- ಪ್ರಥಮ ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಡಾ. ಗೀತಾ ಬಸವರಾಜ್

-2ನೇ ದಿನದ ಕಾರ್ಯಕ್ರಮ । ‘ದಾವಣಗೆರೆ ಜಿಲ್ಲೆಯ ಮಹಿಳಾ ಸಾಹಿತಿಗಳು’ ಉಪನ್ಯಾಸ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ದಾವಣಗೆರೆ ಬೆಣ್ಣೆ ನಗರಿ, ವಾಣಿಜ್ಯ ನಗರಿ ಹಾಗೂ ಶೈಕ್ಷಣಿಕ ನಗರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವುದರ ಜೊತೆಗೆ ಸಾಹಿತ್ಯ ನಗರಿ ಎಂದೂ ಗುರುತಿಸಿಕೊಳ್ಳುವ ಎಲ್ಲ ಅರ್ಹತೆಗಳನ್ನು ಹೊಂದಿದೆ ಎಂದು ಎ.ವಿ.ಕಮಲಮ್ಮ ಮಹಿಳಾ ಕಾಲೇಜಿನ ಉಪನ್ಯಾಸಕಿ ಡಾ.ಗೀತಾ ಬಸವರಾಜ್ ಅಭಿಪ್ರಾಯಪಟ್ಟರು.


ನಗರದ ಕುವೆಂಪು ಕನ್ನಡ ಭವನದಲ್ಲಿ ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಆಯೋಜಿಸಲಾಗಿರುವ ಪ್ರಥಮ ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ನಡೆದ 2ನೇ ದಿನದ ಕಾರ್ಯಕ್ರಮದಲ್ಲಿ ಸಾಹಿತ್ಯ ಚಿಂತನ ಮಂಥನ ಗೋಷ್ಠಿ-2 ರಲ್ಲಿ ‘ದಾವಣಗೆರೆ ಜಿಲ್ಲೆಯ ಮಹಿಳಾ ಸಾಹಿತಿಗಳು’ ವಿಷಯ ಕುರಿತು ಅವರು ಉಪನ್ಯಾಸ ನೀಡಿದರು.

ಪುರುಷರು ಸಾಮಾನ್ಯವಾಗಿ ಒಂದೇ ವಿಷಯವನ್ನು ಏಕಕಾಲದಲ್ಲಿ ವಿಶ್ಲೇಷಿಸುವ ಸಾಮರ್ಥ್ಯ ಹೊಂದಿದ್ದರೆ, ಮಹಿಳೆಯರು ಒಂದೇ ಸಂದರ್ಭದಲ್ಲಿ ಹಲವು ವಿಷಯಗಳ ಕುರಿತು ಚಿಂತನೆ, ವಿಶ್ಲೇಷಣೆ ಮತ್ತು ನಿರ್ವಹಣೆ ಮಾಡುವ ವಿಶಿಷ್ಟ ಸಾಮರ್ಥ್ಯ ಹೊಂದಿದ್ದಾರೆ. ಜಿಲ್ಲೆಯ ಮಹಿಳಾ ಸಾಹಿತ್ಯದ ಇತಿಹಾಸವನ್ನು ಅವಲೋಕಿಸಿದಾಗ ಟಿ. ಗಿರಿಜ ಅವರು ಭೂಷಣಪ್ರಾಯವಾಗಿ ಕಾಣಿಸಿಕೊಳ್ಳುತ್ತಾರೆ. ಡಾ.ಎಚ್.ಗಿರಿಜಮ್ಮ ಅವರು ಕೇವಲ ಸಾಹಿತಿಯಾಗಿ ಮಾತ್ರವಲ್ಲದೇ, ಮಹಿಳೆಯರು ಮಾನಸಿಕವಾಗಿ ಹೇಗೆ ಸಬಲರಾಗಬೇಕು ಎಂಬುದರ ಕುರಿತು ಜಾಗೃತಿ ಮೂಡಿಸಿದ ಗಟ್ಟಿಗಿತ್ತಿಯಾಗಿದ್ದರು ಎಂದು ಅವರು ಸ್ಮರಿಸಿದರು.

ಹೆಳವನಕಟ್ಟೆ ಗಿರಿಯಮ್ಮ, ಹರಪನಹಳ್ಳಿ ಭೀಮಾಬಾಯಿ, ಎಚ್.ಬಿ.ಮುಕ್ತಾ, ಅರುಂಧತಿ ರಮೇಶ್, ಸುಶೀಲಾದೇವಿ ಆರ್. ರಾವ್, ಲಲಿತಮ್ಮ ಚಂದ್ರಶೇಖರ್, ಶಶಿಕಲಾ ಕೃಷ್ಣಮೂರ್ತಿ, ಜಯಮ್ಮ ನೀಲಗುಂದ, ಮಲ್ಲಮ್ಮ ನಾಗರಾಜ್, ಟಿ.ಎಸ್. ಶೈಲಜಾ, ಸಂಧ್ಯಾ ಸುರೇಶ್, ಸತ್ಯಭಾಮ ಮಂಜುನಾಥ್, ಓಂಕಾರಮ್ಮ ರುದ್ರಮುನಿ ಸ್ವಾಮಿ, ವೀಣಾ ಕೃಷ್ಣಮೂರ್ತಿ, ಭಾಗ್ಯಲಕ್ಷ್ಮೀ ಅಮೃತಾಪುರ, ಅನ್ನಪೂರ್ಣ ಪಾಟೀಲ್, ಅನುರಾಧಾ ಬಕ್ಕಪ್ಪ, ಸುನಿತಾ ರಾಜು, ಸರೋಜ ಪಾಂಡೋಮಟ್ಟಿ, ಡಾ. ಕಾವ್ಯಶ್ರೀ ಸೇರಿದಂತೆ ಅನೇಕ ಮಹಿಳಾ ಸಾಹಿತಿಯರು ದಾವಣಗೆರೆ ಜಿಲ್ಲೆಯ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ್ದಾರೆ ಎಂದು ಹೇಳಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕರಾದ ಡಾ.ಕಾವ್ಯಶ್ರೀ ‘ವೀರ ವೀರಾಗಿಣಿ ಅಕ್ಕಮಹಾದೇವಿ’ ವಿಷಯ ಕುರಿತು ಮಾತನಾಡಿ, ಅವರು ಸಾಹಿತ್ಯ ಮತ್ತು ಅಧ್ಯಾತ್ಮದ ಅಪೂರ್ವ ಸಂಗಮದ ಪ್ರತೀಕವಾಗಿದ್ದಾರೆ. ಸಾಹಿತಿ ಶಾಂತ ಮಾಳವಾಡ ಅವರು ಅಕ್ಕಮಹಾದೇವಿ ಅವರನ್ನು ‘ವೀರ ವೀರಾಗಿಣಿ ಅಕ್ಕಮಹಾದೇವಿ’ ಎಂದು ಬಣ್ಣಿಸಿರುವುದು ಅತ್ಯಂತ ಅರ್ಥಪೂರ್ಣವಾಗಿದೆ. 12ನೇ ಶತಮಾನದಲ್ಲಿಯೇ ಸಾಮಾಜಿಕ ಸಮಸ್ಯೆಗಳು, ಮಹಿಳಾ ಶೋಷಣೆ ಹಾಗೂ ಮಹಿಳಾ ಅಸ್ಮಿತೆಯ ಪ್ರಶ್ನೆಗಳಿಗೆ ಅಕ್ಕಮಹಾದೇವಿ ಅವರು ನೀಡಿದ ಪ್ರತಿಕ್ರಿಯೆ ಅತ್ಯಂತ ದಿಟ್ಟ ಹಾಗೂ ವೈಚಾರಿಕವಾಗಿತ್ತು ಎಂದು ಅವರು ಹೇಳಿದರು.

ಅನುಭವ ಮಂಟಪವನ್ನು ಪ್ರವೇಶಿಸಿದ್ದು ಅಕ್ಕಮಹಾದೇವಿಯವರ ಬದುಕಿನ ಪ್ರಮುಖ ಘಟ್ಟವಾಗಿದೆ. ಅಲ್ಲಿ ಅವರು ತಮ್ಮ ವೈಚಾರಿಕತೆ, ಅನುಭವ ಹಾಗೂ ಆತ್ಮಚಿಂತನೆಯ ಮೂಲಕ ವಿಶಿಷ್ಟ ಸ್ಥಾನ ಪಡೆದರು. ಸ್ತ್ರೀಮುಕ್ತಿ, ಸಾಮಾಜಿಕ ಮೌಢ್ಯ, ಮೂಢನಂಬಿಕೆ, ಜಾತಿ ವ್ಯವಸ್ಥೆ ಸೇರಿದಂತೆ ಅನೇಕ ಸಾಮಾಜಿಕ ಸಮಸ್ಯೆಗಳ ವಿರುದ್ಧ ಅವರು ತಮ್ಮ ವಚನಗಳ ಮೂಲಕ ಧ್ವನಿ ಎತ್ತಿದರು. ಅಕ್ಕ ಮಹಾದೇವಿ ಅವರು ಅನುಭಾವಿಕ ಪರಂಪರೆಯಲ್ಲಿ ಅನುಭವವನ್ನು ಗಳಿಸಿದ ಶ್ರೇಷ್ಠ ಮಹಿಳೆ. ಅಪಾರವಾದ ಹೆಣ್ತನದ ಪ್ರಜ್ಞೆಯಾಗಿ, ವೈಚಾರಿಕತೆಯ ಹೆಣ್ಣುಮಗಳಾಗಿ ಅವರು ಇಂದಿಗೂ ಪ್ರಸ್ತುತವಾಗಿದ್ದಾರೆ. ರಾಜನಾಗಿದ್ದ ಪತಿಗಿಂತಲೂ ವಿಚಾರದ ಸ್ವಾತಂತ್ರ‍್ಯಕ್ಕೆ ಹೆಚ್ಚಿನ ಮಹತ್ವ ನೀಡಿ, ವೈಚಾರಿಕ ಸ್ವಾತಂತ್ರ‍್ಯವನ್ನು ಆಯ್ಕೆ ಮಾಡಿಕೊಂಡ ದಿಟ್ಟ ಮಹಿಳೆ ಅಕ್ಕಮಹಾದೇವಿ. 12ನೇ ಶತಮಾನದಲ್ಲಿಯೇ ಮಹಿಳೆಯರಿಗೆ ವೈಚಾರಿಕ ಸ್ವಾತಂತ್ರ‍್ಯದ ಅಗತ್ಯವನ್ನು ಪ್ರತಿಪಾದಿಸಿದ ಅಕ್ಕಮಹಾದೇವಿ, ಇಂದಿನ ಮಹಿಳಾ ಸಬಲೀಕರಣದ ಚಿಂತನೆಗಳಿಗೆ ಶತಮಾನಗಳ ಹಿಂದೆಯೇ ಬುನಾದಿ ಹಾಕಿದ ವೀರ ವೀರಾಗಿಣಿ ಆಗಿದ್ದಾರೆ ಎಂದು ನುಡಿದರು.

ಸಮಾರಂಭದಲ್ಲಿ ಸಮ್ಮೇಳನದ ಸರ್ವಾಧ್ಯಕ್ಷೆ ರಾಜಯೋಗಿನಿ ಬ್ರಹ್ಮಕುಮಾರಿ ಲೀಲಾಜಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ವಾಮದೇವಪ್ಪ ತೊಗಲೇರಿ , ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ರೇಣುಕಾ ಕರಿಬಸಪ್ಪ ಬೇತೂರು ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

ಅನಂತರ ಯಶಾ ದಿನೇಶ, ಸುಮತಿ ಜಯಪ್ಪ, ಮಮತಾ ನಾಗರಾಜ, ವಿಜಯಲಕ್ಷ್ಮೀ ಪಾಟೀಲ್ ತಂಡದವರು ಅಕ್ಕ ಮಹಾದೇವಿ ನಾಟಕದ ಆಯ್ದ ದೃಶ್ಯಗಳನ್ನು ಪ್ರಸ್ತುತ ಪಡಿಸಿದರು. ಮಮತಾ ನಾಗರಾಜ ಸ್ವಾಗತಿಸಿ, ಕೆ.ಸುಜಾತ ರಾಜು ವಂದಿಸಿದರು. ಗೀತಾ ಮಂಜುನಾಥ ಕಾರ್ಯಕ್ರಮ ನಿರೂಪಿಸಿದರು.

- - -

(ಬಾಕ್ಸ್‌)

* ಅದ್ಧೂರಿ ಸಮ್ಮೇಳನ ಶ್ಲಾಘನೀಯ: ಕಿರವಾಡಿ ಗಿರಿಜಮ್ಮ

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಾಪೂಜಿ ವಿದ್ಯಾಸಂಸ್ಥೆ ನಿರ್ದೇಶಕರಾದ ಕಿರವಾಡಿ ಗಿರಿಜಮ್ಮ ಮಾತನಾಡಿ, ಈ ಸಭೆಯಲ್ಲಿ ಅನೇಕ ಹಿರಿಯ ಕವಯತ್ರಿಯರು, ಸಾಹಿತಿಗಳು ತಮ್ಮ ಅನುಭವವನ್ನು ಈ ಗೋಷ್ಠಿಯಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇದು ಹೇಗೆ ನಡಿತಾ ಇದೆ ಎಂಬುದು ಆಶ್ಚರ್ಯವಾಗುತ್ತಿದೆ. ಇಂತಹ ಕಾರ್ಯಕ್ರಮದಲ್ಲಿ ಮಹಿಳೆಯರಿಂದ ಸಂಗೀತ, ಸಾಹಿತ್ಯ, ಪ್ರಾಪಂಚಿಕ, ಸಾಮಾಜಿಕ ವಿಷಯ, ವಿದ್ಯಾಭ್ಯಾಸ ಸೇರಿದಂತೆ ನೃತ್ಯ, ನಾಟಕ, ಕವಿಗೋಷ್ಠಿ, ರೂಪಕ, ಸಂವಾದ ಸೇರಿದಂತೆ ಅನೇಕ ವಿಷಯಗಳ ಕುರಿತ ಕಾರ್ಯಕ್ರಮಗಳು ನಡೆದಿವೆ. ಎಲ್ಲವನ್ನೂ ಮಹಿಳೆಯರೇ ಸೇರಿಕೊಂಡು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಬಿ.ವಾಮದೇವಪ್ಪ ಮತ್ತು ತಂಡದ ಸಹಯೋಗದಲ್ಲಿ ಇಂತಹ ಅದ್ಧೂರಿ ಸಮ್ಮೇಳನ ಮಾಡುತ್ತಿರುವುದು ಶ್ಲಾಘನೀಯ ಕಾರ್ಯ ಎಂದರು.

- - -

-9ಕೆಡಿವಿಜಿ32: ದಾವಣಗೆರೆಯಲ್ಲಿ ಭಾನುವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಆಯೋಜಿಸಿದ ಪ್ರಥಮ ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ನಡೆದ 2ನೇ ದಿನದ ಕಾರ್ಯಕ್ರಮದಲ್ಲಿ ಡಾ.ಗೀತಾ ಬಸವರಾಜ್ ಮಾತನಾಡಿದರು.-9ಕೆಡಿವಿಜಿ33: ದಾವಣಗೆರೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಆಯೋಜಿಸಿದ ಪ್ರಥಮ ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನ ಅಂಗವಾಗಿ ನಡೆದ 2ನೇ ದಿನದ ಕಾರ್ಯಕ್ರಮದಲ್ಲಿ ಸಾಹಿತ್ಯ ಚಿಂತನ ಮಂಥನ ಗೋಷ್ಠಿ ನಡೆಯಿತು.