ರಕ್ಷಣಾ ಇಲಾಖೆಗೆ ಮೀಸಲಿಟ್ಟಿದ್ದ ಜಾಗ ಲೀಸ್‌ ಪಡೆಯಲು ಪಾಲಿಕೆ ತೀರ್ಮಾನ

| Published : Jul 02 2024, 01:31 AM IST

ರಕ್ಷಣಾ ಇಲಾಖೆಗೆ ಮೀಸಲಿಟ್ಟಿದ್ದ ಜಾಗ ಲೀಸ್‌ ಪಡೆಯಲು ಪಾಲಿಕೆ ತೀರ್ಮಾನ
Share this Article
  • FB
  • TW
  • Linkdin
  • Email

ಸಾರಾಂಶ

ಮಹಾನಗರ ವಾರ್ಡ್‌ ನಂ. 39ರಲ್ಲಿ ಬರುವ ವಿಶ್ವೇಶ್ವರ ನಗರದಲ್ಲಿ 17 ಎಕರೆ ಜಾಗದಲ್ಲಿ 2.5 ಎಕರೆ ಜಾಗವನ್ನು ಎನ್‌ಸಿಸಿ ಕಾರ್ಯಚಟುವಟಿಕೆಗಳಿಗಾಗಿ ಬಿಟ್ಟುಕೊಡಲಾಗಿತ್ತು.

ಹುಬ್ಬಳ್ಳಿ:

ಇಲ್ಲಿನ ವಿಶ್ವೇಶ್ವರ ನಗರದ ಉದ್ಯಾನ ಬಳಿ ಇರುವ ರಕ್ಷಣಾ ಇಲಾಖೆಗೆ ಸೇರಿದ ಜಾಗವನ್ನು ಸ್ಥಳೀಯ ಜನರಿಗೆ ಮೂಲಸೌಲಭ್ಯ ಒದಗಿಸುವುದಕ್ಕಾಗಿ ಮಹಾನಗರ ಪಾಲಿಕೆಗೆ ಲೀಸ್ ಪಡೆಯಲು ತೀರ್ಮಾನಿಸಲಾಗಿದೆ.

ಶಾಸಕ ಮಹೇಶ ಟೆಂಗಿನಕಾಯಿ ನೇತೃತ್ವದಲ್ಲಿ ಜಿಲ್ಲಾಧಿಕಾರಿ, ಪಾಲಿಕೆ ಸದಸ್ಯರು ಹಾಗೂ ಭೂಸೇನೆಯ ಅಧಿಕಾರಿಗಳೊಂದಿಗೆ ಸೋಮವಾರ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಈ ಕುರಿತು ಸಮಗ್ರವಾಗಿ ಚರ್ಚಿಸಲಾಯಿತು.

ವಾರ್ಡ್‌ ನಂ. 39ರಲ್ಲಿ ಬರುವ ವಿಶ್ವೇಶ್ವರ ನಗರದಲ್ಲಿ 17 ಎಕರೆ ಜಾಗದಲ್ಲಿ 2.5 ಎಕರೆ ಜಾಗವನ್ನು ಎನ್‌ಸಿಸಿ ಕಾರ್ಯಚಟುವಟಿಕೆಗಳಿಗಾಗಿ ಬಿಟ್ಟುಕೊಡಲಾಗಿತ್ತು. ಆದರೆ, ಈ ಜಾಗದಲ್ಲಿ ಎನ್‌ಸಿಸಿ ಯಾವುದೇ ಚಟುವಟಿಕೆ ನಡೆಸುತ್ತಿರಲಿಲ್ಲ. ಈ ಜಾಗದಲ್ಲಿ ಗಿಡ, ಗಂಟೆಗಳು ಬೆಳೆದಿದ್ದು, ಸ್ವಚ್ಛತೆಯನ್ನೂ ಕಾಯ್ದುಕೊಂಡಿರಲಿಲ್ಲ. ಸುತ್ತಲಿನ ಜನವಸತಿ ಪ್ರದೇಶದಲ್ಲಿ ಕುಡಿಯುವ ನೀರು, ಯುಜಿಡಿ ಸೇರಿದಂತೆ ಅಗತ್ಯ ಸೌಲಭ್ಯ ಕಲ್ಪಿಸಲು ಈ ಜಾಗೆ ಅಡ್ಡಿಯಾಗಿತ್ತು. ಇದೀಗ, ಈ ಜಾಗವನ್ನು ಲೀಸ್‌ಗೆ ಪಡೆಯುವ ಕುರಿತು ಚರ್ಚಿಸಿಲಾಗಿದ್ದು, ಅಂತಿಮವಾಗಿ ಲೀಸ್‌ ಪಡೆಯಲು ಬೇಕಾದ ಎಲ್ಲ ಸಿದ್ಧತೆ ಮಾಡಿಕೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಹೊರಗಡೆ 17 ಎಕರೆ ಜಾಗವನ್ನು ಪರ್ಯಾಯವಾಗಿ ನೀಡುವ ಪ್ರಸ್ತಾವನೆಯನ್ನು ಶಾಸಕ ಮಹೇಶ ಟೆಂಗಿನಕಾಯಿ ಭೂಸೇನೆಯ ಅಧಿಕಾರಿಗಳ ಮುಂದಿಟ್ಟಿದ್ದಾರೆ. ಪ್ರತ್ಯೇಕ ಮೂರು ಕಡೆ ಇರುವ 17 ಎಕರೆ ಜಾಗವನ್ನೂ ಭೂಸೇನೆಯ ಅಧಿಕಾರಿಗಳಿಗೆ ತೋರಿಸಲಾಯಿತು. ಜಾಗ ನೋಡಿದ ಅಧಿಕಾರಿಗಳು, ವಿಶ್ವೇಶ್ವರ ನಗರದಲ್ಲಿರುವ ಜಾಗದ ಈಗಿನ ಬೆಲೆಯಷ್ಟು ಜಾಗ ನೀಡುವಂತೆ ಮನವಿ ಮಾಡಿದರು. ಈ ಕುರಿತು ಮತ್ತೊಮ್ಮೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿ ಸೂಕ್ತ ನಿರ್ಧಾರ ಕೈಗೊಂಡು, 15 ದಿನಗಳಲ್ಲಿ ಎಲ್ಲ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದರು.

ಈ ವೇಳೆ ಜಿಲ್ಲಾಧಿಕಾರಿ ದಿವ್ಯಪ್ರಭು, ಭೂಸೇನೆಯ ಅಧಿಕಾರಿ ಕನಸವ ಬೋಧರ್‌, ಸಹಾಯಕ ಅಧಿಕಾರಿ ಲೋಕೇಶ್ ಗೌಡ, ಪಾಲಿಕೆ ಸದಸ್ಯರಾದ ವೀರಣ್ಣ ಸವಡಿ, ಸೀಮಾ ಮೊಗಲಿಶೆಟ್ಟರ, ಸಂತೋಷ ಚವ್ಹಾಣ, ಜಿಲ್ಲಾ ನೋಂದಣಿ ಅಧಿಕಾರಿ ಶಾಲಟ ಮುಸ್ಸೇನ್, ತಹಸೀಲ್ದಾ‌ರ್ ಕಲ್ಲನಗೌಡರ, ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ, ನೋಡಲ್ ಅಧಿಕಾರಿ ವಿಠಲ ತುಬಾಕಿ, ಮುಖಂಡರಾದ ಸಿದ್ದು ಮುಗಲಿಶೆಟ್ಟರ, ರವಿ ನಾಯಕ, ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಪಾಲಿಕೆ ಅಧಿಕಾರಿಗಳು ಇದ್ದರು.