ತೆರವಾದ ಎಂಎಲ್ಸಿ ಸ್ಥಾನಕ್ಕೆ ಶುರುವಾಯ್ತು ಪೈಪೋಟಿ

| Published : Jan 27 2024, 01:17 AM IST

ಸಾರಾಂಶ

ಶೆಟ್ಟರ್‌ ಕಾಂಗ್ರೆಸ್‌ಗೆ ಬಂದಿರುವುದರಿಂದ ಲಿಂಗಾಯತರ ಬೆಂಬಲ ದೊರೆತ್ತಿತ್ತು. ಹೀಗಾಗಿ ಪರಿಷತ್‌ ಸ್ಥಾನವನ್ನು ಲಿಂಗಾಯತ ಸಮುದಾಯಕ್ಕೆ ಕೊಡಬೇಕು ಎಂಬ ಬೇಡಿಕೆ ಕಾಂಗ್ರೆಸ್‌ನಲ್ಲಿ ಒಂದು ಬಣ ಇಟ್ಟಿದೆ. ಇದಕ್ಕಾಗಿ ಮಾಜಿ ಶಾಸಕ ಡಿ.ಆರ್‌. ಪಾಟೀಲ, ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಯ ಮಾಜಿ ಅಧ್ಯಕ್ಷ ಸದಾನಂದ ಡಂಗನವರ, ಅನಿಲಕುಮಾರ ಪಾಟೀಲ, ರಜತ್‌ ಉಳ್ಳಾಗಡ್ಡಿಮಠ ಸೇರಿದಂತೆ ಹಲವರ ಹೆಸರು ಕೇಳಿ ಬರುತ್ತಿದೆ

ಶಿವಾನಂದ ಗೊಂಬಿ ಹುಬ್ಬಳ್ಳಿ

ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಕಾಂಗ್ರೆಸ್‌ಗೆ ಕೈಕೊಟ್ಟು ಬಿಜೆಪಿಗೆ ಹೋಗಿದ್ದು ಆಯ್ತು. ಇದೀಗ ಅವರ ರಾಜೀನಾಮೆಯಿಂದ ತೆರವಾಗಿರುವ ವಿಧಾನಪರಿಷತ್‌ ಸ್ಥಾನಕ್ಕೆ ಕಾಂಗ್ರೆಸ್‌ನಲ್ಲಿ ಪೈಪೋಟಿ ಶುರುವಾಗಿದೆ. ಆದರೆ ಕಾಂಗ್ರೆಸ್‌ ವರಿಷ್ಠರು, ಶೆಟ್ಟರ್‌ ಸ್ಥಾನ ತುಂಬಬಲ್ಲ ಸೂಕ್ತ ಅಭ್ಯರ್ಥಿಯ ಹುಡುಕಾಟದಲ್ಲಿ ತೊಡಗಿದ್ದಾರೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್‌ ಸಿಗದ ಕಾರಣ ಬಿಜೆಪಿಯಿಂದ ಮುನಿಸಿಕೊಂಡು ಶೆಟ್ಟರ್‌ ಕಾಂಗ್ರೆಸ್‌ ಸೇರಿದ್ದರು. ಇದರಿಂದ ಪ್ರಬಲ ಲಿಂಗಾಯತ ಸಮುದಾಯದ ಪ್ರಮುಖ ಲೀಡರ್‌ರೊಬ್ಬರು ಪಕ್ಷಕ್ಕೆ ಬಂದಿದ್ದಾರೆ ಎಂದು ಕಾಂಗ್ರೆಸ್‌ ಹರ್ಷಗೊಂಡಿತ್ತು. ವಿಧಾನಸಭೆ ಚುನಾವಣೆಯಲ್ಲಿ ಶೆಟ್ಟರ್‌ ಸೋತರು. ಹೀಗಾಗಿ ಶೆಟ್ಟರ್‌ ಪರಾಭವಗೊಂಡಿದ್ದರೂ ಅವರಿಗೆ ವಿಧಾನಪರಿಷತ್‌ ಸದಸ್ಯತ್ವ ನೀಡಿತ್ತು.

ಇದೀಗ ಶೆಟ್ಟರ್‌ ಪರಿಷತ್‌ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಮಾತೃ ಪಕ್ಷಕ್ಕೆ ಮರಳಿದ್ದಾರೆ. ಇದರಿಂದ ಪರಿಷತ್‌ನಲ್ಲಿ ಒಂದು ಸ್ಥಾನ ತೆರವಾದಂತಾಗಿದೆ. ಈ ಸ್ಥಾನವನ್ನು ಧಾರವಾಡ ಜಿಲ್ಲೆಗೆ ಕೊಡಬೇಕು ಎಂಬ ಬೇಡಿಕೆ ಕೈ ಮುಖಂಡರದ್ದು. ಹೀಗಾಗಿ ಸಹಜವಾಗಿ ಪೈಪೋಟಿ ಜಾಸ್ತಿಯಾಗುತ್ತಿದೆ.

ಪೈಪೋಟಿ ಜಾಸ್ತಿ: ಶೆಟ್ಟರ್‌ ಕಾಂಗ್ರೆಸ್‌ಗೆ ಬಂದಿರುವುದರಿಂದ ಲಿಂಗಾಯತರ ಬೆಂಬಲ ದೊರೆತ್ತಿತ್ತು. ಹೀಗಾಗಿ ಪರಿಷತ್‌ ಸ್ಥಾನವನ್ನು ಲಿಂಗಾಯತ ಸಮುದಾಯಕ್ಕೆ ಕೊಡಬೇಕು ಎಂಬ ಬೇಡಿಕೆ ಕಾಂಗ್ರೆಸ್‌ನಲ್ಲಿ ಒಂದು ಬಣ ಇಟ್ಟಿದೆ. ಇದಕ್ಕಾಗಿ ಮಾಜಿ ಶಾಸಕ ಡಿ.ಆರ್‌. ಪಾಟೀಲ, ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಯ ಮಾಜಿ ಅಧ್ಯಕ್ಷ ಸದಾನಂದ ಡಂಗನವರ, ಅನಿಲಕುಮಾರ ಪಾಟೀಲ, ರಜತ್‌ ಉಳ್ಳಾಗಡ್ಡಿಮಠ ಸೇರಿದಂತೆ ಹಲವರ ಹೆಸರು ಕೇಳಿ ಬರುತ್ತಿದೆ.

ಆದರೆ ಮುಸ್ಲಿಂ ಸಮುದಾಯವೂ ಕಾಂಗ್ರೆಸ್‌ ಪಕ್ಷದಲ್ಲಿ ನಮ್ಮನ್ನು ಬರೀ ಮತ ಬ್ಯಾಂಕ್‌ ಆಗಿ ಮಾತ್ರ ಬಳಕೆ ಮಾಡಿಕೊಳ್ಳುತ್ತಿದೆ. ಹಾಗೆ ನೋಡಿದರೆ ಕಳೆದ ಲೋಕಸಭಾ ಚುನಾವಣೆಯಲ್ಲೂ ನಮ್ಮ ಸಮುದಾಯಕ್ಕೆ ಟಿಕೆಟ್‌ ಕೂಡ ಕೊಡಲಿಲ್ಲ. ಸ್ಥಳೀಯ ಸಂಸ್ಥೆಗಳಿಂದ ಸಲೀಂ ಅಹ್ಮದ ಅವರಿಗೆ ಮಾತ್ರ ಸ್ಥಾನ ಸಿಕ್ಕಿದೆ. ಈ ಭಾಗದಲ್ಲಿ ಮುಸ್ಲಿಂ ಸಮುದಾಯಕ್ಕೆ ಅವಕಾಶ ಕಲ್ಪಿಸಬೇಕು ಎಂಬ ಬೇಡಿಕೆ ಆ ಸಮುದಾಯದ್ದು. ಇದಕ್ಕಾಗಿ ಮಾಜಿ ಸಚಿವ ಎ.ಎಂ. ಹಿಂಡಸಗೇರಿ, ಅಲ್ತಾಫ್‌ ಹಳ್ಳೂರ, ಅನ್ವರ ಮುಧೋಳ ಸೇರಿದಂತೆ ಹಲವರ ಹೆಸರು ಮುಂಚೂಣಿಗೆ ಬರುತ್ತಿವೆ.

ಇನ್ನು ಕಳೆದ ಬಾರಿ ನವಲಗುಂದ ಕ್ಷೇತ್ರದಲ್ಲಿ ಚುನಾವಣೆಗೆ ಸಂಪೂರ್ಣ ಸಿದ್ಧತೆ ನಡೆಸಿದ್ದ ವಿನೋದ ಅಸೂಟಿಗೆ ಟಿಕೆಟ್‌ ತಪ್ಪಿತು. ಜೆಡಿಎಸ್‌ನಿಂದ ಬಂದಿದ್ದ ಎನ್‌.ಎಚ್‌. ಕೋನರಡ್ಡಿಗೆ ಟಿಕೆಟ್‌ ಲಭಿಸಿತು. ಹೀಗಾಗಿ ಆಗ ಕ್ಷೇತ್ರ ತ್ಯಾಗ ಮಾಡಿದ್ದ ವಿನೋದ ಅಸೂಟಿಗೆ ಪರಿಷತ್‌ ಸ್ಥಾನ ನೀಡಬೇಕು. ಇದರಿಂದ ಯುವಕರಿಗೆ ಆದ್ಯತೆ ನೀಡಿದಂತಾಗುತ್ತದೆ. ಜತೆಗೆ ಉತ್ತಮ ಸಂಘಟನಾಕಾರನಾಗಿರುವ, ಕುರುಬ ಸಮಾಜಕ್ಕೆ ಸೇರಿರುವ ಅಸೂಟಿಗೆ ಕೊಡುವುದರಿಂದ ಪಕ್ಷಕ್ಕೂ ಹೆಚ್ಚು ಅನುಕೂಲವಾಗಲಿದೆ ಎಂಬ ಬೇಡಿಕೆ ಮತ್ತೊಂದು ಬಣ ಮುಂದೆ ಇಟ್ಟಿದೆ.

ಹುಡುಕಾಟ: ಈ ನಡುವೆ ಶೆಟ್ಟರ್‌ ಹೊರ ಹೋಗಿರುವುದರಿಂದ ಅವರ ಗೈರನ್ನು ಸರಿದೂಗಿಸುವಂತಹ ಸೂಕ್ತ ಲಿಂಗಾಯತ ಅಭ್ಯರ್ಥಿ ಯಾರು ಎಂಬ ಹುಡುಕಾಟದಲ್ಲಿ ಕಾಂಗ್ರೆಸ್‌ ವರಿಷ್ಠರು ತೊಡಗಿದ್ದಾರೆ. ಲೋಕಸಭೆ ಹೊಸ್ತಿಲಲ್ಲಿರುವ ಈ ಹೊತ್ತಿನಲ್ಲಿ ಅಳೆದು ತೂಗಿ ಪರಿಷತ್‌ಗೆ ಆಯ್ಕೆ ಮಾಡಬೇಕು. ಅದರಿಂದ ಪಕ್ಷದ ಇಮೇಜ್‌ ಕೂಡ ಹೆಚ್ಚಾಗಬೇಕು. ಲೋಕಸಭೆ ಚುನಾವಣೆಯಲ್ಲಿ ತಮ್ಮ ಪಕ್ಷಕ್ಕೆ ಅನುಕೂಲವೂ ಆಗಬೇಕು ಅಂಥ ಅಭ್ಯರ್ಥಿಯನ್ನು ಹುಡುಕಾಟ ನಡೆಸಿದೆ.

ಒಟ್ಟಿನಲ್ಲಿ ಶೆಟ್ಟರ್‌ ರಾಜೀನಾಮೆಯಿಂದ ತೆರವಾಗಿರುವ ಪರಿಷತ್‌ ಸದಸ್ಯತ್ವ ಸ್ಥಾನಕ್ಕೆ ಕಾಂಗ್ರೆಸ್‌ನಲ್ಲಿ ಈಗಲೇ ಪೈಪೋಟಿಯಂತೂ ಶುರುವಾಗಿದೆ. ಪಕ್ಷ ಯಾವ ನಿರ್ಧಾರ ಕೈಗೊಳ್ಳುತ್ತದೆಯೋ ಎಂಬುದನ್ನು ಕಾಯ್ದು ನೋಡಬೇಕಷ್ಟೇ!