ಸಾರಾಂಶ
ಮಂಗಳೂರು ಬಿಜೆಪಿ ಪ್ರತಿಭಟನೆಯಲ್ಲಿ ಶಾಸಕ ವೇದವ್ಯಾಸ್ ಕಾಮತ್
ಕನ್ನಡಪ್ರಭ ವಾರ್ತೆ ಮಂಗಳೂರುರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಗಳಿದ ವರ್ಗಗಳ ೧೨ ನಿಗಮಗಳಿಗೆ ಕಳೆದ ೧೯ ತಿಂಗಳಿನಲ್ಲಿ ಒಂದು ರುಪಾಯಿ ಅನುದಾನವನ್ನೂ ನೀಡಿಲ್ಲ. ಆ ಮೂಲಕ ಹಿಂದುಳಿದ ಸಮುದಾಯಗಳಿಗೆ ಕಾಂಗ್ರೆಸ್ ಸರ್ಕಾರ ಅನ್ಯಾಯ ಎಸಗಿದೆ ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಆರೋಪಿಸಿದರು.ಹಿಂದುಳಿದ ವರ್ಗಗಳ ನಿಗಮಗಳಿಗೆ ಅನುದಾನ ಬಿಡುಗಡೆಗೆ ಆಗ್ರಹಿಸಿ, ಹಿಂದುಳಿದ ವರ್ಗಗಳ ನಿಗಮಗಳಿಗೆ ಹಣ ನೀಡದ ಕಾಂಗ್ರೆಸ್ ಸರ್ಕಾರದ ವಿರುದ್ಧ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಹಿಂದುಗಳಿದ ವರ್ಗಗಳ ಮೋರ್ಚಾ ವತಿಯಿಂದ ನಗರದ ಪಿವಿಎಸ್ ವೃತ್ತ ಬಳಿ ಶನಿವಾರ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಈ ಹಿಂದಿನ ಬಿಜೆಪಿ ಸರ್ಕಾರ ದೊಡ್ಡ ಕೊಡುಗೆ ನೀಡಿತ್ತು. ಹಿಂದುಗಳಿದ ವರ್ಗಗಳಿಗೆ ಸೇರಿದ ವಿವಿಧ ನಿಗಮಗಳಿಗೆ ಅನುದಾನ ಬಿಡುಗಡೆ ಮಾಡಿತ್ತು. ಆದರೆ ಅಹಿಂದ, ಹಿಂದುಳಿದ ವರ್ಗಗಳ ಪರ ಎಂದು ಹೇಳುವ ಸಿದ್ದರಾಮಯ್ಯ ಅವರು ಹಿಂದುಳಿದ ಸಮುದಾಯಗಳ ಅಭಿವೃದ್ಧಿಗೆ ಯಾವುದೇ ಅನುದಾನ ನೀಡುತ್ತಿಲ್ಲ. ಅರಿವು ಯೋಜನೆಯನ್ನು ಕಿತ್ತುಕೊಳ್ಳಲಾಗಿದೆ. ವಿದ್ಯಾನಿಧಿ, ಮಹಿಳಾ ಸ್ವಾವಲಂಬಿ ಯೋಜನೆಗಳಿಗೆ ಹಣ ನೀಡುತ್ತಿಲ್ಲ. ಬದಲಾಗಿ ವಿವಿಧ ನಿಗಮ, ಯೋಜನೆಗಳಲ್ಲಿ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರ ನಿರತವಾಗಿದೆ ಎಂದರು.ದ.ಕ.ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಮಾತನಾಡಿ, ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಜನರ ನಿರೀಕ್ಷೆಗಳನ್ನು ಹುಸಿ ಮಾಡಿ, ಆಡಳಿತದಲ್ಲಿ ವಿಫಲಗೊಂಡಿದೆ. ದಲಿತ ಮೀಸಲು ನಿಧಿಯನ್ನು ಬೇರೆ ಯೋಜನೆಗೆ ವರ್ಗಾವಣೆ ಮಾಡಿದ ಬಳಿಕ ಇದೀಗ ಹಿಂದುಗಳಿದ ವರ್ಗಗಳ ನಿಗಮಗಳಿಗೆ ಯಾವುದೇ ಅನುದಾನ ಬಿಡುಗಡೆ ಮಾಡುತ್ತಿಲ್ಲ ಎಂದರು.ಹಿಂದುಗಳಿದ ವರ್ಗಗಳ ಮೋರ್ಚಾ ರಾಜ್ಯ ಕಾರ್ಯದರ್ಶಿ ಆರ್.ಸಿ. ನಾರಾಯಣ್, ಬಿಜೆಪಿ ಹಿಂದುಗಳಿದ ವರ್ಗಗಳ ಮೋರ್ಚಾ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಮಹೇಶ್ ಜೋಗಿ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಮಂಜುಳಾ ರಾವ್, ಮಾಜಿ ಮೇಯರ್ ಕವಿತಾ ಸನಿಲ್ ಮಾತನಾಡಿದರು.ಮೇಯರ್ ಮನೋಜ್ ಕುಮಾರ್, ಉಪಮೇಯರ್ ಭಾನುಮತಿ, ಮಾಜಿ ಮೇಯರ್ ದಿವಾಕರ ಪಾಂಡೇಶ್ವರ, ಪ್ರೇಮಾನಂದ ಶೆಟ್ಟಿ, ಮುಖಂಡರಾದ ಪೂರ್ಣಿಮಾ, ರವೀಂದ್ರ ಶೆಟ್ಟಿ ಉಳಿದೊಟ್ಟು, ರಾಜಗೋಪಾಲ ರೈ, ನಂದನ್ ಮಲ್ಯ, ರಮೇಶ್ ಕಂಡೆಟ್ಟು ಭಾಗವಹಿಸಿದ್ದರು.