ಸಾರಾಂಶ
ಬ್ಯಾಡಗಿ:ವಿದ್ಯಾರ್ಥಿಗಳೊಂದಿಗಿನ ಸಕಾರಾತ್ಮಕ ಸಂಬಂಧಗಳು ಅವರ ಭವಿಷ್ಯವನ್ನು ನಿರ್ಧರಿಸಲಿದೆ. ನ್ಯಾಯೋಚಿತ, ಪ್ರಾಮಾಣಿಕ, ವಿಶ್ವಾಸಾರ್ಹ, ಮುಕ್ತ ಬೆಂಬಲ, ಉತ್ತೇಜಕ ಗುಣಗಳನ್ನು ರೂಪಿಸುವಂತಹ ಶಿಕ್ಷಕರು ಪ್ರಸ್ತುತ ದಿನಗಳಲ್ಲಿ ದೇಶಕ್ಕೆ ಅವಶ್ಯವಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಜಿ. ಕೋಟಿ ಹೇಳಿದರು.
ಪಟ್ಟಣದ ಸರಕಾರಿ ಮಾದರಿ ಶಾಲೆ ನಂ.1ರ ಆವರಣದಲ್ಲಿ 28 ವರ್ಷಗಳ ಹಿಂದೆ ಕಲಿತ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರ ಸ್ನೇಹ ಸಮ್ಮಿಲನ ಹಾಗೂ ಗುರುವಂದನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಪ್ರಪಂಚದ ಹಂಬಲ ನೀಗಿಸುವ ಶಕ್ತಿ ಶಿಕ್ಷಕರಿಗಿದೆ:ವಿದ್ಯಾರ್ಥಿಗಳ ಜೀವನದಲ್ಲಿನ ವೈಯಕ್ತಿಕ ಆಸಕ್ತಿಗಳನ್ನು ಆಲಿಸುವ ಶಿಕ್ಷಕರ ಅವಶ್ಯವಿದೆ, ಶಾಲಾ ಅವಧಿ ಬಳಿಕವೂ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುವ ಮೂಲಕ ಪ್ರಾಮಾಣಿಕ ಕಾಳಜಿ ತೋರಬೇಕಾಗುತ್ತದೆ, ವಿದ್ಯಾರ್ಥಿಗಳ ಸಾಮರ್ಥ್ಯವನ್ನು ಸಮಾಜಕ್ಕೆ ಪರಿಚಯಿಸುವದರೊಂದಿಗೆ ಪ್ರಪಂಚದ ಹಂಬಲವನ್ನು ನೀಗಿಸುವ ಶಕ್ತಿ ಶಿಕ್ಷಕರಲ್ಲಿದೆ ಎಂದರು.
ನಿರೀಕ್ಷೆಯನ್ನಿಟ್ಟು ಪಾಠ ಮಾಡಿ:ಮಗುವಿನ ಸಾಮರ್ಥ್ಯದಲ್ಲಿ ಸಂಪೂರ್ಣ ನಂಬಿಕೆಯನ್ನಿಟ್ಟು ಪ್ರತಿ ಮಗುವೂ ನನ್ನ ಪಾಠದಿಂದ ಕಲಿಯಬಹುದು, ಆತನಿಂದ ಶಾಲೆ ಸೇರಿದಂತೆ ಕುಟುಂಬ, ದೇಶ, ಸಮಾಜಕ್ಕೆ ಒಳ್ಳೆಯದಾಗಲಿದೆ ಎಂಬ ನಿರೀಕ್ಷೆಯಲ್ಲಿಯೇ ಶಿಕ್ಷಕರು ಪಾಠಗಳನ್ನು ಮಾಡಬೇಕು. ಇಂತಹ ಗುರು-ಶಿಷ್ಯರ ನಡುವಿನ ಸಂಬಂಧಗಳು ಮಾತ್ರ ಬಹು ದಿನಗಳ ಕಾಲಗಟ್ಟಿಯಾಗಿ ಉಳಿಯಲು ಸಾಧ್ಯವಿದೆ ಎಂದರು.ನಿವೃತ್ತ ಶಿಕ್ಷಕಿ ಸುಮಂಗಲಾ ಸ್ವಾಮಿ ಮಾತನಾಡಿ, ವ್ಯಕ್ತಿ ಎಷ್ಟೇ ದೊಡ್ಡವನಾಗಿದ್ದರೂ, ವಿದ್ಯಾದಾನ ಮಾಡಿ ತನ್ಮೂಲಕ ಬದುಕಿನಲ್ಲಿ ಬದಲಾವಣೆ ತಂದ ಶಿಕ್ಷಕರನ್ನು ಎಂದಿಗೂ ಮರೆಯಬಾರದು, ವಿದ್ಯಾರ್ಥಿಗಳ ಮನಸ್ಸಿನಲ್ಲಿ ಯಾವ ಶಿಕ್ಷಕರ ಹೆಸರು ಚಿರಕಾಲವೂ ಹಸಿರಾಗಿರುತ್ತದೆಯೋ ಅಂತಹವರನ್ನು ಅತ್ಯುತ್ತಮ ಶಿಕ್ಷಕರೆಂದು ಪರಿಭಾವಿಸಬಹುದಾಗಿದೆ ಎಂದರು. ಇದೇ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರಾದ ಎ.ಎಫ್.ರಿತ್ತಿ, ಎಸ್.ಎಂ.ಲಿಂಗದಹಳ್ಳಿ, ಎನ್.ಎಂ.ಹಕೀಮ್, ಸುಮಂಗಲ ಸ್ವಾಮಿ, ಎ.ಜಿ. ಛತ್ರದ, ಸುಲ್ತಾನಬಿ ಮಲ್ಲೂರ, ಗಿರಿಜಮ್ಮ ಸಂಗನವರ ಹಾಗೂ ಎಸ್.ಪಿ. ಹರಿಹರ ಅವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಎಸ್.ಡಿ.ಎಂ.ಸಿ.ಅಧ್ಯಕ್ಷೆ ಶಶಿಕಲಾ ಸಂಕಣ್ಣವರ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ನಾಮನಿರ್ದೇಶಿತ ಸದಸ್ಯ ರಾಜೇಸಾಬ್ ಕಳ್ಯಾಳ, ಮುಖ್ಯ ಶಿಕ್ಷಕಿ ಸಿ.ವೈ. ದೊಡ್ಮನಿ, ಮಾಜಿ ವಿದ್ಯಾರ್ಥಿಗಳಾದ ಮಹೇಶ ನಾಯಕ, ಬಸವರಾಜ ಸಂಕಣ್ಣನವರ, ಮಂಜುನಾಥ ಹಂಜಗಿ, ನಾಗರತ್ನ ಹುಲ್ಲತ್ತಿ, ಎನ್ .ಎನ್. ಮಲ್ನಾಡದ, ಅಜ್ಜಪ್ಪ ವಡ್ಡರ, ಅಬ್ದುಲ್ ಹಿತ್ತಲಮನಿ, ಇರ್ಶಾದ್ ನಾಗನೂರು, ಮೌಲಾಲಿ ನಾಗನೂರು, ಸವಿತಾ ಶಿಡೇನೂರ ಇನ್ನಿತರರಿದ್ದರು.ಶೃಂಗಾರಗೊಂಡ ಶಾಲೆ:ಇದಕ್ಕೂ ಮಾಜಿ ವಿದ್ಯಾರ್ಥಿಗಳು ಶಾಲೆಯನ್ನು ಸ್ವಚ್ಛಗೊಳಿಸಿ ಸುಣ್ಣಬಣ್ಣ ಹಚ್ಚಿಸಿ ಸುಂದರವಾಗಿ ಶೃಂಗಾರಗೊಳ್ಳುವಂತೆ ಮಾಡಿದ್ದು ಸಾರ್ವಜನಿಕರ ಪ್ರಶಂಸೆಗೆ ಕಾರಣವಾಯಿತು.