ಸಾರಾಂಶ
ಕನ್ನಡಪ್ರಭ ವಾರ್ತೆ ಬೇಲೂರು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಎರಡು ವರ್ಷ ಅವಧಿ ಪೂರೈಸಿದ್ದು ಅಭಿವೃದ್ಧಿ ಮಾತ್ರ ಶೂನ್ಯವಾಗಿದೆ ಎಂದು ಬಿಜೆಪಿ ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಕಿಡಿಕಾರಿದರು.ಪಟ್ಟಣದ ಶಾಸಕ ಎಚ್ ಕೆ ಸುರೇಶ್ ಅವರ ಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಭಿವೃದ್ಧಿ ಕಾರ್ಯ ಮಾಡದೆ ಕೇವಲ ಗ್ಯಾರಂಟಿ ಯೋಜನೆ ಅಡಿಯಲ್ಲಿ ಸರ್ಕಾರ ನಡೆಸುತ್ತಿದೆ. ಸಿದ್ದರಾಮಯ್ಯನವರ ಕಾಂಗ್ರೆಸ್ ಪಕ್ಷ ಇಡೀ ರಾಜ್ಯದಲ್ಲಿ ಎಲ್ಲಿಯೂ ಕೂಡ ಅಭಿವೃದ್ಧಿ ಕೆಲಸಗಳಾಗದೆ ಕೇವಲ ಗ್ಯಾರಂಟಿ ಯೋಜನೆಗಳಾದ ಉಚಿತ ಬಸ್ ಹಾಗೂ ಮಹಿಳೆಯರಿಗೆ ೨ ಸಾವಿರ ಹಣ ನೀಡಿ ಗಂಡಸರಿಗೆ ಬರೆ ಎಳೆಯುತ್ತಿದೆ. ಸಹಾಯಧನ ಎಂದು ಇತರೆ ಗೃಹಪಯೋಗಿ ವಸ್ತುಗಳ ಮೇಲೆ ತೆರಿಗೆ ಹಣ ಹೆಚ್ಚು ಹಾಕಿ ಜನಸಾಮಾನ್ಯ ಬದುಕಿಗೆ ಕೊಳ್ಳಿ ಇಟ್ಟಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೇವಲ ಭಾಷಣಕ್ಕೆ ಮಾತ್ರ ಸೀಮಿತರಾಗಿದ್ದು ಬೇರೆ ಯಾವ ಕೆಲಸವೂ ಮಾಡಿಲ್ಲ. ಭ್ರಷ್ಟಾಚಾರ ವಿಚಾರವನ್ನು ತೆಗೆಯಲು ಹೋದರೆ ಅವರು ತಮ್ಮ ಮಾತನ್ನು ಜಾತಿಗಣತಿ, ಆಯೋಗ ಎಂಬ ಬೇರೆ ವಿಷಯಗಳ ಬಗ್ಗೆ ಮಾತನ್ನು ಬದಲಾಯಿಸುವ ಬುದ್ಧಿವಂತಿಕೆ ತೋರಿಸುತ್ತಾರೆ ಎಂದರು.ಐದು ವರ್ಷ ಹೇಗಾದರೂ ಈ ಸರ್ಕಾರವನ್ನು ನಡೆಸಬೇಕೆಂಬ ಹಂಬಲದಿಂದ ಇವರ ಪ್ರಯತ್ನ ಮಾಡುತ್ತಿದ್ದಾರೆ ಅಷ್ಟೇ ಹೊರತು ಅಭಿವೃದ್ಧಿ ಆಗಬೇಕಿಲ್ಲ ಹಾಗೂ ಜನ ಕಷ್ಟ ಕಾರ್ಪಣ್ಯ ಬೇಕಾಗಿಲ್ಲ. ಈಗ ಚುನಾವಣೆ ನಡೆದರೂ ಕೂಡ ಹೀನಾಯವಾಗಿ ಸೋಲುತ್ತಾರೆ. 26 ಜನರ ಹಿಂದೂಗಳ ಮಾರಣಹೋಮ ನಡೆದರೂ ಕೂಡ ಅದನ್ನು ಖಂಡಿಸದ ಕಾಂಗ್ರೆಸ್ ಪಕ್ಷದ ನಾಯಕರು ಪಾಕಿಸ್ತಾನ ಮೇಲೆ ಆಪರೇಷನ್ ಸಿಂದೂರ ನಡೆದಾಗ ಸಿದ್ದರಾಮಯ್ಯನವರು ನಮಗೆ ಯುದ್ಧ ಬೇಡ ಎಂದು ಹೇಳಿಕೆ ನೀಡಿರುವುದು ನಾಚಿಕೆಗೇಡಿನ ವಿಚಾರ. ಯಾವೊಬ್ಬ ಕಾಂಗ್ರೆಸ್ ಮುಖಂಡರು ಕೂಡ ಇದನ್ನು ಖಂಡಿಸಿಲ್ಲ ಆದರೆ ಆಪರೇಷನ್ ಸಿಂದೂರ ಯಾವಾಗ ಶುರುವಾಯಿತು ಆಗ ಜನ ನಮ್ಮ ವಿರುದ್ಧ ತಿರುಗಿ ಬೀಳುತ್ತಾರೆ ಎಂಬ ಕಾರಣಕ್ಕೆ ಅವರಿಗೆ ಭಯ ಉಂಟಾಗಿ ದೇಶದ ಪರವಾಗಿ ಮಾತನಾಡುತ್ತಾರೆ. ಇವರಿಗೆ ಕದನವೇ ಬೇಡ ಎಂದಾಗ ಇನ್ನು ಮೋದಿಯವರಿಗೆ ಪ್ರಶ್ನೆ ಮಾಡುವುದರಲ್ಲಿ ಅರ್ಥವೇ ಇಲ್ಲ ಎಂದರು.ಇನ್ನು ಸ್ವಾತಂತ್ರ್ಯ ಬಂದು ದೇಶ ವಿಭಜನೆಯಾದಾಗ ಗಾಂಧೀಜಿಯವರಿಗೆ ಡಾ. ಬಿ ಆರ್ ಅಂಬೇಡ್ಕರ್ ಅವರು ಮುಸ್ಲಿಂ ರಾಷ್ಟ್ರ ಮಾಡುವ ಸಂದರ್ಭದಲ್ಲಿ ಇಲ್ಲಿ ಇರುವ ಮುಸ್ಲಿಮರನ್ನು ಅಲ್ಲಿಗೆ ಕಳಿಸಿ ಎಂದು ಹೇಳಿದ್ದರು. ಆದರೆ ಗಾಂಧೀಜಿ ಅವರು ಎಲ್ಲಾ ಉಗ್ರಗಾಮಿಗಳನ್ನು ಅಲ್ಲಿಗೆ ಕಳಿಸಿ ಅವರ ಅನುಯಾಯಿಗಳನ್ನು ಕಾಂಗ್ರೆಸ್ ಪಕ್ಷವಾಗಿ ಮಾರ್ಪಡಿಸಿ ಇಲ್ಲಿಗೆ ಸೇರಿಸಿಕೊಂಡು ಅಧಿಕಾರ ಕೊಡಿಸಿದ್ದು ಈಗ ಇಲ್ಲಿ ಬುಡ ಅಲ್ಲಾಡುತ್ತಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಕೇವಲ ಭಾಷಣದಲ್ಲಿ ಮಾತ್ರ ಮುಂದುವರಿದಿದ್ದು ಆಪರೇಷನ್ ಸಿಂದೂರದ ವಿಚಾರದಲ್ಲಿ ಜನ ನಾಯಕರು ನಾಲಿಗೆ ಹರಿಬಿಡುತ್ತಿದ್ದಾರೆ. ಮಹಿಳೆಯರಿಗೆ 2000 ಹಣಕೊಟ್ಟು ದವಸ ಧಾನ್ಯ ಹಾಲು, ಮದ್ಯಪಾನ ರಸಗೊಬ್ಬರ ಬೆಲೆ ಹೆಚ್ಚು ಮಾಡಿದ್ದಾರೆ ಎಂದರು.ಇನ್ನು ಜನಗಣತಿ ವಿಚಾರಕ್ಕೆ ಬಂದರೆ ನಮಗೆ ಅದು ತೃಪ್ತಿ ತಂದಿಲ್ಲ. ಸರ್ಕಾರದ ಗ್ಯಾರಂಟಿ ಯೋಜನೆಗಳು ಇನ್ನುಮುಂದೆ ನಡೆಯಲ್ಲ. ಇನ್ನು ಹಾಸನದ ನಗರಸಭೆ ಚುನಾವಣೆ ವಿಚಾರದಲ್ಲಿ ಮೈತ್ರಿ ಸಂಬಂಧ ಕುರಿತು ಮಾತಾಡಿದ ಅವರು, ಇದು ಸ್ಥಳೀಯ ಮಟ್ಟದಲ್ಲಿ ಆಗಿದ್ದರಿಂದ ಕೆಲವೊಮ್ಮೆ ನಮಗೆ ಗೊತ್ತಿಲ್ಲದೆ ಹೀಗಾಗುವುದು ಸಹಜ ಎಂದರು.ಈ ಸಂದರ್ಭದಲ್ಲಿ ಶಾಸಕ ಎಚ್ ಕೆ ಸುರೇಶ್, ರೇಣುಕುಮಾರ್ ದೀಪಕ್ ದೊಡ್ಡಯ್ಯ, ಸಂಜು ಕೌರಿ, ಪರ್ವತಯ್ಯ ಹಾಜರಿದ್ದರು.