ಜಿಲ್ಲಾಧಿಕಾರಿಗಳ ಕಚೇರಿಯಿಂದ ಜಿಪಂ ಕಚೇರಿಯವರೆಗೆ ನಡೆದ ಸಂವಿಧಾನ ಜಾಗೃತಿ ಜಾಥಾದಲ್ಲಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿ, ಸಂವಿಧಾನ ಹಾಗೂ ಡಾ. ಬಿ.ಆರ್ ಅಂಬೇಡ್ಕರ್ ಅವರ ಘೋಷಣೆಯೊಂದಿಗೆ ಸಾಗಿದರು.

ಕನ್ನಡಪ್ರಭ ವಾರ್ತೆ ರಾಮನಗರ

ನಾವು ಜವಾಬ್ದಾರಿಯುತ ಪ್ರಜೆಯಾಗಿ ನಮ್ಮ ಕರ್ತವ್ಯವನ್ನು ಸೂಕ್ತವಾಗಿ ನಿಭಾಯಿಸಬೇಕು. ಇಲ್ಲದಿದ್ದರೆ ದೇಶ ಅಧಃಪತನವಾಗುತ್ತದೆ. ಸಂವಿಧಾನವನ್ನು ಉತ್ಕೃಷ್ಟವಾಗಿಸುವಲ್ಲಿ ಭಾರತೀಯರೆಲ್ಲರ ಜವಾಬ್ದಾರಿ ಅತ್ಯಂತ ಮುಖ್ಯ ಎಂದು ರಾಜ್ಯ ಮುಕ್ತ ವಿವಿ ಸಹಾಯಕ ಪ್ರಾದ್ಯಾಪಕ ಡಾ.ಕೃಷ್ಣಮೂರ್ತಿ ಚಮರಂ ಹೇಳಿದರು.

ಜಿಪಂ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಸಂವಿಧಾನ ದಿನಾಚರಣೆ-2025ರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶವನ್ನು ಅರ್ಥ ಮಾಡಿಕೊಳ್ಳದ ಹೊರತು ನಮ್ಮ ಸಂವಿಧಾನ ಅರ್ಥವಾಗುವುದಿಲ್ಲ, ಸಂವಿಧಾನ ಎಂಬುದು ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಕಾರ್ಯಕ್ರಮ, ಅದು ಅರ್ಥವಾಗಲು ಅದರ ಹಿನ್ನಲೆ, ಪ್ರಸ್ತುತತೆ ತಿಳಿದಿರಬೇಕು, ಸಂವಿಧಾನದ ಮೂಲಕ ತತ್ವಗಳೇ ನಮ್ಮ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗದ ದಿನನಿತ್ಯದ ಕೆಲಸಗಳನ್ನು ಮುನ್ನಡೆಸುವುದಾಗಿದೆ ಎಂದರು.

ಅಸಮಾನತೆ, ತಾರತಮ್ಯ, ಜಾತಿ ಇವುಗಳಿಂದ ತುಂಬಿದ್ದ ಅಂದಿನ ಭಾರತದ ವ್ಯವಸ್ಥೆಯಲ್ಲಿ ವರ್ಣ ಪದ್ಧತಿಗೆ ಹೆಚ್ಚಿನ ಮಹತ್ವವಿತ್ತು. ಈ ಅಸಮಾನತೆಗಳನ್ನು ಬಳಸಿಕೊಂಡು ಪರಕೀಯರು ಆಳ್ವಿಕೆ ನಡೆಸಿದರು. ನಂತರ ದೇಶದ ಸ್ವಾತಂತ್ರ್ಯಕ್ಕಾಗಿ ಮಾನ-ಪ್ರಾಣವನ್ನು ಒತ್ತೆಯಿಟ್ಟು ಲಕ್ಷಾಂತರ ಜನ ಹೋರಾಡಿದರು. ಇವೆಲ್ಲವೂ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ತಿಳಿದಿತ್ತು. ಸ್ವಾತಂತ್ರ ದೊರೆಯುವ ಸಂದರ್ಭದಲ್ಲಿ ರಚಿಸಲಾದ ಸಂವಿಧಾನ ರಚನಾ ಸಮಿತಿಗೆ ಚುನಾವಣೆಯೂ ನಡೆಸಲಾಗಿತ್ತು. ಆ ಚುನಾವಣೆಯಲ್ಲಿ ಗೆದ್ದವರಷ್ಟೇ ಸದಸ್ಯರಾಗಲು ಸಾಧ್ಯವಿತ್ತು. ಸಂವಿಧಾನ ರಚನೆಗಾಗಿ ಹಲವು ಉಪ ಸಮಿತಿಗಳು, ಕರಡು ರಚನಾ ಸಮಿತಿಗಳನ್ನು ರಚಿಸಲಾಗಿತ್ತು ಎಂದರು.

1935ರ ಭಾರತ ಸರ್ಕಾರದ ಕಾಯ್ದೆ ಬ್ರಿಟಿಷ್ ಭಾರತಕ್ಕೆ ಸಂವಿಧಾನ ಚೌಕಟ್ಟನ್ನು ಸ್ಥಾಪಿಸಿದ ಮಹತ್ವದ ಕಾನೂನಾಗಿತ್ತು. ಅದರಲ್ಲಿನ ಬಹುತೇಕ ಅಂಶಗಳ ಆಧಾರದಲ್ಲಿಯೇ ಸಂವಿಧಾನ ರಚಿಸಲಾಯಿತು. ಹಗಲು ರಾತ್ರಿ ನಿದ್ರೆಗೆಟ್ಟು, ಆರೋಗ್ಯ ಸಮಸ್ಯೆ ಲೆಕ್ಕಿಸದೆ ಡಾ. ಬಿ.ಆರ್.ಅಂಬೇಡ್ಕರ್ ಸಂವಿಧಾನ ರಚಿಸಿದರು ಎಂದು ಡಾ. ಕೃಷ್ಣಮೂರ್ತಿ ಚಮರಂ ಹೇಳಿದರು.

ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನ ನಿರ್ದೇಶಕ ಶೇಖರ್ ಮಾತನಾಡಿ, ವೈವಿಧ್ಯತೆಯಲ್ಲಿ ಏಕತೆ ಇರುವ ದೇಶ ನಮ್ಮದು. ಭಾರತೀಯರ ಮನೋಭಾವ ಒಂದಾಗಿರಬೇಕು ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ, ಆಡಳಿತ ನೇಮಕಾತಿಗಳು ಹೇಗಿರಬೇಕೆಂಬುದನ್ನು ಸಂವಿಧಾನದಲ್ಲಿ ಈಗಾಗಲೇ ನಮೂದಿಸಲಾಗಿದೆ. ಸಂವಿಧಾನದ ಆಶಯಗಳನ್ನು ನಾವೆಲ್ಲರೂ ಪಾಲಿಸಬೇಕು ಎಂದರು.

ಸಂವಿಧಾನ ಜಾಗೃತಿ ಜಾಥಾ:

ಸಂವಿಧಾನ ದಿನಾಚರಣೆ ಅಂಗವಾಗಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಸಂವಿಧಾನ ಜಾಗೃತಿ ಜಾಥಾಗೆ ಬೆಂಗಳೂರು ದಕ್ಷಿಣ ಜಿಪಂ ಸಿಇಒ ಅನ್ಮೋಲ್ ಜೈನ್ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಚಾಲನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿಯಿಂದ ಜಿಪಂ ಕಚೇರಿಯವರೆಗೆ ನಡೆದ ಸಂವಿಧಾನ ಜಾಗೃತಿ ಜಾಥಾದಲ್ಲಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿ, ಸಂವಿಧಾನ ಹಾಗೂ ಡಾ. ಬಿ.ಆರ್ ಅಂಬೇಡ್ಕರ್ ಅವರ ಘೋಷಣೆಯೊಂದಿಗೆ ಸಾಗಿದರು.

ಅಪರ ಜಿಲ್ಲಾಧಿಕಾರಿ ಆರ್. ಚಂದ್ರಯ್ಯ ಗಿಡಕ್ಕೆ ನೀರೆರೆದು ಕಾರ್ಯಕ್ರಮ ಉದ್ಘಾಟಿಸಿ, ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಸಂವಿಧಾನ ವಿಷಯದ ಕುರಿತು ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಭಾಷಣ ಹಾಗೂ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ಸನ್ಮಾನಿಸಿ, ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಕೆಡಿಪಿ ಸದಸ್ಯ ಗುರುಮೂರ್ತಿ, ಎಎಸ್ಪಿ ರಾಜೇಂದ್ರ, ಉಪವಿಭಾಗಾಧಿಕಾರಿ ಬಿನೋಯ್, ಜಿಪಂ ಉಪ ಕಾರ್ಯದರ್ಶಿ ಧನರಾಜ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಶಿವಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೆ.ಸತೀಶ್, ಮುಖಂಡರಾದ ಚಲುವರಾಜು, ಕುಂಭಾಪುರ ಬಾಬು, ಮರಿಸ್ವಾಮಿ, ಶೇಖರ್, ಅಶೋಕ್, ಸಿದ್ದರಾಜು ಹಾಜರಿದ್ದರು.