ಸಾರಾಂಶ
ಸಂವಿಧಾನ ರಕ್ಷಣಾ ಅಭಿಯಾನ ಕಾರ್ಯಕ್ರಮದಲ್ಲಿ ಕಾರ್ಮಿಕ ಸಚಿವಕೊಪ್ಪಳ:
ಸಂವಿಧಾನ ಎಂದರೇ ಕೇವಲ ಮೀಸಲಾತಿಗೆ ಸೀಮಿತವಾಗಿಲ್ಲ. ಸರ್ವಜನಾಂಗದ ಏಳ್ಗೆಯ ಕುರಿತು ಮತ್ತು ದೇಶದ ಸಮಗ್ರ ಅಭಿವೃದ್ಧಿಗಾಗಿ ಅದರಲ್ಲಿ ಅನೇಕ ವಿಷಯಗಳನ್ನು ಬಾಬಾಸಾಹೇಬ ಅಂಬೇಡ್ಕರ್ ಅವರು ಬರೆದಿದ್ದಾರೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದರು.ಕಾಂಗ್ರೆಸ್‌ನ ಅಲ್ಪಸಂಖ್ಯಾತರ ಘಟಕ, ಎಸ್ಸಿ, ಎಸ್ಟಿ, ಹಾಗೂ ಓಬಿಸಿ ಘಟಕದ ವತಿಯಿಂದ ಭಾಗ್ಯನಗರ ಬಾಲಾಜಿ ಪಂಕ್ಷನ್ ಹಾಲ್ ನಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ರಕ್ಷಣಾ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಾಬಾಸಾಹೇಬ ಅವರು ಬರೆದ ಸಂವಿಧಾನದ ಕುರಿತು ಮಾತನಾಡುವುದು ಎಂದರೇ ಎಸ್ಸಿ, ಎಸ್ಟಿ ಮೀಸಲಾತಿ ಕುರಿತು ಮಾತನಾಡುತ್ತಾರೆ. ಅದರ ಹೊರತಾಗಿಯೂ ಅವರು ದೇಶದ ಸಮಗ್ರತೆಗಾಗಿ ಸಾಕಷ್ಟು ಅಂಶ ಸೇರಿಸಿದ್ದಾರೆ.ನೀರಾವರಿ, ರಾಜ್ಯ ಮತ್ತು ಕೇಂದ್ರ ಸರ್ಕಾರದ ಹಕ್ಕು ಮತ್ತು ಕರ್ತವ್ಯ ಅಷ್ಟೇ ಅಲ್ಲ, ಪ್ರತಿಯೊಬ್ಬ ನಾಗರಿಕನ ಹಕ್ಕಿನ ಕುರಿತು ಸಹ ನಮ್ಮ ಸಂವಿಧಾನ ವಿಶ್ವದಲ್ಲಿಯೇ ಶ್ರೇಷ್ಠತೆ ಅಳವಡಿಸಿಕೊಂಡಿದೆ.ನಾಯಿ, ನರಿ ಸೇರಿದಂತೆ ಪ್ರಾಣಿ ಪಕ್ಷಿಗಳೂ ಕೆರೆಯಲ್ಲಿನ ನೀರು ಕುಡಿದರೂ ಸಹ ನಮ್ಮ ದಲಿತ ಸಮುದಾಯದ ಜನರು ಕೆರೆಯ ನೀರು ಕುಡಿಯುವುದಲ್ಲ, ಮುಟ್ಟುವಂತೆ ಇರಲಿಲ್ಲ. ಅಂಬೇಡ್ಕರ್ ಸಮುದಾಯವನ್ನ ಹಿಂದು ಸಮುದಾಯ ಎಷ್ಟೇ ತುಚ್ಛವಾಗಿ ಕಂಡರೂ ಸಹ ಅವರು ಸಂವಿಧಾನ ರಚನೆಯ ವೇಳೆಯಲ್ಲಿ ಹಿಂದುಕೋಡ್ ಆ್ಯಕ್ಟ್ ರಚನೆ ಮಾಡಿದರು. ಆ ಮೂಲಕ ಪ್ರತಿಯೊಬ್ಬ ಮಹಿಳೆಯರಿಗೂ ಸಹ ಆಸ್ತಿಯ ಹಕ್ಕನ್ನು ನೀಡಿದರು. ಅಷ್ಟೇ ಯಾಕೆ ಆರ್ಥಿಕ, ಸಾಮಾಜಿಕತೆ ಸೇರಿದಂತೆ ಎಲ್ಲ ವಿಷಯಗಳನ್ನು ಅಳವಡಿಸಿಕೊಂಡು ಸಂವಿಧಾನ ರಚನೆ ಮಾಡಿ, ಪ್ರತಿಯೊಬ್ಬ ಭಾರತೀಯನು ಸಹ ಅಧಿಕಾರ ಪಡೆಯುವ ಹಕ್ಕನ್ನು ನೀಡಿದರು ಎಂದರು.ಅಂಬೇಡ್ಕರ್ ಅವರಿಗಿಂತಲೂ ಪೂರ್ವದಲ್ಲಿ ಬಸವಣ್ಣ ಅವರು 12ನೇ ಶತಮಾನದಲ್ಲಿ ಈ ಸಮಾನತೆ ಕಾಪಾಡಿದ್ದರು. ಇದಾದ ಮೇಲೆ ಶಾಹು ಮಹಾರಾಜರು ಮೀಸಲಾತಿ ತಂದಿದ್ದರು. ನಂತರ ಅಂಬೇಡ್ಕರ್ ಸಂವಿಧಾನದ ಮೂಲಕ ಮೀಸಲಾತಿ ಜಾರಿ ಮಾಡಿದರು. ಈಗ ಸಂವಿಧಾನವನ್ನು ನಾವೆಲ್ಲರೂ ಸೇರಿ ಕಾಪಾಡಿಕೊಳ್ಳುವ ಅಗತ್ಯವಿದೆ ಎಂದರು.
ಅಂಬೇಡ್ಕರ್ ಅವರ ಕುರಿತು ಈಗ ಮಾತನಾಡುವ ಬಿಜೆಪಿ ನಾಯಕರು ಸರಿಯಾಗಿ ಇತಿಹಾಸ ತಿಳಿದುಕೊಳ್ಳಬೇಕು. ಬಾಬಾ ಸಾಹೇಬ ಅಂಬೇಡ್ಕರ್ ಅವರನ್ನು ಆರ್ ಎಸ್ ಎಸ್ ವಿರೋಧಿಸಿದ್ದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಟಾಂಗ್ ನೀಡಿದರು.ಕಾರ್ಮಿಕರ ಶೋಷಣೆಯನ್ನು ತಡೆಯಲು 8 ಗಂಟೆಗೆ ಕೆಲಸದ ಸಮಯ ನಿಗದಿ ಮಾಡಿದ್ದು ಅಂಬೇಡ್ಕರ್ ಅವರು ಎನ್ನುವುದನ್ನು ಪ್ರತಿಯೊಬ್ಬರು ತಿಳಿದುಕೊಳ್ಳಬೇಕು ಎಂದರು.ವಿಧಾನಪರಿಷತ್ ಸದಸ್ಯೆ ಬಿಲ್ಕಿಸ್ ಭಾನು ಮಾತನಾಡಿದರು.
ಸಂಸದ ರಾಜಶೇಖರ ಹಿಟ್ನಾಳ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಮರೇಗೌಡ ಬಯ್ಯಾಪುರ, ಕುಡಾ ಅಧ್ಯಕ್ಷ ಶ್ರೀನಿವಾಸ ಗುಪ್ತಾ, ಮಾಜಿ ಸಂಸದ ಸಂಗಣ್ಣ ಕರಡಿ, ಶಾಸಕ ರಾಘವೇಂದ್ರ ಹಿಟ್ನಾಳ, ತುಂಗಭದ್ರಾ ಅಚ್ಚಕಟ್ಟು ಪ್ರದೇಶದಾಭಿವೃದ್ಧಿ ಅಧ್ಯಕ್ಷ ಹಸನಸಾಬ ದೋಟಿಹಾಳ, ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್, ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷ ಕೃಷ್ಣಾರಡ್ಡಿ ಗಲಬಿ, ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಕಾಟನ್ ಪಾಶಾ, ಟಿ. ರತ್ನಾಕರ, ಕೆ.ಎಂ. ಸಯ್ಯದ, ಗೂಳಪ್ಪ ಹಲಿಗೇರಿ, ಎಂ.ಎಸ್. ಖಾದ್ರಿ, ಮಂಜುನಾಥ ಗೊಂಡಬಾಳ, ಗಾಳೆಪ್ಪ ಪೂಜಾರ, ಯಮನಪ್ಪ ಕಬ್ಬೇರ್ ಅಕ್ಬರ್ ಪಾಶಾ ಸೇರಿದಂತೆ ಅನೇಕರು ಇದ್ದರು.