ಲಕ್ಷ್ಮೇಶ್ವರ: ಕನ್ನಡ ನಾಡಿನ ಸಾಧಕಿಯರ ಜೀವನ ಮತ್ತು ಕಠಿಣ ಪರಿಶ್ರಮವು ಕೇವಲ ಅವರ ಸಾಧನೆಯಲ್ಲ, ಬದಲಾಗಿ ಯುವ ಪೀಳಿಗೆಗೆ, ವಿಶೇಷವಾಗಿ ಹುಡುಗಿಯರಿಗೆ ತಮ್ಮ ಕನಸು ನನಸಾಗಿಸಿಕೊಳ್ಳಲು ದೊಡ್ಡ ಪ್ರೇರಣೆಯಾಗಿದೆ ಎಂದು ಉಪನ್ಯಾಸಕಿ ಅಮೃತಾ ಗುಡಗೇರಿ ತಿಳಿಸಿದರು.

ಪಟ್ಟಣದ ರಾಜರಾಜೇಶ್ವರಿ ಮಹಿಳಾ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಕನ್ನಡ ನಾಡಿನ ಅನನ್ಯ ಸಾಧಕಿಯರು ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ಕಿತ್ತೂರು ರಾಣಿ ಚೆನ್ನಮ್ಮರಂತಹ ಐತಿಹಾಸಿಕ ನಾಯಕಿಯರಿಂದ ಹಿಡಿದು, ಪರಿಸರ ಕ್ಷೇತ್ರದಲ್ಲಿ ಸಾಲುಮರದ ತಿಮ್ಮಕ್ಕ, ತುಳಸಿಗೌಡ, ಆರೋಗ್ಯ ಸೇವೆಯಲ್ಲಿ ಸೂಲಗಿತ್ತಿ ನರಸಮ್ಮ ಸಾಹಿತ್ಯ ಮತ್ತು ಸಮಾಜ ಸೇವೆಯಲ್ಲಿ ಸುಧಾಮೂರ್ತಿಯವರಂತಹ ಮಹಿಳೆಯರು ದೇಶದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದರು.

ರುಕ್ಮಿಣಿ ಬಾಯಿ ಪೂಜಾರ ಮಾತನಾಡಿ, ಮಹಿಳಾ ಸಾಧಕಿಯರು ಸಮಾಜದ ಬೆನ್ನೆಲುಬು ಮತ್ತು ಪ್ರಗತಿಯ ಸಂಕೇತ. ಪುರುಷ ಪ್ರಧಾನ ಸಮಾಜದ ತಡೆಗೋಡೆ ಮುರಿದು, ರಾಜಕೀಯ, ಸಾಮಾಜಿಕ, ಶಿಕ್ಷಣ, ಕ್ರೀಡೆ, ವಿಜ್ಞಾನ, ಸಾಹಿತ್ಯ ಮತ್ತು ತಂತ್ರಜ್ಞಾನ, ಉದ್ಯಮದಂಥ ವಿವಿಧ ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆ ಕನ್ನಡ ನಾಡಿನ ಮಹಿಳೆಯರು ಮಾಡಿದ್ದಾರೆ. ಕೇವಲ ಮನೆಗೆ ಸೀಮಿತವಾಗಿದ್ದ ಮಹಿಳೆ ಜಗತ್ತಿನ ಯಾವುದೇ ಕ್ಷೇತ್ರದಲ್ಲಿ ಪುರುಷರಿಗೆ ಸಮಾನವಾಗಿ ಅಥವಾ ಅವರಿಗಿಂತ ಹೆಚ್ಚಾಗಿ ಸಾಧನೆ ಮಾಡಬಲ್ಲಳು ಎಂಬುದನ್ನು ಸಾಬೀತುಪಡಿಸಿದ್ದಾಳೆ ಎಂದರು.

ಸಮಾರಂಭದಲ್ಲಿ ವೇದಿಕೆಯ ಅಧ್ಯಕ್ಷೆ ಹಿರಿಯ ಮಹಿಳಾ ಸಾಹಿತಿ ಲಲಿತಾ ಕೆರಿಮನಿ, ಮಾಲಾದೇವಿ ದಂಧರಗಿ ಲಕ್ಷ್ಮವ್ವ ಆಚಾರಿ, ವಿಜಯಲಕ್ಷ್ಮಿ ಬಾಳಿಕಾಯಿ, ನಿರ್ಮಲಾ ಅರಳಿ, ಪ್ರತಿಮಾ ಮಹಾಜನ ಶೆಟ್ಟರ, ಸಾವಿತ್ರಿಬಾಯಿ ಗುಡಿಗೇರಿ, ಜಯಶ್ರೀ ಮತ್ತಿಕಟ್ಟಿ, ಅಕ್ಕಮಹಾದೇವಿ ಮಳಲಿ, ಲತಾ ತಟ್ಟಿ, ಕಾಂಚನಮಾಲಾ ಹಸರೆಡ್ಡಿ, ಸೋಮಕ್ಕ ಪಾಟೀಲ, ಮಲ್ಲವ್ವ ಹಂಚಿನಾಳ, ದ್ರಾಕ್ಷಾಯಿಣಿ ಗಂಟಾಮಠ ಇದ್ದರು. ಶಿಲ್ಪಾ ಯಾಳಗಿ ಗೌರಾ ಸಂಗಪ್ಪಶೆಟ್ಟರ, ಅಂಕಿತಾ ಅರಳಿ, ನಂದಿತಾ ಮಾಳವಾಡ ಕಾರ್ಯಕ್ರಮ ನಿರ್ವಹಿಸಿದರು.