ಸರ್ವ ಜನಾಂಗಕ್ಕೂ ಮಹಾನೀಯರ ಕೊಡುಗೆ ಅಪಾರ : ಸಿ.ಟಿ. ರವಿ

| Published : Mar 29 2025, 12:30 AM IST

ಸಾರಾಂಶ

ಚಿಕ್ಕಮಗಳೂರು, ಭಾರತೀಯ ಪರಂಪರೆಗೆ ವಿಶೇಷವಾದ ಕೊಡುಗೆಯನ್ನು ನೀಡಿದ ಮಹಾನೀಯರು, ಕೇವಲ ಒಂದು ಜನಾಂಗಕ್ಕೆ ಸೀಮಿತವಾಗದೇ ಮಾನವ ಜನಾಂಗಕ್ಕೆ ಬಹಳಷ್ಟು ಕೊಡುಗೆ ನೀಡಿದ್ದಾರೆ. ಇಂತಹ ಮಹನೀಯರ ಜಯಂತಿಯನ್ನು ಆಚರಿಸುತ್ತಿರುವುದು ಅರ್ಥಪೂರ್ಣವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿದರು.

ಕುವೆಂಪು ಕಲಾ ಮಂದಿರದಲ್ಲಿ ಶ್ರೀ ಅಗ್ನಿ ಬನ್ನಿರಾಯಸ್ವಾಮಿ ಜಯಂತಿ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಭಾರತೀಯ ಪರಂಪರೆಗೆ ವಿಶೇಷವಾದ ಕೊಡುಗೆಯನ್ನು ನೀಡಿದ ಮಹಾನೀಯರು, ಕೇವಲ ಒಂದು ಜನಾಂಗಕ್ಕೆ ಸೀಮಿತವಾಗದೇ ಮಾನವ ಜನಾಂಗಕ್ಕೆ ಬಹಳಷ್ಟು ಕೊಡುಗೆ ನೀಡಿದ್ದಾರೆ. ಇಂತಹ ಮಹನೀಯರ ಜಯಂತಿಯನ್ನು ಆಚರಿಸುತ್ತಿರುವುದು ಅರ್ಥಪೂರ್ಣವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿದರು.

ಜಿಲ್ಲಾಡಳಿತದಿಂದ ಶುಕ್ರವಾರ ನಗರದ ಕುವೆಂಪು ಕಲಾ ಮಂದಿರದ ಹೇಮಾಂಗಣ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಶ್ರೀ ಅಗ್ನಿ ಬನ್ನಿರಾಯಸ್ವಾಮಿ ಜಯಂತಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಯಾವುದೇ ಜಾತಿ ಪರವಾಗಿ ನಿಲ್ಲದೇ ಎಲ್ಲಾರೂ ಸಮಾನರು, ಹಾಗೇ ಜನರಲ್ಲಿ ಸಮಾನತೆ ಗುಣಗಳನ್ನು ಸಾರಿದ ಮಹಾನ್ ವ್ಯಕ್ತಿ. ಅಂತವರ ಜಯಂತಿ ನಮ್ಮ ಜಿಲ್ಲೆಯಲ್ಲಿ ಆಚರಿಸುತ್ತಿರುವುದು ಖುಷಿ ವಿಚಾರ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತಹಸೀಲ್ದಾರ್‌ (ಗ್ರೇಡ್‌- 2) ರಾಮರಾವ್ ದೇಸಾಯಿ ಅವರು ಮಹಾನೀಯರ ಕಾರ್ಯಕ್ರಮಗಳು ನಡೆಸುವ ಮೂಲಕ ಅವರ ಆದರ್ಶಗಳನ್ನು ಜನರಿಗೆ ತಿಳಿಸುವ ಕೆಲಸ ಸರ್ಕಾರ ಮಾಡುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಸಾಹಿತಿ ಬಿ. ತಿಪ್ಪೇರುದ್ರಪ್ಪ ಉಪನ್ಯಾಸ ನೀಡಿ, ಅಗ್ನಿ ವಂಶ ಕ್ಷತ್ರಿಯರ ಕುಲ ಪುರುಷರಾದ ಶ್ರೀ ಅಗ್ನಿಬನ್ನಿ ರಾಯರ ಇತಿಹಾಸವನ್ನು ನಾವು ಅಗ್ನಿಪುರಾಣದಲ್ಲಿ ಕಾಣಬಹುದು. ಭೂಮಂಡಲದಲ್ಲಿ ಅರಾಜಕತೆ ತಾಂಡವವಾಡುತ್ತಿದ್ದಾಗ ಸಮಸ್ತ ಜೀವ ಸಂಕುಲವನ್ನು ರಕ್ಷಿಸುವ ಸಂದರ್ಭ ಒದಗಿ ಬರುತ್ತದೆ. ಅಂತಹ ಸಮಯದಲ್ಲಿ ಶಂಭು ಮಹರ್ಷಿಗಳ ನೇತೃತ್ವದಲ್ಲಿ ಸಪ್ತ ಮಹರ್ಷಿಗಳು ಸೇರಿ ಇದೀಗ ಮೌಂಟ್ ಅಬು ಎಂದು ಕರೆಯಲಾಗುವ ಅರ್ಬುದಾಂಚಲ ಪರ್ವತದ ಮೇಲೆ ಯಾಗವನ್ನು ನಡೆಸುತ್ತಾರೆ. ಅಲ್ಲಿಗೆ ಆಗಮಿಸಿದ ತ್ರಿಮೂರ್ತಿಗಳು ಯಾಗಕ್ಕೆ ಕಾಮಧೇನುವಿನ ತುಪ್ಪದಿಂದ ಆಹುತಿ ನೀಡುತ್ತಾರೆ. ಮಾತ್ರವಲ್ಲದೆ ಪರಶಿವನು ತನ್ನ ಮೂರನೇ ಕಣ್ಣಿನಲ್ಲಿ ಮೂಡಿದ ಹನಿಯನ್ನು ಕೆಂದಾವರ ಪುಷ್ಪದೊಡನೆ ಯಜ್ಞಕುಂಡಕ್ಕೆ ಅರ್ಪಣೆ ಮಾಡುತ್ತಾ. ಆಗ ಶಿವನ ಅಂಶದಿಂದ ಮೀನ ಮಾಸ ಉತ್ತರ ನಕ್ಷತ್ರದ ದಿನದಂದು ಪ್ರಜ್ವಲಿಸುವ ಅಗ್ನಿಯಿಂದ ಕುದುರೆ ಮೇಲೆ ಕುಳಿತು ಪ್ರತ್ಯಕ್ಷರಾದವರೇ ಶ್ರೀ ಅಗ್ನಿ ಬನ್ನಿ ಮಹಾರಾಜರು ಎಂದರು.

ತಲೆಯಲ್ಲಿ ಕಿರೀಟ, ಕೈಯಲ್ಲಿ ಬಿಲ್ಲು, ಪೇಟಾಯುಧ ವಕ್ಷ ಸ್ಥಳದಲ್ಲಿ ಇಂಗುಮೂಹಿತ, ಸೊಂಟದಲ್ಲಿ ವಡ್ಯಾಣ, ಭುಜಗಳಲ್ಲಿ ಭುಜಕೀರ್ತಿ ಸಿಂಹ ಮುಖ, ತೋಳ ಬಳೆಗಳು, ಮುಖದಲ್ಲಿ ಅರ್ಧ ಚಂದ್ರಾಕೃತಿ ಕುಂಕುಮ, ಕಂಠದಲ್ಲಿ ಫಲ ಪುಷ್ಪದ ಮಾಲೆ ಯಿಂದ ಕಂಗೊಳಿಸಿ ವೀರ ಅಗ್ನಿ ಮಹಾರಾಜರು ಹುಟ್ಟಿ ಬರುತ್ತಾರೆ. ಈ ತ್ರಿಮೂರ್ತಿಗಳು ಜೊತೆಗೂಡಿ ದೇವಾನು ದೇವತೆಗಳು ಸಪ್ತ ಋಷಿಗಳ ಸಮ್ಮುಖದಲ್ಲಿ ಇಂದ್ರನ ಮಗಳಾದ ಮಂತ್ರಮಾಲೆಯೊಡನೆ ವೃಷಭ ಮಾಸ ತೇದಿ ಏಳು ದಶಮಿ ಪುಷ್ಪ ನಕ್ಷತ್ರ ಕಟಕ ರಾಶಿಯಲ್ಲಿ ಅಗ್ನಿಬನ್ನಿರಾಯರೊಡನೆ ವಿವಾಹ ನಡೆಸುತ್ತಾರೆ. ಇದರಿಂದ ಜನಿಸಿದ ಸಂತಾನವೇ ಅಗ್ನಿ ವಂಶ ಕ್ಷತ್ರಿಯರು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ತಿಗಳ ಸಮಾಜದ ಮುಖಂಡರಾದ ಬಿ.ಎಸ್. ಶೇಖರ್, ಪುರುಷೋತ್ತಮ್, ಸೋಮೆಗೌಡ ಉಪಸ್ಥಿತರಿದ್ದರು.28 ಕೆಸಿಕೆಎಂ 3ಚಿಕ್ಕಮಗಳೂರಿನ ಕುವೆಂಪು ಕಲಾ ಮಂದಿರದ ಹೇಮಾಂಗಣ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಶ್ರೀ ಅಗ್ನಿ ಬನ್ನಿರಾಯಸ್ವಾಮಿ ಜಯಂತಿ ಕಾರ್ಯಕ್ರಮದಲ್ಲಿ ಬಿ. ತಿಪ್ಪೇರುದ್ರಪ್ಪ ಅವರು ಮಾತನಾಡಿದರು.