ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಬೋಗಾದಿ ಬಡಾವಣೆಯ ಬಸವ ಬಳಗ ಸೇವಾಟ್ರಸ್ಟ್ ವತಿಯಿಂದ ಬಸವೇಶ್ವರ ನಗರದ ಸಮುದಾಯ ಭವನದಲ್ಲಿ ಬಸವ ಜಯಂತಿ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಭಾನುವಾರ ಆಯೋಜಿಸಲಾಗಿತ್ತು.ಮುಖ್ಯ ಅತಿಥಿಯಾಗಿದ್ದ ಪತ್ರಕರ್ತ ಜಯಶಂಕರ್ ಬದನಗುಪ್ಪೆ ಮಾತನಾಡಿ, 12ನೇ ಶತಮಾನದ ದಾಸೋಹ ಪರಿಕಲ್ಪನೆ, ಸಮಾನತೆ, ಸೌಹಾರ್ದತೆ, ಸ್ತ್ರೀ ಸ್ವಾತಂತ್ರ್ಯ, ಸರ್ವರಿಗೂ ಶಿಕ್ಷಣ ಎಂಬ ಪರಿಕಲ್ಪನೆಯನ್ನು ಒಳಗೊಂಡ ವಚನ ಚಳವಳಿಯ ಮುಂದುವರಿದ ಭಾಗವೇ ಡಾ.ಬಿ.ಆರ್. ಅಂಬೇಡ್ಕರ್ ಅವರು ರಚಿಸಿದ ಭಾರತೀಯ ಸಂವಿಧಾನ ಎಂದರು.
ಶರಣ ಚಳವಳಿಯ ಧ್ಯೇಯೋದ್ದೇಶ ಮತ್ತು ಸಂವಿಧಾನದ ದ್ಯೇಯೋದ್ದೇಶಗಳಿಗೆ ಸ್ವಾಮ್ಯತೆ ಇದ್ದು ಸಮಾಜದಲ್ಲಿನ ಸರ್ವರ ಒಳಿತನ್ನೂ ಒಳಗೊಂಡಿವೆ ಎಂದು ಅವರು ಅಭಿಪ್ರಾಯಪಟ್ಟರು.ಸಮಾಜದ ಸ್ವಾಸ್ಥ್ಯ ಕದಡುವ ಶಕ್ತಿಗಳ ಷಡ್ಯಂತ್ರದ ವಿರುದ್ಧ ಯುವ ಸಮೂಹ ಜಾಗೃತರಾಗಿರಬೇಕು, ವಿದ್ಯಾರ್ಥಿಗಳಿಗೆ ಪರಿಸರ ಪ್ರಜ್ಞೆ ಇರಬೇಕು ಎಂದರಲ್ಲದೆ, ಹಿಂದೆ ಇದ್ದ ಗುರುಕುಲ ಶಿಕ್ಷಣ ಪದ್ಧತಿಯಲ್ಲಿ ಶಿಕ್ಷಣ ಕೆಲವರಿಗೆ ಮಾತ್ರ ಸೀಮಿತವಾಗಿತ್ತು. ಆದರೆ ರೈತರು, ಕೂಲಿಕಾರ್ಮಿಕರು, ಪೌರಕಾರ್ಮಿಕರು ಹಾಗೂ ಸಮಾಜದಲ್ಲಿ ಕಡೆಗಣಿಸಲ್ಪಟ್ಟಿದ್ದ ಎಲ್ಲಾ ವರ್ಗಗಳ ಮಕ್ಕಳು ಇಂದಿನ ಸರ್ವ ಶಿಕ್ಷಣ ಪದ್ಧತಿಯಿಂದ ಉತ್ತಮ ಶಿಕ್ಷಣ ಪಡೆದು ಸಾಧನೆ ಮಾಡಲು ಸಾಧ್ಯವಾಗಿದೆ ಎಂದರು.
ಮಠ-ಮಾನ್ಯಗಳು ಶಿಕ್ಷಣ ವ್ಯವಸ್ಥೆಯನ್ನು ಸರ್ವ ಜನಾಂಗಗಳಿಗೂ ತೆರೆದುಕೊಂಡಿವೆ. ಅಕ್ಷರ ದಾಸೋಹ, ಅನ್ನ ದಾಸೋಹ, ವಸತಿ ಸೌಲಭ್ಯ ಕಲ್ಪಿಸಿ ಎಲ್ಲರ ಮಕ್ಕಳೂ ಒಟ್ಟಿಗೆ ಶಿಕ್ಷಣ ಕಲಿಯುವ ವ್ಯವಸ್ಥೆಯನ್ನು ರೂಪಿಸಿವೆ ಎಂದರು.ಶರಣು ವಿಶ್ವ ವಚನ ವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಮಾತನಾಡಿ, ಶರಣ ಪರಂಪರೆ ಮತ್ತು ವಚನ ಸಾಹಿತ್ಯದ ಕುರಿತು ಉಪನ್ಯಾಸ ನೀಡಿದರು. ಟಿ. ನರಸೀಪುರ ತಾಲೂಕು ವಾಟಾಳು ಶ್ರೀ ಸೂರ್ಯ ಸಿಂಹಾಸನ ಮಠದ ಶ್ರೀ ಸಿದ್ಧಲಿಂಗಶಿವಾಚಾರ್ಯ ಸ್ವಾಮೀಜಿ ಸಮಾರಂಭದ ಸಾನ್ನಿಧ್ಯ ವಹಿಸಿದ್ದರು. ಬಸವ ಬಳಗ ಸೇವಾ ಟ್ರಸ್ಟ್ ಅಧ್ಯಕ್ಷ ಬಸವರಾಜು ಅಧ್ಯಕ್ಷತೆ ವಹಿಸಿದ್ದರು.
ಸಮಾರಂಭದಲ್ಲಿ ಯು.ಪಿ.ಎಸ್.ಸಿ ಪರೀಕ್ಷೆಯಲ್ಲಿ 263ನೇ ರ್ಯಾಂಕ್ ಗಳಿಸಿರುವ ಸಾಲಿಗ್ರಾಮ ತಾಲೂಕಿನ ಅಂಕನಹಳ್ಳಿ ಗ್ರಾಮದ ರೈತ ಕುಟುಂಬದ ಎ.ಸಿ. ಪ್ರೀತಿ ಹಾಗೂ ಮೈಸೂರಿನ ವಿಜಯನಗರ ಮೊದಲ ಹಂತದ ನಿವಾಸಿ ಮ್ಯೂಸಿಕ್ ನಲ್ಲಿ ಚಿನ್ನದ ಪದಕ ಪಡೆದಿರುವ ಜೆ.ಆರ್. ಅನುಷಾ ನಟೇಶ್ ಅವರನ್ನು ಟ್ರಸ್ಟ್ ವತಿಯಿಂದ ಅಭಿನಂದಿಸಲಾಯಿತು.ಇದಕ್ಕೂ ಮುನ್ನ ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀ ಸಿದ್ಧಲಿಂಗಶಿವಾಚಾರ್ಯ ಸ್ವಾಮೀಜಿ ಹಾಗೂ ವೇದಿಕೆಯಲ್ಲಿದ್ದ ಗಣ್ಯರು ಶ್ರೀ ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿದರು. ಜೆ.ಆರ್. ಅನುಷಾ ನಟೇಶ್ ವಚನ ಗಾಯನ ನಡೆಸಿಕೊಟ್ಟರು.
2024- 25ನೇ ಸಾಲಿನ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಸೇರಿದಂತೆ ಒಟ್ಟು 21 ಮಂದಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು.ಉಪನ್ಯಾಸಕ ಮೂಗೂರು ನಟರಾಜ್ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳು, ಪೋಷಕರು, ಬಸವ ಬಳಗ ಸೇವಾ ಟ್ರಸ್ಟ್ ಪದಾಧಿಕಾರಿಗಳು, ಸರ್ವ ಸದಸ್ಯರು ಭಾಗವಹಿಸಿದ್ದರು.