ಕನ್ನಡಪ್ರಭ ವಾರ್ತೆ ಹಾಸನ

ಕನ್ನಡ ಸಾಹಿತ್ಯ ಲೋಕದಲ್ಲಿ ಮಕ್ಕಳ ಸಾಹಿತ್ಯದ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಅದು ಮಕ್ಕಳ ಮನೋಭೂಮಿಕೆಯನ್ನು ವಿಸ್ತರಿಸಿ, ಅವರಲ್ಲಿ ವೈಚಾರಿಕತೆ ಹಾಗೂ ನೈತಿಕ ಮೌಲ್ಯಗಳನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಮನೆಮನೆ ಕವಿಗೋಷ್ಠಿ ಸಂಚಾಲಕರಾದ ಸುಕನ್ಯಾ ಮುಕುಂದ ಅಭಿಪ್ರಾಯಪಟ್ಟರು.

ನಗರದ ಕೆಂಪು ಚೆಲುವಾಜಮ್ಮಣ್ಣಿ ಮಹಿಳಾ ಸಮಾಜದ ಸಭಾಂಗಣದಲ್ಲಿ ನಡೆದ ೩೩೯ನೇ ಮನೆಮನೆ ಕವಿಗೋಷ್ಠಿಯಲ್ಲಿ ಹಿರಿಯ ಲೇಖಕಿ ಲಕ್ಷ್ಮೀದೇವಿ ದಾಸಪ್ಪ ಅವರ ‘ರಂಗವೇದಿಕೆಯಲ್ಲಿ ಚುಕ್ಕಿ ಚಂದ್ರಮ’ ಮಕ್ಕಳ ನಾಟಕ ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿ, ಮಕ್ಕಳಲ್ಲಿ ಸೃಜನಶೀಲತೆ, ನೈತಿಕ ಬಲ ಮತ್ತು ಸಾಮಾಜಿಕ ಅರಿವು ಮೂಡಿಸಲು ಮಕ್ಕಳ ನಾಟಕಗಳು ಪರಿಣಾಮಕಾರಿ ಮಾಧ್ಯಮವಾಗಿವೆ ಎಂದರು.

ಕಾರ್ಯಕ್ರಮವನ್ನು ಕವಿ ಸಿ. ಎಂ. ತಿಮ್ಮೇಗೌಡ ಅವರು ಕುವೆಂಪು ರವರ ‘ಶ್ರೀ ರಾಮಾಯಣ ದರ್ಶನಂ’ ಕೃತಿಯ ಭಾಗ ವಾಚಿಸುವ ಮೂಲಕ ಕಾವ್ಯಾತ್ಮಕವಾಗಿ ಉದ್ಘಾಟಿಸಿದರು. ಕವಿಗೋಷ್ಠಿಯಲ್ಲಿ ಶೈಲಜಾ ಲೋಕೇಶ್, ಸಿ.ಎನ್. ತಿಮ್ಮೇಗೌಡ, ಎಚ್.ಎನ್. ಭಾರತಿ, ಲಲಿತ ಎಸ್, ಸುಭದ್ರ ಬಾಯಿ ಅರಸೀಕೆರೆ, ಜಯಶಂಕರ ಬೆಳಗುಂಬ, ಕುಮಾರ ಚಲವಾದಿ, ಸುಂದರೇಶ ಡಿ. ಉಡುವಾರೆ, ಎನ್. ಎಲ್. ಚನ್ನೇಗೌಡ, ಸಾವಿತ್ರಮ್ಮ ಓಂಕಾರ, ಜೆ. ಆರ್‌. ರವಿಕುಮಾರ್ ಜನಿವಾರ, ಶ್ರೀವಿಜಯ, ವನಜ ಸುರೇಶ್, ಸುಕನ್ಯಾ ಮುಕುಂದ, ಕಾಮಾಕ್ಷಿ ಬಿಜಿ, ಹಿಮಜ ಚನ್ನರಾಯಪಟ್ಟಣ, ಪದ್ಮಾವತಿ ವೆಂಕಟೇಶ್, ಪವಿತ್ರ ಎಂ. ಸೇರಿದಂತೆ ಹಲವರು ತಮ್ಮ ಕವನಗಳನ್ನು ವಾಚಿಸಿದರು. ವಾಚಿಸಲಾದ ಕವನಗಳಿಗೆ ಸಮಗ್ರ ವಿಮರ್ಶೆ ನಡೆಯಿತು.

ನಂತರ ಕಲಾಸಿರಿ ನಾಟಕ ಶಾಲೆಯ ಕಲಾವಿದ ಹಾಗೂ ಸಾಹಿತಿ ಜಯಶಂಕರ ಬೆಳಗುಂಬ ಅವರು ‘ರಂಗವೇದಿಕೆಯಲ್ಲಿ ಚುಕ್ಕಿ ಚಂದ್ರಮ’ ಕೃತಿಯ ವಿಮರ್ಶೆ ನಡೆಸಿದರು. ಕೃತಿಯಲ್ಲಿ ಒಟ್ಟು ಎಂಟು ನಾಟಕಗಳಿದ್ದು, ‘ಬುದ್ಧಿವಂತ ಗಣಪ’, ‘ಜೀಮೂತವಾಹನ’, ‘ಶ್ರವಣಕುಮಾರ’, ‘ಭೀಮ-ಹನುಮ ಸಮಾಗಮ’ ಮುಂತಾದವು ಪೌರಾಣಿಕ ಆಶಯ ಹೊಂದಿದ್ದರೆ, ‘ಪೋಸ್ಟ್ ಆಫೀಸ್‌ನಲ್ಲಿ’, ‘ಉಳಿತಾಯ ನೆಮ್ಮದಿಯ ಜೀವನಕ್ಕೆ ಅಡಿಪಾಯ’ ಮೊದಲಾದ ನಾಟಕಗಳು ಸಾಮಾಜಿಕ ಚಿಂತನೆಗೆ ಮಕ್ಕಳನ್ನು ಪ್ರೇರೇಪಿಸುವಂತಿವೆ ಎಂದು ವಿವರಿಸಿದರು. ರಂಗಸಜ್ಜಿಕೆಯ ನಾಟಕಗಳಲ್ಲಿ ಪಾತ್ರಧಾರಿಗಳು ಪ್ರೇಕ್ಷಕರೊಂದಿಗೆ ನೇರ ಸಂವಹನ ಸಾಧಿಸುತ್ತಾರೆ. ಆದರೆ ಸಿನಿಮಾ ಮತ್ತು ಕಿರುತೆರೆಗಳಲ್ಲಿ ಎಡಿಟಿಂಗ್ ಮೂಲಕ ದೋಷಗಳನ್ನು ಸರಿಪಡಿಸಲು ಅವಕಾಶವಿದೆ. ಅಭಿನಯದಲ್ಲಿ ಶೃಂಗಾರ, ಕರುಣ ಸೇರಿದಂತೆ ನವರಸಗಳ ಅಭಿವ್ಯಕ್ತಿ ಮುಖ್ಯವೆಂದು ಅವರು ಹೇಳಿದರು. ಲೇಖಕಿ ಲಕ್ಷ್ಮೀದೇವಿ ದಾಸಪ್ಪ ಅವರು ತಮ್ಮ ವೃತ್ತಿ ಜೀವನದಲ್ಲಿ ಶಾಲಾ ಮಕ್ಕಳಿಗೆ ನಾಟಕ ತರಬೇತಿ ನೀಡುವ ಸಂದರ್ಭದಲ್ಲಿ ಈ ಕೃತಿಯ ಆಲೋಚನೆ ಮೂಡಿದುದಾಗಿ ತಿಳಿಸಿದರು. ಮಕ್ಕಳಿಗೆ ನಾಟಕ ಬರೆದು ಕಲಿಸುವ ಮೂಲಕ ಅವರಲ್ಲಿ ಅಭಿನಯ ಸಾಮರ್ಥ್ಯ, ನೀತಿ ಬೋಧನೆ ಮತ್ತು ಆದರ್ಶ ಮೌಲ್ಯಗಳನ್ನು ಬೆಳೆಸಲು ಸಾಧ್ಯವಾಯಿತು. ಮನೆಮನೆ ಕವಿಗೋಷ್ಠಿ ಮೂಲಕ ಕೃತಿ ಬಿಡುಗಡೆಯಾಗಿರುವುದು ಸಂತೋಷ ತಂದಿದೆ ಎಂದು ಅವರು ಧನ್ಯತಾಭಾವ ವ್ಯಕ್ತಪಡಿಸಿದರು.ಕಾರ್ಯಕ್ರಮದಲ್ಲಿ ಉದಯವರದಿ ಪತ್ರಿಕೆಯ ಸಂಪಾದಕ ವೆಂಕಟೇಶ್, ಸಮುದ್ರವಳ್ಳಿ ವಾಸು, ಸಮಾಜಸೇವಕಿ ಶಿವಮ್ಮ, ಯಶೋಧ ಜೈನ್, ಎಸ್.ಪಿ. ನಂದಿನಿ, ಭಾರತಿ ಹಾದಿಗೆ, ಮುಕುಂದ್ ಎಂ., ಲೋಕೇಶ್, ಡಾ. ಶಾಂತ ಅತ್ನಿ, ಮಂಜುಳಾ ಸಿ. ಎನ್., ಯಶಸ್ವಿನಿ ಹಾಗೂ ಧರಣಿ ಎಸ್ ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೆ ಲಕ್ಷ್ಮೀದೇವಿ ದಾಸಪ್ಪ ಅವರು ಪ್ರಾಯೋಜಕತ್ವ ವಹಿಸಿದ್ದರು. ಶೈಲಜಾ ಲೋಕೇಶ್ ಅವರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮವನ್ನು ಲಲಿತ ಎಸ್. ನಿರೂಪಿಸಿ, ಭಾರತಿ ಹಾದಿಗೆ ವಂದನಾರ್ಪಣೆ ಸಲ್ಲಿಸಿದರು.