ನಾಡಿನ ಕಲೆ ಮತ್ತು ಸಂಸ್ಕೃತಿ ಉಳಿಸಿ ಬೆಳೆಸುವಲ್ಲಿ ಜೈನ ಸಮುದಾಯದ ಮಹಿಳೆಯರ ಕೊಡುಗೆಯೂ ಅಪಾರವಾಗಿದೆ ಎಂದು ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯುವ ಪ್ರಮಾಣನ ಸಂಸ್ಥೆಯ ಅಧ್ಯಕ್ಷೆ ಲಾವಣ್ಯ ಬಲ್ಲಾಳ ಜೈನ ಹೇಳಿದರು.

ಕನ್ನಡಪ್ರಭ ವಾರ್ತೆ ಅಥಣಿ

ನಾಡಿನ ಕಲೆ ಮತ್ತು ಸಂಸ್ಕೃತಿ ಉಳಿಸಿ ಬೆಳೆಸುವಲ್ಲಿ ಜೈನ ಸಮುದಾಯದ ಮಹಿಳೆಯರ ಕೊಡುಗೆಯೂ ಅಪಾರವಾಗಿದೆ ಎಂದು ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯುವ ಪ್ರಮಾಣನ ಸಂಸ್ಥೆಯ ಅಧ್ಯಕ್ಷೆ ಲಾವಣ್ಯ ಬಲ್ಲಾಳ ಜೈನ ಹೇಳಿದರು.

ಪಟ್ಟಣದ ಹಂಸಗಾಮಿನಿ ಮಹಿಳಾ ಸಂಘ ಬುಧವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಅಹಿಂಸಾ ಪರಮೋ ಧರ್ಮ ಎಂಬ ಸಂದೇಶದಂತೆ ಜೈನ ಧರ್ಮಿಯರು ಕರುಣಾಮಯಿಗಳು. ಸಕಲ ಪ್ರಾಣಿಗಳಲ್ಲಿ ದಯ ತೋರಬೇಕು. ಹಿಂಸೆ ಒಳ್ಳೆಯದಲ್ಲ. ಸಾಕಿದ ನಾಯಿಗಳನ್ನು ಎಲ್ಲರೂ ಪ್ರೀತಿಯಿಂದ ಬೆಳೆಸುತ್ತಾರೆ. ಆದರೆ, ಬೀದಿನಾಯಿಗಳಿಗೆ ತಿನ್ನಲು ಅನ್ನ ಹಾಕದೇ ಅವುಗಳಿಗೆ ಹಿಂಸೆ ನೀಡುತ್ತಾರೆ. ಸಕಲ ಪ್ರಾಣಿಗಳಲ್ಲಿಯೂ ಕರುಣೆ ತೋರಿಸಬೇಕು. ಬೀದಿ ನಾಯಿಗಳ ನಿಯಂತ್ರಣಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.ರಾಜ್ಯ ಸರ್ಕಾರ ಅಲ್ಪಸಂಖ್ಯಾತರಿಗೆ ನೀಡುವ ಯೋಜನೆಗಳು ಮತ್ತು ಸೌಲಭ್ಯಗಳ ಸದುಪಯೋಗಪಡಿಸಿಕೊಳ್ಳಬೇಕು. ಸಮುದಾಯದ ಮಹಿಳೆಯರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ, ಸ್ವಾವಲಂಬಿ ಬದುಕಿಗೆ ಬೇಕಾಗುವ ವಿವಿಧ ಸೌಲಭ್ಯ, ಉದ್ಯೋಗವಕಾಶಗಳನ್ನು ಪಡೆದುಕೊಳ್ಳಬೇಕು. ಒಗ್ಗಟ್ಟಿನಲ್ಲಿ ಬಲವಿದೆ ಎಂಬಂತೆ ಸಂಘಟಿತರಾಗಿ ರಾಜಕೀಯ ಸ್ಥಾನ, ಮಾನಗಳನ್ನು ಪಡೆದುಕೊಳ್ಳಲು ಹೋರಾಟ ನಡೆಸುವುದು ಅಗತ್ಯವಾಗಿದೆ ಎಂದು ಕರೆ ನೀಡಿದರು.ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದು, ಅವರಿಗೆ ಶಿಕ್ಷಣ ಮತ್ತು ಕುಟುಂಬದ ಬೆಂಬಲ ದೊರೆತಾಗ ಸ್ವಾವಲಂಬಿಯಾಗಿ ಪ್ರಗತಿ ಹೊಂದಲು ಸಾಧ್ಯವಿದೆ. ದೇಶದ ಪ್ರಗತಿಯಲ್ಲಿ, ಅನೇಕ ಸಾಮಾಜಿಕ ಕಾರ್ಯಗಳಲ್ಲಿ ಮಹಿಳೆಯರ ಕೊಡುಗೆ ಅಪಾರವಾಗಿದೆ. ಮಹಿಳೆಯರು ಕುಟುಂಬದ ಅಡುಗೆಮನೆಯ ಕೆಲಸದಿಂದ ರಾಷ್ಟ್ರಪತಿ ಹುದ್ದೆಯವರೆಗೂ ಸಾಧನೆ ಮಾಡಿದ್ದಾರೆ. ಕುಟುಂಬ ನಿರ್ವಹಣೆಯ ಜೊತೆಗೆ ಅನೇಕ ಸಾಮಾಜಿಕ ಜವಾಬ್ದಾರಿಗಳು ಮಹಿಳೆಯರ ಮೇಲೆ ಇರುವುದರಿಂದ ಪ್ರತಿಯೊಬ್ಬ ಮಹಿಳೆ, ಯುವತಿ ಶಿಕ್ಷಣದಿಂದ ವಂಚಿತವಾಗಬಾರದು. ಶಿಕ್ಷಣ ಪಡೆದುಕೊಂಡ ಮಹಿಳೆ ಸ್ವಾವಲಂಬಿಯಾಗಿ ತನ್ನ ಕುಟುಂಬವನ್ನು ಆರ್ಥಿಕವಾಗಿ ಸದೃಢ ಮಾಡುವುದಲ್ಲದೆ ಅನೇಕ ಸಾಮಾಜಿಕ ಜವಾಬ್ದಾರಿಗಳನ್ನು ನಿರ್ವಹಿಸಲು ಸಮರ್ಥಳಾಗುತ್ತಾಳೆ ಎಂದು ತಿಳಿಸಿದರು.ಯರಗಟ್ಟಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕಿ ಶ್ರೀದೇವಿ ಮಗದುಮ್ಮ ಮಾತನಾಡಿ, ಮಹಿಳೆ ಅಬಲೆಯಲ್ಲ ಸಬಲೆ ಎಂಬ ಮಾತಿನಂತೆ ಶಿಕ್ಷಣ, ಕಲೆ, ಸಾಹಿತ್ಯ ಸೇರಿದಂತೆ ಸರ್ವ ರಂಗದಲ್ಲೂ ಮಹಿಳೆ ತನ್ನದೇ ಛಾಪು ಮೂಡಿಸಿ, ಪುರುಷನಿಗೆ ಸಮನಾಗಿ ಬೆಳೆದಿದ್ದಾಳೆ. ನಾಲ್ಕು ಗೋಡೆಗಳ ಮಧ್ಯೆ ಅಡುಗೆ ಮನೆಗೆ ಸೀಮಿತವಾಗಬಾರದು. ಎಲ್ಲ ರಂಗಗಳಲ್ಲಿಯೂ ಎತ್ತರಕ್ಕೆ ಬೆಳೆಯಬಲ್ಲಳು ಎಂಬುವುದನ್ನು ಅನೇಕ ಮಹಿಳೆಯರು ಸಾಧನೆ ಮಾಡಿ ತೋರಿಸಿದ್ದಾರೆ. ಅವರ ಸಾಧನೆ ಇನ್ನುಳಿದ ಮಹಿಳೆಯರಿಗೆ ಸ್ಫೂರ್ತಿಯಾಗಬೇಕು ಎಂದು ಸಲಹೆ ನೀಡಿದರು.ಹಂಸಗಾಮಿನಿ ಮಹಿಳಾ ಸಂಘದ ಅಧ್ಯಕ್ಷೆ ಜಯಶ್ರೀ ಕಿನ್ನಂಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಸಂಘ ನಡೆದ ಬಂದ ಹಾದಿ ಮತ್ತು ಕಾರ್ಯಕ್ರಮಗಳ ಕುರಿತು ವಿವರಿಸಿದರು. ಈ ವೇಳೆ ರೂಪಾಲಿ ಆಸ್ಕಿ, ಜಯಶ್ರೀ ಜಕನೂರ, ಸಾಹಿತಿ ಡಾ.ಬಾಳಾಸಾಹೇಬ ಲೋಕಾಪುರ, ಕನ್ನಡಪ್ರಭ ಮತ್ತು ಸುವರ್ಣನ್ಯೂಸ್‌ ನೀಡುವ ಎಮಿನೆಂಟ್‌ ಇಂಜನೀಯರ ಅವಾರ್ಡ್‌ ಪುರಸ್ಕೃತರಾದ ಅರುಣ ಯಲಗುದ್ರಿ, ಎಸ್.ಬಿ.ಲಟ್ಟೆ, ಡಿ.ಡಿ.ಮೆಕನಮರಡಿ, ಸಂತೋಷ್ ಬೊಮ್ಮಣ್ಣವರ, ಅಮರ ದುರ್ಗಣ್ಣವರ, ಕನ್ನಡಪ್ರಭ ಮತ್ತು ಸುವರ್ಣನ್ಯೂಸ್‌ ನೀಡುವ ಹೆಲ್ತ್‌ಕೇರ್‌ ಎಕ್ಸಲೆನ್ಸ್‌ ಅವಾರ್ಡ್‌ ಪುರಸ್ಕೃರರಾದ ಡಾ.ಸತೀಶ ಮುಗ್ಗನವರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಶರ್ಮಿಳಾ ಪಾಟೀಲ ಸ್ವಾಗತಿಸಿದರು. ದೀಪಾ ನಂದಗಾವ ನಿರೂಪಿಸಿದರು. ಶೀಲಾ ಯಲಗುದ್ರಿ ಅವರು ವಂದಿಸಿದರು.ಶಿಕ್ಷಣ, ಸಮಾಜ ಸೇವೆ, ವೈದ್ಯಕೀಯ, ಗಗನಯಾನ ಸೇರಿದಂತೆ ಪುರುಷರಷ್ಟೇ ಮಹಿಳೆ ಕೂಡ ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ತೋರಿಸಿದ್ದಾಳೆ. ಮಾತ್ರವಲ್ಲ, ಸಮಾಜ ಮತ್ತು ಕುಟುಂಬವನ್ನು ಸಮರ್ಥವಾಗಿ ನಿಭಾಯಿಸಬಲ್ಲ ಚಾಕಚಕ್ಯತೆ ಕೂಡ ಅವಳಲ್ಲಿದೆ. ಜತೆಗೆ ಆರ್ಥಿಕವಾಗಿ ಕುಟುಂಬವನ್ನು ಕೂಡ ಸರಿದಾರಿಗೆ ತರುವ ಶಕ್ತಿ ಹೊಂದಿದ್ದಾಳೆ ಮಹಿಳೆ.

-ಲಾವಣ್ಯ ಬಲ್ಲಾಳ ಜೈನ್, ಅಧ್ಯಕ್ಷೆ, ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣನ ಸಂಸ್ಥೆ.