ಸಂವಿಧಾನವು ದೇಶದ ಜನರ ಬದುಕನ್ನು ಹಸನಾಗಿಸಿದೆ; ತಹಸೀಲ್ದಾರ್ ರಮೇಶ್

| Published : Feb 28 2024, 02:31 AM IST

ಸಂವಿಧಾನವು ದೇಶದ ಜನರ ಬದುಕನ್ನು ಹಸನಾಗಿಸಿದೆ; ತಹಸೀಲ್ದಾರ್ ರಮೇಶ್
Share this Article
  • FB
  • TW
  • Linkdin
  • Email

ಸಾರಾಂಶ

ಭಾರತದ ಸಂವಿಧಾನ ರಚಿಸುವಲ್ಲಿ ಅಂಬೇಡ್ಕರ್ ರ ಪಾತ್ರ ಮುಖ್ಯವಾಗಿದ್ದು, ದೇಶದ ಸಲುವಾಗಿ ದುಡಿದವರಲ್ಲಿ ಪ್ರಮುಖರು. ಅವರು ಶತಮಾನಗಳಿಂದ ತುಳಿತಕ್ಕೊಳಗಾದವರಿಗೆ ಸಂವಿಧಾನದ ಮೂಲಕ ಸಾಮಾಜಿಕ ನ್ಯಾಯ ಒದಗಿಸಿದರು.

ಕನ್ನಡಪ್ರಭ ವಾರ್ತೆ ಮಾಲೂರು

ನಮ್ಮ ದೇಶದ ಸಂವಿಧಾನದಲ್ಲಿ ಸರ್ವರಿಗೂ ಸಮಾನತೆ, ಸಮಪಾಲು, ಸಮಬಾಳು ನೀಡುವ ಮೂಲಕ ಎಲ್ಲರ ಬದುಕನ್ನು ಹಸನಾಗಿಸಿದೆ. ದೇಶಕ್ಕೆ ಸಂವಿಧಾನ ರಚಿಸಿಕೊಟ್ಟ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರನ್ನು ಪ್ರತಿಯೊಬ್ಬ ಭಾರತೀಯರೂ ಸ್ಮರಿಸುವ ಜತೆ ಸಂವಿಧಾನದ ಮಹತ್ವವನ್ನು ಅರಿತು ನೆಮ್ಮದಿಯ ಜೀವನ ನಡೆಸಬೇಕು ಎಂದು ತಹಸೀಲ್ದಾರ್ ಕೆ.ರಮೇಶ್ ಹೇಳಿದರು.

ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಪುರಸಭೆ, ಸಮಾಜ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ೭೫ನೇ ಗಣರಾಜ್ಯೋತ್ಸವದ ಹಿನ್ನೆಲೆ ಪಟ್ಟಣದ ಮುಖ್ಯರಸ್ತೆಯ ಪುರಸಭಾ ಉದ್ಯಾನವನದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್‌ರವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಸಂವಿಧಾನ ಜಾಗೃತಿ ಜಾಥಾ ರಥಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಭಾರತದ ಸಂವಿಧಾನ ರಚಿಸುವಲ್ಲಿ ಅಂಬೇಡ್ಕರ್ ರ ಪಾತ್ರ ಮುಖ್ಯವಾಗಿದ್ದು, ದೇಶದ ಸಲುವಾಗಿ ದುಡಿದವರಲ್ಲಿ ಪ್ರಮುಖರು. ಅವರು ಶತಮಾನಗಳಿಂದ ತುಳಿತಕ್ಕೊಳಗಾದವರಿಗೆ ಸಂವಿಧಾನದ ಮೂಲಕ ಸಾಮಾಜಿಕ ನ್ಯಾಯ ಒದಗಿಸಿದರು. ಅಂಬೇಡ್ಕರ್ ಸಮಾಜದಲ್ಲಿ ಎಷ್ಟೇ ಕಷ್ಟ ಅನುಭವಿಸಿದರೂ ಎಂದಿಗೂ, ಯಾರನ್ನೂ ದೂಷಿಸದೇ ಧೈರ್ಯದೊಂದಿಗೆ ಮುನ್ನಡೆದು ಮಹಾನ್ ಮಾನವತಾವಾದಿಯಾಗಿ ಸಮಾಜ ಸುಧಾರಣೆಗೆ ಮುಂದಾಗಿದ್ದರು ಎಂದರು.

ಸಂವಿಧಾನ ಉಳಿಸಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ, ಸಮಾಜ ಕಲ್ಯಾಣ ಇಲಾಖೆ ಸಚಿವರು ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮ ರೂಪಿಸಿದ್ದಾರೆ. ಈ ರಥಯಾತ್ರೆಯು ರಾಜ್ಯದ ಮೂಲೆ ಮೂಲೆಗಳಲ್ಲಿ ಸಂಚರಿಸಿದೆ. ಸಂವಿಧಾನ ಜಾಥಾ ರಥವು ತಾಲೂಕಿನ ೨೮ ಗ್ರಾಮ ಪಂಚಾಯಿತಿಗಳಲ್ಲಿ ಸಂಚರಿಸಿ ಸಂವಿಧಾನದ ಬಗ್ಗೆ ಜಾಗೃತಿ ಮೂಡಿಸಿದೆ. ಗ್ರಾಮ ಪಂಚಾಯಿತಿಗಳಲ್ಲಿ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ, ಪಟ್ಟಣದಲ್ಲಿಯೂ ಸಹ ಸಂವಿಧಾನ ರಥಯಾತ್ರೆ ಮಂಗಳವಾರ ಸಂಚರಿಸಿ ಸಂವಿಧಾನದ ಬಗ್ಗೆ ಜಾಗೃತಿ ಮೂಡಿಸಲಿದೆ ಎಂದರು.

ಪುರಸಭಾ ಮುಖ್ಯಾಧಿಕಾರಿ ಎಂ.ಬಿ.ಪ್ರದೀಪ್ ಮಾತನಾಡಿ, ದೇಶಕ್ಕೆ ಅತ್ಯುತ್ತಮ ಲಿಖಿತ ಸಂವಿಧಾನ ರಚಿಸಿಕೊಟ್ಟ ಡಾ.ಬಿ.ಆರ್.ಅಂಬೇಡ್ಕರ್ ರನ್ನು ಸಂವಿಧಾನ ಶಿಲ್ಪಿ ಎಂದು ಕರೆಯುತ್ತೇವೆ. ಸಂವಿಧಾನವು ಎಲ್ಲಾ ವರ್ಗದ ಜನರ ಹಿತಾಸಕ್ತಿ ಕಾಪಾಡಿಕೊಂಡು ಬಂದಿದೆ. ನಾವು ಒಪ್ಪಿಕೊಂಡು ಸ್ವಾಗತಿಸಿದ್ದೇವೆ. ಜನರು ಸಂವಿಧಾನದ ಜಾಗೃತಿ ಪಡೆಯಲು ರಾಜ್ಯ ಸರ್ಕಾರ ೭೫ ವರ್ಷಗಳ ನಂತರ ಜನರ ಬಳಿ ರಥಯಾತ್ರೆ ಕೈಗೊಂಡಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ದೊಡ್ಡಮಲ್ಲೆ ರವಿ ತಂಡದವರು ಅಂಬೇಡ್ಕರ್ ಗೀತ ಗಾಯನ ನಡೆಸಿಕೊಟ್ಟರು.

ಪುರಸಭೆ ಸದಸ್ಯರಾದ ಎಂ.ವಿ.ವೇಮನ, ಭಾರತಿ ಶಂಕರಪ್ಪ, ಮುರಳೀಧರ್, ಮಾಜಿ ಸದಸ್ಯ ಅಶ್ವತ್ಥರೆಡ್ಡಿ, ಮುಖ್ಯಾಧಿಕಾರಿ ಪ್ರದೀಪ್, ಪೋಲಿಸ್ ಇನ್ಸ್ಪೆಕ್ಟರ್ ವಸಂತ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಶಿವಕುಮಾರ್, ಮುಖಂಡರಾದ ಎಸ್.ಎಂ.ವೆಂಕಟೇಶ್, ನಾರಾಯಣಸ್ವಾಮಿ, ಶ್ರೀನಿವಾಸ್, ಪುರಸಭೆಯ ಆರೋಗ್ಯ ನಿರೀಕ್ಷಕ ಶ್ರೀನಿವಾಸ್, ರಾಜಣ್ಣ ಹಾಗೂ ಪಟ್ಟಣದ ಶಾಲಾ ವಿದ್ಯಾರ್ಥಿಗಳು,ಹಾಜರಿದ್ದರು.