ಸಾರಾಂಶ
ಪವನ ಕಣಗಲಿ
ಕನ್ನಡಪ್ರಭ ವಾರ್ತೆ ಸಂಕೇಶ್ವರಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಬಿಡಿಸಿಸಿ) ಹೈ ವೋಲ್ಟೇಜ್ ಕದನಕ್ಕೆ ಸಜ್ಜಾಗುತ್ತಿರುವ ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಹುಕ್ಕೇರಿ ತಾಲೂಕಿನ ಸಹಕಾರಿ ಸಂಸ್ಥೆಗಳ ಕೇಂದ್ರಿಕೃತ ಬೆಳವಣಿಗೆಗಳು ದೊಡ್ಡ ಸಂಚಲನ ಸೃಷ್ಟಿಸುತ್ತಿವೆ.
ಇತ್ತೀಚಿನ ರಾಜಕೀಯ ಸ್ಥಿತ್ಯಂತರಗಳು ಜಿಲ್ಲೆಯ ಪ್ರಭಾವಿ ನಾಯಕರ ನಡುವೆ ಮತ್ತೊಂದು ಸುತ್ತಿನ ರಾಜಕೀಯ ಕಾದಾಟಕ್ಕೆ ಕಾರಣವಾಗಿದೆ. ಇದಕ್ಕೆ ಮುನ್ನುಡಿ ಹುಕ್ಕೇರಿ ತಾಲೂಕಿನಿಂದಲೇ ಆರಂಭವಾಗಿದೆ. ಉಮೇಶ ಕತ್ತಿ ಅವರ ನಿಧನಾ ನಂತರ ಕತ್ತಿ-ಜಾರಕಿಹೊಳಿ ಪ್ರತಿನಿಧಿಸುವ ಹುಕ್ಕೇರಿ ತಾಲೂಕು ಈಗ ಮತ್ತೆ ಬೆಳಗಾವಿ ಜಿಲ್ಲಾ ರಾಜಕಾರಣದ ಮುನ್ನೆಲೆಗೆ ಬಂದಿದೆ.ಹುಕ್ಕೇರಿಯಲ್ಲಿ ಏನೇನಾಯಿತು? ಯಾಕಾಯಿತು?ಕಳೆದ ಒಂದು ದಶಕದಿಂದ ಕತ್ತಿ-ಜಾರಕಿಹೊಳಿ ಹೊಂದಾಣಿಕೆಯು ಹುಕ್ಕೇರಿ ತಾಲೂಕು ಸೇರಿದಂತೆ ಜಿಲ್ಲಾ ರಾಜಕಾರಣದಲ್ಲಿ ಪ್ರಾಬಲ್ಯ ಸಾಧಿಸಿತ್ತು. ಆದರೆ ಪ್ರಭಾವಿ ನಾಯಕರಾಗಿದ್ದ ಉಮೇಶ ಕತ್ತಿ ಅವರ ನಿಧನದ ನಂತರ ಕತ್ತಿ ಕುಟುಂಬದ ವರ್ಚಸ್ಸು ಕ್ಷೀಣಿಸತೊಡಗಿತು. ಲೋಕಸಭಾ ಚುನಾವಣೆಯಲ್ಲಿ ವಿರೋಧ ವ್ಯಕ್ತಪಡಿಸಿದ್ದಾರೆಂದು ಅಸಮಾಧಾನಗೊಂಡಿದ್ದ ಅಣ್ಣಾಸಾಹೇಬ ಜೊಲ್ಲೆ, ರಮೇಶ ಕತ್ತಿ ಅವರನ್ನು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ತದನಂತರ ಶಾಸಕ ಬಾಲಚಂದ್ರ ಜಾರಕಿಹೊಳಿ ಜೊತೆಗೂಡಿ ಶಾಸಕ ನಿಖಿಲ್ ಕತ್ತಿ ಅಧ್ಯಕ್ಷರಾಗಿದ್ದ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ವಶಕ್ಕೆ ಪಡೆದರು. ಬಳಿಕ ಹುಕ್ಕೇರಿ ತಾಲೂಕಿನ ರಾಜಕೀಯ ಪವರ್‌ಹೌಸ್ ಆಗಿರುವ ವಿದ್ಯುತ್ ಸಹಕಾರಿ ಸಂಘವನ್ನು ಕತ್ತಿ ಕುಟುಂಬದ ಹಿಡಿತದಿಂದ ಕಸಿದುಕೊಂಡರು. ಹೀಗೆ ರಾಜಕೀಯವಾಗಿ ಕತ್ತಿ ಕುಟುಂಬಕ್ಕೆ ಆಸರೆಯಾಗಿದ್ದ ಸಂಸ್ಥೆಗಳು ಒಂದೊಂದಾಗಿ ಕೈತಪ್ಪಿದವು. ಇದರಿಂದ ಕತ್ತಿ ವಲಯದ ಕೆಲವು ನಾಯಕರು ಜೊಲ್ಲೆ-ಜಾರಕಿಹೊಳಿ ಬಣಕ್ಕೆ ಸೇರಿಕೊಂಡರು. ಇದರಿಂದ ಎಚ್ಚೆತ್ತ ಕತ್ತಿ ಕುಟುಂಬ, ತಮ್ಮ ಬೆಂಬಲಿಗರ ಸಭೆ ಸೇರಿಸಿ “ಹೊರಗಿನವರ ಆಡಳಿತಕ್ಕೆ ಅವಕಾಶ ನೀಡುವುದಿಲ್ಲ, ಮುಂಬರುವ ಚುನಾವಣೆಗಳಲ್ಲಿ ಎಲ್ಲರಿಗೂ ತಕ್ಕ ಉತ್ತರ ಕೊಡುತ್ತೇವೆ” ಎಂದು ಗುಟುರು ಹಾಕಿದರು. ಅಷ್ಟೇ ಅಲ್ಲದೇ ಸಾಂಪ್ರದಾಯಿಕ ಎದುರಾಳಿ ಎಂದೇ ಗುರುತಿಸಿಕೊಂಡಿದ್ದ ಮಾಜಿ ಸಚಿವ ಎ.ಬಿ.ಪಾಟೀಲ ಜೊತೆಗೂಡಿ ಹಿರಣ್ಯಕೇಶಿ ಕಾರ್ಖಾನೆಯನ್ನು ಪುನಃ ತಮ್ಮ ವಶಕ್ಕೆ ತೆಗೆದುಕೊಳ್ಳುವ ಮೂಲಕ ಜೊಲ್ಲೆ-ಜಾರಕಿಹೊಳಿ ಬಣಕ್ಕೆ ತಕ್ಕ ಉತ್ತರ ನೀಡಿದರು.ಚುನಾವಣೆಗೆ ಭರ್ಜರಿ ತಯಾರಿ:
ಸೆಪ್ಟೆಂಬರ್ 27 ರಂದು ಸಂಗಮ ಸಹಕಾರಿ ಸಕ್ಕರೆ ಕಾರ್ಖಾನೆ ಮತ್ತು ಸೆಪ್ಟೆಂಬರ್ 28 ರಂದು ಹುಕ್ಕೇರಿ ವಿದ್ಯುತ್ ಸಹಕಾರಿ ಸಂಘಕ್ಕೆ ಚುನಾವಣೆ ಜರುಗಲಿವೆ. ವಿದ್ಯುತ್ ಸಹಕಾರಿ ಸಂಘವು ತಾಲೂಕಿನಲ್ಲಿ ರಾಜಕೀಯವಾಗಿ ಪ್ರಮುಖ ಪಾತ್ರ ವಹಿಸುವ ಸಂಸ್ಥೆಯಾಗಿದೆ. ಸಚಿವ ಸತೀಶ ಜಾರಕಿಹೊಳಿ ಮೇಲ್ನೋಟಕ್ಕೆ ಚುನಾವಣೆಯಲ್ಲಿ ಆಸಕ್ತಿಯಿಲ್ಲದಂತೆ ಕಾಣುತ್ತಿದ್ದರೂ, ಸದ್ದಿಲ್ಲದೇ ಪೂರ್ವತಯಾರಿಯಲ್ಲಿ ತೊಡಗಿದ್ದಾರೆ. ಇದಕ್ಕೆ ಪ್ರತಿಯಾಗಿ ಕತ್ತಿ ಕುಟುಂಬ ಮತ್ತು ಎ.ಬಿ. ಪಾಟೀಲ ಕೂಡ ತಂತ್ರಗಾರಿಕೆಯಲ್ಲಿ ಮುಳುಗಿದ್ದಾರೆ. ಇದುವರೆಗೂ ಕತ್ತಿ ನೇತೃತ್ವದಲ್ಲಿದ್ದ ಸಂಗಮ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ರಾಜೇಂದ್ರ ಪಾಟೀಲ ಜೊಲ್ಲೆ-ಜಾರಕಿಹೊಳಿ ಬಣದಲ್ಲಿ ಗುರುತಿಸಿಕೊಂಡಿದ್ದರಿಂದ ಈ ಕಾರ್ಖಾನೆಯ ಚುನಾವಣೆಯೂ ಬಹುನಿರೀಕ್ಷಿತವಾಗಿದೆ.ಜೊಲ್ಲೆ-ಜಾರಕಿಹೊಳಿ ಬಣದ ನಡೆಯೇನು?:ಕತ್ತಿ ಕುಟುಂಬ ಮತ್ತು ಎ.ಬಿ. ಪಾಟೀಲರಿಂದ ಅಚಾನಕ್ಕಾಗಿ ಎದುರಾದ ಸವಾಲಿಗೆ ಜವಾಬು ಕೊಡಲು ಅಣ್ಣಾಸಾಹೇಬ ಜೊಲ್ಲೆ ಮತ್ತು ಜಾರಕಿಹೊಳಿ ಸಹೋದರರು ಸಜ್ಜಾಗಿದ್ದಾರೆ. ಹುಕ್ಕೇರಿಯ ಸಹಕಾರಿ ಸಂಸ್ಥೆಗಳ ಚುನಾವಣೆ ಕಣದಲ್ಲಿ ತಮ್ಮ ಪ್ರಾಬಲ್ಯ ಕಾಯ್ದುಕೊಳ್ಳಲು ತಂತ್ರಗಾರಿಕೆಯನ್ನು ಮಾಡುತ್ತಿದ್ದಾರೆ. “ಪೈಪೋಟಿಗೆ ನಾವೂ ಸಿದ್ಧ ಎಂಬಂತೆ ಈ ಬಣ ತಿರುಗೇಟಿನ ಯೋಜನೆ ಹೆಣೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.ಚುನಾವಣೆಗೆ ಇನ್ನೂ ಸಾಕಷ್ಟು ಸಮಯ ಇದೆ ಮತ್ತು ಈ ಅವಧಿಯಲ್ಲಿ ಅನೇಕ ಬದಲಾವಣೆಗಳು ಸಂಭವಿಸಬಹುದು. ಆದ್ದರಿಂದ ಈಗ ಯಾವುದೇ ನಿಖರವಾಗಿ ತಿಳಿಸಲು ಸಾಧ್ಯವಿಲ್ಲ. ಮುಖಂಡರು ಮತ್ತು ಕಾರ್ಯಕರ್ತರ ಅಭಿಪ್ರಾಯವನ್ನು ಸಂಗ್ರಹಿಸುತ್ತೇವೆ. ಎಲ್ಲ ಸಾಧ್ಯತೆಗಳಿಗೂ ನಾವು ಸಿದ್ಧರಾಗಿದ್ದೇವೆ.
-ಸತೀಶ ಜಾರಕಿಹೊಳಿ, ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರು.ಸಹಕಾರಿ ಸಂಸ್ಥೆಗಳಲ್ಲಿ ರಾಜಕೀಯ ಬೆರೆಯುವುದು ಸೂಕ್ತವಲ್ಲ. ಅವು ರಾಜಕೀಯ ಚುನಾವಣೆಯಿಂದ ಮುಕ್ತವಾಗಿರಬೇಕು. ಆದರೆ ಸಂದರ್ಭಾನುಸಾರ ಬಂದರೆ ಸಂಸ್ಥೆಯ ಹಿತರಕ್ಷಣೆಯನ್ನು ಗಮನದಲ್ಲಿಟ್ಟುಕೊಂಡು ಸಂಸ್ಥೆಗಾಗಿ ಚುನಾವಣೆಯನ್ನು ಎದುರಿಸಬೇಕಾಗಬಹುದು. ತಾಲೂಕಿನ ಗುರು ಹಿರಿಯರ ಸಲಹೆಯಂತೆ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ.
-ರಮೇಶ ಕತ್ತಿ, ಮಾಜಿ ಸಂಸದರು.