ಸಾರಾಂಶ
ಕನ್ನಡಪ್ರಭ ವಾರ್ತೆ ಭದ್ರಾವತಿ
ಕನ್ನಡ ಜಾನಪದ ಸಾಹಿತ್ಯದ ಕೊಡುಗೆ ಅಪಾರವಾಗಿದ್ದು, ನಾವೆಲ್ಲರೂ ಕನ್ನಡ ಭಾಷೆ, ಸಾಹಿತ್ಯದ ಬಗ್ಗೆ ಹೆಚ್ಚಿನ ಜ್ಞಾನ ಹೊಂದಬೇಕಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್ ಹೇಳಿದರು.ಅವರು ಶುಕ್ರವಾರ ಹುತ್ತಾಕಾಲೋನಿ ಶ್ರೀ ವೀರಾಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಕರ್ನಾಟಕ ಜಾನಪದ ಪರಿಷತ್ ತಾಲೂಕು ಶಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿಶ್ವ ಜಾನಪದ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ವಿಶ್ವ ಜಾನಪದ ಸಾಹಿತ್ಯಕ್ಕೆ ಕನ್ನಡ ಜಾನಪದ ಸಾಹಿತ್ಯದ ಕೊಡುಗೆ ಹೆಚ್ಚಿನದ್ದಾಗಿದ್ದು, ಇಂದು ವಿಶ್ವವಿದ್ಯಾಲಯಗಳಲ್ಲಿ ಕನ್ನಡ ಜಾನಪದ ಸಾಹಿತ್ಯ ಅಧ್ಯಾಯನ ನಡೆಸಲಾಗುತ್ತಿದೆ. ನಮ್ಮ ಮಕ್ಕಳಿಗೆ ನಾವು ಕನ್ನಡ ಭಾಷೆ, ಸಾಹಿತ್ಯ ಕುರಿತು ತಿಳಿಸಿಕೊಡಬೇಕಾಗಿದೆ. ಆದರೆ ಪ್ರಸ್ತುತ ಬಹುಸಂಖ್ಯಾತರಾದ ಕನ್ನಡಿಗರ ಮಕ್ಕಳಿಗೂ ಸರಿಯಾಗಿ ಕನ್ನಡ ಭಾಷೆ ಬರುತ್ತಿಲ್ಲ. ಓದಲು, ಬರೆಯಲು ಬಾರದಿರುವುದರ ಜೊತೆಗೆ ಅವರ ತಪ್ಪುಗಳನ್ನು ತಿದ್ದಲು ಯಾರು ಸಹ ಪ್ರಯತ್ನ ಮಾಡದಿರುವುದು ವಿಪರ್ಯಾಸದ ಸಂಗತಿಯಾಗಿದೆ ಎಂದರು.ತನ್ನದೇ ಆದ ಸಾವಿರಾರು ವರ್ಷಗಳ ಪರಂಪರೆ ಹೊಂದಿರುವ ಕನ್ನಡ ಭಾಷೆ ಸಮೃದ್ಧವಾಗಿದ್ದು, ಇಂತಹ ಭಾಷೆಯ ಮೇಲೆ ಅಭಿಮಾನ ಬೆಳೆಸಿಕೊಳ್ಳುವ ಬದಲು ನಾವುಗಳು ಗೊತ್ತು ಗುರಿ ಇಲ್ಲದ ಆಂಗ್ಲ ಭಾಷೆ ವ್ಯಾಮೋಹಕ್ಕೆ ಒಳಗಾಗುತ್ತಿರುವುದು ದುರಂತದ ಸಂಗತಿಯಾಗಿದೆ ಎಂದರು.
ಜಾನಪದ ಪರಿಷತ್ ತಾಲೂಕು ಅಧ್ಯಕ್ಷ ಎಂ.ಆರ್ ರೇವಣಪ್ಪ ಅಧ್ಯಕ್ಷತೆ ವಹಿಸಿದ್ದರು. ಪರಿಷತ್ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಮೋಹನ್ ಕುಮಾರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.ಸಮುದಾಯ ಭವನ ಟ್ರಸ್ಟ್ (ಚಂದ್ರಾಲಯ) ಅಧ್ಯಕ್ಷ ಕರಿಯಪ್ಪ, ಕೋಟರಿ ಕ್ಲಬ್ ಅಧ್ಯಕ್ಷ ರಾಘವೇಂದ್ರ ಉಪಾಧ್ಯಾಯ, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಕೋಡ್ಲು ಯಜ್ಞಯ್ಯ, ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ತಾಲೂಕು ಅಧ್ಯಕ್ಷೆ ಎಂ.ಎಸ್ ಸುಧಾಮಣಿ, ಜಾನಪದ ಪರಿಷತ್ ಹಿರಿಯೂರು ಹೋಬಳಿ ಅಧ್ಯಕ್ಷ ಗೊಂದಿ ಜಯರಾಂ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಪ್ರಶಾಂತ್ ಕಾರ್ಯಕ್ರಮ ನಿರೂಪಿಸಿದರು. ಎಂ.ಆರ್. ರೇವಣಪ್ಪ ಸಂಗಡಿಗರಿಂದ ಜಾನಪದ ಗಾಯನ ನಡೆಯಿತು.