ಭಾರತದ ಸಂವಿಧಾನವು ಪ್ರತಿಯೊಬ್ಬ ಪ್ರಜೆಗೂ ಸಮಾನ ಹಕ್ಕು, ಗೌರವ ಮತ್ತು ಅವಕಾಶಗಳನ್ನು ಕಲ್ಪಿಸಿರುವ ಮಹಾನ್ ಶಕ್ತಿಯಾಗಿದೆ.
ಕನ್ನಡಪ್ರಭ ವಾರ್ತೆ ಶಿರಹಟ್ಟಿ
ಭಾರತದ ಸಂವಿಧಾನವು ಪ್ರತಿಯೊಬ್ಬ ಪ್ರಜೆಗೂ ಸಮಾನ ಹಕ್ಕು, ಗೌರವ ಮತ್ತು ಅವಕಾಶಗಳನ್ನು ಕಲ್ಪಿಸಿರುವ ಮಹಾನ್ ಶಕ್ತಿಯಾಗಿದೆ. ಜಾತಿ, ಧರ್ಮ, ಭಾಷೆ, ಬಡವ-ಶ್ರೀಮಂತ ಎಂಬ ಯಾವುದೇ ಭೇದಭಾವವಿಲ್ಲದೆ ಎಲ್ಲರೂ ಸಮಾನವಾಗಿ ಬದುಕಬೇಕು ಎಂಬ ಉದಾತ್ತ ಆಶಯವನ್ನು ಸಂವಿಧಾನ ಹೊಂದಿದೆ ಎಂದು ತಾಲೂಕು ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ ಹಾಗೂ ಲಕ್ಷ್ಮೇಶ್ವರ ದಿವಾಣಿ ನ್ಯಾಯಾಧೀಶ ಮಹದೇವ ಕೆ. ಗೌಡ ಹೇಳಿದರು.ಗುರುವಾರ ತಾಲೂಕು ಕಾನೂನು ಸೇವೆಗಳ ಸಮಿತಿ ಲಕ್ಷ್ಮೇಶ್ವರ, ವಕೀಲರ ಸಂಘ ಲಕ್ಷ್ಮೇಶ್ವರ ಮತ್ತು ಶಿರಹಟ್ಟಿ, ತಾಲೂಕು ಆಡಳಿತ, ತಾಪಂ, ಆರೋಗ್ಯ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ಪಪೂ ಶಿಕ್ಷಣ ಇಲಾಖೆ, ಕಾರ್ಮಿಕ ಇಲಾಖೆ, ಪೊಲೀಸ್ ಇಲಾಖೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಶಿರಹಟ್ಟಿಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಜರುಗಿದ ಸಂವಿಧಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಂವಿಧಾನದ ಮೂಲಕ ಪ್ರತಿಯೊಬ್ಬರಿಗೂ ಶಿಕ್ಷಣ, ಉದ್ಯೋಗ, ಸ್ವಾತಂತ್ರ‍್ಯ, ಸಮಾನತೆ ಹಾಗೂ ಸಾಮಾಜಿಕ ನ್ಯಾಯದ ಹಕ್ಕುಗಳನ್ನು ಒದಗಿಸಲಾಗಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಬೇಕು, ಪ್ರತಿಯೊಬ್ಬರಿಗೂ ತಮ್ಮ ಪ್ರತಿಭೆ ಮತ್ತು ಸಾಮರ್ಥ್ಯವನ್ನು ಪ್ರದರ್ಶಿಸಲು ಸಮಾನ ಅವಕಾಶ ದೊರೆಯಬೇಕು ಎಂಬುದು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಆಶಯವಾಗಿತ್ತು. ಸಂವಿಧಾನದ ೧೪ನೇ ವಿಧಿಯು ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬುದನ್ನು ಸಾರಿದರೆ, ೧೫ನೇ ವಿಧಿಯು ಧರ್ಮ, ಜಾತಿ, ಲಿಂಗ, ಜನ್ಮಸ್ಥಳದ ಆಧಾರದ ಮೇಲೆ ತಾರತಮ್ಯ ಮಾಡುವುದನ್ನು ನಿಷೇಧಿಸುತ್ತದೆ. ೧೬ನೇ ವಿಧಿಯು ಸರ್ಕಾರಿ ಉದ್ಯೋಗಗಳಲ್ಲಿ ಸಮಾನ ಅವಕಾಶ ಕಲ್ಪಿಸುತ್ತದೆ. ಜಗತ್ತಿನಲ್ಲೇ ಅತೀ ದೊಡ್ಡ ಲಿಖಿತ ಸಂವಿಧಾನ ಹೊಂದಿದ ದೇಶದಲ್ಲಿ ಸರ್ವರೂ ಸಮಬಾಳ್ವೆ ನಡೆಸುವಲ್ಲಿ, ನಮ್ಮ ಸಂವಿಧಾನದ ಪಾತ್ರ ಬಹು ಮುಖ್ಯವಾಗಿದೆ. ಹೀಗಾಗಿ ಸರ್ವರಿಗೂ ಸಮಾನ ಅವಕಾಶ ಕಲ್ಪಿಸಿದ್ದು ನಮ್ಮ ಸಂವಿಧಾನ ಎಂದು ಹೇಳಿದರು.ಎಂ.ಕೆ. ಚೌಡಿ ಉಪನ್ಯಾಸ ನೀಡಿದರು. ಕಾಲೇಜಿನ ಪ್ರಾಚಾರ್ಯ ಬಿ.ಜಿ. ಗಿರಿತಿಮ್ಮಣ್ಣವರ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಸರ್ಕಾರಿ ಅಭಿಯೋಜಕಿ ಹೀನಾಕೌಸರ್ ಗಂಜಿಹಾಳ, ಪಿಎಸ್‌ಐ ಈರಪ್ಪ ರಿತ್ತಿ, ಸಮಾಜ ಕಲ್ಯಾಣಾಧಿಕಾರಿ ಗೋಪಾಲ ಲಮಾಣಿ, ಬಿಇಓ ಶಿವರಾಜ ಶಿಮಿಕೇರಿ, ಬಿ.ವಿ. ನೇಕಾರ, ಎಸ್.ವೈ. ಗೊಬ್ಬರಗುಂಪಿ, ಎಸ್.ಎಂ. ನಾವಿ, ಅನಿಲ ಮಾನೆ, ವಿ.ಎಸ್. ಪಶುಪತಿಹಾಳ, ಎ.ಎ. ಬೇವಿನಗಿಡದ ಉಪಸ್ಥಿತರಿದ್ದರು.
ಗಿರೀಶ ರಡ್ಡೇರ ನಿರೂಪಿಸಿದರು. ಲಕ್ಷ್ಮೀ ತಳವಾರ ಹಾಗೂ ಸಂಗಡಿಗರು ಪ್ರಾರ್ಥನೆಗೈದರು. ಲಿಂಗರಾಜ ಯತ್ನಳ್ಳಿ ವಂದಿಸಿದರು.