ಪ್ರೀತಿ, ಗೌರವ ಮತ್ತು ಭಕ್ತಿಯ ಮೊತ್ತವೇ ನಾಥ್ ಕವಿತೆಗಳ ಸಂಗಮವಾಗಿದೆ. ನಾಥ್ ಎಂದರೆ ಇಸ್ಲಾಮಿಕ್ ಸಾಹಿತ್ಯದಲ್ಲಿ ಒಂದು ಆಧ್ಯಾತ್ಮಿಕ ಭಕ್ತಿಪೂರ್ಣ ಕವಿತೆಯ ರೂಪ ಎಂದು ಕರ್ನಾಟಕ ಉರ್ದು ಅಕಾಡೆಮಿಯ ಮಾಜಿ ಅಧ್ಯಕ್ಷ ಡಾ.ಅಮ್ಜಾದ್‌ ಹುಸೇನ್ ಅಫೀಜ್ ಕರ್ನಾಟಕಿ ಹೇಳಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಪ್ರೀತಿ, ಗೌರವ ಮತ್ತು ಭಕ್ತಿಯ ಮೊತ್ತವೇ ನಾಥ್ ಕವಿತೆಗಳ ಸಂಗಮವಾಗಿದೆ. ನಾಥ್ ಎಂದರೆ ಇಸ್ಲಾಮಿಕ್ ಸಾಹಿತ್ಯದಲ್ಲಿ ಒಂದು ಆಧ್ಯಾತ್ಮಿಕ ಭಕ್ತಿಪೂರ್ಣ ಕವಿತೆಯ ರೂಪ ಎಂದು ಕರ್ನಾಟಕ ಉರ್ದು ಅಕಾಡೆಮಿಯ ಮಾಜಿ ಅಧ್ಯಕ್ಷ ಡಾ.ಅಮ್ಜಾದ್‌ ಹುಸೇನ್ ಅಫೀಜ್ ಕರ್ನಾಟಕಿ ಹೇಳಿದರು.

ನಗರದ ಸಹ್ಯಾದ್ರಿ ಕಾಲೇಜಿನಲ್ಲಿ ಶನಿವಾರ ಕುವೆಂಪು ವಿ.ವಿ. ಸಹ್ಯಾದ್ರಿ ಕಲಾ ಕಾಲೇಜು ಉರ್ದುವಿಭಾಗ ಸಹಯೋಗದಲ್ಲಿ ಆಯೋಜಿಸಿದ್ದ ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕಿರಣ ‘ಕರ್ನಾಟಕ ಮೇ ಉರ್ದು ನಾಥ್ ಗೋಯಿ’ ಕಾರ್ಯಕ್ರಮದಲ್ಲಿ ಲೇಖಕ ಪ್ರೊ.ಎಸ್.ಎಂ.ಅಕೀಲ್‌ರವರ ‘ನಿದಾ-ಎ-ರಹಮತ್’ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.

ಬರವಣಿಗೆ ಎಂಬುದು ಅಷ್ಟು ಸುಲಭವಲ್ಲ, ಅದರಲ್ಲೂ ಕವಿತೆಗಳನ್ನು ಬರೆಯುವುದು ಕಷ್ಟಸಾಧ್ಯವೇ ಸರಿ. ಕಿರಿದಾದ ಪದಗಳಲ್ಲಿ ಹಿರಿದಾದ ಅರ್ಥಗಳನ್ನು ತುಂಬಬಹುದಾಗಿದೆ. ಈ ಹಿನ್ನಲೆಯಲ್ಲಿ ಪ್ರೊ.ಅಕೀಲ್‌ರವರು ತಮ್ಮ ಪುಸ್ತಕದಲ್ಲಿ ಅತ್ಯುತ್ತಮವಾಗಿ ಕವಿತೆಗಳನ್ನು ಹಿಡಿದಿಟ್ಟಿದ್ದಾರೆ. ಇದೆಲ್ಲಾ ನಮಗೆ ದಾರಿದೀಪವಾಗಿದೆ. ಇಂದಿನ ಯುವಜನಾಂಗ ಬರವಣಿಗೆಯತ್ತ ಹೆಚ್ಚು ಗಮನ ಕೊಡಬೇಕಾಗಿದೆ. ಇದು ದೇಶದ ಬೆಳವಣಿಗೆಯ ಸಂಕೇತವೂ ಹೌದು. ಅಕೀಲ್‌ರವರ ಸಂಶೋಧನಾತ್ಮಕ ಬರವಣಿಗೆಯನ್ನು ಕೂಡ ಮುಂದುವರಿಸಲಿ ಎಂದರು.

ಕಲಬುರಗಿ ಕೆಬಿಎನ್ ವಿವಿಯ ಉರ್ದು ವಿಭಾಗದ ಮುಖ್ಯಸ್ಥ ಪ್ರೊ.ಹಮೀದ್ ಅಕ್ಬರ್ ಮಾತನಾಡಿ, ಅಕೀಲ್ ಶಾಹ್‌ಮದಾರ್ ಅವರ ಪುಸ್ತಕವು ಪ್ರವಾದಿ ಮಹಮ್ಮದ್ ಪೈಂಗಬರ್‌ರವರ ನಡೆ-ನುಡಿ ಜೀವನ ಶೈಲಿಯ ಬಗ್ಗೆ ಅತ್ಯಂತ ಮನೋಜ್ಞವಾಗಿ ಚಿತ್ರಿತವಾಗಿದೆ. ಮತ್ತು ನಾಥ್ ಬಗ್ಗೆ ಅವರು ಸರಳವಾಗಿ ವಿವರಿಸಿದ್ದಾರೆ ಎಂದರು.

ಪ್ರಭಾರ ಪ್ರಾಂಶುಪಾಲ ಡಾ.ಕೆ.ಎನ್. ಮಂಜುನಾಥ್, ಮಾನವ ಜನಾಂಗವನ್ನು ಸಂಕುಚಿತ ಭಾವನೆಯಿಂದ ತೊಡೆದು ಹಾಕುವುದೇ ಬರವಣಿಗೆ ಮತ್ತು ಸಾಹಿತ್ಯದ ಉದ್ದೇಶವಾಗಿದೆ. ನೈತಿಕ ಪಾಠವನ್ನು ಕಲಿಸುವ ಮೂಲಕ ಜನರಲ್ಲಿ ಪ್ರೀತಿ, ವಿಶ್ವಾಸ, ಸಹಬಾಳ್ವೆ, ಪರಸ್ಪರ ಹೊಂದಾಣಿಕೆ, ಜಾತಿ ಬೇಧ-ಭಾವವನ್ನು ಮರೆತು ಜೀವನ ಸಾಗಿಸುವುದೇ ಎಲ್ಲಾ ಸಾಹಿತ್ಯಗಳ ಉದ್ದೇಶವಾಗಿದೆ ಎಂದರು.

ನಾಥ್ ಗೋಯಿ ಎಂಬುದು ಉರ್ದು ಸಾಹಿತ್ಯದಲ್ಲಿ ತನ್ನದೇ ಆದ ಹೆಸರನ್ನು ಪಡೆದಿದೆ. ಅನೇಕ ಉರ್ದು ಕವಿಗಳು ತಮ್ಮದೇ ಆದ ರೀತಿಯಲ್ಲಿ ನಾಥ್ ಶರೀಫ್ ಬರೆಯುವ ಮೂಲಕ ಪ್ರವಾದಿ ಮಹಮ್ಮದ್ ಪೈಗಂಬರ್ ಅವರನ್ನು ಹಾಡಿ ಹೊಗಳಿದ್ದಾರೆ. ಇಂದೂ ಕೂಡ ರಾಜ್ಯದ ಅನೇಕ ಜಿಲ್ಲೆಗಳಿಂದ ಸಂಪನ್ಮೂಲ ವ್ಯಕ್ತಿಗಳು ಈ ಕುರಿತು ಪ್ರಬಂಧ ಮಂಡಿಸಲಿದ್ದಾರೆ ಎಂದರು.

ಪ್ರೊ.ಎಸ್.ಎಂ.ಅಕೀಲ್ ಅವರ ಪುಸ್ತಕ ‘ನಿದಾ-ಎ-ರಹಮತ್’ವನ್ನು ಬಿಡುಗಡೆಗೊಳಿಸಿ ಅಕೀಲ್‌ ಅವರನ್ನು ಸನ್ಮಾನಿಸಲಾಯಿತು.

ಉರ್ದು ಪತ್ರಿಕೆಯ ಸಂಪಾದಕ ಮುದಾಸೀರ್ ಅಹ್ಮದ್, ಕುವೆಂಪು ವಿವಿ ಸಿಂಡಿಕೇಟ್ ಸದಸ್ಯ ಮುಸಾವರ್ ಪಾಷಾ, ಉರ್ದು ವಿಭಾಗದ ಮುಖ್ಯಸ್ಥ ಶಫೀವುಲ್ಲಾ ಕೆ., ಕಾರ್ಯಕ್ರಮ ಸಂಚಾಲಕಿ ಡಾ.ಶಬೀನಾ ತಾಲತ್ ಸೇರಿ ಹಲವರು ಇದ್ದರು.