ಸಾರಾಂಶ
ಮಂಡ್ಯ: ಟ್ಯೂಷನ್‌ಗೆ ಬಂದಿದ್ದ ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆಗೈದಿದ್ದ ಶಿಕ್ಷಕನಿಗೆ ಜೀವಾವಧಿ ಶಿಕ್ಷೆ ವಿಧಿಸಿ, ಮಂಡ್ಯ ಜಿಲ್ಲಾ 1ನೇ ತ್ವರಿತಗತಿ ನ್ಯಾಯಾಲಯ ಆದೇಶ ಹೊರಡಿಸಿದೆ. ಮಳವಳ್ಳಿ ಪಟ್ಟಣದಲ್ಲಿ ಟ್ಯೂಷನ್ ಸೆಂಟರ್ ನಡೆಸುತ್ತಿದ್ದ ಕಾಂತರಾಜು (52) ಶಿಕ್ಷೆಗೊಳಗಾದ ಆರೋಪಿ. ಈತ 2022ರ ಅಕ್ಟೋಬರ್‌ನಲ್ಲಿ ಟ್ಯೂಷನ್‌ಗೆ ಬಂದಿದ್ದ ಬಾಲಕಿಗೆ ಚಾಕೊಲೇಟ್ ಕೊಡಿಸುವುದಾಗಿ ಪುಸಲಾಯಿಸಿ ಸಮೀಪದಲ್ಲೇ ಇದ್ದ ಗಲ್ಲಿಗೆ ಕರೆದೊಯ್ದು ಅತ್ಯಾಚಾರವೆಸಗಿದ್ದ. ನಂತರ ಬಾಲಕಿಯನ್ನು ಕೊಲೆ ಮಾಡಿ ಮಳವಳ್ಳಿ ಪಟ್ಟಣದ ಮೈಸೂರು ರಸ್ತೆಯಲ್ಲಿರುವ ಮಯೂರ ಬೇಕರಿ ಹಿಂಭಾಗದಲ್ಲಿ ನಿರ್ಮಾಣ ಹಂತದ ಮನೆಯ ಕಟ್ಟಡದ ನೀರಿನ ಸಂಪಿಗೆ ಬಾಲಕಿ ಶವವನ್ನು ಹಾಕಿದ್ದನು ಎನ್ನಲಾಗಿದೆ. ಈ ಪ್ರಕರಣದ ತನಿಖೆ ನಡೆಸಿದ ಮಳವಳ್ಳಿ ಪಟ್ಟಣ ಠಾಣೆಯ ಪೊಲೀಸರು ಆರೋಪಿ ಕಾಂತರಾಜುನನ್ನು ಬಂಧಿಸಿ ವಿಚಾರಣೆಗೊಳಪಡಿಸಿದ ಬಳಿಕ ಹಲವು ಸಾಕ್ಷ್ಯಗಳನ್ನು ಕಲೆ ಹಾಕಿ ನ್ಯಾಯಾಲಯಕ್ಕೆ ಈತನ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ 1ನೇ ತ್ವರಿತಗತಿ ನ್ಯಾಯಾಲಯದ ನ್ಯಾಯಾಧೀಶರಾದ ಮಂಜುಳಾ ಇಟ್ಟಿ ಅವರು ಆರೋಪಿ ಕಾಂತರಾಜು ಆರೋಪ ಸಾಭೀತಾದ ಹಿನ್ನೆಲೆಯಲ್ಲಿ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಪ್ರಾಸಿಕ್ಯೂಷನ್ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ವಿ.ಎಸ್. ಭಟ್ ಅವರು ಸಮರ್ಥವಾಗಿ ವಾದ ಮಂಡಿಸಿದ್ದರು.