The contributions made by Bangarappa and Kagodu are invaluable.

-ತಾಲೂಕು ಈಡಿಗ ಸಂಘದ ಅಧ್ಯಕ್ಷ ರವಿಕುಮಾರ್ ಅಭಿಮತ । ಸಹಕಾರಿ ಸಂಘದ ಉದ್ಘಾಟನೆಕನ್ನಡಪ್ರಭ ವಾರ್ತೆ ಆನಂದಪುರ

ಈಡಿಗ ಸಮುದಾಯ ಆರ್ಥಿಕವಾಗಿ ಅಭಿವೃದ್ಧಿಯಾಗಲು ಬಂಗಾರಪ್ಪ ಹಾಗೂ ಕಾಗೋಡು ತಿಮ್ಮಪ್ಪ ನೀಡಿದ ಕೊಡುಗೆ ಅಮೂಲ್ಯ ಎಂದು ಸಾಗರ ತಾಲೂಕು ಈಡಿಗ ಸಂಘದ ಅಧ್ಯಕ್ಷ ಎಚ್. ಆರ್. ರವಿಕುಮಾರ್ ತಿಳಿಸಿದರು.

ಆನಂದಪುರದಲ್ಲಿ ನಡೆದ ನೂತನ ನಾರಾಯಣ ಗುರು ಪ್ರಗತಿ ಸೌಹಾರ್ದ ಸಹಕಾರ ಸಂಘ ಹಾಗೂ 172ನೇ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತ್ಯುತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸಮಾಜದಲ್ಲಿನ ಅನಿಷ್ಠ ಪದ್ಧತಿಯನ್ನು ತೊಡೆದು ಹಾಕಿ ಸಮಾಜಕ್ಕೆ ಶಿಕ್ಷಣ ನೀಡುವಲ್ಲಿ ಬ್ರಹ್ಮಶ್ರೀನಾರಾಯಣ ಗುರುಗಳು ಶ್ರಮಿಸಿದರು ಎಂದರು.

ಸಾಗರ ಮತ್ತು ಹೊಸನಗರ ತಾಲೂಕು ವ್ಯಾಪ್ತಿಯಲ್ಲಿ ಅತಿ ಹೆಚ್ಚು ಈಡಿಗ ಸಮುದಾಯ ಪ್ರಭಾವವಾಗಿದ್ದು, ಬಂಗಾರಪ್ಪನವರು ಮುಖ್ಯಮಂತ್ರಿ ಆಗಿದ್ದಾಗ, ರೈತರಿಗೆ ಉಚಿತ ವಿದ್ಯುತ್ ವ್ಯವಸ್ಥೆ ನೀಡಿದ್ದು, ಕಾಗೋಡು ತಿಮ್ಮಪ್ಪನವರು ರೈತರಿಗೆ ಭೂಮಿಯನ್ನು ನೀಡುವುದರ ಮೂಲಕ ಈಡಿಗ ಸಮಾಜದ ಆರ್ಥಿಕ ಅಭಿವೃದ್ಧಿ ಹೆಚ್ಚಿಸುವಲ್ಲಿ ಶ್ರಮಿಸಿದರು ಎಂದರು.

ಬೀಗರ ಊಟ ಕೈಬಿಡಿ:

ಈಡಿಗ ಸಮುದಾಯದಲ್ಲಿ ಭರ್ಜರಿಯಾಗಿ ಬೀಗರ ಊಟವನ್ನು ಮಾಡುತ್ತಿದ್ದು, ಇದನ್ನು ಮುಂದಿನ ದಿನಗಳಲ್ಲಿ ಸಂಪೂರ್ಣವಾಗಿ ಕೈ ಬಿಡಬೇಕೆಂದರು. ಸ್ವಚ್ಛ ಹಾಗೂ ಪ್ರಾಮಾಣಿಕವಾಗಿ ಸಹಕಾರಿ ಸಂಘಗಳನ್ನು ನಡೆಸಿಕೊಂಡಿ ಬಂದಾಗ ಮಾತ್ರ ಯಶಸ್ವಿಯಾಗಲು ಸಾಧ್ಯ ಎಂದರು.

ಮಾಜಿ ಸಚಿವ ಹರತಾಳು ಹಾಲಪ್ಪ ಮಾತನಾಡಿ, ಜೀವನ ಇರುವುದು ಜೀವಿಸುವುದಕ್ಕೆ ಹೊರತು ಸವೆಸುವುದಕಲ್ಲ, ಸಹಕಾರಿ ಸಂಘಗಳ ಮೂಲಕ ಆರ್ಥಿಕವಾಗಿ ಹಿಂದುಳಿದವರನ್ನು ಮೇಲೆತ್ತುವ ಪ್ರಯತ್ನ ಮಾಡಬೇಕು. ಬಂಗಾರಪ್ಪ, ಕಾಗೋಡು ತಿಮ್ಮಪ್ಪ, ಗಣಪತಿಯಪ್ಪ, ಸ್ವಾಮಿರಾವ್, ಜನಾರ್ದನ ಪೂಜಾರಿ ಅವ ರಂತಹ ನಾಯಕರ ತಮ್ಮ ಭಾಗದಲ್ಲಿ ಹೋರಾಟ ನಡೆಸಿದ ಪ್ರತಿಫಲವಾಗಿ ಸಮುದಾಯದವರು ಆರ್ಥಿಕವಾಗಿ ಅಭಿವೃದ್ಧಿ ಹೊಂದಿದ್ದೇವೆ. ಸಹಕಾರಿ ಸಂಘಗಳಲ್ಲಿ ಸಾಲ ಕೊಡುವ ಮೊದಲು ಸಾಲದ ಉದ್ದೇಶವೇನೆಂದು ತಿಳಿದು ಸಾಲವನ್ನು ನೀಡಿ ಎಂದು ಸಲಹೆ ನೀಡಿದರು. ಅಲ್ಲದೆ ರೈತರಿಗೆ ಸರ್ಕಾರದಿಂದ ಯಾವುದೇ ಸಾಲ ಮನ್ನವಾಗುವುದಿಲ್ಲ ಎಂದು ತಿಳಿಸಿದರು.

ಗುರುಗಳ ಆದರ್ಶ ತತ್ವ:

ನಿಟ್ಟೂರು ಮಠದ ಶ್ರೀ ರೇಣುಕಾ ನಂದ ಸ್ವಾಮಿ ಮಾತನಾಡಿ, ಸಹಕಾರಿ ಸಂಘಗಳು ಪ್ರಾರಂಭಿಸುವುದರ ಮೂಲಕ ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದವರನ್ನು ಅಭಿವೃದ್ಧಿ ಮಾಡುವ ಉದ್ದೇಶದಿಂದಾಗಬೇಕು. ಅಲ್ಲದೆ ಸಮಾಜದವರು ಬ್ರಹ್ಮಶ್ರೀ ನಾರಾಯಣ ಗುರುಗಳ ಆದರ್ಶ ತತ್ವವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.

ಸಹಕಾರಿ ಸಂಘದ ಉಪಾಧ್ಯಕ್ಷ ಶರತ್ ನಾಗಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಹಕಾರಿ ಸಂಘದ ಅಧ್ಯಕ್ಷ ಬಂಗಾರಪ್ಪ ದಾಸನು ವಹಿಸಿದ್ದರು. ಶ್ರೀ ಯೋಗೇಂದ್ರ ಅವಧೂತ ಶ್ರೀ, ಜಿಪಂ ಮಾಜಿ ಸದಸ್ಯರಾದ ರತ್ನಾಕರ ಹೊನಗೋಡ್, ಅನಿತಾ ಕುಮಾರಿ, ತಾಲೂಕು ಯೋಜನಾ ಸಮಿತಿಯ ಸದಸ್ಯ ಸೋಮಶೇಖರ ಲಾವಿಗೆರೆ, ಚೇತನ್ ರಾಜ್ ಕಣ್ಣೂರ್, ಯುವ ಮುಖಂಡ ಕೆ.ಎಸ್ ಪ್ರಶಾಂತ್ ಸಾಗರ್, ಹೊಸನಗರ ಸಹಕಾರಿ ಸಂಘದ ಅಧ್ಯಕ್ಷ ಮುರುಳಿಧರ್, ಹೇಮರಾಜ್ ಮೆಣಸಿನ ಸರ, ಬಸವರಾಜ್, ರಮಾನಂದ್ ಸಾಗರ್, ವೀರಾಂಜನೇಯ ಸೇವಾ ಟ್ರಸ್ಟ್ ಅಧ್ಯಕ್ಷ ಕೆ. ಹಾಲಪ್ಪ ಮಡ್ಡಿ, ದೇವೇಂದ್ರಪ್ಪ ಯಲಕುಂದ್ಲಿ, ರೈತ ಸಂಘದ ಜಿಲ್ಲಾಧ್ಯಕ್ಷ ವೀರೇಶ್ ಶಿರವಾಳ, ಸಹಕಾರಿ ಸಂಘದ ನಿರ್ದೇಶಕರಾದ ರೇವತಿ, ಶಾರದಾ, ದೇವೇಂದ್ರ, ಪ್ರಕಾಶ್ ಕಣ್ಣೂರ್ ಇದ್ದರು.

ಫೋಟೋ: 25 ಎ, ಎನ್, ಪಿ 1

ಆನಂದಪುರದಲ್ಲಿ ನಡೆದ ಬ್ರಹ್ಮಶ್ರೀ ನಾರಾಯಣ ಗುರುಗಳ 172 ನೇ ಜಯಂತೋತ್ಸವ, ನೂತನ ಸಹಕಾರಿ ಸಂಘವನ್ನು ಸಾಗರ ತಾಲೂಕು ವಿಡಿಗ ಸಂಘದ ಅಧ್ಯಕ್ಷ ಹೆಚ್. ಆರ್ ರವಿಕುಮಾರ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ರೇಣುಕಾ ನಂದ ಸ್ವಾಮೀ, ಯೋಗೇಂದ್ರ ಅವಧೂತ ಇದ್ದರು.