ನಮ್ಮ ಅಂಬಿಗ ಸಮುದಾಯದಲ್ಲಿ ಸಾಮಾಜಿಕ ಬಹಿಷ್ಕಾರದಂತಹ ಕ್ರಮಗಳಿಲ್ಲದಿದ್ದರೂ ಸಮಾಜ ಕಲ್ಯಾಣದ ಮುಖವಾಡ ತೊಟ್ಟ ಸಂಘಟನೆಯೊಂದು ಮತಾಂತರದ ಷಡ್ಯಂತ್ರ ನಡೆಸಿರುವಂತೆ ಕಾಣುತ್ತಿದೆ. ಮುಂದಿನ ದಿನದಲ್ಲಿ ಇಂಥ ಸಂಘಟನೆ ವಿರುದ್ಧ ಕಾನೂನು ಹೋರಾಟಕ್ಕೆ ಸಿದ್ಧರಾಗಿದ್ದೇವೆ ಎಂದು ಅಂಬಿಗ ಸಮುದಾಯದ ಪದಾಧಿಕಾರಿಗಳು ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕುಮಟಾ

ನಮ್ಮ ಅಂಬಿಗ ಸಮುದಾಯದಲ್ಲಿ ಸಾಮಾಜಿಕ ಬಹಿಷ್ಕಾರದಂತಹ ಕ್ರಮಗಳಿಲ್ಲದಿದ್ದರೂ ಸಮಾಜ ಕಲ್ಯಾಣದ ಮುಖವಾಡ ತೊಟ್ಟ ಸಂಘಟನೆಯೊಂದು ಮತಾಂತರದ ಷಡ್ಯಂತ್ರ ನಡೆಸಿರುವಂತೆ ಕಾಣುತ್ತಿದೆ. ಮುಂದಿನ ದಿನದಲ್ಲಿ ಇಂಥ ಸಂಘಟನೆ ವಿರುದ್ಧ ಕಾನೂನು ಹೋರಾಟಕ್ಕೆ ಸಿದ್ಧರಾಗಿದ್ದೇವೆ ಎಂದು ಅಂಬಿಗ ಸಮುದಾಯದ ಪದಾಧಿಕಾರಿಗಳು ತಿಳಿಸಿದ್ದಾರೆ.

ಪಟ್ಟಣದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಈ ಕುರಿತು ಮಾತನಾಡಿದ ಅಂಬಿಗ ಸಮುದಾಯದ ೧೮ ಹಳ್ಳಿ ಯಜಮಾನ ಗಂಗಾಧರ ಅಂಬಿಗ, ಉಪಾಧ್ಯಕ್ಷ ತಮ್ಮು ಅಂಬಿಗ, ಅನಂತ ಅಂಬಿಗ, ಗಂಗಾಮಾತಾ ಮಂದಿರ ಸಮಿತಿಯ ಅಧ್ಯಕ್ಷ ಮಹಾಬಲೇಶ್ವರ ಅಂಬಿಗ, ಗಣೇಶ ಅಂಬಿಗ ತಾರಿಬಾಗಿಲು ಇತರರು, ಮಾಸೂರಿನಲ್ಲಿ ನಮ್ಮ ಸಮುದಾಯದವರು ಸುಗ್ಗಿ ಕಟ್ಟಿ ಜಾನಪದ ಹಾಡಿಗೆ ಕುಣಿಯುವ ಸಂದರ್ಭದಲ್ಲಿ ನಮ್ಮದೇ ಸಮಾಜದ ಕೇಶವ ಗಣಪತಿ ಅಂಬಿಗ ಎಂಬವರು ಆಡಿದ ಆಕ್ಷೇಪಾರ್ಹ ಮಾತು ವಿವಾದಕ್ಕೆ ಕಾರಣವಾಗಿದೆ. ಸಮಾಜದ ಮುಖಂಡನಾಗಿ ಎಲ್ಲಿಯೂ ವಿವಾದವಾಗದಂತೆ ಶಾಂತತೆಯಿಂದ ಬಗೆಹರಿಸಬೇಕಾದ್ದರಿಂದ ಕೇಶವ ಗಣಪತಿ ಅಂಬಿಗ ತಾವು ಆಡಿದ ತಪ್ಪು ಮಾತಿಗೆ ಕ್ಷಮೆ ಕೋರಿ ನಮ್ಮ ಕುಲದೇವಿ ಗಂಗಾಮಾತೆಯ ಪ್ರಸಾದ ನೀಡಲು ಅವರಿಗೆ ಸಭೆಯಲ್ಲಿ ಸೂಚಿಸಿದ್ದೆ. ಪರಂಪರೆಯಿಂದ ಇರುವ ನಮ್ಮ ಸಮಾಜದ ಆಂತರಿಕ ನ್ಯಾಯ ವ್ಯವಸ್ಥೆಯನ್ನು ಧಿಕ್ಕರಿಸಿ ಊರಿನಲ್ಲಿ ತನಗೆ ಬಹಿಷ್ಕಾರ ಹಾಕಿದ್ದಾರೆಂದು ಸುಳ್ಳು ಆರೋಪ ಮಾಡಿ ಪೊಲೀಸ್ ಹಾಗೂ ಆಡಳಿತಕ್ಕೆ ಕೇಶವ ಅಂಬಿಗ ದೂರಿದ್ದರು. ಹಲವು ಸಭೆ, ಪಂಚಾಯಿತಿಗಳ ನಿರ್ಣಯವನ್ನೂ ತಿರಸ್ಕರಿಸಿ, ಪೊಲೀಸ್ ಹಾಗೂ ಇತರ ಅಧಿಕಾರಿಗಳ ಬುದ್ಧಿ ಮಾತನ್ನೂ ಕಡೆಗಣಿಸಿ, ಪದೇಪದೇ ಸಾಮಾಜಿಕ ಬಹಿಷ್ಕಾರವೆಂಬ ಪದ ಬಳಸಿ ಇಡೀ ಅಂಬಿಗ ಸಮಾಜವನ್ನು ಅಪಮಾನ ಮಾಡಿದ್ದಾರೆ. ಇದೆಲ್ಲದರ ಹಿಂದೆ ಸಮಾಜ ಕಲ್ಯಾಣದ ಹೆಸರಿನಲ್ಲಿ ಸಂಸ್ಥೆ ನಡೆಸುವ ಆಗ್ನೇಲ್ ಎಂಬವರ ಮತಾಂತರ ಕುತಂತ್ರದ ಅನುಮಾನವಿದೆ. ಹೀಗಾಗಿ ಮುಂದಿನ ದಿನದಲ್ಲಿ ಈ ಬಗ್ಗೆ ಕಾನೂನು ರೀತಿಯಲ್ಲಿ ಹೋರಾಟಕ್ಕೂ ಸಿದ್ಧರಿದ್ದೇವೆ ಎಂದರು.

ಅಂಬಿಗ ಸಮಾಜದಲ್ಲಿ ಸಾಮಾಜಿಕ ಬಹಿಷ್ಕಾರ ಇಲ್ಲವೇ ಇಲ್ಲ. ನಮ್ಮ ಕುಲದೇವಿ ಗಂಗಾಮಾತಾ ದೇವಾಲಯದಲ್ಲೂ ಎಲ್ಲ ಸಮಾಜದವರಿಗೂ ಮುಕ್ತವಿದ್ದು ಯಾರಿಗೂ ನಿರ್ಬಂಧವಿಲ್ಲ. ಕೇಶವ ಗಣಪತಿ ಅಂಬಿಗ ಹಾಗೂ ಅವರ ಕುಟುಂಬ ಸ್ವತಂತ್ರವಾಗಿ ಯಾವ ನಿರ್ಬಂಧವೂ ಇಲ್ಲದೇ ನಮ್ಮದೇ ಊರಿನಲ್ಲಿ ಆರಾಮವಾಗಿ ಓಡಾಡಿಕೊಂಡಿದ್ದು ಜೀವನ ನಡೆಸುತ್ತಿದ್ದಾರೆ. ಆದರೂ ಕ್ಷುಲ್ಲಕ ಕಾರಣವಿಟ್ಟುಕೊಂಡು ವಿವಿಧ ರೀತಿಯಲ್ಲಿ ಇಡೀ ಸಮಾಜದ ಮೇಲೆ ಸುಳ್ಳು ಆರೋಪ ಮಾಡಿರುವ ಕೇಶವ ಗಣಪತಿ ಅಂಬಿಗ ತಪ್ಪು ತಿದ್ದಿಕೊಳ್ಳಲಿ, ಅವರು ಯಾವತ್ತಿದ್ದರೂ ನಮ್ಮವರೇ ಆಗಿದ್ದಾರೆ. ಅವರು ಇನ್ನು ಮುಂದಾದರೂ ಸಮಾಜದ ಸಭೆಗೆ ಬಂದು ನೀತಿಯುಕ್ತ ವರ್ತನೆ ಮಾಡುತ್ತಾರೆ ಹಾಗೂ ಅಂಬಿಗ ಸಮಾಜಕ್ಕೆ ಅಂಟಿಸಿದ ಬಹಿಷ್ಕಾರವೆಂಬ ಆರೋಪದ ಕೊಳೆಯನ್ನು ತೊಳೆಯುತ್ತಾರೆಂಬ ವಿಶ್ವಾಸವಿದೆ ಎಂದು ವಿವರಿಸಿದರು. ಸುದ್ದಿಗೋಷ್ಠಿಯಲ್ಲಿನ ಸಮಾಜದ ಪ್ರಮುಖರಾದ ಎಲ್.ಎಸ್. ಅಂಬಿಗ, ಗೋವಿಂದ ಅಂಬಿಗ, ಪಾಂಡು ಅಂಬಿಗ, ರಾಜು ಅಂಬಿಗ, ಸತೀಶ ಅಂಬಿಗ, ಮಂಜುನಾಥ ಅಂಬಿಗ ಹಾಗೂ ಲುಕ್ಕೇರಿ ಗ್ರಾಮಸ್ಥರು ಇದ್ದರು.