ಸಾರಾಂಶ
ಕನ್ನಡಪ್ರಭ ವಾರ್ತೆ ಆಳಂದ
ಮುಂಗಾರು ಮಳೆಯಿಂದಾದ ರಸ್ತೆ, ಸೇತುವೆ, ವಿದ್ಯುತ್ ಶಾಲಾ ಕಟ್ಟಡಗಳ ಹಾನಿಯಾದ ಬಗ್ಗೆ ಸರ್ಕಾರಕ್ಕೆ ತ್ವರಿಗತಿಯಲ್ಲಿ ವರದಿ ಸಲ್ಲಿಸಿ ತುರ್ತು ಮತ್ತು ತಾತ್ಕಾಲಿಕ ಕಾಮಗಾರಿ ಕೈಗೊಂಡು ಸಾರ್ವಜನಿಕರಿಗೆ ಅನುಕೂಲ ಒದಗಿಸಬೇಕು ಎಂದು ತಾಲೂಕು ಆಡಳಿತಕ್ಕೆ ಮುಖ್ಯಮಂತ್ರಿ ಸಲಹೆಗಾರರು, ಶಾಸಕ ಬಿ.ಆರ್. ಪಾಟೀಲ ಅವರು ಇಂದಿಲ್ಲಿ ಸೂಚನೆ ನೀಡಿದರು.ಪಟ್ಟಣದ ತಾಲೂಕು ಪಂಚಾಯ್ತಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಬರ ಪರಿಹಾರ ಮತ್ತು ಬೆಳೆ ವಿಮೆ ಅತಿ ಹೆಚ್ಚಿನ ಪ್ರಮಾಣದಲ್ಲಿ ತಾಲೂಕಿನ ರೈತರಿಗೆ ಒದಗಿಸುವಲ್ಲಿ ಕಂದಾಯ ಮತ್ತು ಕೃಷಿ ಇಲಾಖೆಯ ಅಧಿಕಾರಿಗಳ ಕಾರ್ಯವನ್ನು ಸಭೆಯಲ್ಲಿ ಶ್ಲಾಘಿಸಿದ ಶಾಸಕರು, ಸಭೆಗೆ ಗೈರಾಗುವ ಅಧಿಕಾರಿಗಳ ವಿರುದ್ಧ ಶಿಸ್ತಿನ ಕ್ರಮ ಜರುಗಿಸಲಾಗುವುದು. ಸರ್ಕಾರ ವಹಿಸಿದ ಯೋಜನೆಗಳನ್ನು ಅನುಷ್ಠಾನಕ್ಕೆ ಹಿಂದೇಟಾದರೆ ಸಹಿಸುವುದಿಲ್ಲ ಎಂದು ಅವರು ಇದೇ ವೇಳೆ ಕೆಲ ಅಧಿಕಾರಿಗಳಿಗೆ ಎಚ್ಚರಿಸಿದರು.ಜಿಪಂ ಎಇಇ ಸಂಗಮೇಶ ಬಿರಾದಾರ ಅವರು, 24 ಗ್ರಾಮದ ರಸ್ತೆಗಳಲ್ಲಿ ಮಳೆ ನೀರಿನ ಪ್ರವಾಹಕ್ಕೆ ಸಂಪರ್ಕ ಕಡಿತೊಂಡಿದೆ. ರಸ್ತೆ ಸೇತುವೆ ಸೇರಿ ತುರ್ತು ಕಾಮಗಾರಿಗೆ ಕೈಗೊಳ್ಳಲು 1.15ಕೋಟಿ ಅಗತ್ಯವಾಗಿದೆ. ಶಾಶ್ವತ ಕಾಮಗಾರಿಯ ಕ್ರಿಯಾ ಯೋಜನೆ ರೂಪಿಸಬೇಕಿದದೆ. ಬೇಸಿಗೆಯಲ್ಲಿ ಖಾಸಗಿ ಕೊಳವೆ ಬಾವಿಗಳಿಂದ ಟ್ಯಾಂಕರಗಳ ಮೂಲಕ ಪೂರೈಸಿದ ನೀರಿನ ಅನುದಾನ ಬಂದಿರುವುದಿಲ್ಲ ಇದರಿಂದ ಸಮಸ್ಯೆಯಾಗಿದೆ, ಇನ್ನೂಳಿದ ಕಾಮಗಾರಿಗಳ ಪ್ರಗತಿಯಲ್ಲಿವೆ ಎಂದು ಸಭೆಯಲ್ಲಿ ಅವರು ಹೇಳಿದರು.
ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶರಣಗೌಡ ಪಾಟೀಲರು ವರದಿ ಮಂಡಿಸಿ, ರೈತರಿಗೆ ಸುಲಭವಾಗಿ ಬಿತ್ತನೆ ಬೀಜ ಪೂರೈಕೆ ಮತ್ತು ಮಣ್ಣು ಪರೀಕ್ಷೆಯ ಮೂಲಕ ಗೊಬ್ಬರ ಬಳಕೆಯ ರೈತರಿಗೆ ಮಾಹಿತಿ ನೀಡಬೇಕು. ಸುಧಾರಿತ ಕೃಷಿ ತಂತ್ರಜ್ಞಾನಗಳ ಮತ್ತು ತಂತ್ರಜ್ಞಾನದ ಬಳಕೆಯ ಕುರಿತು ರೈತರಲ್ಲಿ ಜಾಗೃತಿ ಮೂಡಿಸಲು ಅಧಿಕಾರಿಗಳಿಗೆ ಸೂಚಿಸಿದರು.ಪ್ರಾದೇಶಿಕ ಅರಣ್ಯ ಇಲಾಖೆ ಆರ್‌ಎಫ್‌ಒ ಜಗನಾಥ ಕೊರಳ್ಳಿ ಹೊಸ ಅರಣ್ಯಕರಣದ ಬಗ್ಗೆ ವಿವರಿಸಿದರು. ಅರಣ್ಯ ಸಂರಕ್ಷಣೆ ಮತ್ತು ಮರಗಳು ನೆಡುವ ಕಾರ್ಯಕ್ರಮಗಳನ್ನು ಮತ್ತಷ್ಟು ಬಲಪಡಿಸಲು ಶಾಸಕರು ಸಲಹೆ ನೀಡಿದರು. ಸ್ಥಳೀಯ ಸಮುದಾಯಗಳ ಭಾಗವಹಿಸುವಿಕೆ ಹೆಚ್ಚಿಸಲು ಮತ್ತು ಅರಣ್ಯ ಸಂಪತ್ತಿನ ಸಮರ್ಥ ನಿರ್ವಹಣೆಗೆ ಸೂಚನೆ ನೀಡಿದರು.
ತರಗತಿಯಲ್ಲಿ ಶಿಕ್ಷಕರ ಮೊಬೈಲ್ ಬಳಕೆಗೆ ಕಡಿವಾಣ ಹಾಕುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಜಿ. ಹಳ್ಳದ ಅವರಿಗೆ ಶಾಸಕರು ಶಾಲಾ ಕಟ್ಟಡಗಳ ಸ್ಥಿತಿಯನ್ನು ಸುಧಾರಿಸಲು ಮತ್ತು ವಿದ್ಯಾರ್ಥಿಗಳಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸಲು ಸೂಚಿಸಿದರು. ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಮತ್ತು ಶಿಕ್ಷಕರ ತರಬೇತಿ ಕಾರ್ಯಕ್ರಮಗಳಿಗೆ ಹೆಚ್ಚಿನ ಒತ್ತು ನೀಡಲು ಸಲಹೆ ನೀಡಿದರು.ತಹಸೀಲ್ದಾರ ಕಚೇರಿಯಲ್ಲಿ ಸಾರ್ವಜನಿಕ ಅರ್ಜಿಗಳ ವಿಲೆವಾರಿಗೆ ವಿಳಂಬದ ಕುರಿತು ದೂರುಗಳ ಬರುತ್ತಿವೆ, ಸಾರ್ವಜನಿಕ ಅರ್ಜಿಗಳ ತ್ವರಿತವಿಲೆವಾರಿ ಕೈಗೊಳ್ಳಬೇಕು ಎಂದು ಹಾಜರಿದ್ದ ತಹಸೀಲ್ದಾರ ಯಲ್ಲಪ್ಪ ಸುಬೇದಾರ ಅವರಿಗೆ ಶಾಸಕರು ಸೂಚಿಸಿದರು.
ತಾಪಂ ಇಒ ಮಾನಪ್ಪ ಕಟ್ಟಿಮನಿ ಅವರು ಸಭೆ ನಿರ್ವಹಿಸಿ ವರದಿ ಮಂಡಿಸುವಾಗ ಅಧಿಕಾರಿಗಳ ಲೋಪದೋಷ ಸರಿಪಡಿಸಿಕೊಳ್ಳಿ ಮುಂಚಿತವಾಗಿ ಅಧ್ಯಯನ ಮಾಡಿ ಸಭೆಗೆ ಹಾಜರಾಗಬೇಕು ಎಂದು ಹೇಳಿದರು.ಪಿಡಿಬ್ಲೂಡಿ ಎಇಇ ಆನಂದ, ಸಣ್ಣ ಕೆರೆಗಳ ಎಇಇ ಶಾಂತಪ್ಪ ಜಾಧವ, ಆರೋಗ್ಯಾಧಿಕಾರಿ, ಡಾ. ಸುಶೀಲಕುಮಾರ ಅಂಬರೆ, ವೈದ್ಯಾಧಿಕಾರಿ ಡಾ. ಮಹಾಂತಪ್ಪ ಹಳಮಳಿ, ತೋಟಗಾರಿಕೆ ಸುರೇಂದ್ರನಾಥ ಹೊನ್ನಪ್ಪಗೊಳ, ಮಿನುಗಾರಿಕ ಅಧಿಕಾರಿ ಶಂಕರಗೊಂದಳಿ, ಆರ್‍ಎಸ್‍ಕೆ ಅಧಿಕಾರಿ ವಿಲಾಸ ಹಸರಸೂರ, ಜೆಸ್ಕಾಂ ಎಇಇ ಮಾಣಿಕರಾವ್ ಕುಲಕರ್ಣಿ, ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ. ಯಲ್ಲಪ್ಪ ಇಂಗಳೆ, ಸಿಡಿಪಿ ಶ್ರೀಕಾಂತ ಮೇಂಗಜಿ ಇದ್ದರು.
ಕೆಡಿಪಿಸಭೆಯಲ್ಲಿ ಶಾಸಕರು, ಉದ್ಯೋಗ ಖಾತ್ರಿ ಕೆಲಸದಲ್ಲಿ ಮೃತ ಕಾರ್ಮಿಕ ಶರಣಪ್ಪ ದಣ್ಣೂರ ಕುಟುಂಬಕ್ಕೆ ಸರ್ಕಾರದ 2 ಲಕ್ಷ ರುಪಾಯಿ ಚೆಕ್ ಶಾಸಕರು ವಿತರಿಸಿದರು. ಕೃಷಿ ಇಲಾಖೆಯಿಂದ ಬೆಳೆ, ರಸಗೊಬ್ಬರ ಬಳಕೆಯ ಪ್ರತ್ಯೇಕ ವಾಲಪೋಸ್ಟ್‍ಗಳನ್ನು ಶಾಸಕರು ಬಿಡುಗಡೆಗೊಳಿಸಿದರು. ಜೆಸ್ಕಾಂ ಎಇಇ ಮಾಣಿಕರಾವ್ ಕುಲಕರ್ಣಿ ಅವರು ಪ್ರಗತಿ ವರದಿ ಮಂಡಿಸುವಾಗಲೇ ವಿದ್ಯುತ್ ಕೈಕೊಟ್ಟು ಸಭೆಯಲ್ಲಿದ್ದವರು ಬೇವರಿದ ಪ್ರಸಂಗ ನಡೆಯಿತು. ಕೋತನಹಿಪ್ಪರಗಾದಲ್ಲಿ ವಿದ್ಯುತ್ ಕಂಬ ಬಾಗಿದ ಬಗ್ಗೆ ಮೂರು ಬಾರಿ ಹೇಳಿದರು ಸರಿಪಡಿಸಿಲ್ಲ ಹೀಗಾದರೆ ಹೀಗೆ ಎಂದು ಶಾಸಕರು ಜೆಸ್ಕಾಂ ವಿರುದ್ಧ ಸಿಡಿಮಿಡಿಗೊಂಡ ಪ್ರಸಂಗ ನಡೆಯಿತು.