ದೇಶಕ್ಕೆ ಪ್ರಸ್ತುತ ಸಂದರ್ಭದಲ್ಲಿ ಬಾಯಿ ಮಾತಿನ ಘೋಷಣೆಗೆ ಸೀಮಿತಕ್ಕಿಂತ ರೈತರ ಸಂಕಷ್ಟಗಳಿಗೆ ಸ್ಪಂದಿಸಿ, ನೊಂದ ರೈತರ ಕಣ್ಣೀರು ಒರೆಸುವ ಪ್ರಧಾನಿ ಬೇಕಿದೆ ಎಂದು ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ವಿಜಯಪುರ

ದೇಶಕ್ಕೆ ಪ್ರಸ್ತುತ ಸಂದರ್ಭದಲ್ಲಿ ಬಾಯಿ ಮಾತಿನ ಘೋಷಣೆಗೆ ಸೀಮಿತಕ್ಕಿಂತ ರೈತರ ಸಂಕಷ್ಟಗಳಿಗೆ ಸ್ಪಂದಿಸಿ, ನೊಂದ ರೈತರ ಕಣ್ಣೀರು ಒರೆಸುವ ಪ್ರಧಾನಿ ಬೇಕಿದೆ ಎಂದು ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಅಭಿಪ್ರಾಯಪಟ್ಟರು.

ಬಬಲೇಶ್ವರ ತಾಲೂಕಿನ ಜೈನಾಪುರ ಗ್ರಾಮದಲ್ಲಿ ವೀರಭದ್ರೇಶ್ವರ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದೇಶದ ರೈತರು ಕೆಲವೇ ವರ್ಷಗಳ ಹಿಂದೆ 370 ದಿನಕ್ಕೂ ಹೆಚ್ಚು ದಿನ ಹೋರಾಟ ಮಾಡಿದರೂ ಕೇಂದ್ರ ಸರ್ಕಾರ ಸ್ಪಂದಿಸಲಿಲ್ಲ. ಆದರೆ ಸಿದ್ದರಾಮಯ್ಯ ನೇತೃತ್ವದ ನಮ್ಮ ಸರ್ಕಾರ ಗುರ್ಲಾಪುರ ಕ್ರಾಸ್‌ನಲ್ಲಿ ಕಬ್ಬು ಬೆಳೆಗಾರರು ಹೋರಾಟಕ್ಕಿಳಿದ ವಾರದಲ್ಲೇ ಸಮಸ್ಯೆಗೆ ಪರಿಹಾರ ಕಂಡುಕೊಡಲಾಯಿತು. ಇದರಿಂದ ದೇಶದ ಇತಿಹಾಸದಲ್ಲೇ ನಮ್ಮ ಸರ್ಕಾರ ರಾಜ್ಯದ ಕಬ್ಬು ಬೆಳೆಗಾರರಿಗೆ ₹200-₹350 ಹೆಚ್ಚಿನ ದರ ಕೊಡಿಸಿದೆ ಎಂದು ತಮ್ಮ ಸರ್ಕಾರದ ಸ್ಪಂದನೆ ಬಣ್ಣಿಸಿದರು.

ಕೇಂದ್ರ ಸರ್ಕಾರ ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸುತ್ತದೆ ಹೊರತು, ಖರೀದಿಗೆ ಮುಂದಾಗುವುದಿಲ್ಲ. ಮೆಕ್ಕೆಜೋಳಕ್ಕೆ ₹2400 ಘೋಷಿಸಿದರೂ ಖರೀದಿಗೆ ವ್ಯವಸ್ಥೆ ಮಾಡಲಿಲ್ಲ. ತೊಗರಿ, ಈರುಳ್ಳಿ, ಜೋಳ, ದ್ರಾಕ್ಷಿ ಹೀಗೆ ಏನೆ ಬೆಳೆ ಬೆಳೆದರೂ ರೈತರ ಬೆಳೆಗೆ ವೈಜ್ಞಾನಿಕ ದರ ಸಿಗುತ್ತಿಲ್ಲ. ಕೇಂದ್ರ ಸರ್ಕಾರ ರೈತರ ಸಂಕಷ್ಟಗಳಿಗೆ ಸ್ಪಂದಿಸುವ ಕೆಲಸ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ದೇಶದಲ್ಲಿ 5 ಕೋಟಿ ರೈತರು ಕಬ್ಬು ಬೆಳೆಯುತ್ತಿದ್ದು, ಉತ್ತರ ಪ್ರದೇಶ, ಮಹಾರಾಷ್ಟ್ರ ಅತಿಹೆಚ್ಚು ಕಬ್ಬು ಬೆಳೆಯುವ ರಾಜ್ಯಗಳಲ್ಲಿ ಮುಂಚೂಣಿಯಲ್ಲಿವೆ. ಕರ್ನಾಟಕ ಮೂರನೇ ಸ್ಥಾನದಲ್ಲಿದೆ. ಈ ಕಾರಣದಿಂದ ಕರ್ನಾಟಕ ರಾಜ್ಯದಲ್ಲಿ 81 ಸಕ್ಕರೆ ಕಾರ್ಖಾನೆಗಳಿವೆ. ಆದರೆ ಕೇಂದ್ರ ಸರ್ಕಾರ ಸಕ್ಕರೆ ರಫ್ತಿಗೆ ಅವಕಾಶ ನೀಡುತ್ತಿಲ್ಲ, ಈ ಬಗ್ಗೆ ತ್ವರಿತ ಕ್ರಮವಾಗಬೇಕು. ಎಥೆನಾಲ್ ಉತ್ಪಾದನೆಗೆ ಹೆಚ್ಚಿನ ಉತ್ತೇಜನ ನೀಡಬೇಕು ಎಂದು ಆಗ್ರಹಿಸಿದರು.

ರಾಜ್ಯದಲ್ಲೇ ವಿಜಯಪುರ, ಬಾಗಲಕೋಟೆ, ಬೆಳಗಾವಿ ಜಿಲ್ಲೆಗಳ ಕೇಂದ್ರ ಸಹಕಾರಿ ಬ್ಯಾಂಕುಗಳು ಲಕ್ಷಾಂತರ ರು. ಸಾಲ ನೀಡುವ ಮೂಲಕ ರೈತರ ಹಿತ ರಕ್ಷಣೆ ಮಾಡುತ್ತಿವೆ. ರಾಜ್ಯದ ಇತರೆ ಜಿಲ್ಲೆಗಳಲ್ಲೂ ರೈತರಿಗೆ ಅಗತ್ಯಕ್ಕೆ ತಕ್ಕಂತೆ ಸಾಲ ನೀಡುವಷ್ಟು ಆರ್ಥಿಕ ಶಕ್ತಿ ಬರಲಿ ಎಂದು ಹಾರೈಸಿದರು.

ಆಲಮೇಲದ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಸಿದ್ದಣ್ಣ ದೇಸಾಯಿ ಅಧ್ಯಕ್ಷತೆ ವಹಿಸಿದ್ದರು. ನಂದಿ ಶುಗರ್ಸ ಅಧ್ಯಕ್ಷ ದೇಸಾಯಿ, ಜಿ.ಪಂ.ಮಾಜಿ ಅಧ್ಯಕ್ಷ ಬಸವರಾಜ ದೇಸಾಯಿ, ಗಿರೀಶ ಕೋರಡ್ಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು. ಪ್ರಭುಸ್ವಾಮೀ ಹಿರೇಮಠ ಪ್ರಸ್ತಾವಿಕ ಮಾತನಾಡಿದರು. ಕಿರಣ ಹುದ್ದಾರ ಸ್ವಾಗತಿಸಿದರರು. ಗುರು ಬೆಳ್ಳುಬ್ಬಿ ವಂದಿಸಿದರು.

ತುಲಾಭಾರ ನಿರಾಕರಿಸಿ ಸರಳತೆ ಮೆರೆದ ಸಚಿವರು

ರೈತರು ಸಚಿವ ಶಿವಾನಂದ ಪಾಟೀಲ ಅವರಿಗೆ ತುಲಾಭಾರ ಮಾಡಲು ಸಿದ್ಧತೆ ಮಾಡಿಕೊಂಡಿದ್ದರು. ಆದರೆ ತಾವು ತುಲಾಭಾರ ಮಾಡಿಸಿಕೊಳ್ಳಲು ನಿರಾಕರಿಸಿದ ಸಚಿವ ಸಚಿವ ಶಿವಾನಂದ ಪಾಟೀಲ, ಕಬ್ಬು ಬೆಳೆಗಾರರ ಸಂಘಟನೆ ಮಾಡಿರುವ ಸಮೀರವಾಡಿಯ ರಾಮನಗೌಡ ಪಾಟೀಲ ಅವರಿಗೆ ತುಲಾಭಾರ ನೆರವೇರಿಸಿದರು.

ನಾನು ತಿಕೋಟಾ ಕ್ಷೇತ್ರದಿಂದ ಶಾಸಕನಾಗಿ ಮೊದಲ ಬಾರಿಗೆ ಆಯ್ಕೆಯಾಗಿದ್ದೆ, ಆಗ ನನ್ನ ಆಯ್ಕೆಯಲ್ಲಿ ಜೈನಾಪುರ ಗ್ರಾಮಸ್ಥರ ಕೊಡುಗೆ ಪ್ರಮುಖ ಕಾರಣವಾಗಿತ್ತು. ಹೀಗಾಗಿ‌ ನನ್ನ ರಾಜಕೀಯ ಸುದೀರ್ಘ ಹಾದಿಯಲ್ಲಿ ಜೈನಾಪುರ ಗ್ರಾಮದಲ್ಲಿ ನನ್ನ ಬಾಂಧವ್ಯದ ಬೇರು ಇದೆ.

- ಶಿವಾನಂದ ಪಾಟೀಲ, ಕೃಷಿ ಮಾರುಕಟ್ಟೆ ಸಚಿವರು