ಸಾರಾಂಶ
ಕನ್ನಡಪ್ರಭ ವಾರ್ತೆ, ದಾವಣಗೆರೆಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ತಮ್ಮ ಇಡೀ ಬದುಕನ್ನೇ ದೇಶಕ್ಕಾಗಿ ಸಮರ್ಪಿಸಿದ್ದಾರೆ. ಅಲ್ಲದೆ ಆದರ್ಶ ರಾಜಕಾರಣಕ್ಕೆ ಆದರ್ಶವಾಗಿದ್ದಾರೆ ಎಂದು ಚಿಕ್ಕಮಗಳೂರು-ಉಡುಪಿ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದರು.ಇಲ್ಲಿನ ವಿನೋಬ ನಗರದ ದಾ-ಹ ಅರ್ಬನ್ ಬ್ಯಾಂಕ್ ಸಮುದಾಯ ಭವನದಲ್ಲಿ ಶನಿವಾರ ಬಿಜೆಪಿ ಜಿಲ್ಲಾ ಘಟಕದಿಂದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮ ಶತಮಾನೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಅಟಲ್ ಜೀ ವಿರಾಸತ್ ಜಿಲ್ಲಾ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜಕಾರಣ ವಾಜಪೇಯಿ ಆದರ್ಶಗಳಂತಿರಬೇಕು. ದೇಶದಲ್ಲಿ 1942ರಲ್ಲಿ ನಡೆದ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಕೇವಲ 19 ವರ್ಷದ ಯುವಕ ಅಟಲ್ ಜೀ ಪಾಲ್ಗೊಂಡು, 21 ವರ್ಷಕ್ಕೆ ಜೈಲು ಸೇರುತ್ತಾರೆ. ಅಲ್ಲಿಂದ ಆರಂಭವಾದ ಹೋರಾಟ ವಾಜಪೇಯಿಯವರ ಇಡೀ ಬದುಕನ್ನೇ ಆವರಿಸಿತು. ಪರಿಣಾಮ ದೇಶದ ಪ್ರಧಾನಿಯಾಗಿ ದೇಶದ ಅಭಿವೃದ್ಧಿ, ಶಾಂತಿ ಸ್ಥಾಪನೆಗೆ ಅವಿಸ್ಮರಣೀಯ ಕೊಡುಗೆ ನೀಡಲು ಕಾರಣವಾಯಿತು ಎಂದರು.
ರಾಷ್ಟ್ರ ರಾಜಕೀಯದಲ್ಲಿ ಅಜಾತ ಶತೃ, ಚಾಣಾಕ್ಷ ರಾಜಕಾರಣಿ, ಕವಿ ಹೃದಯಿ ಅಂತಲೇ ವಾಜಪೇಯಿ ಹೆಸರಾದವರು. ಅಪರೂಪದ ಮಹಾ ರಾಜಕೀಯ ನಾಯಕರಲ್ಲೊಬ್ಬರಾಗಿದ್ದ ವಾಜಪೇಯಿ ತಮ್ಮ ವಾಕ್ಚಾತುರ್ಯ, ವಾಕ್ಪಟುತ್ವ, ಅಧಿಕಾರಾವದಿಯಲ್ಲಿ ಕೈಗೊಂಡ ದಿಟ್ಟ ಹಾಗೂ ದೂರದೃಷ್ಟಿಯ ಕ್ರಮಗಳಿಂದಾಗಿ ಭಾರತವು ಅಭಿವೃದ್ಧಿ ಹೊಂದುವ ಜೊತೆಗೆ ಇಂದು ವಿಶ್ವದ ಪ್ರಮುಖ ರಾಷ್ಟ್ರಗಳ ಸಾಲಿನಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗಿದೆ ಎಂದು ತಿಳಿಸಿದರು.ಅಟಲ್ ಜೀ ನೇತೃತ್ವದ ಎನ್‌ಡಿಎ ಸರ್ಕಾರವು ದೇಶದಲ್ಲಿ ಅಭೂತಪೂರ್ವ ಬದಲಾವಣೆ ತಂದಿತು. ಆದರೆ, ಎನ್‌ಡಿಎ ಸಾಧನೆಗಳನ್ನು ಸಾಮಾನ್ಯ ಜನರಿಗೆ ತಲುಪಿಸುವಲ್ಲಿ ನಾವು ವಿಫಲರಾದೆವು. ಇದೇ ಕಾರಣಕ್ಕೆ 2004ರಲ್ಲಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರ ಕಳೆದುಕೊಳ್ಳಬೇಕಾಯಿತು. ಇದರಿಂದ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಪರಿಶಿಷ್ಟ ಜಾತಿಯ ಲಕ್ಷ್ಮೀನಾರಾಯಣ ಎಂಬ ವಾಜಪೇಯಿ ಅಭಿಮಾನಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಆಗ ಭೇಟಿ ನೀಡಿದ್ದ ವಾಜಪೇಯಿ ಮತ್ತೆ ಪಕ್ಷ ಕಟ್ಟುವ ಸಂಕರ್ಪ ಮಾಡಿದ್ದರು. ಪರಿಣಾಮ ಈಗ ಬಿಜೆಪಿ ಮತ್ತೆ ಆಡಳಿತ ನಡೆಸುತ್ತಿದೆ ಎಂದು ಅವರು ವಿವರಿಸಿದರು.
ಜನ್ಮ ಶತಮಾನೋತ್ವ ಅಭಿಯಾನದ ರಾಜ್ಯ ಸಂಯೋಜಕ ಡಾ.ಎ.ಎಚ್.ಶಿವಯೋಗಿಸ್ವಾಮಿ ಮಾತನಾಡಿ, ವಾಜಪೇಯಿ ಜನ್ಮ ಶತಮಾನೋತ್ಸವ ಹಿನ್ನೆಲೆ 2 ತಿಂಗಳಿನಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಜ.15ರಿಂದ ಫೆ.14ರವರೆಗೆ ಅಟಲ್ ಸ್ಮೃತಿ ಸಂಕಲನದ ಹೆಸರಲಿ ಒಡನಾಡಿಗಳ ಮನೆಗೆ ಭೇಟಿ ನೀಡಿ, ಗೌರವಿಸಲಾಗಿದೆ. 279 ಹಿರಿಯರಿಗೆ ಗೌರವ ಸಮರ್ಪಿಸಿದೆ. ಅಪರೂಪದ ಫೋಟೋ ಸಂಗ್ರಹಿಸಿದ್ದು, ಸಂಗ್ರಹವಾದ 350ಕ್ಕೂ ಹೆಚ್ಚು ಫೋಟೋಗಳಲ್ಲಿ ದಾವಣಗೆರೆ ಜಿಲ್ಲೆಯಿಂದ ಅತೀ ಹೆಚ್ಚು 59 ಫೋಟೋ ಸಂಗ್ರಹಿಸಿದೆ ಎಂದರು.ಭವಾನಿ ಶಂಭುಲಿಂಗಪ್ಪ ವಂದೇ ಮಾತರಂ ಹಾಡಿದರು. ಮಾಜಿ ಸಚಿವರಾದ ಎಸ್.ಎ.ರವೀಂದ್ರನಾಥ, ಎಂ.ಪಿ.ರೇಣುಕಾಚಾರ್ಯ, ಮಾಜಿ ಶಾಸಕರಾದ ಮಾಡಾಳ್ ವಿರುಪಾಕ್ಷಪ್ಪ, ಎಂ.ಬಸವರಾಜ ನಾಯ್ಕ, ಹಿರಿಯ ಮುಖಂಡರಾದ ಜೆ.ಸೋಮ ನಾಥ, ಬಿ.ಎಂ.ಷಣ್ಮುಖಯ್ಯ ಆವರಗೊಳ್ಳ, ಕೆ.ಬಿ.ಶಂಕರ ನಾರಾಯಣ, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ, ಲೋಕಿಕೆರೆ ನಾಗರಾಜ, ಧನಂಜಯ ಕಡ್ಲೇಬಾಳು, ಅನಿಲಕುಮಾರ ನಾಯ್ಕ, ಐರಣಿ ಅಣ್ಣೇಶ, ಎಲ್.ಎನ್.ಕಲ್ಲೇಶ, ಮುರುಗೇಶ ಆರಾಧ್ಯ, ಸುಧಾ ಜಯರುದ್ರೇಶ, ಎಚ್.ಪಿ.ವಿಶ್ವಾಸ್ ಇತರರು ಇದ್ದರು. ಕೇವಲ ಒಂದು ಸ್ಥಾನದಿಂದ ಬಿಜೆಪಿ ಸರ್ಕಾರ ಬಿದ್ದರೂ ವಾಜಪೇಯಿ ಸಿದ್ಧಾಂತ ಬಿಡಲಿಲ್ಲ. ಅಟಲ್ ಜೀಗೆ ಅಧಿಕಾರ ಮುಖ್ಯವಾಗಿರಲಿಲ್ಲ. ಈಗ ಅಧಿಕಾರ, ಸ್ಥಾನಮಾನವೇ ಮುಖ್ಯ. ಹಣ ಲೂಟಿ ಮಾಡುವುದೇ ಚಿಂತೆಯಾಗಿದೆ. ಕೆಲ ವ್ಯಕ್ತಿಗಳ ನಡವಳಿಕೆಯಿಂದ ಪಕ್ಷಕ್ಕೆ ಕೆಟ್ಟ ಹೆಸರು ಬರುತ್ತಿದೆ.
ಎಂ.ಪಿ.ರೇಣುಕಾಚಾರ್ಯ ಮಾಜಿ ಸಚಿವವಾಜಪೇಯಿ ಅವರದ್ದು ಮೇರು ವ್ಯಕ್ತಿತ್ವ. ದೇಶದಲ್ಲಿ ಕಾಂಗ್ರೆಸ್ ಅಧಿಕಾರವಿದ್ದಾಗ ಅಡ್ವಾಣಿ ಜತೆಗೂಡಿ ಪಕ್ಷ ಕಟ್ಟಿದ್ದು ಸುಲಭದ ಮಾತಲ್ಲ. ನಾವೆಲ್ಲ ಒಂದಾಗಿ ಮತ್ತೆ ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆತಂದು ವಾಜಪೇಯಿ ಅವರಿಗೆ ಗೌರವ ಸಲ್ಲಿಸಬೇಕು. ಮಾಡಾಳ್ ವಿರುಪಾಕ್ಷಪ್ಪ ಚನ್ನಗಿರಿ ಮಾಜಿ ಶಾಸಕ