ಸಾರಾಂಶ
ಕನ್ನಡಪ್ರಭ ವಾರ್ತೆ ಬೀದರ್
ಜಗದ್ಗುರು ಪಂಚಾಚಾರ್ಯ ಪುಣ್ಯಾಶ್ರಮ ನಿರ್ಮಾಣದಲ್ಲಿ ಜಿಲ್ಲೆ ಎಲ್ಲಾ ಜನಪ್ರತಿನಿಧಿಗಳು ಹಾಗೂ ಮುಖಂಡರು ಸೇರಿ ಅಪಾರ ಭಕ್ತಗಣ ಸಹಕಾರ ನೀಡಿದ್ದಾರೆ ಎಂದು ರಂಭಾಪುರಿ ಪೀಠದ ಜಗದ್ಗುರು ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ತಿಳಿಸಿದರು.ಅವರು ಭಾಲ್ಕಿ ರಸ್ತೆಯಲ್ಲಿರುವ ಜಗದ್ಗುರು ಪಂಚಾಚಾರ್ಯ ಪುಣ್ಯಶ್ರಮದಲ್ಲಿ ಜರುಗಿದ ಪತ್ರಿಕಾ ದಿನಾಚರಣೆ ಹಾಗೂ ಸೇವಾರ್ಥಿಗಳಿಗೆ ಸನ್ಮಾನ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿ, ವೇದಮೂರ್ತಿ ಷಣ್ಮುಖಯ್ಯ ಸ್ವಾಮಿ ಮುಂದಾಳತ್ವ ವಹಿಸಿಕೊಂಡು ಈ ಭವ್ಯ ಮಂದಿರ ನಿರ್ಮಾಣ ಮಾಡುವಲ್ಲಿ ಹಗಲಿರುಳು ಶ್ರಮಿಸಿದ್ದಾರೆ. ನಿಜಕ್ಕೂ ನಮಗೆ ಸಂತಸ ತಂದಿದೆ ಎಂದರು. ಶೀಘ್ರವೇ ಸಮರ್ಥ ಉತ್ತರಾಧಿಕಾರಿ ಇಲ್ಲಿ ನೇಮಕ ಮಾಡಿ ಬರುವ ಭಕ್ತಾದಿಗಳಿಗೆ ದರ್ಶನಾಶಿರ್ವಾದ ಹಾಗೂ ಪೂಜಾದಿ ಕಾರ್ಯಕ್ರಮಗಳು ನಡೆಯುವಂತೆ ನೋಡಿಕೊಳ್ಳಲಾಗುವುದು ಎಂದರು.
ಬುಡಾ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ಮಾತನಾಡಿ, ಒಂದು ವರ್ಷದ ಹಿಂದೆ ಇಲ್ಲಿ ಸರಿಯಾಗಿ ಜಗದ್ಗುರುಗಳು ಉಳಿದುಕೊಳ್ಳಲು ಸರಿಯಾದ ವಸತಿ ವ್ಯವಸ್ಥೆ ಇರಲಿಲ್ಲ. ಆದರೆ ಇಂದು ಇಂಥಹ ಭವ್ಯ ಮಂದಿರ, ವಸತಿ ವ್ಯವಸ್ಥೆಯಾಗಿದ್ದನ್ನು ಕಂಡು ನನಗೆ ಅತೀವ ಸಂತೋಷವಾಗಿದೆ. ಜಿಲ್ಲೆಯಲ್ಲಿ ಒಂದು ವೀರಶೈವ ಆಸ್ಪತ್ರೆ ನಿರ್ಮಾಣ ಆಗಬೇಕೆಂಬುದು ಶ್ರೀಗಳ ಕನಸಿದೆ. ಅದಕ್ಕೆ ಬೇಕಾಗುವ ಅಗತ್ಯ ಸಹಕಾರ ನೀಡಲಾಗುವುದು ಎಂದು ಜಾಬಶೆಟ್ಟಿ ತಿಳಿಸಿದರು.ಅಖಿಲ ಭಾರತ ವೀರಶೈವ ಮಹಾಸಭೆ ಜಿಲ್ಲಾಧ್ಯಕ್ಷ ವೈಜಿನಾಥ ಕಮಠಾಣೆ ಮಾತನಾಡಿದರು. ಇದೇ ವೇಳೆ ವಿದ್ಯುನ್ಮಾನ ಹಾಗೂ ಮುದ್ರಣ ಮಾಧ್ಯಮದ ಸಂಪಾದಕರು, ವರದಿಗಾರರು ಹಾಗೂ ಛಾಯಾಗ್ರಾಹಕರನ್ನು ವಿಶೇಷವಾಗಿ ರುದ್ರಾಕ್ಷಿ ಮಾಲೆ ತೊಡಿಸುವ ಮೂಲಕ ರಂಭಾಪುರಿ ಶ್ರೀಗಳು ಸನ್ಮಾನಿಸಿ ಗೌರವಿಸಿದರು. ಅಲ್ಲದೇ ಪುಣ್ಯಾಶ್ರಮದ ಜೀರ್ಣೋದ್ಧಾರಕ್ಕೆ ತನು ಮನ ಧನದಿಂದ ಸಹಕರಿಸಿದ ಸೇವಾರ್ಥಿಗಳಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಹುಡಗಿ ವೀರೂಪಾಕ್ಷ ಶಿವಾಚಾರ್ಯರು, ತಮಲೂರಿನ ಶಿವಾನಂದ ಶಿವಾಚಾರ್ಯರು, ಪುಣ್ಯಾಶ್ರಮದ ಸಂಚಾಲಕರಾದ ವೇ.ಷಣ್ಮುಖಯ್ಯ ಸ್ವಾಮಿ, ಉದ್ಯಮಿ ಶಿವಶರಣಪ್ಪ ಸೀರಿ, ಹೃದಯರೋಗ ತಜ್ಞ ಡಾ. ನಿತಿನ್ ಗುದಗೆ, ಏಕತಾ ಫೌಂಡೇಶನ್ ಅಧ್ಯಕ್ಷ ರವೀಂದ್ರ ಸ್ವಾಮಿ ಸೇರಿ ಇತರರು ಇದ್ದರು. ಪತ್ರಕರ್ತ ಶಿವಕುಮಾರ ಸ್ವಾಮಿ ಸ್ವಾಗತಿಸಿ, ಶ್ರೀಕಾಂತ ಸ್ವಾಮಿ ಸೋಲಪುರ ನಿರೂಪಿಸಿ, ಕಾರ್ತಿಕ ಸ್ವಾಮಿ ಮಠಪತಿ ವಂದಿಸಿದರು.ಬಸಯ್ಯ ಸ್ವಾಮಿ, ಡಾ.ಪ್ರಭುಲಿಂಗ ಸ್ವಾಮಿ, ಡಾ. ಶಿವಾನಂದ ಚಿಕ್ಕಮಠ, ರವಿಸ್ವಾಮಿ ಹೆಡಗಾಪುರ, ಅಮರ ಸ್ಥಾವರಮಠ, ಬಸವರಾಜ ಕಾಮಶೆಟ್ಟಿ, ದೀಪಕ ಮನ್ನಳ್ಳಿ, ಸತೀಶ ಸ್ವಾಮಿ ಉಪಸ್ಥಿತರಿದ್ದರು.