ಸಾರಾಂಶ
ತಾಲೂಕಿನ ತೊಪ್ಪನಹಳ್ಳಿ ಗ್ರಾಮವು ಗಡಿಭಾಗಕ್ಕೆ ಹೊಂದಿಕೊಂಡಿರುವ ಪಂಚಾಯಿತಿ ಕೇಂದ್ರ ಸ್ಥಾನವಾಗಿದೆ. ಪಂಚಾಯಿತಿ ವ್ಯಾಪ್ತಿ ಸೇರಿದಂತೆ ಸುತ್ತಮುತ್ತಲಿನ ಹತ್ತಾರು ಗ್ರಾಮಗಳಲ್ಲಿ ಶುಭ ಸಮಾರಂಭಗಳನ್ನು ನಡೆಸಲು ಯಾವುದೇ ಕಲ್ಯಾಣ ಮಂಟಪ ಅಥವಾ ಸುಸಜ್ಜಿತ ಸಮುದಾಯ ಭವನವಿಲ್ಲ.
ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ಮದುವೆ ಮುಂಜಿ ಸೇರಿದಂತೆ ಇತರೆ ಶುಭ ಸಮಾರಂಭಗಳಿಗೆ ಅನುಕೂಲವಾಗಲೆಂದು ತೊಪ್ಪನಹಳ್ಳಿ ಗ್ರಾಮದಲ್ಲಿ ನಿರ್ಮಿಸುತ್ತಿರುವ ಸಮುದಾಯ ಭವನ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ಕಟ್ಟಡವು ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ. ತಾಲೂಕಿನ ತೊಪ್ಪನಹಳ್ಳಿ ಗ್ರಾಮವು ಗಡಿಭಾಗಕ್ಕೆ ಹೊಂದಿಕೊಂಡಿರುವ ಪಂಚಾಯಿತಿ ಕೇಂದ್ರ ಸ್ಥಾನವಾಗಿದೆ. ಪಂಚಾಯಿತಿ ವ್ಯಾಪ್ತಿ ಸೇರಿದಂತೆ ಸುತ್ತಮುತ್ತಲಿನ ಹತ್ತಾರು ಗ್ರಾಮಗಳಲ್ಲಿ ಶುಭ ಸಮಾರಂಭಗಳನ್ನು ನಡೆಸಲು ಯಾವುದೇ ಕಲ್ಯಾಣ ಮಂಟಪ ಅಥವಾ ಸುಸಜ್ಜಿತ ಸಮುದಾಯ ಭವನವಿಲ್ಲ.ದೇವಾಲಯದಲ್ಲಿ ಸಮಾರಂಭ
ಆದರೆ ಬಡ ಜನರು ಹೆಚ್ಚು ಹಣ ಒಟ್ಟು ಕಲ್ಯಾಣ ಮಂಟಪಗಳಿಗೆ ಹೋಗುವುದಕ್ಕೆ ಸಾಧ್ಯವಾಗದೆ ದೇವಾಲಯದ ಮುಂದೆ ಶುಭ ಕಾರ್ಯವನ್ನು ಮಾಡಿಕೊಳುತ್ತಿದ್ದರು. ದೇವಾಲಯಗಳ ಬಳಿ ನೀರು, ಶೌಚಾಲಯ ಸೇರಿ ಮೂಲ ಸೌಕರ್ಯಗಳ ಸಮಸ್ಯೆ ಜೊತೆಗೆ ಮಳೆ ಬಂದರೆ ಶುಭ ಕಾರ್ಯಕ್ಕೆ ಬಂದವರು ಆಶ್ರಯ ಪಡೆಯಲು ಸಮಸ್ಯೆ ಎದುರಾಗುತ್ತಿತ್ತು.ಇದನ್ನು ಮನಗಂಡ ಶಾಸಕ ಎಸ್.ಎನ್ ನಾರಾಯಣಸ್ವಾಮಿ ೨೦೨೧-೨೨ನೇ ಸಾಲಿನ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯ ಅಡಿಯಲ್ಲಿ ಸಮುದಾಯ ಭವನವನ್ನು ನಿರ್ಮಿಸಲು ಅನುದಾನವನ್ನು ಮಂಜೂರು ಮಾಡಿಸಿ, ಕಟ್ಟಡ ನಿಮಾರ್ಣದ ಕಾಮಗಾರಿಯನ್ನು ನಿರ್ಮಿತಿ ಕೇಂದ್ರಕ್ಕೆ ನೀಡಿದರು. ಮೊದಲ ಹಂತವಾಗಿ ೧೭ ಲಕ್ಷ ಅನುದಾನ ಬಿಡುಗಡೆಯಾಗಿದ್ದು, ಭವನ ಕಾಮಗಾರಿ ಮೋಲ್ಡ್ ಹಂತದಲ್ಲಿ ನಿಂತಿದೆ.
3 ವರ್ಷದಿಂದ ಕಾಮಗಾರಿ ಸ್ಥಗಿತಆದರೆ ಅನುದಾನದ ಕೊರತೆಯಿಂದ ಮೋಲ್ಡ್ ಹಾಕಿ ಕಾಮಗಾರಿಯನ್ನು ಮುಂದುವರಿಸದೇ ಕಳೆದ ೩ ವರ್ಷಗಳಿಂದ ಹಾಗೇ ಬಿಟ್ಟಿರುವುದರಿಂದ ಕಟ್ಟಡ ಕುಡುಕರ ಅಡ್ಡೆಯಾಗಿದೆ. ಅಲ್ಲದೆ ಇತರೆ ಅನೈತಿಕ ಚಟುವಟಿಕೆಗಳಿಗೆ ಬಳಕೆಯಾಗುತ್ತಿದೆ.
ಭವನ ನಿರ್ಮಾಣದ ಕಾಮಗಾರಿ ಪೂರ್ಣಗೊಂಡರೆ ಸುತ್ತಮುತ್ತಲಿನ ಹತ್ತಾರು ಗ್ರಾಮಗಳ ಜನರು ಕಡಿಮೆ ವೆಚ್ಚದಲ್ಲಿ ಶುಭ ಸಮಾರಂಭಗಳನ್ನು ಮಾಡಲು ಅನುಕೂಲವಾಗಲಿದೆ. ಆದ್ದರಿಂದ ಸರ್ಕಾರದ ಅನುದಾನವನ್ನು ಪಡೆದು ಭವನದ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.