ಸಾರಾಂಶ
ಹುಬ್ಬಳ್ಳಿ:
ದೇಶದಲ್ಲಿ ಎಲ್ಲರನ್ನೂ ಒಗ್ಗೂಡಿಸುವುದು ರಾಷ್ಟ್ರೀಯತೆ. ನಮಗೆ ಬೇಕಾಗಿರುವುದು ರಾಷ್ಟ್ರೀಯಕರಣವೇ ಹೊರತು ತುಷ್ಟೀಕರಣವಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಉತ್ತರ ಪ್ರಾಂತ ಕಾರ್ಯಕಾರಣಿ ಸದಸ್ಯ ಡಾ. ರವೀಂದ್ರ ಹೇಳಿದರು.ಇಲ್ಲಿಯ ಇಂದಿರಾ ಗಾಜಿನ ಮನೆಯಲ್ಲಿ ಸದ್ಭಾವನ ವೇದಿಕೆ ವತಿಯಿಂದ ಹಳೇ ಹುಬ್ಬಳ್ಳಿ ಗಲಭೆ ಪ್ರಕರಣ ರಾಜ್ಯ ಸರ್ಕಾರ ಹಿಂಪಡೆದು ತುಷ್ಟೀಕರಣ ರಾಜಕಾರಣ ಮಾಡುತ್ತಿರುವುದನ್ನು ಖಂಡಿಸಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಈ ಪ್ರತಿಭಟನಾ ಸಭೆ ಸರ್ಕಾರ, ಪಕ್ಷ, ಜಾತಿ, ಧರ್ಮ ಹಾಗೂ ಮುಸ್ಲಿಮರ ವಿರುದ್ಧವಲ್ಲ. ರಾಷ್ಟ್ರೀಯತೆಗೆ ಧಕ್ಕೆ ತರುವ ದುಷ್ಟರ ವಿರುದ್ಧವಾಗಿದೆ. ಹಿಂದೆ ಮುಸ್ಲಿಮರ ರಾಷ್ಟ್ರೀಯತೆ ವಿಚಾರವಿಟ್ಟುಕೊಂಡು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದರು. ಈ ವಿಚಾರವನ್ನು ಈಗಿನ ಮುಸ್ಲಿಮರು ಅರ್ಥ ಮಾಡಿಕೊಳ್ಳಬೇಕು. ರಾಜಕೀಯ ಸಲುವಾಗಿ ತುಷ್ಟೀಕರಣಕ್ಕೆ ಒಳಗಾಗಬಾರದು ಎಂದರು. ಹಳೇ ಹುಬ್ಬಳ್ಳಿ ಗಲಭೆ ಪ್ರಕರಣ ಭಾಗಿಯಾದವರ ಪರವಾಗಿ ಕೆಲವರು ನಿಂತಿದ್ದು, ಅವರನ್ನು ನೀವು ಸಮಾಜದಿಂದ ದೂರವಿಟ್ಟು ಒಳ್ಳೆಯ ಬದುಕು ನಡೆಸಬೇಕಿದೆ ಎಂದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಹಲವು ಅಪರಾಧ ಪ್ರಕರಣಗಳ ಹಿಂಪಡೆಯುವ ಪ್ರಕ್ರಿಯೆ ನಡೆಯುತ್ತಿದೆ. ಇದು ಎಲ್ಲ ಸರ್ಕಾರದ ಅವಧಿಯಲ್ಲಿ ಸಾಮಾನ್ಯವಾಗಿ ನಡೆಯುತ್ತದೆ. ಹಳೇ ಹುಬ್ಬಳ್ಳಿ ಗಲಭೆ ಪ್ರಕರಣ ಹಿಂಪಡೆಯಲು ಸಚಿವ ಸಂಪುಟದಲ್ಲಿ ನಿರ್ಧಾರ ಆಗಿದೆ. ಆದರೆ, ತನಿಖೆ ಎನ್‌ಐಎ ನಡೆಸುವುದರಿಂದ ನ್ಯಾಯಾಲಯದಲ್ಲಿ ನಿರ್ಧಾರ ಆಗಬೇಕು ಎಂದರು.ಹಳೇ ಹುಬ್ಬಳ್ಳಿ ಗಲಭೆ ನಡೆಸುವ ಅವಶ್ಯಕತೆ ಇದೆಯಾ ಎಂಬ ಪ್ರಶ್ನೆ ಈಗಲೂ ಕಾಡುತ್ತಿದೆ. ಅಭಿಷೇಕ ಎಂಬ ಹುಡುಗ ಮಸೀದಿಯ ಮೇಲೆ ಕೇಸರಿ ಧ್ವಜ ಹಾರಿಸಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ಅಷ್ಟೇ. ಕೇಸರಿ ಬಣ್ಣ ದೇಶಕ್ಕೆ ಸಂಬಂಧಿಸಿದ್ದು, ಮಸೀದಿ ದೇವರಿಗೆ ಸಂಬಂಧಿಸಿದ್ದಾಗಿದೆ. ಕೇಸರಿ ರಾಷ್ಟ್ರೀಯತೆಗೆ ಸಂಕೇತವಾಗಿದೆ. ಇದರಲ್ಲಿ ಹಿಂದೂ ಮುಸ್ಲಿಂ ಎಂಬುವುದು ಯಾಕೆ ಬಂತು ಎಂಬುವುದು ತಿಳಿಯುತ್ತಿಲ್ಲ. ರಾಷ್ಟ್ರೀಯತೆ ಒಪ್ಪಿಕೊಳ್ಳಲು ಸಾಕಷ್ಟು ಮುಸ್ಲಿಮರಿದ್ದಾರೆ. ಆದರೆ, ಕೆಲವರು ಗಲಭೆ ಮಾಡಿದರು ಎಂದು ದೂರಿದರು.
ದೇಶಕ್ಕೆ ಧ್ವಜ ನಿರ್ಮಾಣ ಮಾಡುವ ಸಮಯದಲ್ಲಿ ಪ್ಲ್ಯಾಗ್ ಕಮಿಟಿಯೂ ತ್ರಿವರ್ಣಧ್ವಜದಲ್ಲಿ ಕೇಸರಿ ಬಣ್ಣ ಇರಬೇಕು ಎಂದು ನಿರ್ಧರಿಸಿತ್ತು. ಕೇಸರಿ ದೇಶದ ಹಾಗೂ ಪರಂಪರೆ ಸಂಕೇತವಾಗಿದೆ. ಏಕೆ ಕೆಲವರು ಕೇಸರಿಗೆ ವಿರೋಧ ಮಾಡುತ್ತಾರೆ ತಿಳಿಯುತ್ತಿಲ್ಲ. ದೇಶದ ಮೇಲೆ ದಾಳಿ ನಡೆಸಿ ಹಿಂದೂಗಳ ಹತ್ಯೆ ಮಾಡಿದ ಟಿಪ್ಪು ಸುಲ್ತಾನ್ ಹೆಸರು ಆಟೋ ನಿಲ್ದಾಣಗಳಿಗೆ ಇಡಲಾಗುತ್ತಿದೆ. ಇದು ಸರಿಯಾದ ಕ್ರಮವಲ್ಲ. ಎಲ್ಲ ಧರ್ಮದಲ್ಲಿ ಒಳ್ಳೆಯವರು, ಕೆಟ್ಟವರು ಇದ್ದಾರೆ ಎಂಬುದನ್ನು ಅರಿತುಕೊಳ್ಳಬೇಕಿದೆ ಎಂದರು.ಸದ್ಭಾವ ವೇದಿಕೆ ಸಹ ಸಂಯೋಜಕ ಶಂಕಣ್ಣ ಮುನವಳ್ಳಿ ಮಾತನಾಡಿ, ರಾಜ್ಯ ಸರ್ಕಾರ ಹಳೇ ಹುಬ್ಬಳ್ಳಿ ಪ್ರಕರಣವನ್ನು ಹಿಂಪಡೆಯುವ ವಿಚಾರ ಪುನರ್ ಪರಿಶೀಲಿಸಬೇಕು. ಕೆಲವು ದುಷ್ಟರು ಸಮಾಜ ಹಾಳು ಮಾಡುತ್ತಿದ್ದು, ಸರ್ಕಾರ ಅದನ್ನು ಅರಿತುಕೊಳ್ಳಬೇಕು ಎಂದು ಹೇಳಿದರು.
ಸಭೆಯಲ್ಲಿ ಸದ್ಭಾವ ಸಮಿತಿಯ ಸಂಯೋಜಕ ಮಹದೇವ ಕರಮರಿ, ಬಾಸ್ಕರ ಜಿತೂರಿ, ಸುಭಾಸಸಿಂಗ್ ಜಮಾದಾರ, ಸಮಿರ್ ಆಚಾರ್ಯ ಕಂಠಪಲ್ಲಿ, ಜಯತೀರ್ಥ ಕಟ್ಟಿ, ಲಿಂಗರಾಜ ಪಾಟೀಲ, ಜಿತೇಂದ್ರ ಮಜೇಥಿಯಾ, ಮಂಜುನಾಥ ಕೊಂಡಪಲ್ಲಿ ಸೇರಿದಂತೆ ಹಲವರಿದ್ದರು.