ಕನ್ನಡ ಸಾಹಿತ್ಯ, ಸಂಗೀತ ಮತ್ತು ಭಕ್ತಿ ಪರಂಪರೆಗೆ ದಾಸ ಸಾಹಿತ್ಯ ಪ್ರಮುಖ ಕೊಡುಗೆಯನ್ನು ನೀಡಿದೆ. ಭಕ್ತಿಯನ್ನು ಜನಸಾಮಾನ್ಯರ ಭಾಷೆಯಲ್ಲಿ ಅಭಿವ್ಯಕ್ತಿಸಿ ಧಾರ್ಮಿಕ ಹಾಗೂ ಸಾಮಾಜಿಕ ವಿಚಾರಗಳನ್ನು ಜನರಿಗೆ ತಲುಪಿಸುವ ಕಾರ್ಯವನ್ನು ಮಾಡಿದ್ದಾರೆ.
ಕಾಯಕರತ್ನ ಮೈಲಾರಪ್ಪ ಮೆಣಸಗಿ ಸ್ಮರಣಾರ್ಥ ದತ್ತಿ ಉಪನ್ಯಾಸ
ಕನ್ನಡಪ್ರಭ ವಾರ್ತೆ ಗದಗ
ಕನ್ನಡ ಸಾಹಿತ್ಯ, ಸಂಗೀತ ಮತ್ತು ಭಕ್ತಿ ಪರಂಪರೆಗೆ ದಾಸ ಸಾಹಿತ್ಯ ಪ್ರಮುಖ ಕೊಡುಗೆಯನ್ನು ನೀಡಿದೆ. ಭಕ್ತಿಯನ್ನು ಜನಸಾಮಾನ್ಯರ ಭಾಷೆಯಲ್ಲಿ ಅಭಿವ್ಯಕ್ತಿಸಿ ಧಾರ್ಮಿಕ ಹಾಗೂ ಸಾಮಾಜಿಕ ವಿಚಾರಗಳನ್ನು ಜನರಿಗೆ ತಲುಪಿಸುವ ಕಾರ್ಯವನ್ನು ಮಾಡಿದ್ದಾರೆ. ಕನಕದಾಸರ ಕೃತಿಗಳಲ್ಲಿ ಭಕ್ತಿ, ತತ್ವಜ್ಞಾನ, ಸಾಮಾಜಿಕ ಸಮಾನತೆ, ಮಾನವೀಯತೆ ಮತ್ತು ಜೀವನಮೌಲ್ಯಗಳನ್ನು ಒಳಗೊಂಡಿವೆ ಎಂದು ಉಪನ್ಯಾಸಕಿ ಜಿ.ಎಫ್. ಕಾಯಕದ ತಿಳಿಸಿದರು.ನಗರದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಜರುಗಿದ ಕಾಯಕರತ್ನ ಮೈಲಾರಪ್ಪ ಮೆಣಸಗಿ ಸ್ಮರಣಾರ್ಥ ಜರುಗಿದ ದತ್ತಿ ಉಪನ್ಯಾಸದಲ್ಲಿ ಮಾತನಾಡಿದ ಅವರು, ಕನಕದಾಸರ ಸಾಹಿತ್ಯವನ್ನು ಅರ್ಥಮಾಡಿಕೊಳ್ಳಲು ಅವರ ಕೃತಿಗಳ ಕಥಾ ವಸ್ತುವನ್ನಷ್ಟೇ ತಿಳಿದುಕೊಳ್ಳದೇ ಅದರಲ್ಲಿ ಅಡಕವಾಗಿರುವ ಭಕ್ತಿತತ್ವ ಮತ್ತು ಸಾಮಾಜಿಕ ವಿಮರ್ಶೆ, ಕಾವ್ಯ ಶೈಲಿ ಮತ್ತು ಸಮಕಾಲೀನ ಪ್ರಸ್ತುತತೆಯನ್ನು ಅಧ್ಯಯನ ಮಾಡಬೇಕೆಂದರು.
ಮೈಲಾರಪ್ಪ ಮೆಣಸಗಿ ಅವರ ಜೀವನ ಮತ್ತು ಸಾಧನೆ ಕುರಿತು ಸಾಹಿತಿ ಅಂದಾನಪ್ಪ ವಿಭೂತಿ ಮಾತನಾಡಿ, ಸತತ ಪರಿಶ್ರಮ, ಕಾಯಕನಿಷ್ಠೆ, ಸಮಯಪ್ರಜ್ಞೆಯಿಂದ ಮನುಷ್ಯ ಜೀವನದಲ್ಲಿ ಸಾಧನೆಯನ್ನು ಹೇಗೆ ತೋರಬಹುದು ಎಂಬುದಕ್ಕೆ ಮೈಲಾರಪ್ಪನವರು ಮಾದರಿಯಾಗಿದ್ದರು. ಬಡತನದಲ್ಲಿ ಅರಳಿದರೂ ಸಮಾಜಕ್ಕೆ ಬೆಳಕಾದರು. ವಿದ್ಯಾನಿಧಿ ಪ್ರಕಾಶನ ಮತ್ತು ಶಿವಕುಮಾರ ಏಜೆನ್ಸಿ ಮೂಲಕ ಮುದ್ರಣಕಾಶಿ ಹೆಸರಿಗೆ ಕೀರ್ತಿ ತಂದರು ಎಂದು ತಿಳಿಸಿದರು.ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಜಯದೇವ ಮೆಣಸಗಿ ಮಾತನಾಡಿ, ಆರ್ಥಿಕ ಅಭಿವೃದ್ಧಿಯ ಹಿನ್ನೆಲೆ ಪ್ರತಿಯೊಬ್ಬರು ಉತ್ಪಾದನಾ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಸರಕಾರಿ ಉದ್ಯೋಗಗಳು ಕನಿಷ್ಠ ಮಟ್ಟದಲ್ಲಿ ಇರುವದರಿಂದ ವ್ಯಾಪಾರ, ವ್ಯವಹಾರಗಳ ಮೂಲಕ ಬದುಕನ್ನು ಕಟ್ಟಿಕೊಳ್ಳುವ ದಿಸೆಯಲ್ಲಿ ಯುವಜನಾಂಗ ಮುಂದಾಗಬೇಕೆಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಮನುಷ್ಯನ ಅಂತಿಮ ಗುರಿಯನ್ನು ಸಾಧಿಸುವ ಹಿನ್ನೆಲೆ ರೂಪಿತವಾಗಿರುವ ಭಕ್ತಿ ಪರಂಪರೆಗೆ ಹೊಸ ಆಯಾಮವನ್ನು ದಾಸವರೇಣ್ಯರು ನೀಡಿದರು. ಸಾಮಾನ್ಯ ಜನರಿಗೆ ಅರ್ಥವಾಗುವ ದಿಸೆಯಲ್ಲಿ ಸಾಹಿತ್ಯ ರಚಿಸಿ, ಜೀವನ ಮೌಲ್ಯಗಳನ್ನು ಅರುಹಿದರು. ಕನಕದಾಸರು ಸಾಮಾಜಿಕ ಅಸಮಾನತೆ ವಿರುದ್ಧ ದನಿ ಎತ್ತಿ, ಮೇಲು ಕೀಳುಗಳಿಲ್ಲದ ಸಮಾಜ ರಚನೆಗೆ ಜಾಗೃತಿ ಮೂಡಿಸಿದರು ಎಂದರು.ಈ ವೇಳೆ ಶಿವಪ್ಪ ಕುರಿ, ಸತೀಶಕುಮಾರ ಚನ್ನಪ್ಪಗೌಡರ, ಬಸವರಾಜ ವಾರಿ, ಉಮಾದೇವಿ ಹೊಂಬಳ, ಎಸ್.ಎಫ್. ಹಡಪದ, ಲಿಂಗರಾಜ ಪಾಟೀಲ, ಜೆ.ಎ.ಪಾಟೀಲ, ಮೋಹನ ಕೋಟಿ, ಭಾರತಿ ಕೋಟಿ, ರಾಜಬಾಬು ದೀಪಾಲಿ, ಸಿ.ಎಂ. ಮಾರನಬಸರಿ, ಗೋವಿಂದ ಮಕ್ತುಂ, ಜಯನಗೌಡ ಪಾಟೀಲ, ನಿರ್ಮಲಾ ಪಾಟೀಲ, ರಾಜು ಪಾಟೀಲ, ಪ್ರಸನ್ನಕುಮಾರ ಇನಾಮದಾರ, ಬಿ.ಬಿ. ಹೊಳಗುಂದಿ, ಶಶಿಕಾಂತ ಕೊರ್ಲಹಳ್ಳಿ, ಬಸವರಾಜ ತೋಟಿಗೇರ, ವಿನಾಯಕ ಹೊಸಮನಿ, ಎಂ.ಎಂ. ಕಾಗದಗಾರ, ಎಂ.ಎಫ್. ಡೋಣಿ, ಪ್ರ.ತೋ. ನಾರಾಯಣಪೂರ, ಅಶೋಕ ಗಿರಡ್ಡಿ, ಎಸ್.ಎ. ದೇಶಪಾಂಡೆ, ರಾಜೇಂದ್ರ ಗಡಾದ, ವಿ.ಎಸ್. ದಲಾಲಿ, ಆರ್.ಎಂ. ಹಿರೇಮಠ, ರತ್ನಾ ಪುರಂತರ, ಅಕ್ಕಮ್ಮ ಪಾರ್ವತಿಮಠ, ಶೈಲಜಾ ಗಿಡ್ನಂದಿ, ರಕ್ಷಿತಾ ಗಿಡ್ನಂದಿ, ಉಮಾ ಪಾರ್ವತಿಮಠ, ಕೆ.ಎಸ್. ಜಯದೇವಭಟ್, ಷಡಕ್ಷರಿ ಮೆಣಸಿನಕಾಯಿ, ಅಮರೇಶ ರಾಂಪೂರ, ಕೆ.ಜಿ. ವ್ಯಾಪಾರಿ, ಕೆ.ಎನ್. ಹರಿಹರ, ಬಸವರಾಜ ಹಿರೇಮಠ ಮೊದಲಾದವರು ಇದ್ದರು. ಶಿವಾನಂದ ಹೊಂಬಳ ಕೀರ್ತನೆ ಹಾಡಿದರು. ವಿಶ್ವನಾಥ ಕಮ್ಮಾರ ನಿರೂಪಿಸಿದರು. ಕಿಶೋರಬಾಬು ನಾಗರಕಟ್ಟಿ ಸ್ವಾಗತಿಸಿದರು. ಡಿ.ಎಸ್. ಬಾಪುರಿ ವಂದಿಸಿದರು.