ಸಂವಿಧಾನ ಆಶಯ ಶರಣರ ವಚನಗಳಲ್ಲಿ ಅಡಕ: ಅವರಗೆರೆ ರುದ್ರಮುನಿ

| Published : Sep 08 2025, 01:00 AM IST

ಸಾರಾಂಶ

ಡಾ.ಆಂಬೇಡ್ಕರ್ ಅವರ ಅಧ್ಯಕ್ಷತೆಯಲ್ಲಿ ರಚಿತವಾದ ಭಾರತದ ಸಂವಿಧಾನ ಪ್ರತಿಪಾದಿಸುವ ಆಶಯಗಳೆಲ್ಲವೂ ಬಸವಾದಿ ಶರಣರ ವಚನ ಸಂವಿಧಾನದಲ್ಲಿ ಅಡಕವಾಗಿದ್ದು, ಬಸವ ಸಂಸ್ಕೃತಿ ಅಭಿಯಾನ ಬಸವಾದಿ ಶಿವಶರಣರ ತತ್ವಾದರ್ಶಗಳನ್ನು ಜನಮನದಲ್ಲಿ ಬಿತ್ತುವ ಸದಾಶಯದೊಂದಿಗೆ ಸೆ.1ರಿಂದ ಅ.5ರವರೆಗೆ ರಾಜ್ಯದ ಎಲ್ಲಾ ಜಿಲ್ಲೆಗಳು, ತಾಲೂಕುಗಳಲ್ಲಿ ಬಸವ ಸಂಸ್ಕೃತಿ ಅಭಿಯಾನ ರಥಯಾತ್ರೆ ಹಮ್ಮಿಕೊಂಡಿದೆ ಎಂದು ಪ್ರಚಾರ ಸಮಿತಿಯ ಸಂಚಾಲಕ ಅವರಗೆರೆ ರುದ್ರಮುನಿ ಹೇಳಿದರು.

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಡಾ.ಆಂಬೇಡ್ಕರ್ ಅವರ ಅಧ್ಯಕ್ಷತೆಯಲ್ಲಿ ರಚಿತವಾದ ಭಾರತದ ಸಂವಿಧಾನ ಪ್ರತಿಪಾದಿಸುವ ಆಶಯಗಳೆಲ್ಲವೂ ಬಸವಾದಿ ಶರಣರ ವಚನ ಸಂವಿಧಾನದಲ್ಲಿ ಅಡಕವಾಗಿದ್ದು, ಬಸವ ಸಂಸ್ಕೃತಿ ಅಭಿಯಾನ ಬಸವಾದಿ ಶಿವಶರಣರ ತತ್ವಾದರ್ಶಗಳನ್ನು ಜನಮನದಲ್ಲಿ ಬಿತ್ತುವ ಸದಾಶಯದೊಂದಿಗೆ ಸೆ.1ರಿಂದ ಅ.5ರವರೆಗೆ ರಾಜ್ಯದ ಎಲ್ಲಾ ಜಿಲ್ಲೆಗಳು, ತಾಲೂಕುಗಳಲ್ಲಿ ಬಸವ ಸಂಸ್ಕೃತಿ ಅಭಿಯಾನ ರಥಯಾತ್ರೆ ಹಮ್ಮಿಕೊಂಡಿದೆ ಎಂದು ಪ್ರಚಾರ ಸಮಿತಿಯ ಸಂಚಾಲಕ ಅವರಗೆರೆ ರುದ್ರಮುನಿ ಹೇಳಿದರು.

ಲಿಂಗಾಯತ ಮಠಾಧೀಪತಿಗಳ ಒಕ್ಕೂಟ, ಕದಳಿ ಮಹಿಳಾ ವೇದಿಕೆ. ಕನ್ನಡ ಸಾಹಿತ್ಯ ಪರಿಷತ್, ಶರಣ ಸಾಹಿತ್ಯ ಪರಿಷತ್,ಅಖಿಲ ಭಾರತ ಜಾಗತಿಕ ಲಿಂಗಾಯತ ಮಹಾಸಭಾ ಸೇರಿದಂತೆ ಅನೇಕ ಲಿಂಗಾಯತ ಸಮಾಜಗಳ ಸಂಘ, ಸಂಸ್ಥೆ,ಹಾಗೂ ವೇದಿಕೆಗಳ ಜಂಟಿಯಾಗಿ ವಿಶ್ವ ಸಾಂಸ್ಕೃತಿಕ ನಾಯಕ ಎಂದೇ ಗುರುತಿಸಿರುವ ಬಸವಣ್ಣನವರ ಸಂಸ್ಕೃತಿ ಅಭಿಯಾನ ಭಾನುವಾರ ಬಸವ ಸಂಸ್ಕೃತಿ ಅಭಿಯಾನದ ರಥದೊಂದಿಗೆ ಹೊನ್ನಾಳಿ ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತಕ್ಕೆ ಅಗಮಿಸಿದ ಸಂದರ್ಭದಲ್ಲಿ ಮಾತನಾಡಿದರು.

ಕರ್ನಾಟಕ ರಾಜ್ಯ ಸರ್ಕಾರ ಸಾಂಸ್ಕೃತಿಕ ನಾಯಕ ಬಸವಣ್ಣ ಎಂದು ಘೋಷಣೆ ಮಾಡಿ ಒಂದು ವರ್ಷವಾಗಿದೆ ಇದೊಂದು ಐತಿಹಾಸಿಕ ಘಟನೆ. ಬಸವಣ್ಣನವರು ಕರ್ನಾಟಕ ಮಾತ್ರವಲ್ಲ ವಿಶ್ವದ ಸಾಂಸ್ಕೃತಿಕ ನಾಯಕರಾಗಿ ಬೆಳಗಿದ್ದಾರೆ ಅವರು ರಾಜಕೀಯ, ಧಾರ್ಮಿಕ,ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ನೈತಿಕ, ಸಾಂಸ್ಕೃತಿಕ ಹೀಗೆ ಎಲ್ಲಾ ಕ್ಷೇತ್ರಗಳಲ್ಲಿ ಪರಿವರ್ತನೆ ತಂದವರು ಹಾಗೂ ಜಾತಿ,ಮತ,ಲಿಂಗ,ಬಡವ,ಬಲ್ಲಿದ ಎನ್ನುವ ಭೇದವಿಲ್ಲದ ಸಮಸಮಾಜವನ್ನು ನೆಲೆಗೊಳಿಸಿದ ಕೀರ್ತಿ ಬಸವಣ್ಣವನರಿಗೆ ಸಲ್ಲುತ್ತದೆ ಎಂದರು.

ಪ್ರಸ್ತುತ ಧರ್ಮ, ರಾಜಕೀಯ ದಾಳವಾಗಿ ದುರುಪಯೋಗವಾಗುತ್ತಿದೆ ಈ ನಿಟ್ಟಿನಲ್ಲಿ ಸಾಂಸ್ಕೃತಿಕ ನಾಯಕ ಬಸವಣ್ಣನವರ ವಚನ ಸಂವಿಧಾನದ ಆಶಯಗಳನ್ನು ರಾಜ್ಯದ ಎಲ್ಲಾ ಜಿಲ್ಲೆಗಳ ಮನೆ-ಮನೆಗಳು, ಮನ-ಮನಗಳಿಗೆ ಮಟ್ಟಿಸುವ ಅಗತ್ಯವಿದ್ದು, ಈ ಕಾರಣದಿಂದ ರಾಜ್ಯಾದ್ಯಂತ ಬಸವ ಸಂಸ್ಕೃತಿ ಅಭಿಯಾನ ರಥಯಾತ್ರೆಯನ್ನು ಕೈಗೊಂಡಿದ್ದು, ದಾವಣಗೆರೆಯಲ್ಲಿ ಸೆ.15ರ ಸೋಮವಾರ ಬೆಳಿಗ್ಗೆ 11 ಗಂಟೆಗೆ ಶ್ರೀಮತಿ ಪಾರ್ವತಮ್ಮ ಡಾ.ಶಾಮನೂರು ಶಿವಸಶಂಕರಪ್ಪ ಸಭಾಂಗಣದಲ್ಲಿ ವಿವಿಧ ಮಠಾಧೀಶರುಗಳ ಸಾನ್ನಿಧ್ಯದಲ್ಲಿ ವಚನ ಸಂವಾದ ನಡೆಯಲಿದ್ದು, ಸಂಜೆ 4.30ಕ್ಕೆ ಸಾಮರಸ್ಯ ನಡಿಗೆ ಮೋತಿ ವೀರಪ್ಪ ಕಾಲೇಜು ಅವರಣದಿಂದ ಬಾಪೂಜಿ ಬ್ಯಾಂಕ್ ಸಮುದಾಯ ಭವನ, ಇದೇ ಸ್ಥಳದಲ್ಲಿ ಸಂಜೆ 6 ಗಂಟೆಗೆ ಸಾರ್ವಜನಿಕ ಸಮಾವೇಶ ನಡೆಯಲಿದೆ ಎಂದು ತಿಳಿಸಿದರು.

ಶಿವಸಂಚಾರ ಸಾಣೆಹಳ್ಳಿ ತಂಡದಿಂದ ವಚನಗೀತೆ, ಜಂಗಮದೆಡೆಗೆ ನಾಟಕ ಪ್ರದರ್ಶನ, ಉಪನ್ಯಾಸ ಕಾರ್ಯಕ್ರಮ ಕೂಡ ಇರುತ್ತದೆ ಎಂದು ಮಾಹಿತಿ ನೀಡಿದರು.

ಕಡ್ಲೆಬಾಳ್ ಪ್ರಕಾಶ್, ವಿ.ಟಿ.ಮಂಜುನಾಥ,ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮುರುಗೇಪ್ಪ ಗೌಡ ಹಾಗೂ ಪದಾಧಿಕಾರಿಗಳು, ಶರಣ ಸಾಹಿತ್ಯ ಪರಿಷತ್ ತಾ.ಅಧ್ಯಕ್ಷ ಹಾಗೂ ಉಪನ್ಯಾಸಕ ಡಾ.ಲೊಕೇಶ್, ಕದಳಿ ಮಹಿಳಾ ವೇದಿಕೆಯ ಪ್ರತಿಮಾ, ಕುಂದೂರು ನಾಗರಾಜ್, ಬಸವರಾಜಪ್ಪ ಬಿ.ವಿ. ರೇವಣಸಿದ್ದಪ್ಪ, ಕತ್ತಿಗೆ ನಾಗರಾಜ್, ಹೊಸಕೇರಿ ಸುರೇಶ್, ಉಪನ್ಯಾಸಕ ನಾಗೇಶ್, ಮಹಾಬಲೇಶ್ವರ, ಸಾಹಿತಿ, ಸಾಸ್ವೇಹಳ್ಳಿ ದೇವೇಂದ್ರಯ್ಯ ಹಲವರು ಇದ್ದರು.