ಯಲಬುರ್ಗಾ ತಾಲೂಕಿನ ತೊಂಡಿಗಾಳ ಗ್ರಾಮದ ಮಾರುತೇಶ್ವರ ದೇವಸ್ಥಾನ ಆವರಣದಲ್ಲಿ ಶ್ರೀ ಶರಣಬಸವೇಶ್ವರರ ಪ್ರಧಾನ ವೇದಿಕೆಯಲ್ಲಿ ಆಯೋಜಿಸಿದ್ದ ೧೪ನೇ ತಾಲೂಕು ಮಟ್ಟದ ಸಾಹಿತ್ಯ ಸಮ್ಮೇಳನದ ಸಮಾರಂಭದಲ್ಲಿ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ದಿಕ್ಸೂಚಿ ಭಾಷಣ ಮಾಡಿದರು.

ಯಲಬುರ್ಗಾ: ಕನ್ನಡ ಭಾಷೆಯ ಬೆಳವಣಿಗೆ ಮತ್ತು ಪರಿಚಯವನ್ನು ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಹೇಳಿದರು.

ತೊಂಡಿಗಾಳ ಗ್ರಾಮದ ಮಾರುತೇಶ್ವರ ದೇವಸ್ಥಾನ ಆವರಣದಲ್ಲಿ ಶ್ರೀ ಶರಣಬಸವೇಶ್ವರರ ಪ್ರಧಾನ ವೇದಿಕೆಯಲ್ಲಿ ಆಯೋಜಿಸಿದ್ದ ೧೪ನೇ ತಾಲೂಕು ಮಟ್ಟದ ಸಾಹಿತ್ಯ ಸಮ್ಮೇಳನದ ಸಮಾರಂಭದಲ್ಲಿ ದಿಕ್ಸೂಚಿ ನುಡಿ ಮಾತನಾಡಿದರು. ಕನ್ನಡ ನಾಡು-ನುಡಿಯ ಉಳಿವಿಗಾಗಿ ಅನೇಕ ಮಹನೀಯರು ಹೋರಾಟ ನಡೆಸಿದ್ದಾರೆ. ಕರ್ನಾಟಕ ಏಕೀಕರಣದ ನಂತರ ಕನ್ನಡ ಭಾಷೆಗೆ ಮಹತ್ವ ದೊರೆತಿದೆ. ಕನ್ನಡ ಏಕೀಕರಣವಾಗದಿದ್ದರೆ ಕನ್ನಡದ ಅಸ್ತಿತ್ವ ಹಾಗೂ ಮಹತ್ವ ಕ್ರಮೇಣ ಮರೆಯಾಗುವ ಸಾಧ್ಯತೆಯಿತ್ತು. ಆದ್ದರಿಂದ ಭಾಷೆಯನ್ನು ಉಳಿಸುವುದರ ಜತೆಗೆ ಬೆಳೆಸುವ ಜವಾಬ್ದಾರಿಯೂ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು.

ಪಾಲಕರು ತಮ್ಮ ಮಕ್ಕಳಿಗೆ ಮಾತೃಭಾಷೆಯಾದ ಕನ್ನಡದಲ್ಲಿಯೇ ಶಿಕ್ಷಣ ಕೊಡಿಸಲು ಆದ್ಯತೆ ನೀಡಬೇಕು. ಇಂಗ್ಲಿಷ್ ಕಲಿಕೆಗೆ ವಿರೋಧವಿಲ್ಲ, ಅದೊಂದು ಸಂಪರ್ಕ ಭಾಷೆಯಾಗಿ ಇರಲಿ. ಆದರೆ ಇಂಗ್ಲಿಷ್ ಕಲಿಕೆಯ ವ್ಯಾಮೋಹದಿಂದ ಕನ್ನಡವನ್ನು ಕಡೆಗಣಿಸಬಾರದು. ಕನ್ನಡದಲ್ಲಿ ಓದಿದರೆ ಮಕ್ಕಳಿಗೆ ಭವಿಷ್ಯವಿಲ್ಲ ಎಂಬ ಕೀಳರಿಮೆ ಹಾಗೂ ಭ್ರಮೆಯಿಂದ ಪಾಲಕರು ಹೊರಬರಬೇಕು. ಜನರ ಒತ್ತಾಯದ ಮೇರೆಗೆ ಸರ್ಕಾರ ಕನ್ನಡ ಶಾಲೆಗಳಲ್ಲಿಯೂ ಕಾನ್ವೆಂಟ್ ಮಾದರಿಯ ಶಿಕ್ಷಣ ವ್ಯವಸ್ಥೆ ಜಾರಿಗೆ ತರಲಾಗಿದೆ ಎಂದು ತಿಳಿಸಿದರು.

ಹಿರಿಯ ಸಾಹಿತಿ ಕೆ.ಬಿ. ಬ್ಯಾಳಿ ಮಾತನಾಡಿ, ಕನ್ನಡ ಭಾಷೆ ಉಳಿಸುವ ಜತೆಗೆ ಕನ್ನಡ ಶಾಲೆಗಳನ್ನು ಸಂರಕ್ಷಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.

ಹಿರಿಯ ಪತ್ರಕರ್ತ ಹಾಗೂ ಸಾಹಿತಿ ಬಸವರಾಜ ಬಿನ್ನಾಳ ಅವರು ಸರ್ವಾಧ್ಯಕ್ಷರ ಪರಿಚಯ ನುಡಿ ಹೇಳಿದರು. ಕಸಾಪ ಜಿಲ್ಲಾಧ್ಯಕ್ಷ ಶರಣೇಗೌಡ ಪೊಲೀಸ್ ಪಾಟೀಲ್ ಪ್ರಾಸ್ತಾವಿಕವಾಗಿ ಮಾತನಾಡಿದರು.ಗೌರವ ಸನ್ಮಾನ ಬೇಡ-ರಾಯರಡ್ಡಿ: ತೊಂಡಿಹಾಳದಲ್ಲಿ ನಡೆದ ತಾಲೂಕು ಮಟ್ಟದ ೧೪ನೇ ಸಾಹಿತ್ಯ ಸಮ್ಮೇಳನದಲ್ಲಿ ಕಸಾಪ ತಾಲೂಕು ಘಟಕದಿಂದ ಸಚಿವರನ್ನು ಸನ್ಮಾನಿಸಲು ಮುಂದಾದಾಗ ಬಸವರಾಜ ರಾಯರಡ್ಡಿ ತಿರಸ್ಕರಿಸಿದರು. ಈ ವರ್ಷ ತೀವ್ರ ಬರಗಾಲ ಇರುವುದರಿಂದ ಸನ್ಮಾನ ಬೇಡ. ಕೊಪ್ಪಳ ಜಿಲ್ಲೆಯ ಎಲ್ಲ ತಾಲೂಕುಗಳನ್ನು ಬರಗಾಲ ಪೀಡಿತ ಪ್ರದೇಶಗಳೆಂದು ಘೋಷಿಸಿ, ರಾಜ್ಯದ ಪ್ರಕೃತಿ ವಿಕೋಪದಡಿ ಪರಿಹಾರ ನೀಡುವ ಉದ್ದೇಶ ಹೊಂದಲಾಗಿದ್ದು, ಈಗಾಗಲೇ ರೈತರ ಖಾತೆಗೆ ₹೫ ಸಾವಿರ ತಾತ್ಕಾಲಿಕ ಪರಿಹಾರ ನೀಡಲಾಗುತ್ತಿದೆ ಎಂದು ರಾಯರಡ್ಡಿ ಹೇಳಿದರು.

ರೈತರ ಭೂಮಿಯನ್ನು ಸೋಲಾರ್, ವಿಂಡ್ ಪವರ್ ಕಂಪನಿಗಳಿಗೆ ಮಾರಾಟ ಮಾಡಬೇಡಿ: ರೈತರು ಯಾವುದೇ ಕಾರಣಕ್ಕೂ ತಮ್ಮ ಕೃಷಿ ಭೂಮಿಯನ್ನು ಸೋಲಾರ್ ಹಾಗೂ ವಿಂಡ್ ಪವರ್ ಕಂಪನಿಗಳಿಗೆ ಮಾರಾಟ ಮಾಡಬಾರದು ಎಂದು ರೈತ ಮುಖಂಡ ಶರಣಪ್ಪ ಅರಕೇರಿ ಹೇಳಿದರು.

ತಾಲೂಕಿನ ತೊಂಡಿಹಾಳದಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದಿಂದ ನಡೆದ ೧೪ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅವರು ಮಾತನಾಡಿದರು. ಸಮತೋಲನ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು. ಕೃಷಿಯೇ ಬದುಕಿಗೆ ದಾರಿದೀಪವಾಗಿದೆ. ರಾಸಾಯನಿಕ ಕೃಷಿ ಪದ್ಧತಿ ಕಡಿಮೆ ಮಾಡಿ ಸಾವಯವ ಕೃಷಿಗೆ ಒತ್ತು ನೀಡುವ ಮೂಲಕ ಭೂಮಿಯ ಫಲವತ್ತತೆ ಕಾಪಾಡಬೇಕು. ಈ ಭಾಗದಲ್ಲಿ ಹಲವು ವರ್ಷಗಳಿಂದ ಮಳೆ ಅಭಾವ ಹಾಗೂ ಬರಗಾಲದ ಸಮಸ್ಯೆ ಎದುರಾಗುತ್ತಿದೆ. ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ರೈತರು ಖಾಸಗಿ ಕಂಪನಿಗಳಿಗೆ ಭೂಮಿ ಮಾರಾಟ ಮಾಡುತ್ತಿರುವುದರಿಂದ ಕೃಷಿಯಿಂದ ವಂಚಿತರಾಗುತ್ತಿದ್ದಾರೆ. ರೈತರ ಬೆಳೆಗಳಿಗೆ ಸಕಾಲದಲ್ಲಿ ಸೂಕ್ತ ಬೆಲೆ ನೀಡುವಲ್ಲಿ ನಿರ್ಲಕ್ಷ್ಯ ವಹಿಸಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಪ್ರಸ್ತುತ ಪರಿಸ್ಥಿತಿಯಲ್ಲಿ ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಳ್ಳುವುದು ಅತ್ಯಗತ್ಯ. ಕೃಷಿ ನಾಶವಾದರೆ ಮಾನವ ಕುಲಕ್ಕೆ ಗಂಭೀರ ಸಮಸ್ಯೆಗಳು ಎದುರಾಗಲಿವೆ. ಆದ್ದರಿಂದ ಮಕ್ಕಳಿಗೆ ಕೃಷಿಯ ಮಹತ್ವದ ಕುರಿತು ಮಾಹಿತಿ ನೀಡಿ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.ನಿವೃತ್ತ ಶಿಕ್ಷಕ ಹಾಗೂ ಹಿರಿಯ ಸಾಹಿತಿ ಆರ್.ಪಿ. ರಾಜೂರು ಮಾತನಾಡಿದರು. ಸಮ್ಮೇಳನಾಧ್ಯಕ್ಷ ವೀರಣ್ಣ ವಾಲಿ, ಕಸಾಪ ತಾಲೂಕು ಅಧ್ಯಕ್ಷ ಬಾಲದಂಡಪ್ಪ ತಳವಾರ, ಅಮರಪ್ಪ ಕಲಬುರಗಿ, ಅಮರೇಶ ಹುಬ್ಬಳ್ಳಿ, ಸುರೇಶಗೌಡ ಶಿವನಗೌಡ್ರು, ಈಶಪ್ಪ ಮಳಗಿ, ಶೇಖರ ಗುರಾಣಿ, ವೈ.ಜಿ.ಪಾಟೀಲ್, ಕಳಕಪ್ಪ ತಳವಾರ್, ವೀರಣ್ಣ ಬಂಡಿಹಾಳ, ಮಹಾಂತೇಶ ಛಲವಾದಿ ಸೇರಿದಂತೆ ರೈತರು ಇದ್ದರು.