ಉತ್ತರ ಕನ್ನಡ ಜಿಲ್ಲೆಯ ಸೌಹಾರ್ದ ಸಂಸ್ಥೆಗಳು ರಾಜ್ಯದಲ್ಲೇ ಅತ್ಯಂತ ಪ್ರಾಮಾಣಿಕ ಮತ್ತು ಬದ್ಧತೆಯಿಂದ ಕಾರ್ಯನಿರ್ವಹಿಸುತ್ತಿವೆ.
ಶಿರಸಿಯಲ್ಲಿ ಅಟಲ್ ಕ್ಯಾಪಿಟಲ್ ಸೌಹಾರ್ದ ಸಂಸ್ಥೆ ಉದ್ಘಾಟನಾ ಸಮಾರಂಭದಲ್ಲಿ ಶಾಸಕರ ಹೇಳಿಕೆ
ಕನ್ನಡಪ್ರಭ ವಾರ್ತೆ ಶಿರಸಿಉತ್ತರ ಕನ್ನಡ ಜಿಲ್ಲೆಯ ಸೌಹಾರ್ದ ಸಂಸ್ಥೆಗಳು ರಾಜ್ಯದಲ್ಲೇ ಅತ್ಯಂತ ಪ್ರಾಮಾಣಿಕ ಮತ್ತು ಬದ್ಧತೆಯಿಂದ ಕಾರ್ಯನಿರ್ವಹಿಸುತ್ತಿವೆ. ಬೆಂಗಳೂರು ಹಾಗೂ ಬೆಳಗಾವಿಯ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲವು ಕಪ್ಪು ಚುಕ್ಕೆಗಳಿರಬಹುದು. ಆದರೆ ನಮ್ಮ ಜಿಲ್ಲೆಯ ಸಹಕಾರಿ ರಂಗವು ರೈತಾಪಿ ವರ್ಗದ ಏಳ್ಗೆಗೆ ಬೆನ್ನೆಲುಬಾಗಿ ನಿಂತಿದೆ ಎಂದು ಯಲ್ಲಾಪುರ ಶಾಸಕ ಹಾಗೂ ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ ಶಿವರಾಮ ಹೆಬ್ಬಾರ ಹೇಳಿದರು.
ಶಿರಸಿಯಲ್ಲಿ ನೂತನವಾಗಿ ಆರಂಭವಾಗಿರುವ ಅಟಲ್ ಕ್ಯಾಪಿಟಲ್ ಸೌಹಾರ್ದ ಸಂಸ್ಥೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.ಬೆಳಗಾವಿಯ ಆನಂತರ ಉತ್ತರ ಕನ್ನಡ ಜಿಲ್ಲೆ ಅತಿ ಹೆಚ್ಚು ಸೌಹಾರ್ದ ಸಂಸ್ಥೆಗಳನ್ನು ಹೊಂದಿದೆ. ಬ್ಯಾಂಕುಗಳು ಮತ್ತು ಸೌಹಾರ್ದ ಸಂಸ್ಥೆಗಳು ಬದ್ಧತೆಯಿಂದ ನಡೆಯಬೇಕು. ಆಡಳಿತ ಮಂಡಳಿಯವರು ಸಾಲಗಾರರ ಹಿತದೃಷ್ಟಿಯಿಂದ ಇತಿಮಿತಿಯಲ್ಲಿ ಬಡ್ಡಿದರ ನಿಗದಿಪಡಿಸಬೇಕು. ಜಿಲ್ಲೆಯ ಜನರ ಆರ್ಥಿಕ ಪ್ರಗತಿಗೆ ನೂರಾರು ಕೋಟಿ ಸಾಲ ನೀಡಿ, ಅದನ್ನು ಯಶಸ್ವಿಯಾಗಿ ವಸೂಲಾತಿ ಮಾಡುತ್ತಿರುವುದು ಹೆಮ್ಮೆಯ ವಿಷಯ ಎಂದು ಅವರು ಹೇಳಿದರು.
ಸಂಘದ ಉಪಾಧ್ಯಕ್ಷ ಅರವಿಂದ ತೆಲಗುಂದ ಮಾತನಾಡಿ, ಕೇವಲ 10 ತಿಂಗಳ ಅಲ್ಪಾವಧಿಯಲ್ಲಿ ಅಟಲ್ ಕ್ಯಾಪಿಟಲ್ ಸಂಸ್ಥೆಯು ಅಭೂತಪೂರ್ವ ಪ್ರಗತಿ ಸಾಧಿಸಿದೆ. ಸಂಸ್ಥೆಯು ಈಗಾಗಲೇ ₹1.50 ಕೋಟಿ ಠೇವಣಿ ಹೊಂದಿದ್ದು, ₹1 ಕೋಟಿಗೂ ಅಧಿಕ ಸಾಲ ನೀಡುವ ಮೂಲಕ ಗ್ರಾಹಕರ ವಿಶ್ವಾಸ ಗಳಿಸಿದೆ. ಅನೇಕ ಆಕರ್ಷಕ ಸಾಲ ಯೋಜನೆಗಳ ಜತೆಗೆ ಸಂಸ್ಥೆಯಲ್ಲಿ ಇ-ಸ್ಟ್ಯಾಂಪಿಂಗ್ ಸೌಲಭ್ಯವೂ ಇದೆ. ಮುಂದಿನ ದಿನಗಳಲ್ಲಿ ಜನರಿಗೆ ಇನ್ನಷ್ಟು ವಿಭಿನ್ನ ಮತ್ತು ಗುಣಮಟ್ಟದ ಸೇವೆಗಳನ್ನು ನೀಡಿ ಸಂಸ್ಥೆಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ಆಶಯವಿದೆ ಎಂದರು.ಸಂಘದ ಅಧ್ಯಕ್ಷ ಲೋಹಿತ್ ಮಡಿವಾಳ ಅಧ್ಯಕ್ಷತೆ ವಹಿಸಿದ್ದರು. ಜೀವ ಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್, ಪ್ರಮುಖರಾದ ಪ್ರದೀಪ್ ಶೆಟ್ಟಿ, ಆರ್.ವೈ. ಖಾನ್, ಕೆಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಪ್ರಕಾಶ್ ಗುನಗಿ, ಬೀರಣ್ಣ ನಾಯ್ಕ ಉಪಸ್ಥಿತರಿದ್ದರು.