿಗೆ ಹರಾಜು ಪ್ರಕ್ರಿಯೆ ಬುಧವಾರ ತಡರಾತ್ರಿವರೆಗೂ ನಡೆದು ಪಂಚಾಯಿತಿಗೆ ತಿಂಗಳಿಗೆ ೫೮ ಮಳಿಗೆಗಳಿಂದ ರು. ೩.೯೮ ಲಕ್ಷ ಆದಾಯ ಲಭಿಸಿದೆ.ಕಳೆದ ಕೆಲವು ತಿಂಗಳುಗಳಿಂದ ವಾಣಿಜ್ಯ ಮಳಿಗೆಗಳ ಹರಾಜಿಗೆ ಅಡ್ಡಿ ಉಂಟಾಗಿತ್ತು. ಹಾಲಿ ವರ್ತಕರು ಮಳಿಗೆಗಳನ್ನು ಶೆ. ೧೦ರಷ್ಟು ಬಾಡಿಗೆ ಹೆಚ್ಚಿಸಿ ನೀಡುವಂತೆ ಒತ್ತಾಯಿಸಿ ಹೈಕೋರ್ಟ್‌ನಲ್ಲಿ ತಡೆಯಾಜ್ಞೆ ತಂದ ಹಿನ್ನೆಲೆಯಲ್ಲಿ ಯಾವುದೇ ಪ್ರಕ್ರಿಯೆಗಳು ನಡೆದಿರಲಿಲ್ಲ. ನಂತರ ಪಂಚಾಯಿತಿ ತಡೆಯಾಜ್ಞೆ ತೆರವುಗೊಳಿಸಿ ಟೆಂಡರ್ ಪ್ರಕ್ರಿಯೆ ನಡೆಸಿತು.
ಮಳಿಗೆಯೊಂದಕ್ಕೆ ರು. ೩೧೪೧ ನಿಗದಿಗೊಳಿಸಿ ಟೆಂಡರ್ ನಡೆಸಲಾಯಿತು. ಅದರಲ್ಲಿ ಒಂದು ಮಳಿಗೆ ರು. ೫೫ ಸಾವಿರಕ್ಕೆ ಬಿಡ್ಡಾಯಿತು. ಪರಿಶಿಷ್ಟ ಜಾತಿ ಮತ್ತು ಪಂಗಡದ ಒಂದೊಂದು ಮಳಿಗೆಗಳಿಗೆ ಯಾರೂ ಟೆಂಡರ್‌ನಲ್ಲಿ ಭಾಗವಹಿಸದ ಹಿನ್ನೆಲೆ ಟೆಂಡರ್ ಮುಂದೂಡಲಾಯಿತು.ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಟೆಂಡರ್ ಸಂದರ್ಭ ಪಂಚಾಯಿತಿ ಅಧ್ಯಕ್ಷ ಜಯಂತಿ ಶಿವಕುಮಾರ್, ಉಪಾಧ್ಯಕ್ಷೆ ಮೋಹಿನಿ ಹಾಗೂ ಸದಸ್ಯರು, ಮುಖ್ಯಾಧಿಕಾರಿ ನಾಚಪ್ಪ ಮತ್ತಿತರರು ಇದ್ದರು.