ವಿಶ್ವದಲ್ಲಿರುವ ಎಲ್ಲಾ ಸರ್ವ ಧರ್ಮಗಳ ಸಾರ ಭಾರತದ ಸಂವಿಧಾನದಲ್ಲಿ ಅಡಕವಾಗಿದೆ. ಮಾನವ ಕುಲದ ಶ್ರೇಯೋಭಿವೃದ್ಧಿಯೇ ಸಂವಿಧಾನದ ಆಶಯವಾಗಿದೆ ಎಂದು ಇಂಗ್ಲಿಷ್ ಪ್ರಾಧ್ಯಾಪಕ ಪ್ರೋ.ನಟರಾಜ.ಡಿ.ಎಚ್.ಅಭಿಪ್ರಾಯ ವ್ಯಕ್ತಪಡಿಸಿದರು.
ಚಿತ್ರದುರ್ಗ: ವಿಶ್ವದಲ್ಲಿರುವ ಎಲ್ಲಾ ಸರ್ವ ಧರ್ಮಗಳ ಸಾರ ಭಾರತದ ಸಂವಿಧಾನದಲ್ಲಿ ಅಡಕವಾಗಿದೆ. ಮಾನವ ಕುಲದ ಶ್ರೇಯೋಭಿವೃದ್ಧಿಯೇ ಸಂವಿಧಾನದ ಆಶಯವಾಗಿದೆ ಎಂದು ಇಂಗ್ಲಿಷ್ ಪ್ರಾಧ್ಯಾಪಕ ಪ್ರೋ.ನಟರಾಜ.ಡಿ.ಎಚ್.ಅಭಿಪ್ರಾಯ ವ್ಯಕ್ತಪಡಿಸಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ಹಾಗೂ ನಗರಸಭೆ ಸಹಯೋಗದಲ್ಲಿ ನಗರದ ಶಿವಶರಣ ಮಾದಾರ ಚೆನ್ನಯ್ಯ ಸಭಾಭವನದಲ್ಲಿ ಬುಧವಾರ ಆಯೋಜಿಸಲಾದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಸಂವಿಧಾನ ಜಾಗೃತಿ ಕುರಿತು ಉಪನ್ಯಾಸ ನೀಡಿ ಮಾತನಾಡಿದರು.
1946ರಲ್ಲಿ ಬ್ರಿಟಿಷ್ ಸರ್ಕಾರ ಭಾರತದ ಸಂವಿಧಾನ ರಚನಾ ಸಮಿತಿ ಸ್ಥಾಪಿಸಿತು. ಅಂಬೇಡ್ಕರ್ ವಿಶ್ವದ 60 ದೇಶಗಳ ಸಂವಿಧಾನವನ್ನು ಓದಿ ಅರ್ಥೈಸಿಕೊಂಡು ನಮ್ಮ ದೇಶದ ಸಂವಿಧಾನವನ್ನು ರಚಿಸಿದ್ದಾರೆ. ಸಂವಿಧಾನ ರಚನಾ ಸಭೆ 12 ಬಾರಿ ಅಧಿವೇಶನ ನಡೆಸಿ, ಒಟ್ಟು 2 ವರ್ಷ 11 ತಿಂಗಳು 18 ದಿನಗಳ ಸುದೀರ್ಘ ಚರ್ಚೆಯ ನಂತರ ಸಂವಿಧಾನದ ಕರಡು ಪ್ರತಿಗೆ 26 ನವೆಂಬರ್ 1949 ರಂದು ಅಂಗೀಕಾರ ದೊರಕಿತು. ಇದರ ನೆನಪಿಗಾಗಿ ಪ್ರತಿ ವರ್ಷ ನ.26ರನ್ನು ಕಾನೂನು ದಿವಸ್ ಎಂದು ದೇಶದಾದ್ಯಂತ ಆಚರಿಸಲಾಗುತ್ತಿತ್ತು. 2015 ರಿಂದ ಈ ಕಾನೂನು ದಿವಸ್‍ನ್ನು ಸಂವಿಧಾನ ದಿನ ಎಂದು ಮರುನಾಮಕರಣದೊಂದಿಗೆ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.ಸಂವಿಧಾನದ ಪ್ರತಿ ಪುಟದಲ್ಲಿ ಭಾರತದ ಇತಿಹಾಸ ಹಾಗೂ ಸಂಸ್ಕೃತಿಗಳನ್ನು ಬಿಂಬಿಸುವ ಚಿತ್ರಗಳನ್ನು ಬರೆದಿದಾರೆ. ಸಂವಿಧಾನ ರಚನೆಯ ಲಾಂಛನ ಆನೆಯಾಗಿತ್ತು. ಸಂವಿಧಾನ ಜಾರಿಯಾಗಿ 75 ವರ್ಷ ಪೂರ್ಣಗೊಂಡರೂ ದೇಶ ಅದರ ಆಧಾರದಲ್ಲಿಯೇ ಮುನ್ನಡೆಯುತ್ತಿದೆ. ನಮ್ಮ ದೇಶದೊಂದಿಗೆ ಉದಯವಾದ ಪಾಕಿಸ್ತಾನ 75 ವರ್ಷದಲ್ಲಿ 3 ಬಾರಿ ಸಂವಿಧಾನವನ್ನು ಬದಲಾಯಿಸಿದೆ. ನೇಪಾಳ 7 ಬಾರಿ ಸಂವಿಧಾನ ಬದಲಾಯಿಸಿದೆ. ಆದರೆ ಭಾರತ ಸಂವಿಧಾನ ಸರ್ವಕಾಲಕ್ಕೂ ಸಲ್ಲುವ ತತ್ವಗಳಿಂದ ಕೂಡಿದ್ದು, ಮುಂದೆಯೂ ದೇಶದ ಮುನ್ನೆಡೆಸಲು ಆಧಾರವಾಗಿದೆ ಎಂದರು,
ಮಾಜಿ ಸಚಿವ ಎಚ್.ಆಂಜನೇಯ ಮಾತನಾಡಿ, ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಎಲ್ಲಾ ಧರ್ಮದ ಜನರು ಜ್ಯಾತ್ಯತೀತವಾಗಿ ಹೋರಾಟ ನಡೆಸಿದ್ದಾರೆ. ಇದರ ಫಲವಾಗಿ ಬ್ರೀಟಿಷರ ಗುಲಾಮಗಿರಿಯಿಂದ ನಮಗೆ ಮುಕ್ತಿ ದೊರೆಯಿತು. ನಂತರ ದೇಶದಲ್ಲಿ ಜಾರಿಯಾದ ಸಂವಿಧಾನ, ಮಹಿಳೆಯರು ಹಾಗೂ ಶೋಷಿತರಿಗೆ ನಿಜ ಅರ್ಥದಲ್ಲಿ ಸ್ವಾತ್ರಂತ್ರ್ಯ ಹಾಗೂ ಸಮಾನತೆಯನ್ನು ದೊರಕಿಸಿಕೊಟ್ಟಿತು ಎಂದರು.ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ.ತಾಜ್‍ಪೀರ್, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಆರ್.ಶಿವಣ್ಣ, ಉಪಾಧ್ಯಕ್ಷ ಡಿ.ಎನ್.ಮೈಲಾರಪ್ಪ, ಲಿಡ್ಕರ್ ಸಂಸ್ಥೆ ನಿಕಟಪೂರ್ವ ಅಧ್ಯಕ್ಷ ಶಂಕರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ್, ಜಿಪಂ ಯೋಜನಾಧಿಕಾರಿ ಗಾಯಿತ್ರಿ, ವಕೀಲರ ಸಂಘದ ಅಧ್ಯಕ್ಷ ಮಹೇಶ್ವರಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.ಬಹುಮಾನ ವಿತರಣೆ:
ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಕಾರ್ಯಕ್ರಮದಲ್ಲಿ ಸಂವಿಧಾನ ಪೀಠಿಕೆಯನ್ನು ಬೋಧಿಸಿ, ಸಂವಿಧಾನ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ, ಪ್ರಬಂಧ, ಚಿತ್ರಕಲೆ, ಭಾಷಣ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿದರು. ವಿದ್ಯಾರ್ಥಿಗಳು ಸಂವಿಧಾನ ಕುರಿತು ಬಿಡಿಸಿದ ಚಿತ್ರಗಳ ಪ್ರದರ್ಶನ ಇದೇ ವೇಳೆ ಏರ್ಪಡಿಸಲಾಗಿತ್ತು. ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸಂಗೀತ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ತಂಡ ಗೀತಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.ಗಮನ ಸೆಳೆದ ಸಂವಿಧಾನ ಜಾಗೃತಿ ಜಾಥ
ಸಂವಿಧಾನ ದಿನಾಚರಣೆ ಅಂಗವಾಗಿ ನಗರದ ಐತಿಹಾಸಿಕ ಕೋಟೆ ಆವರಣದ ಬಳಿ ಅಂಬೇಡ್ಕರ್ ಪುತ್ಥಳಿ ಹಾಗೂ ಸಂವಿಧಾನ ಪ್ರತಿಕೃತಿ ಮೆರವಣಿಗೆಗೆ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಚಾಲನೆ ನೀಡಿದರು.ವಿವಿಧ ಕಲಾತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು. ಸಮಾಜ ಕಲ್ಯಾಣ ಇಲಾಖೆ ವಸತಿ ಶಾಲೆ ವಿದ್ಯಾರ್ಥಿಗಳು ಸಂವಿಧಾನ ಜಾಗೃತಿಗೆ ಸಂಬಂಧಿಸಿದ ಸಂದೇಶಗಳನ್ನು ಘೋಷಿಸುವ ಮೂಲಕ ಸಂಭ್ರಮ ಹಾಗೂ ಸಡಗರದಿಂದ ಮೆರವಣಿಗೆಯಲ್ಲಿ ನೃತ್ಯದೊಂದಿಗೆ ಹೆಜ್ಜೆಹಾಕಿದರು. ಮೆರವಣಿಗೆ ಕೋಟೆ ಮುಂಭಾಗದಿಂದ ಪ್ರಾರಂಭವಾಗಿ, ಕಾಮನಬಾವಿ ಬಡಾವಣೆ, ಕರುವಿನಕಟ್ಟೆ ಸರ್ಕಲ್, ಜೋಗಿಮಟ್ಟಿ ರಸ್ತೆ, ಬುದ್ಧ ಪ್ರತಿಮೆ, ಸ್ಟೇಡಿಯಂ ರಸ್ತೆ, ಹಳೇ ವೈಶಾಲಿ ವೃತ್ತ, ಮದರಕರಿ ನಾಯಕ ವೃತ್ತದ ಮೂಲಕ ಸಾಗಿ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಸಮಾಪ್ತಿಗೊಂಡಿತು. ಈ ವೇಳೆ ಉಪವಿಭಾಗಾಧಿಕಾರಿ ಮೆಹಬೂಬ್ ಜಿಲಾನಿ ಖುರೇಶಿ, ಪ್ರಾದೇಶಿಕ ಸಾರಿಗೆ ಅಧಿಕಾರಿ ಭರತ್ ಕಾಳಿಸಿಂಗೆ ಸೇರಿದಂತೆ ವಿವಿಧ ಅಧಿಕಾರಿಗಳು ಪಾಲ್ಗೊಂಡಿದ್ದರು.