ಸಾರಾಂಶ
ಕನ್ನಡಪ್ರಭ ವಾರ್ತೆ ಕುಷ್ಟಗಿ
ಕನ್ನಡ ಸಾಹಿತ್ಯಕ್ಕೆ ಜೈನ ಕವಿಗಳ ಕೊಡುಗೆ ಅಪಾರವಾಗಿದೆ, ಪಂಪ, ರನ್ನ, ಪೊನ್ನ ಜನ್ನ ನಯಸೇನರಂತಹ ಜೈನ ಕವಿಗಳು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ ಎಂದು ಶಿಕ್ಷಕ ನಟರಾಜ ಸೋನಾರ ಹೇಳಿದರು.ಪಟ್ಟಣದ ಶ್ರೀಮರಿಶಾಂತವೀರ ಮಹಾಸ್ವಾಮಿ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕಾ ಘಟಕದ ವತಿಯಿಂದ ಪದ್ಮಾವತಿ ಹಾಗೂ ಪಾರ್ಶ್ವನಾಥ ಗೋಗಿ ಸ್ಮರಣಾರ್ಥ ಅಂಗವಾಗಿ ಕನ್ನಡ ಸಾಹಿತ್ಯದಲ್ಲಿ ಜೈನ ಕವಿಗಳ ಪಾತ್ರ ಈ ಕುರಿತು ನಡೆದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಉಪನ್ಯಾಸ ನೀಡಿ ಮಾತನಾಡಿದ ಅವರು, ಜೈನ ಧರ್ಮದ ಉಗಮವನ್ನು ಮಾನವನಲ್ಲಿ ಸಂಸ್ಕೃತಿಯನ್ನು ರೂಪಿಸಲು ಶ್ರಮಿಸಿದರು ಎನ್ನಲಾದ ಕುಲಂಧರರು (ಮನುಗಳು) ಎಂಬ ಹದಿನಾಲ್ಕು ಮಂದಿ ಜೈನಪುರಾಣ ವ್ಯಕ್ತಿಗಳ ಕಾಲಘಟ್ಟಗಳಲ್ಲಿ ಕಾಣಬಹುದು.
ಈ ಧರ್ಮದ ಬೆಳವಣಿಗೆಯನ್ನು ತೀರ್ಥಂಕರ ಕಾಲಮಾನಗಳಲ್ಲಿ ಗುರುತಿಸುತ್ತೇವೆ. ಈ ಕಾಲಘಟ್ಟಗಳು ವೇದಗಳ ಕಾಲಮಾನಕ್ಕೆ ಸರಿಸಮ ಅಥವಾ ವೇದಪೂರ್ವ ಕಾಲಘಟ್ಟವೂ ಆಗಿರಬಹುದು. ಜೈನರ ಇಪ್ಪತ್ನಾಲ್ಕನೇ ತೀರ್ಥಂಕರನಾದ ಮಹಾವೀರನು ಜೈನಮತದ ಪ್ರತಿಷ್ಠಾಪಕ. ಈತ ಬೌದ್ಧ ಧರ್ಮದ ಬುದ್ಧನಿಗಿಂತ ಸ್ವಲ್ಪ ಮುಂಚಿನವನು, ಜೈನ ಧರ್ಮವು ಕರ್ನಾಟಕಕ್ಕೆ ಕಿಪೂ ೪ನೆಯ ಶತಮಾನದ ಅಂತ್ಯದಲ್ಲಿ ಪ್ರವೇಶಿಸಿತು. ಇಂತಹ ಜೈನ ಧರ್ಮದ ತತ್ವ ಸಿದ್ಧಾಂತಗಳನ್ನು ಎಲ್ಲರೂ ಅಳವಡಿಸಿಕೊಳ್ಳುವುದು ಅವಶ್ಯ ಎಂದರು.ಕಸಾಪ ತಾಲೂಕಾಧ್ಯಕ್ಷ ವೀರೇಶ ಬಂಗಾರ ಶೆಟ್ಟರ ಮಾತನಾಡಿ, ಸಾಹಿತ್ಯ ಪರಿಷತ್ತು ಪ್ರತಿ ವರ್ಷ ಇಂತಹ ಉಪನ್ಯಾಸಗಳನ್ನು ನೀಡುವುದರ ಮೂಲಕ ಹಿರಿಯರನ್ನು ನೆನೆಸಿಕೊಳ್ಳುವ ಕಾರ್ಯ ಮಾಡುತ್ತಿದ್ದು ಆಸಕ್ತರು ದತ್ತಿದಾನಿಗಳಾಗಬಹುದು ಎಂದರು.
ಸಾಹಿತಿ ಸಿದ್ರಾಮಪ್ಪ ವಂದಾಲಿ ಮಾತನಾಡಿ, ವಿದ್ಯಾರ್ಥಿಗಳ ಜೀವನ ಹೂವಿನ ಜೀವನ, ಅದೇ ಹಾದಿ ತಪ್ಪಿದರೇ ಮುಳ್ಳಿನ ವನ, ಮೊಬೈಲ್ ಬಳಿಕೆಯಲ್ಲಿ ಜಾಗೃತಿ ಇರಬೇಕು. ನಿಮ್ಮ ಬಾಳು ವಜ್ರ ಹಾಗೂ ಬಂಗಾರ ಇದ್ದಾಗ, ನಿಮಗೆ ಪುಸ್ತಕವೇ ಗೆಳೆಯರು. ಉತ್ತಮವಾಗಿ ಅಭ್ಯಾಸ ಮಾಡಿ, ಮೊಬೈಲ್ ಬೀಡಿ ಪುಸ್ತಕ ಹಿಡಿಯಬೇಕು ಎಂದರು.ಕೆ.ಬಿ. ಸ್ಥಾವರಮಠ, ಎಂ.ಕೆ. ಹಿರೇಮಠ, ಶಿವಯ್ಯ ಗಂಧದಮಠ, ಕುಮಾರ ಬಡಿಗೇರ ಸೇರಿದಂತೆ ಇತರರಿದ್ದರು. ಕಾರ್ಯಕ್ರಮಕ್ಕೂ ಮೊದಲು ಭುವನೇಶ್ವರಿ ದೇವಿ ಹಾಗೂ ದಿ. ಪದ್ಮಾವತಿ ಹಾಗೂ ಪಾರ್ಶ್ವನಾಥ ಗೋಗಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಶಿವಲೀಲಾ ಹಿರೇಮಠ, ಸಂಜನಾ ಸಂಗೀತಾ ಕಾರ್ಯಕ್ರಮ ನಡೆಸಿಕೊಟ್ಟರು. ಕಸಾಪ ಕಾರ್ಯದರ್ಶಿ ಮಹೇಶ ಹಡಪದ ಕಾರ್ಯಕ್ರಮ ನಿರ್ವಹಿಸಿದರು.