ಸಾರಾಂಶ
ಸಿ.ಸಿದ್ದರಾಜು ಮಾದಹಳ್ಳಿ
ಮಳವಳ್ಳಿ : ವಿಶ್ವ ಪ್ರಸಿದ್ಧ ಗಗನಚುಕ್ಕಿ ಜಲಪಾತೋತ್ಸವಕ್ಕೆ ಕ್ಷಣಗಣನೆ ಆರಂಭಗೊಂಡಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ಬೃಹತ್ ವೇದಿಕೆ ಮಧುವನಗಿತ್ತಿಯಂತೆ ಶೃಂಗಾರಗೊಂಡು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.
ಪ್ರಕೃತಿ ಮಡಿಲಿನಲ್ಲಿರುವ ಶಿವನಸಮುದ್ರದ ಪ್ರಸಿದ್ದ ಗಗನಚುಕ್ಕಿ ಜಲಪಾತದ ಕಾವೇರಿ ಜಲಸಿರಿಯ ವೈಭವಕ್ಕೆ ಬಣ್ಣದ ಚಿತ್ತಾರದ ಮೆರಗು ನೀಡಲಾಗಿದೆ. ಕಣ್ಣಿಗೆ ಸೊಬಗು ಕಿವಿಗೆ ಇಂಪು ನೀಡುವ ಜೊತೆಗೆ ನಿಸರ್ಗದ ವೈಭವವನ್ನು ಕಣ್ತುಂಬಿಕೊಳ್ಳಲು ಜಲಪಾತೋತ್ಸವದಲ್ಲಿ ಪ್ರವಾಸಿಗರಿಗೆ ಅವಕಾಶ ಮಾಡಿಕೊಡಲಾಯಿತು.
ಗಗನಚುಕ್ಕಿ ಜಲಪಾತವನ್ನು ವಿಶ್ವಮಟ್ಟದಲ್ಲಿ ಅಭಿವೃದ್ಧಿ ಪಡಿಸುವ ಚಿಂತನೆಯೊಂದಿಗೆ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅಧ್ಯಕ್ಷತೆಯಲ್ಲಿ ಸೆ.14 ಮತ್ತು 15ರಂದು ಎರಡು ದಿನಗಳ ಜಲಪಾತೋತ್ಸವಕ್ಕೆ ಬರುವ ಜನರು, ಪ್ರವಾಸಿಗರಿಗೆ ಸಾಕಷ್ಟು ಮನರಂಜನೆ ಸಿಗಲಿದೆ. ಬೃಹತ್ ವೇದಿಕೆ, ಆಸನ, ಕುಡಿಯುವ ನೀರು, ಸಾರಿಗೆ ಸೇರಿದಂತೆ ಮೂಲ ಸೌಲಭ್ಯಗಳನ್ನು ಕಲ್ಪಿಸಲು ತಾಲೂಕು ಆಡಳಿತ ಅಗತ್ಯ ಕ್ರಮ ಕೈಗೊಂಡಿದೆ.
ನಿಸರ್ಗ ಸೌಂದರ್ಯಕ್ಕೆ ಬಣ್ಣದ ಚಿತ್ತಾರ:
ಜಲಪಾತೋತ್ಸವಕ್ಕೆ ಪ್ರವಾಸಿಗರನ್ನು ಆಕರ್ಷಿಸಲು ಗಗನದಿಂದ ಧುಮ್ಮಿಕ್ಕಿ ಹರಿಯುವ ಕಾವೇರಿ ನೀರಿನ ಸೌಂದರ್ಯಕ್ಕೆ ವಿವಿಧ ರೀತಿಯ ದೀಪಾಲಾಂಕಾರ ಮತ್ತು ಲೇಸರ್ ಕಿರಣಗಳಿಂದ ಬಣ್ಣದ ಚಿತ್ತರವನ್ನು ಮೂಡಿಸುವುದರಿಂದ ಬೆಟ್ಟದ ಕಲ್ಲುಗಳಿಗೆ ಜೀವ ಕಲೆ ಬಂದಂತಾಗಿದೆ. ಶಿವನಸಮುದ್ರದ ರಸ್ತೆ ಉದ್ದಕ್ಕೂ ವಿವಿಧ ದೀಪಗಳಿಂದ ಅಲಂಕಾರ ಮಾಡಲಾಗಿದೆ. ಎಲ್ಲೆಡೆ ಬಂಟಿಂಗ್ಸ್ ರಾರಾಜಿಸುತ್ತಿವೆ. ಪ್ರಕೃತಿಯ ಹಬ್ಬಕ್ಕೆ ಸಕಲ ಸಿದ್ಧತೆಯೂ ನಡೆಯುತ್ತಿದೆ.
ಬೃಹತ್ ವೇದಿಕೆ ನಿರ್ಮಾಣ:
ಜಲಪಾತೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಬೃಹತ್ ವೇದಿಕೆ ಸಿದ್ಧಗೊಂಡಿದೆ. ಮುಖ್ಯಮಂತ್ರಿಗಳು ಸೇರಿದಂತೆ ವಿವಿಧ ಇಲಾಖೆ ಸಚಿವರು, ಅಧಿಕಾರಿಗಳು ಭಾಗವಹಿಸಲಿದ್ದಾರೆ. ವಿಐಪಿ, ವಿವಿಐಪಿ ಸೇರಿದಂತೆ ಗಣ್ಯರಿಗೆ ವಿಶೇಷ ಆಸನದ ವ್ಯವಸ್ಥೆ ಮಾಡಲಾಗಿದೆ. ಮಳೆ ಬಂದರೇ ಯಾವುದೇ ತೊಂದರೆಯಾಗದಂತೆ ಜರ್ಮನ್ ಟಾರ್ಪಲ್‌ನೊಳಗೆ ಸಾರ್ವಜನಿಕರು ಕುಳಿತು ಕಾರ್ಯಕ್ರಮ ವೀಕ್ಷಣೆ ಮಾಡಲು ಸುಮಾರು 50 ಸಾವಿರಕ್ಕೂ ಹೆಚ್ಚು ಆಸನದ ವ್ಯವಸ್ಥೆ ಕಲ್ಪಿಸಲಾಗಿದೆ.
ಜನರಿಗೆ ಸಾರಿಗೆ ಬಸ್ ವ್ಯವಸ್ಥೆ:
ಪ್ರವಾಸಿಗರ ಅನುಕೂಲಕ್ಕಾಗಿ ಮಳವಳ್ಳಿ ಮತ್ತು ಕೊಳ್ಳೇಗಾಲದ ಭಾಗದಿಂದ ವಿಶೇಷ ಸಾರಿಗೆ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಖಾಸಗಿ ವಾಹನಗಳನ್ನು ರೊಟ್ಟಿಕಟ್ಟೆಯಲ್ಲಿಯೇ ಪಾರ್ಕಿಂಗ್ ಮಾಡಬೇಕಿದೆ. ರೊಟ್ಟಿಕಟ್ಟೆಯಿಂದ ಜಲಪಾತಕ್ಕೆ ಬರಲು ಉಚಿತವಾಗಿ ವಾಹನ ಸೌಲಭ್ಯವನ್ನು ಕಲ್ಪಿಸಿದೆ.
ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ:
ಸೆ.14ರಂದು ಬೆಳಗ್ಗೆ 11 ಗಂಟೆ ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ, ಮಧ್ಯಾಹ್ನ 2ಕ್ಕೆ ನಾಗೇಶ್ ಕಂದೇಕಾಲ ಮತ್ತು ಕಲಾವತಿ ದಯಾನಂದ್, ಅಜಯ್ ವಾರಿಯರ್, ಜೋಗಿ ಸುನಿತಾ, ಚಿಂತನ್ ವಿಕಾಸ್, ಸುಹನಾ ಸೈಯದ್ ಇವರಿಂದ ಭಾವಗೀತೆಗಳು, ಸಂಜೆ 4.30ಕ್ಕೆ ಕಾಮಿಡಿ ಕಿಲಾಡಿಗಳು ಕಲಾವಿದರಿಂದ ಹಾಸ್ಯ ಮನರಂಜನೆ, ಸಂಜೆ 7 ಗಂಟೆಗೆ ಮಣಿಕಾಂತ್ ಕದ್ರಿ, ಚಂದನ್ ಶೆಟ್ಟಿ, ಹಂಸಿಕಾ ಅಯ್ಯರ್ ತಂಡದವರಿಂದ ನೃತ್ಯ ಮತ್ತು ಸಂಗೀತ ಕಾರ್ಯಕ್ರಮಗಳು ಜರುಗಲಿವೆ.
ಸೆ.15ರಂದು ಬೆಳಗ್ಗೆ 11ಕ್ಕೆ ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, ಮಧ್ಯಾಹ್ನ 2ಕ್ಕೆ ಪ್ರಖ್ಯಾತ ಜಿ ಕನ್ನಡದ ಸರಿಗಮಪ ತಂಡದಿಂದ ಸಂಗೀತ ಕಾರ್ಯಕ್ರಮ, ಸಂಜೆ 4.30ಕ್ಕೆ ಪ್ರಖ್ಯಾತ ಕಲರ್ಸ್-ಗಿಚ್ಚಿ ಗಿಲಿಗಿಲಿ ತಂಡದಿಂದ ಹಾಸ್ಯ, ಸಂಜೆ 6 ರಿಂದ ರವಿ ಬಸ್ರೂರ್ ಮತ್ತು ತಂಡದಿಂದ ಸಂಗೀತ ರಸ ಸಂಜೆ ಕಾರ್ಯಕ್ರಮಗಳು ಗಮನ ಸೆಳೆಯಲಿವೆ.
ಜಲಪಾತದಲ್ಲಿ ಹಾಲಿನ ನೊರೆಯಂತೆ ಗಗನದಿಂದ ಧುಮ್ಮಿಕ್ಕಿ ಕೆಳಗೆ ಬೀಳುವ ಕಾವೇರಿ ನೀರನ್ನು ನೋಡಲು ಮನಸ್ಸಿಗೆ ಆನಂದ ಉಂಟು ಮಾಡುತ್ತದೆ. ಜಲಾಕರ್ಷಣೆಯ ನಯನ ಮೋನೋಹರ ದೃಶ್ಯ ಕಣ್ತುಂಬಿಕೊಳ್ಳಲು ನೆರೆಯ ರಾಜ್ಯದ ತಮಿಳುನಾಡು, ಕೇರಳ, ಸೇರಿದಂತೆ ರಾಷ್ಟ್ರದ ವಿವಿಧ ಮೂಲೆಗಳಿಂದ ಪ್ರವಾಸಿಗರ ಹರಿದು ಬರುವ ನಿರೀಕ್ಷೆ ಇದೆ.
ವಿಶ್ವವಿಖ್ಯಾತ ಗಗನಚುಕ್ಕಿ ಜಲಪಾತವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಪಡಿಸಲು ಹಾಗೂ ಅಭಿವೃದ್ಧಿಗೊಳಿಸಲು ಜಲಪಾತೋತ್ಸವ ಆಚರಿಸಲು ಸಕಲ ಸಿದ್ಧತೆ ಮಾಡಲಾಗಿದೆ. ಎರಡು ದಿನ ಕಾರ್ಯಕ್ರಮದಲ್ಲಿ ಸುಮಾರು ಒಂದುವರೆ ಲಕ್ಷ ಪ್ರವಾಸಿಗರು ಬರುವ ನಿರೀಕ್ಷೆ ಇದೆ. ಪ್ರವಾಸಿ ತಾಣ ಅಭಿವೃದ್ಧಿಗೆ ಈಗಾಗಲೇ ನೀಲಿನಕ್ಷೆ ತಯಾರಿಸಲಾಗಿದೆ. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳಿಗೆ ಸಲ್ಲಿಸಿ ಅನುದಾನ ಬಿಡುಗಡೆಗೆ ಮನವಿ ಸಲ್ಲಿಸಲಾಗುವುದು.
- ಪಿ.ಎಂ.ನರೇಂದ್ರಸ್ವಾಮಿ, ಶಾಸಕರು, ಮಳವಳ್ಳಿ ಕ್ಷೇತ್ರ