ಸಾರಾಂಶ
ಹುಬ್ಬಳ್ಳಿಗೆ ನಿತ್ಯವೂ ಬೇರೆ ಬೇರೆ ಜಿಲ್ಲೆಗಳಿಂದ ಲಕ್ಷಾಂತರ ಜನರು ಭೇಟಿ ನೀಡುತ್ತಾರೆ. ಆದರೆ, ಜನರು ಸಂಚರಿಸುವ ಫುಟ್‌ಪಾತ್ ಸ್ಥಿತಿ ನೋಡಿದರೆ ಭಯಪಡುವಂತಾಗಿವೆ.
ಅಜೀಜಅಹ್ಮದ ಬಳಗಾನೂರ
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿಸ್ಮಾರ್ಟ್ಸಿಟಿ ಪಟ್ಟ ಹೊಂದಿರುವ ಹುಬ್ಬಳ್ಳಿ-ಧಾರವಾಡ ಇಂದು ತನ್ನ ಅಂದ ಕಳೆದುಕೊಳ್ಳುತ್ತಿದೆ. ನಗರದ ಸೌಂದರ್ಯ ಹೆಚ್ಚಿಸಬೇಕಿದ್ದ ಫುಟ್‌ಪಾತ್‌ಗಳಿಂದು ಹಾಳಾಗಿವೆ. ಇದರ ದುರಸ್ತಿಗೆ ಕ್ರಮಕೈಗೊಳ್ಳಬೇಕಿರುವ ಮಹಾನಗರ ಪಾಲಿಕೆ ಸಂಪೂರ್ಣ ನಿದ್ದೆಗೆ ಜಾರಿದೆ.
ಹುಬ್ಬಳ್ಳಿಗೆ ನಿತ್ಯವೂ ಬೇರೆ ಬೇರೆ ಜಿಲ್ಲೆಗಳಿಂದ ಲಕ್ಷಾಂತರ ಜನರು ಭೇಟಿ ನೀಡುತ್ತಾರೆ. ಆದರೆ, ಜನರು ಸಂಚರಿಸುವ ಫುಟ್‌ಪಾತ್ ಸ್ಥಿತಿ ನೋಡಿದರೆ ಭಯಪಡುವಂತಾಗಿವೆ. ಇನ್ನು ಕೆಲವೆಡೆ ಫುಟ್‌ಪಾತ್ ಮೇಲೆಯೇ ಡಬ್ಬಾ ಅಂಗಡಿಗಳನ್ನಿಟ್ಟಿದ್ದು, ಪಾದಾಚಾರಿಗಳು ಸಂಚರಿಸದಂತಹ ಸ್ಥಿತಿ ನಿರ್ಮಾಣವಾಗಿದೆ.ಎಲ್ಲೆಲ್ಲಿ ಹಾಳಾಗಿವೆ:
ಹುಬ್ಬಳ್ಳಿಯ ಪ್ರಮುಖ ಜನನಿಬಿಡ ಪ್ರದೇಶವಾಗಿರುವ ಶಾಹ ಬಜಾರ ಮುಂಭಾಗ, ದುರ್ಗದಬೈಲ್, ದಾಜಿಬಾನ್ ಪೇಟೆ, ಜನತಾ ಬಜಾರ, ರಾಣಿ ಚೆನ್ನಮ್ಮ ವೃತ್ತದ ಅಕ್ಕಪಕ್ಕ, ದೇಶಪಾಂಡೆ ನಗರ, ಪ್ರವಾಸಿ ಮಂದಿರ ರಸ್ತೆ, ಕೇಶ್ವಾಪುರ ಭಾಗ, ಭೈರಿದೇವರಕೊಪ್ಪ, ನವನಗರದ ಆರ್‌ಟಿಒ ಕಚೇರಿ, ಧಾರವಾಡದ ತಹಸೀಲ್ದಾರ್ ಕಚೇರಿ ಸುತ್ತ, ಸಪ್ತಾಪುರ, ಉದಯ ವೃತ್ತ ಹೀಗೆ ಹಲವೆಡೆ ಪುಟ್‌ಪಾತ್ ಹಾಳಾಗಿವೆ.ಪಾರ್ಕಿಂಗ್ ಸ್ಥಳವಾದ ಫುಟ್‌ಪಾತ್:
ಮಹಾನಗರದಲ್ಲಿ ಹಲವು ಭಾಗಗಳಲ್ಲಿ ಪುಟ್‌ಪಾತ್‌ಗಳು ಪಾರ್ಕಿಂಗ್ ಸ್ಥಳಗಳಾಗಿವೆ. ಕೆಲವೆಡೆ ಅಂಗಡಿಗಳ ಮಾಹಿತಿ ಫಲಕ, ಡಬ್ಬಾ ಅಂಗಡಿ ಇರಿಸಲಾಗಿದೆ. ಇನ್ನು ಚೆನ್ನಮ್ಮ ವೃತ್ತದ ಬಳಿಯ ಜನತಾ ಬಜಾರ ಸುತ್ತಮುತ್ತಲೂ ಹಲವು ಹಣ್ಣು, ಹೂ ವ್ಯಾಪಾರಿಗಳು ಫುಟ್‌ಪಾತ್ ಮೇಲೆಯೇ ನಿತ್ಯ ವ್ಯಾಪಾರ ಮಾಡುತ್ತಾರೆ.ಪಾಲಿಕೆಯ ಎದುರೇ ಕಿತ್ತುಹೋದ ಪೇವರ್ಸ್:
ಹುಬ್ಬಳ್ಳಿ ಮಹಾನಗರ ಪಾಲಿಕೆ ಎದುರಿಗೆ ಇರುವ ಮುಖ್ಯರಸ್ತೆಯ ಅಕ್ಕಪಕ್ಕದ ಫುಟ್‌ಪಾತ್ ಮೇಲಿನ ಫೇವರ್ಸ್ ಸಂಪೂರ್ಣವಾಗಿ ಕಿತ್ತುಹೋಗಿವೆ. ಅಲ್ಲದೇ ಪಕ್ಕದಲ್ಲಿರುವ ತಹಸೀಲ್ದಾರ್ ಕಚೇರಿಯ ಮುಂಭಾಗದಲ್ಲಂತೂ ಹೇಳತೀರದಾಗಿದೆ. ಇನ್ನು ಇದರ ಮೇಲೆಯೇ ಸಾರ್ವಜನಿಕರು ದ್ವಿಚಕ್ರ ವಾಹನ ನಿಲ್ಲಿಸುತ್ತಿದ್ದಾರೆ. ಭೈರಿದೇವರಕೊಪ್ಪದಲ್ಲಿರುವ ಫುಟ್‌ಪಾತ್ ಭಾಗಶಃ ಕಾರ್ ಪಾರ್ಕಿಂಗ್ ಆಗಿ ಮಾರ್ಪಟ್ಟಿವೆ. ದೇಶಪಾಂಡೆ ನಗರದ ಸುತ್ತಮುತ್ತಲಿನ ಹಲವು ವಾಣಿಜ್ಯ ಸಂಕೀರ್ಣಗಳಲ್ಲಿ ವಾಹನ ನಿಲುಗಡೆಗೆ ಜಾಗವಿಲ್ಲ. ಫುಟ್‌ಪಾತ್ ಮೇಲೆಯೇ ವಾಹನ ನಿಲ್ಲಿಸುವುದು ಸಾಮಾನ್ಯವಾಗಿದೆ.ಮಳೆಯಾದರಂತೂ ಹೇಳತೀರದು:
ಹಲವೆಡೆ ಫುಟ್‌ಪಾತ್‌ಗಳಲ್ಲಿರುವ ಚರಂಡಿ ಸ್ವಚ್ಛಗೊಳಿಸಲು, ತ್ಯಾಜ್ಯ ಹೊರಹಾಕಲು ಮೇಲಿರುವ ಚರಂಡಿಯ ಮೇಲೆ ಹಾಕಿರುವ ಮುಚ್ಚಳ ಮುಚ್ಚದೇ ಹಾಗೆ ಬಿಡಲಾಗಿದೆ. ಮಳೆಯಾದಾಗ ಸಂಪೂರ್ಣವಾಗಿ ಭರ್ತಿಯಾದ ವೇಳೆ ಇಲ್ಲಿ ತೆಗ್ಗು ಇದೆ ಎಂಬುದೇ ಗೊತ್ತಾಗದು. ಇಂತಹ ವೇಳೆ ಇದರ ಮೇಲೆ ಸಂಚರಿಸಿದಲ್ಲಿ ಅನಾಹುತವಾಗುವ ಸಂಭವವಿದೆ. ಇನ್ನು ಕೆಲವೆಡೆ ಪೇವರ್ಸ್ ಕೆಳಗಿರುವ ಚರಂಡಿ ಮೇಲೆ ಹಾಕಲಾಗಿರುವ ಕಬ್ಬಿಣದ ಸರಳುಗಳು ಹೊರಗಡೆ ಕಾಣುತ್ತಿದ್ದರೂ ಸಹ ಪಾಲಿಕೆ ತೆರವುಗೊಳಿಸಲು ಪಾಲಿಕೆ ಮುಂದಾಗದೇ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.ಶೀಘ್ರವೇ ತೆರವಿಗೆ ಕ್ರಮ:
ಹಲವೆಡೆ ಫುಟ್‌ಪಾತ್‌ಗಳು ಹಾಳಾಗಿರುವ ಕುರಿತು, ಫುಟ್‌ಪಾತ್ ಮೇಲೆಯೇ ಅಂಗಡಿ, ಪಾರ್ಕಿಂಗ್ ಮಾಡಿಕೊಂಡಿರುವುದು ಗಮನಕ್ಕೆ ಬಂದಿದೆ. ಚೆನ್ನಮ್ಮ ವೃತ್ತ ಸೇರಿದಂತೆ ಸುತ್ತಮುತ್ತಲೂ ಫ್ಲೈಓವರ್ ಕೆಲಸ ನಡೆದಿರುವುದರಿಂದ ಫುಟ್‌ಪಾತ್ ದುರಸ್ತಿ ಮಾಡಲು ಆಗಿಲ್ಲ. ಎಲ್ಲೆಂದರಲ್ಲಿ ಫುಟ್‌ಪಾತ್ ಮೇಲೆ ಡಬ್ಬಾ ಅಂಗಡಿಗಳನ್ನಿರಿಸಲಾಗಿದೆ. ಈಗಾಗಲೇ ಹಲವೆಡೆ ತೆರವುಗೊಳಿಸಲಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ಫುಟ್‌ಪಾತ್ ಮೇಲಿರುವ ಅಂಗಡಿಗಳ ತೆರವಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಮಹಾನಗರ ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಕನ್ನಡಪ್ರಭಕ್ಕೆ ತಿಳಿಸಿದರು.ಸಂಚರಿಸಲು ಭಯಮಹಾನಗರದಲ್ಲಿ ಫುಟ್‌ಪಾತ್ ಮೇಲೆ ಸಂಚರಿಸಲು ಭಯವಾಗುತ್ತದೆ. ಎಲ್ಲೆಂದರಲ್ಲಿ ಪೇವರ್ಸ್ ಕಿತ್ತುಹೋಗಿದೆ. ನಗರದ ಸೌಂದರ್ಯ ಹೆಚ್ಚಿಸಬೇಕಿರುವ ಫುಟ್‌ಪಾತ್‌ಗಳೆಲ್ಲ ಇಂದು ಹಾಳಾಗಿ ನಗರದ ಅಂದಗೆಡಿಸುತ್ತಿವೆ.
ಶಕುಂತಲಾ ಗರಡಿ, ಹುಬ್ಬಳ್ಳಿ ನಿವಾಸಿ