ಸಾರಾಂಶ
ದೊಡ್ಡಬಳ್ಳಾಪುರ: ಕನ್ನಡ ನಾಡಿನ ಸಮಗ್ರ ಹಿತಾಸಕ್ತಿಯ ರಕ್ಷಣೆಯಲ್ಲಿ ಹೋರಾಟಗಾರರ ಕೊಡುಗೆ ಅನನ್ಯವಾದದ್ದು ಎಂದು ಶಾಸಕ ಧೀರಜ್ ಮುನಿರಾಜ್ ಹೇಳಿದರು.
ಇಲ್ಲಿನ ತಾಲೂಕು ಆಡಳಿತ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ನೇತೃತ್ವದಲ್ಲಿ ಡಾ. ರಾಜ್‌ಕುಮಾರ್ ಕಲಾ ಮಂದಿರ (ಪುರಭವನ)ದಲ್ಲಿ ಶುಕ್ರವಾರ ನಡೆದ 69ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಕನ್ನಡಪರ ಹೋರಾಟಗಾರರನ್ನು ಗೌರವಯುತವಾಗಿ ನಡೆಸಿಕೊಳ್ಳುವ ಮೂಲಕ ನಾಡಿನ ಅಸ್ಮಿತೆ ಪರವಾದ ಚಳವಳಿಗಳನ್ನು ಗಂಭೀರವಾಗಿ ಪರಿಗಣಿಸುವುದು ಅಗತ್ಯ. ಈ ನೆಲದ ಭಾಷೆ, ಸಂವೇದನೆಯ ಪರವಾಗಿ ದನಿಯೆತ್ತುವ ಕನ್ನಡಿಗರ ಭಾವನೆಗಳನ್ನು ಅರ್ಥ ಮಾಡಿಕೊಳ್ಳಬೇಕು. ನಮ್ಮ ನೆಲದಲ್ಲಿ ನಾವೇ ಸಾರ್ವಭೌಮರು ಎಂಬುದು ಆತ್ಮಗೌರವದ ಸಂಕೇತವಾಗಿದೆ ಎಂದು ಅಭಿಪ್ರಾಯಪಟ್ಟರು.ತಾಲೂಕು ಕಸಾಪ ಅಧ್ಯಕ್ಷ ಪಿ.ಗೋವಿಂದರಾಜು ಮಾತನಾಡಿ, ನಾಡಿನ ಚರಿತ್ರೆಯ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಕೆಲಸ ಆಗಬೇಕು. ಕನ್ನಡ ಉಳಿಸಬೇಕಾದರೆ ಕನ್ನಡವನ್ನು ಬಳಸಬೇಕು. ಸಮಕಾಲೀನ ಅಗತ್ಯತೆಗಳಿಗೆ ಪೂರಕವಾಗಿ ಭಾಷೆಯನ್ನು ಕಟ್ಟಬೇಕು. ನಾಡಿನ ಸಮಗ್ರ ಅಭಿವೃದ್ಧಿಯ ಹಿತಾಸಕ್ತಿಯನ್ನು ಆದ್ಯತೆಯಾಗಿ ಪರಿಗಣಿಸಿ ಎಲ್ಲ ವಲಯಗಳಲ್ಲಿ ಸ್ಥಳೀಯ ಚಿಂತನೆಗಳಿಗೆ ಆದ್ಯತೆ ದೊರೆಯಬೇಕು ಎಂದು ಪ್ರತಿಪಾದಿಸಿದರು.
ಜೀವಮಾನ ಸಾಧನೆ-ಕನ್ನಡ ಕಟ್ಟಾಳು ಪುರಸ್ಕಾರ:ಇದೇ ವೇಳೆ ನಂ. ಮಹದೇವ್ ಮತ್ತು ವಿ.ಪರಮೇಶ್ ಅವರಿಗೆ ಡಾ.ವೆಂಕಟರೆಡ್ಡಿ ಜೀವಮಾನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕನ್ನಡಪರ ಹೋರಾಟಗಾರರಾದ ಚೌಡಪ್ಪ, ಕೇಬಲ್ ಮುನಿರಾಜು, ಕೆ.ಎನ್.ಕುಮಾರ್, ಗಂಗರಾಜಪ್ಪ, ಶಿಕ್ಷಕರಾದ ಜಿ.ಸುರೇಶ್, ಮೊಹಿಸಿನ್ ತಾಜ್, ಪತ್ರಕರ್ತರಾದ ಗಂಗರಾಜು, ಕೆಂಪೇಗೌಡ, ರಂಗ ಕಲಾವಿದರಾದ ಎಂ.ಜಿ.ರಾಮಚಂದ್ರ, ದೀಕ್ಷಾ ಕಂಠಿ, ಸಮಾಜ ಸೇವಕರಾದ ನಯಾಜ್‌ಖಾನ್, ಅನ್ನಪೂರ್ಣ ಸುರೇಶ್, ಯುವ ಬರಹಗಾರ ಅಂಜನ್ ಅವರಿಗೆ ತಾಲೂಕು ಮಟ್ಟದ ವಾರ್ಷಿಕ ಪುರಸ್ಕಾರ ನೀಡಿ ಅಭಿನಂದಿಸಲಾಯಿತು.
ತಹಶೀಲ್ದಾರ್ ವಿಭಾ ವಿದ್ಯಾ ರಾಥೋಡ್, ನಗರಸಭೆ ಅಧ್ಯಕ್ಷೆ ಸುಮಿತ್ರಾ ಆನಂದ್, ಉಪಾಧ್ಯಕ್ಷ ರೈಲ್ವೇಸ್ಟೇಷನ್ ಮಲ್ಲೇಶ್, ಪೌರಾಯುಕ್ತ ಕಾರ್ತಿಕ್ ಈಶ್ವರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮುನಿರಾಜು, ಶಿಶು ಅಭಿವೃದ್ದಿ ಯೋಜನಾಧಿಕಾರಿ ರವಿಕುಮಾರ್ ಉಪಸ್ಥಿತರಿದ್ದರು.1ಕೆಡಿಬಿಪಿ7- ದೊಡ್ಡಬಳ್ಳಾಪುರ ತಾಲೂಕು ಆಡಳಿತದಿಂದ ಪುರಭವನದಲ್ಲಿ ಆಯೋಜಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕ ಗಣ್ಯರನ್ನು ಸನ್ಮಾನಿಸಲಾಯಿತು.