ಅಕ್ರಮ ಜಾಹೀರಾತು ಫಲಕ ತೆರವಿಗೆ ಪಾಲಿಕೆ ಕಾರ್ಯೋನ್ಮುಖ

| Published : Apr 16 2025, 12:37 AM IST

ಅಕ್ರಮ ಜಾಹೀರಾತು ಫಲಕ ತೆರವಿಗೆ ಪಾಲಿಕೆ ಕಾರ್ಯೋನ್ಮುಖ
Share this Article
  • FB
  • TW
  • Linkdin
  • Email

ಸಾರಾಂಶ

ಇತ್ತೀಚೆಗೆ ಹು-ಧಾ ಅವಳಿ ನಗರದಲ್ಲಿ ಪರವಾನಗಿ ಇಲ್ಲದೇ ಎಲ್ಲೆಂದರಲ್ಲಿ ಜಾಹೀರಾತು ಫಲಕಗಳನ್ನು ಮೊದಲಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಅಂಟಿಸುವ ಚಾಳಿ ಶುರುವಾಗಿದೆ.

ಬಸವರಾಜ ಹಿರೇಮಠ

ಧಾರವಾಡ: ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲೆಂದರಲ್ಲಿ ಜಾಹೀರಾತು ಫಲಕಗಳನ್ನು ಅಂಟಿಸುವವರಿಗೆ ಹಲವಾರು ಸುತ್ತಿನ ಎಚ್ಚರಿಕೆ ಹಾಗೂ ನೋಟಿಸ್‌ ನೀಡಿದ ನಂತರ ಹು-ಧಾ ಮಹಾನಗರ ಪಾಲಿಕೆಯು ಅಕ್ರಮ ಜಾಹೀರಾತು ಫಲಕಗಳನ್ನು ತೆರವುಗೊಳಿಸುವುದು ಮಾತ್ರವಲ್ಲದೇ ಅವರ ಮೇಲೆ ಕ್ರಮಕ್ಕೆ ಮುಂದಾಗಿದೆ.

ಇತ್ತೀಚೆಗೆ ಹು-ಧಾ ಅವಳಿ ನಗರದಲ್ಲಿ ಪರವಾನಗಿ ಇಲ್ಲದೇ ಎಲ್ಲೆಂದರಲ್ಲಿ ಜಾಹೀರಾತು ಫಲಕಗಳನ್ನು ಮೊದಲಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಅಂಟಿಸುವ ಚಾಳಿ ಶುರುವಾಗಿದೆ. ಶಾಲಾ-ಕಾಲೇಜು, ಕೋಚಿಂಗ್‌ ಸೆಂಟರ್‌ಗಳು, ಉತ್ಪಾದನಾ ಸಂಸ್ಥೆಗಳು ಸೇರಿದಂತೆ ಹಬ್ಬ-ಹರಿದಿನ, ಜಯಂತಿ, ಗಣ್ಯರ ಜನ್ಮದಿನ ಹೀಗೆ ಅನೇಕ ಸಂದರ್ಭಗಳಲ್ಲಿ ಎಗ್ಗಿಲ್ಲದೇ ಬ್ಯಾನರ್‌, ಬಂಟಿಂಗ್ಸ್‌ ಸೇರಿದಂತೆ ಜಾಹೀರಾತು ಫಲಕಗಳು ಅವಳಿ ನಗರದ ಸೌಂದರ್ಯಕ್ಕೆ ಧಕ್ಕೆ ತಂದಿವೆ.

ಪರಿಸರವಾದಿಗಳು ಹಾಗೂ ಸಾರ್ವಜನಿಕರು ಜಾಹೀರಾತುಗಳನ್ನು ಹಾಕಲು ಕೆಲವರು ಮರಗಳಿಗೆ ಮೊಳೆ ಹೊಡೆಯುವ ಜತೆಗೆ ನಗರದ ಮೂಲೆ ಮೂಲೆಯಲ್ಲಿ ನಿರ್ಮಿಸಲಾದ ಹೋರ್ಡಿಂಗ್‌, ಬ್ಯಾನರ್‌ಗಳ ಬಗ್ಗೆ ದೂರು ನೀಡಿದ ಆನಂತರ ಮಹಾನಗರ ಪಾಲಿಕೆ ತಡವಾದರೂ ಕಾರ್ಯಾಚರಣೆ ಶುರು ಮಾಡಿದೆ. ಈಗಾಗಲೇ ಕರ್ನಾಟಕ ಕಾಲೇಜು ಸೇರಿದಂತೆ ಹಲವು ಕಡೆಗಳಲ್ಲಿ ಇಂತಹ ಜಾಹೀರಾತು ತೆರವುಗೊಳಿಸಲಾಗಿದೆ ಎಂದು ಪಾಲಿಕೆ ಅಧಿಕಾರಿಗಳು ಮಾಹಿತಿ ನೀಡಿದರು.

ಅಕ್ರಮ ಜಾಹೀರಾತುಗಳ ವಿಷಯವು ಪಾಲಿಕೆಯಲ್ಲಿ ಕಳೆದ ಸಾಮಾನ್ಯ ಸಭೆಯಲ್ಲಿ ಗಮನ ಸೆಳೆದಿತ್ತು. ಕೆಲವು ಸಂಸ್ಥೆಗಳು ಮತ್ತು ಖಾಸಗಿ ಸಂಸ್ಥೆಗಳು ನಾಗರಿಕ ಸಂಸ್ಥೆಯಿಂದ ಅನುಮತಿ ಪಡೆಯದೆ ಸಾರ್ವಜನಿಕ ಸ್ಥಳಗಳಲ್ಲಿ ತಮ್ಮ ಜಾಹೀರಾತುಗಳನ್ನು ಇರಿಸುವುದರ ವಿರುದ್ಧ ಕಾರ್ಪೊರೇಟರ್‌ಗಳು ಧ್ವನಿ ಎತ್ತಿದ್ದರು. ಸಾರ್ವಜನಿಕ ಸ್ಥಳಗಳಲ್ಲಿ ಹಾಕುವ ಜಾಹೀರಾತುಗಳಿಂದ ಪಾಲಿಕೆಗೆ ಸುಮಾರು ₹7 ಕೋಟಿಗಳ ಆದಾಯ ಪಡೆಯಬೇಕು. ಆದರೆ, ಅಧಿಕಾರಿಗಳು ಕಾನೂನುಬಾಹಿರವಾಗಿ ಜಾಹೀರಾತುಗಳನ್ನು ಹಾಕುವವರ ಮೇಲೆ ಕ್ರಮ ಕೈಗೊಂಡಿಲ್ಲ. ಇದು ಪಾಲಿಕೆಗೆ ಭಾರಿ ನಷ್ಟವನ್ನುಂಟು ಮಾಡುತ್ತಿದೆ ಎಂದು ಮಾಜಿ ಮೇಯರ್ ಈರೇಶ್ ಅಂಚಟಗೇರಿ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

ಪಾಲಿಕೆಯಿಂದ ತೆರವು..

ಇದರ ಆಧಾರದ ಮೇಲೆ, ಅಕ್ರಮ ಜಾಹೀರಾತಿನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮತ್ತು ಯಾವುದೇ ಒತ್ತಡಕ್ಕೆ ಮಣಿಯದೆ ಅವುಗಳನ್ನು ತೆಗೆದುಹಾಕಲು ಸದನವು ಅಧಿಕಾರಿಗಳಿಗೆ ನಿರ್ದೇಶನ ನೀಡಿತ್ತು.

ಅದರಂತೆ, ಸಾರ್ವಜನಿಕ ಸ್ಥಳಗಳಿಂದ ಜಾಹೀರಾತು ಫಲಕಗಳನ್ನು ತೆಗೆದುಹಾಕುವ ಕಾರ್ಯವನ್ನು ಪೌರಕರ್ಮಿಗಳಿಗೆ ವಹಿಸಲಾಗಿದೆ. ಇದಲ್ಲದೆ, ಮರಗಳಿಗೆ ಮೊಳೆ ಹೊಡೆಯುವವರಿಗೆ ದಂಡ ವಿಧಿಸಲು ಪಾಲಿಕೆ ನಿರ್ಧರಿಸಿದ್ದನ್ನು ಪರಿಸರವಾದಿಗಳು ಸ್ವಾಗತಿಸಿದ್ದಾರೆ.

ಧಾರವಾಡದ ಕಾಲೇಜು ರಸ್ತೆಯು ವಿದ್ಯಾರ್ಥಿಗಳನ್ನು ಆಕರ್ಷಿಸುವ ಯತ್ನದಲ್ಲಿ ಖಾಸಗಿ ಟ್ಯುಟೋರಿಯಲ್‌ಗಳು ತಮ್ಮ ಜಾಹೀರಾತು ನೀಡಲು ಮರಗಳಿಗೆ ಮೊಳೆ ಹೊಡೆಯುವುದಕ್ಕೆ ಒಂದು ಅತ್ಯುತ್ತಮ ಉದಾಹರಣೆ. ಇದು ಸೇರಿದಂತೆ ಜ್ಯುಬಿಲಿ ವೃತ್ತದಿಂದ ಕರ್ನಾಟಕ ಕಾಲೇಜು, ಸಪ್ತಾಪುರ, ಜಯನಗರ, ಶ್ರೀನಗರದಿಂದ ಹೊಯ್ಸಳ ನಗರ ವರೆಗೆ, ಜ್ಯುಬಿಲಿ ವೃತ್ತದಿಂದ ಹಳೆ ಎಸ್ಪಿ ಕಚೇರಿ ಮೂಲಕ ಹೊಸ ಬಸ್‌ ನಿಲ್ದಾಣ, ಮಾರುಕಟ್ಟೆ ರಸ್ತೆಗಳು, ಜ್ಯುಬಿಲಿ ವೃತ್ತದಿಂದ ಹುಬ್ಬಳ್ಳಿ ರಸ್ತೆಗುಂಟ ಅನಧಿಕೃತವಾಗಿ ಜಾಹೀರಾತು ಫಲಕಗಳನ್ನು ಕಾಣಬಹುದು. ಇದರೊಂದಿಗೆ ಹೆಚ್ಚಾಗಿ ಟ್ಯುಟೋರಿಯಲ್ಸ್‌, ಪಿಜಿ ಸೆಂಟರ್‌ಗಳು ಮರಗಳಿಗೆ ಮೊಳೆ ಹೊಡೆದು ಮೂರರಿಂದ ನಾಲ್ಕು ಜಾಹೀರಾತು ಫಲಕಗಳನ್ನು ಹಾಕುತ್ತಿದ್ದಾರೆ. ಇದರಿಂದ ಗಿಡ-ಮರಗಳಿಗೂ ಧಕ್ಕೆಯಾಗುತ್ತದೆ ಎಂಬ ಸಾಮಾನ್ಯ ಜ್ಞಾನವೂ ಅವರಿಗೆ ಇಲ್ಲದಾಗಿದೆ ಎಂದು ಪರಿಸರವಾದಿಗಳು ಬೇಸರ ವ್ಯಕ್ತಪಡಿಸುತ್ತಾರೆ.

ಮಹಾನಗರದಲ್ಲಿ ಅದರಲ್ಲೂ ಧಾರವಾಡದ ಪ್ರಮುಖ ವೃತ್ತ, ರಸ್ತೆಯಲ್ಲಿ ಎಲ್ಲೆಂದರಲ್ಲಿ ಪರವಾನಗಿ ಇಲ್ಲದೇ ಜಾಹೀರಾತು ಹಚ್ಚುವುದರಿಂದ ನಗರದ ಸೌಂದರ್ಯಕ್ಕೆ ಧಕ್ಕೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಪರಿಸರವಾದಿಗಳು ಸಹ ದೂರು ನೀಡಿದ್ದರು. ಪರವಾನಗಿ ಪಡೆದವರು ತೆರವುಗೊಳಿಸದೇ ತಿಂಗಳಾನುಗಟ್ಟಲೇ ಬಿಟ್ಟಿರುವ ಉದಾಹರಣೆ ಇದೆ. ಈಗ ಪಾಲಿಕೆ ಅವುಗಳನ್ನು ತೆರೆವುಗೊಳಿಸುವುದು ಮಾತ್ರವಲ್ಲದೇ ಅಕ್ರಮವಾಗಿ ಜಾಹೀರಾತು ಹಚ್ಚುವವರ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದೆ ಎಂದು ಮಹಾನಗರ ಪಾಲಿಕೆ ಸಹಾಯಕ ಆಯುಕ್ತ ಅರವಿಂದ ಜಮಖಂಡಿ ತಿಳಿಸಿದರು.