ಸಾರಾಂಶ
- ಕಾಂಗ್ರೆಸ್‌ನ ತುಷ್ಟೀಕರಣ ಜನ ಮುಲಾಜಿಲ್ಲದೇ ಖಂಡಿಸಲಿ: ಮಾಡಾಳ್ ಮಲ್ಲಿಕಾರ್ಜುನ - - - ಕನ್ನಡಪ್ರಭ ವಾರ್ತೆ ದಾವಣಗೆರೆ
ಅಲ್ಪಸಂಖ್ಯಾತರ ತುಷ್ಟೀಕರಣ ಮುಗಿಲುಮುಟ್ಟಿದೆ. ಹುಬ್ಬಳ್ಳಿ ಪ್ರಕರಣ ಸೇರಿದಂತೆ ವಿವಿಧೆಡೆಗಳಲ್ಲಿ ನಡೆದ ಕೇಸ್‌ಗಳನ್ನು ಹಿಂಪಡೆಯುವ ಮೂಲಕ ಮತಾಂಧ ಗಲಭೆಕೋರರ ಕೃತ್ಯವನ್ನು ಕಾಂಗ್ರೆಸ್ ಸರ್ಕಾರವೇ ಸಮರ್ಥಿಸಿಕೊಳ್ಳಲು ಹೊರಟಂತಿದೆ ಎಂದು ಬಿಜೆಪಿ ಯುವ ಮುಖಂಡ ಮಾಡಾಳ್ ಮಲ್ಲಿಕಾರ್ಜುನ ಆರೋಪಿಸಿದರು.ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ.ಜೆ.ಹಳ್ಳಿ, ಕೆ.ಜೆ.ಹಳ್ಳಿ, ಹುಬ್ಬಳ್ಳಿ, ಚನ್ನಗಿರಿ ಪೊಲೀಸ್ ಠಾಣೆಗಳ ಮೇಲೆ ದಾಳಿ, ಪೊಲೀಸ್ ಅಧಿಕಾರಿಗಳು- ಸಿಬ್ಬಂದಿ ಮೇಲೆ ದಾಳಿ, ಸರ್ಕಾರಿ, ಖಾಸಗಿ ವಾಹನಗಳಿಗೆ ಬೆಂಕಿ ಹಚ್ಚಿದ್ದಂತಹ ದುಷ್ಕರ್ಮಿಗಳ ಮೇಲಿನ ಕೇಸ್‌ಗಳನ್ನು ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂಪಡೆದಿದೆ. ಆ ಮೂಲಕ ಗಲಭೆಕೋರರನ್ನೇ ಸರ್ಕಾರ ಸಮರ್ಥಿಸಿಕೊಳ್ಳುತ್ತಿದೆ. ಇದು ರಾಜ್ಯದ ದುರಂತ ಎಂದರು.
ಬೆಳಗಾವಿ ಜಿಲ್ಲೆ ಹುಕ್ಕೇರಿಯಲ್ಲಿ ನಿನ್ನೆಯಷ್ಟೇ ದುರ್ಗಾದೇವಿ ಮೆರವಣಿಗೆ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ. ಇದರಿಂದ ಕೆಲ ಹಿಂದೂಗಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಲ್ಪಸಂಖ್ಯಾತರ ತುಷ್ಟೀರಣವನ್ನು ಭಂಡ ಕಾಂಗ್ರೆಸ್ ಸರ್ಕಾರ ಕೈ ಬಿಡದಿದ್ದರೆ ಮುಂದಿನ ದಿನಗಳಲ್ಲಿ ಬಿಜೆಪಿ ರಾಜ್ಯವ್ಯಾಪಿ ತೀವ್ರತರದ ಅಹೋರಾತ್ರಿ ಧರಣಿ, ಪ್ರತಿಭಟನೆ ನಡೆಸಬೇಕಾದೀತು ಎಂದು ಎಚ್ಚರಿಸಿದ ಅವರು, ರಾಜ್ಯ ಸರ್ಕಾರವು ತನ್ನ ಸ್ವಾರ್ಥಕ್ಕಾಗಿ ಮಾಡುತ್ತಿರುವ ತುಷ್ಟೀಕರಣ ನೀತಿ, ಧೋರಣೆ, ಕ್ರಮಗಳನ್ನು ರಾಜ್ಯದ ಜನತೆ ಮುಲಾಜಿಲ್ಲದೇ ಖಂಡಿಸಬೇಕು ಎಂದರು.ಬಿಜೆಪಿ ಯಾರ ಕೈಯಲ್ಲೂ ಇಲ್ಲ:
ದಾವಣಗೆರೆ ಜಿಲ್ಲಾ ಬಿಜೆಪಿ ಯಾರ ಕೈಯಲ್ಲೂ ಇಲ್ಲ. ಯಾರ ವೈಯಕ್ತಿಕ ವಿಚಾರವೂ ಇಲ್ಲಿಲ್ಲ. 20 ವರ್ಷದಿಂದ ಕೆಲವರ ದುರಂಹಕಾರದ ವಿರುದ್ಧ ನಾವು ಕಾರ್ಯಕರ್ತರು ಧ್ವನಿ ಎತ್ತಿದ್ದೇವೆ. ನಾವು ಯಾವುದೋ ಗೆಸ್ಟ್ ಹೌಸ್‌ನಲ್ಲಿ ಸಭೆ ಮಾಡುತ್ತಿಲ್ಲ. ಯಾರದ್ದೋ ತಟ್ಟೆಯಲ್ಲಿರುವ ಅನ್ನವನ್ನು ಕಸಿಯುತ್ತಿಲ್ಲ. ಕೆಲ ಸ್ವಯಂಘೋಷಿತ ನಾಯಕರು ಜಿಲ್ಲೆಯಲ್ಲಿ ಬಿಜೆಪಿಗೆ ಸಂಕಷ್ಟ ತಂದಿದ್ದಾರೆ ಎಂದು ಮಾಡಾಳು ಮಲ್ಲಿಕಾರ್ಜುನ ದೂರಿದರು.ಯಾರು ಏನು ಮಾಡುತ್ತಾರೋ, ಅದೇ ಕರ್ಮ ಅನುಭವಿಸುತ್ತಾರೆ. ನಮ್ಮೆಲ್ಲಾ ಮುಖಂಡರು, ಕಾರ್ಯಕರ್ತರು ಯಾರೂ ಧೃತಿಗೆಡಬೇಡಿ. ಯಾರು ಪಕ್ಷಕ್ಕೆ ಅನ್ಯಾಯ ಮಾಡಿದ್ದಾರೋ, ಪಕ್ಷಕ್ಕೆ ದ್ರೋಹ ಬಗೆದಿದ್ದಾರೋ, ಪಕ್ಷದ ಸೋಲಿಗೆ ಕಾರಣರಾಗಿದ್ದಾರೋ ಅಂತಹವರು ಜಾಗ ಖಾಲಿ ಮಾಡುತ್ತಾರೆ ಎಂದು ಮಾಡಾಳ ಮಲ್ಲಿಕಾರ್ಜುನ ಯಾರ ಹೆಸರನ್ನೂ ಪ್ರಸ್ತಾಪಿಸದೇ ಮಾರ್ಮಿಕವಾಗಿ ಹೇಳಿದರು.
- - -ಬಾಕ್ಸ್ * ಸಿದ್ದೇಶ್ವರ ಸ್ವತಂತ್ರವಾಗಿ ಗೆದ್ದು ತೋರಿಸಲಿ ನಾಲ್ಕು ಅವಧಿಗೆ ಸಂಸದರಾದ ವ್ಯಕ್ತಿಯು ಮಾಜಿ ಶಾಸಕರು, ಹಿರಿಯ ಮುಖಂಡರ ಬಗ್ಗೆ ಹಗುರವಾಗಿ ಮಾತನಾಡಿದರೆ ಸಹಿಸಬೇಕೆ? ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ ಹಾಗೂ ಹಿಂದೆ ಮುಂದೆ ಸುತ್ತಾಡುವ ನಾಲ್ಕೈದು ಜನರ ಪಿತೂರಿಯಿಂದ ದಾವಣಗೆರೆ ಜಿಲ್ಲೆಯಲ್ಲಿ ಬಿಜೆಪಿ ಸೋಲನುಭವಿಸಬೇಕಾಯಿತು. ಸಿದ್ದೇಶ್ವರ ಬಿಜೆಪಿಯಿಂದಲ್ಲ, ಪಕ್ಷೇತರನಾಗಿ ನಿಂತು, ಚುನಾವಣೆ ಗೆದ್ದು ತೋರಿಸಲಿ. ಸಿದ್ದೇಶ್ವರ ಕುಟುಂಬದ ಯಾರಾದರೂ ಸ್ವತಂತ್ರವಾಗಿ ಒಂದು ಗ್ರಾಪಂ ಚುನಾವಣೆಗೆ ನಿಂತು, ಗೆದ್ದು ತೋರಿಸಲಿ ಎಂದು ಸವಾಲು ಹಾಕಿದರು.
- - - (ಸಾಂದರ್ಭಿಕ ಚಿತ್ರ)