ಬುದ್ಧ ತಿಳಿಸಿದ ಪ್ರಜ್ಞೆ ಮತ್ತು ಮೈತ್ರಿಯು ಸಮಾಜವನ್ನು ಅರ್ಥೈಸಲು ಸಹಾಯಕ: ವಿಮರ್ಶಕ ಪ್ರೊ.ರಹಮತ್‌ ತರೀಕೆರೆ

| Published : Oct 15 2025, 02:06 AM IST

ಬುದ್ಧ ತಿಳಿಸಿದ ಪ್ರಜ್ಞೆ ಮತ್ತು ಮೈತ್ರಿಯು ಸಮಾಜವನ್ನು ಅರ್ಥೈಸಲು ಸಹಾಯಕ: ವಿಮರ್ಶಕ ಪ್ರೊ.ರಹಮತ್‌ ತರೀಕೆರೆ
Share this Article
  • FB
  • TW
  • Linkdin
  • Email

ಸಾರಾಂಶ

ದುರಾಸೆಯೇ ದುಃಖಕ್ಕೆ ಮೂಲ ಎಂಬ ಮಾತಿದೆ. ಆದರೆ, ಪ್ರಸ್ತುತ ರಾಜಕಾರಣಿಗಳು ಹಾಗೂ ಬಲಿಷ್ಠ ವರ್ಗದವರು ಸಾರ್ವಜನಿಕ ಲಜ್ಜೆಯೂ ಇಲ್ಲದೆ ಹಣ ಸಂಗ್ರಹಿಸುತ್ತಿದ್ದಾರೆ. ಇತರರಿಗೆ ಹಂಚುವ ಮನಸ್ಸು ಮಾಡದೆ, ತಾವು ಮಾತ್ರ ಬೆಳೆಯುತ್ತಿದ್ದಾರೆ. ಕುವೆಂಪು ಭಾಷಣ, ಅಂಬೇಡ್ಕರ್ ಚಿಂತನೆ, ಬಸವಣ್ಣನ ವಚನಗಳು ಈ ಕಾಯಿಲೆಗೆ ಮದ್ದು ಅರೆದಿವೆ.

ಕನ್ನಡಪ್ರಭ ವಾರ್ತೆ ಮೈಸೂರು

ಬುದ್ಧ ತಿಳಿಸಿದ ಪ್ರಜ್ಞೆ ಮತ್ತು ಮೈತ್ರಿಯು ಸಮಾಜವನ್ನು ಅರ್ಥೈಸಲು ಸಹಾಯಕ ಎಂದು ವಿಮರ್ಶಕ ಪ್ರೊ. ರಹಮತ್‌ ತರೀಕೆರೆ ತಿಳಿಸಿದರು.

ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಮಂಗಳವಾರ ನಡೆದ ಬೌದ್ಧ ಮಹಾ ಸಮ್ಮೇಳನದಲ್ಲಿ ಪರಂಪರೆಯ ಕೊಳಕು ಹಾಗೂ ಆಧುನಿಕ ವಿಕಾರಗಳೆರಡಕ್ಕೂ ಬುದ್ಧನೇ ದಿವ್ಯೌಷಧ ಕುರಿತು ಮಾತನಾಡಿದ ಅವರು, ವಿಷ ಹರಡುವವರನ್ನು ನಿರಾಕರಿಸಿ ಬುದ್ಧ ಚಿಂತನೆಯ ಕಡೆ ಮನಸ್ಸು ಮಾಡಬೇಕು. ಮೈತ್ರಿಯ ಮೂಲಕ ಒಂದಾಗಬೇಕಾದ ಕಾಲಘಟ್ಟದಲ್ಲಿ ವೇಷದ ಮೂಲಕ ಸಂಘಟಿತರಾಗುತ್ತಿದ್ದೇವೆ. ಮೈತ್ರಿ ಕಳೆದುಕೊಂಡ ಜನ ಇರುವ ದೇಶ ಮುಂದುವರಿಯುವುದು ಅಸಾಧ್ಯ ಎಂದು ಹೇಳಿದರು.

ಸಂಪ್ರದಾಯದೊಂದಿಗೆ ಎಲ್ಲಾ ಕಾಲದಲ್ಲೂ ಜಗಳಗಳು ನಡೆದಿವೆ. ಕೊಳಕಿನ ವಿರುದ್ಧ ಆಯಾಯ ದೇಶದ ಚಿಂತಕರು ಹೋರಾಡಿದ್ದಾರೆ. ಸಂಪ್ರದಾಯದ ಸ್ಥಗಿತ ಮೌಲ್ಯಗಳ ದಂಗೆ ಭಾರತದ ಚರಿತ್ರೆ ರೂಪಿಸಿದೆ. ಜಾತಿ ಬೇಧ, ವರ್ಗ ಬೇಧ, ಧರ್ಮದ್ವೇಷ, ಮಹಿಳೆಯರ ಶೋಷಣೆ ಹಾಗೂ ಬಲಿಷ್ಠರ ಸರ್ವಾಧಿಕಾರ ದೇಶದ ಕಸಗಳಾಗಿ ಗುರುತಿಸಿದ್ದು, ಬುದ್ಧ ಚಿಂತನೆಯಿಂದಷ್ಟೇ ಅದನ್ನು ನಾಶ ಮಾಡಲು ಸಾಧ್ಯ ಎಂದರು.

ದುರಾಸೆಯೇ ದುಃಖಕ್ಕೆ ಮೂಲ ಎಂಬ ಮಾತಿದೆ. ಆದರೆ, ಪ್ರಸ್ತುತ ರಾಜಕಾರಣಿಗಳು ಹಾಗೂ ಬಲಿಷ್ಠ ವರ್ಗದವರು ಸಾರ್ವಜನಿಕ ಲಜ್ಜೆಯೂ ಇಲ್ಲದೆ ಹಣ ಸಂಗ್ರಹಿಸುತ್ತಿದ್ದಾರೆ. ಇತರರಿಗೆ ಹಂಚುವ ಮನಸ್ಸು ಮಾಡದೆ, ತಾವು ಮಾತ್ರ ಬೆಳೆಯುತ್ತಿದ್ದಾರೆ. ಕುವೆಂಪು ಭಾಷಣ, ಅಂಬೇಡ್ಕರ್ ಚಿಂತನೆ, ಬಸವಣ್ಣನ ವಚನಗಳು ಈ ಕಾಯಿಲೆಗೆ ಮದ್ದು ಅರೆದಿವೆ ಎಂದು ಅವರು ತಿಳಿಸಿದರು.

ತಿ.ನರಸೀಪುರದ ನಳಂದ ಬುದ್ಧ ವಿಹಾರದ ಬಂತೆ ಬೋಧಿರತ್ನ, ಭಾಗ್ಯಲಕ್ಷ್ಮಿ ಶ್ರೀನಿವಾಸಪ್ರಸಾದ್, ಬಸವರಾಜ್ ದೇವನೂರು ಮೊದಲಾದವರು ಇದ್ದರು.